ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ರಾಷ್ಟ್ರೀಯ ನಾಟಕ ಶಾಲೆ ಅಗತ್ಯ; ಕೂಡಿಗೆ

ರಂಗಾಯಣ ನಾಟಕೋತ್ಸವಕ್ಕೆ ಚಾಲನೆ
Last Updated 26 ನವೆಂಬರ್ 2013, 9:06 IST
ಅಕ್ಷರ ಗಾತ್ರ

ಶಿವಮೊಗ್ಗ: ಕನ್ನಡ ರಂಗಭೂಮಿ ಇನ್ನಷ್ಟು ಶಕ್ತಿಶಾಲಿ ಮತ್ತು ಸೃಜನಶೀಲವಾಗಲು ದೆಹಲಿಯಲ್ಲಿರುವಂತೆ ರಾಜ್ಯದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಸ್ಥಾಪಿಸುವ ಅಗತ್ಯವಿದೆ ಎಂದು ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಪ್ರತಿಪಾದಿಸಿದರು.

ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಸೋಮವಾರದಿಂದ ಆರಂಭವಾದ ನಾಲ್ಕು ದಿವಸಗಳ ಮೈಸೂರು ರಂಗಾಯಣ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಗತ್ಯವನ್ನು ಬಹಳಷ್ಟು ಹಿರಿಯ ರಂಗಕರ್ಮಿಗಳು ಈ ಹಿಂದೆ ಪ್ರತಿಪಾದಿಸಿದ್ದರು; ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ನಡೆದವು. ಅದು ಈಗಾಲಾದರೂ ಆರಂಭವಾಗಬೇಕು ಎಂದು ಒತ್ತಾಯಿಸಿದರು.

ರಂಗನಿರ್ದೇಶಕರು ಸಮಾಜ ಬದಲಾವಣೆ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಸಮಾಜಕ್ಕೆ ಮುಖಾಮುಖಿಯಾಗಬೇಕು. ಈ ಪ್ರಯತ್ನಗಳು ಈಗ ನಡೆಯುತ್ತಿದ್ದರೂ, ಅವು ಇನ್ನಷ್ಟು ಪರಿಣಾಮಕಾರಿಯಾಗಬೇಕು. ಬಹಳಷ್ಟು ಲೇಖಕರ ಪದ್ಯ, ಕಾದಂಬರಿ, ಕಥೆಗಳು ರಂಗಕೃತಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಈಗ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ರಂಗಕೃತಿ ಶ್ರೇಷ್ಠವೋ, ನಿರ್ದೇಶಕ ಶ್ರೇಷ್ಠವೋ ಎಂಬ ಚರ್ಚೆ ಇದೆ. ಆದರೆ, ರಂಗಕೃತಿಯನ್ನು ರಂಗದಲ್ಲಿ ತಂದು ಅದನ್ನು ಜೀವಂತಗೊಳಿಸುವ ನಿರ್ದೇಶಕನೇ ಮೇಲು ಎಂದು ಅವರು ಅಭಿಪ್ರಾಯಪಟ್ಟರು.

ನಾಟಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಮೈಸೂರು ರಂಗಾಯಣ ನಿರ್ದೇಶಕ ಜನಾರ್ದನ್‌ (ಜನ್ನಿ) ಮಾತನಾಡಿ, ರಂಗಾಯಣ ತನ್ನ ವಿಭಿನ್ನ ಪ್ರಯೋಗಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣೀಭೂತವಾಗಿದೆ ಎಂದು ಹೇಳಿದರು.

‘ರಂಗಾಯಣಕ್ಕೆ ದೊಡ್ಡ ಪರಂಪರೆ ಇದೆ.  25ವರ್ಷವೂ ಪೂರ್ಣಾವಧಿಯಾಗಿ ಕನ್ನಡದ ಸೇವೆ ಮಾಡಿ, ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಾ ಬಂದಿದೆ. ಇಂತಹ ರಂಗಸಂಸ್ಥೆಯನ್ನು ಅಭಿಮಾನದಿಂದ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.

ನಾಟಕ ಇರುವುದೇ ಸಾಮಾಜಿಕ ಬದಲಾವಣೆಗೆ; ಮನುಷ್ಯನ ಬುದ್ಧಿಯ ವಿಕಾಸ, ಬೆಳವಣಿಗೆಗೆ ನಾಟಕ ಪೂರಕವಾಗಿ ಕೆಲಸ ಮಾಡುತ್ತದೆ ಎಂದ ಅವರು, ಇಂದಿನ ಯುವಕರು ಬೇರೆ–ಬೇರೆ ಕಾರಣಗಳಿಂದ ಆತಂಕದ ಸ್ಥಿತಿಯಲ್ಲಿದ್ದಾರೆ. ಅಂತಹವರನ್ನು ರಂಗಭೂಮಿಗೆ ತರುವ ಕೆಲಸ ಆಗಬೇಕಾಗಿದೆ. ಹೊಸ ಚೈತನ್ಯ ಪುಟಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಮೈಸೂರು ರಂಗಾಯಣ ಉಪನಿರ್ದೇಶಕ ಎಸ್‌.ಐ.ಭಾವಿಕಟ್ಟೆ ಸ್ವಾಗತಿಸಿದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಕುಮಾರ್ ಬೆಕ್ಕೇರಿ ಉಪಸ್ಥಿತರಿದ್ದರು. ಕಲಾವಿದ ಮಂಜುನಾಥ ಬೆಳಕೆರೆ ಕಾರ್ಯಕ್ರಮ ನಿರೂಪಿಸಿದರು.

ತದನಂತರ ಮೈಸೂರು ರಂಗಾಯಣ ಕಲಾವಿದರು  ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ (ಸಂಗೀತ/ ನಿರ್ದೇಶನ; ವೈ.ಎಂ.ಪುಟ್ಟಣ್ಣಯ್ಯ) ‘ಸದಾರಮಾ ನಾಟಕಂ’ ಪ್ರದರ್ಶಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT