ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮಾವಿಗೆ ರಾಜಯೋಗ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಶಿಷ್ಟ ರುಚಿ ಮತ್ತು ಬಣ್ಣದಿಂದ ದೇಶ, ವಿದೇಶದಲ್ಲಿ ಅಪಾರ ಬೇಡಿಕೆ ಪಡೆದ ರಾಜ್ಯದ ಮಾವಿನಹಣ್ಣಿಗೆ ಹಲವು ದಶಕಗಳ ನಂತರ ಜಾಗತಿಕ ಮಾರುಕಟ್ಟೆಯಲ್ಲಿ  ಕರ್ನಾಟಕದ ಹೆಸರಿನಿಂದ ಗುರುತಿಸಿಕೊಳ್ಳುವ ಕಾಲ ಕೂಡಿ ಬಂದಿದೆ.

ಉಳಿದ ರಾಜ್ಯಗಳ ಹಣ್ಣುಗಳಿಗಿಂತ ಒಂದು ಕೈ ಮೇಲು ಎನ್ನುವಂತಿರುವ ರಾಜ್ಯದ ಮಾವಿಗೆ ತಾನು ಬೆಳೆದ ನೆಲದ ಹೆಸರಿನಲ್ಲಿ ಗುರುತಿಸಿಕೊಳ್ಳುವ ಅದೃಷ್ಟ ದಕ್ಕಿರಲಿಲ್ಲ.ಇಷ್ಟು ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ  ನೆರೆಯ ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಮಾವು ಎಂದು ಬಿಕರಿಯಾಗುತ್ತಿತ್ತು. ವಿಶಿಷ್ಟ ಸ್ವಾದ, ಬಣ್ಣ, ಗಾತ್ರ ಹೊಂದಿದ್ದರೂ  ಹೇಳಿಕೊಳ್ಳಲು ಸ್ವಂತ ಬ್ರ್ಯಾಂಡ್‌ ಮತ್ತು ಮಾರುಕಟ್ಟೆ ಇರಲಿಲ್ಲ. 

ಈ ನಡುವೆ ರಾಜ್ಯದ ಮಾವಿಗೆ ಸ್ವಂತ ಮಾರುಕಟ್ಟೆಯ ಮತ್ತು ಬ್ರ್ಯಾಂಡ್‌ ಸೃಷ್ಟಿಸಿದ ಶ್ರೇಯಸ್ಸು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ  (ಕೆಎಸ್‌ಎಂಡಿಎಂಸಿ) ಸಲ್ಲಬೇಕು.

ಅವೈಜ್ಞಾನಿಕ ಮಾವು ಕೊಯ್ಲು,  ರಫ್ತು ಸೌಲಭ್ಯ ಇಲ್ಲದಿರುವುದು, ಸೂಕ್ತ ಮಾರುಕಟ್ಟೆ ಮತ್ತು ಬ್ರ್ಯಾಂಡ್‌ ಕೊರತೆ, ಬೆಳೆಗಾರರಿಗೆ ಸಪರ್ಮಕ ಮಾಹಿತಿ ಹಾಗೂ ತರಬೇತಿ ಸಿಗದಿರುವುದು ಈ ಹಿನ್ನಡೆಗೆ  ಕಾರಣವಾಗಿತ್ತು.

ಇದನ್ನು ಮನಗಂಡ ಸರ್ಕಾರ,  ರೈತರಿಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ 2011ರಲ್ಲಿ ಮಾವು ಅಭಿವೃದ್ಧಿ ನಿಗಮ ರಚಿಸಿತ್ತು. ಆದರೆ, ಅದಕ್ಕೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ನೇಮಕವಾದದ್ದು ಕೇವಲ10 ತಿಂಗಳ ಹಿಂದೆ.

ಇತ್ತೀಚಿನ ದಿನಗಳಲ್ಲಿ ರಫ್ತು ವಹಿವಾಟು ಮತ್ತು ಮಾರುಕಟ್ಟೆಯಲ್ಲಿ ವ್ಯಾಪಕ ಬದಲಾವಣೆ ಕಾಣಿಸತೊಡಗಿದೆ. ಹಲವಾರು ಕಾರಣಗಳಿಗಾಗಿ ಕಳೆದ ಕೆಲವು ವರ್ಷಗಳಿಂದ ವಿದೇಶದಲ್ಲಿ ಕಳೆಗುಂದಿದ್ದ ರಾಜ್ಯದ ಮಾವು ನಿಧಾನವಾಗಿ ತನ್ನ ವರ್ಚಸ್ಸನ್ನು ಮರಳಿ ಪಡೆದುಕೊಳ್ಳುತ್ತಿದೆ. 

ನೆರೆ ರಾಜ್ಯಗಳ ಹಿಡಿತ
ರಾಜ್ಯದ ಮಾವು ಮಾರುಕಟ್ಟೆ ಮೇಲೆ  ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಫ್ತು ವರ್ತಕರು ಹಿಡಿತ ಹೊಂದಿದ್ದಾರೆ.  ಉತ್ತರ ಕರ್ನಾಟಕದ ಹಾವೇರಿ, ಹಾನಗಲ್‌, ಹುಬ್ಬಳ್ಳಿ– ಧಾರವಾಡ, ಬೆಳಗಾವಿಯ ಬಹುತೇಕ ಅಲ್ಫಾನ್ಸೊ ಫಸಲು ಮುಂಬೈ, ಪುಣೆ  ಮೂಲಕ  ‘ರತ್ನಗಿರಿ’ ಹೆಸರಲ್ಲಿ ಕಡಲಾಚೆ ಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ, ರಾಮನಗರದ ಮಾವನ್ನು ಆಂಧ್ರ ಮತ್ತು ತಮಿಳುನಾಡು ವರ್ತಕರು ತಮ್ಮ ಹೆಸರಲ್ಲಿ ಹೊರದೇಶಗಳಿಗೆ ಕಳಿಸುತ್ತಾರೆ. 

ಹೀಗಾಗಿ ರಾಜ್ಯದಲ್ಲಿ ಬೆಳೆದ ಮಾವಿನ ಹಣ್ಣಿನ ರಫ್ತಿಗೆ ಸಂಬಂಧಿಸಿದ ಅಧಿಕೃತ ಅಂಕಿ, ಅಂಶ ಸಿಗುವುದು ಕಷ್ಟವಾಗಿದೆ. ಆದರೆ, ದೇಶದಿಂದ ರಫ್ತಾಗುವ ಹಣ್ಣುಗಳಲ್ಲಿ ಶೇ 35ರಿಂದ 40ರಷ್ಟು ಕರ್ನಾಟಕದ ಹಣ್ಣುಗಳಾಗಿರುತ್ತವೆ.  

ಸೌಲಭ್ಯದ ಕೊರತೆ
ನಮ್ಮಲ್ಲಿ ಬೆಳೆದ ಹಣ್ಣುಗಳನ್ನು ನೇರವಾಗಿ ರಫ್ತು ಮಾಡುವ ಸೌಲಭ್ಯ ಇಲ್ಲದಿರುವುದೇ  ಹಿನ್ನಡೆಗೆ ಕಾರಣವಾಗಿದೆ. ಮುಂಬೈ ಬಳಿಯ ವಾಶಿಯಲ್ಲಿರುವ ರಫ್ತು ಸೌಲಭ್ಯದ ಮೇಲೆ ರಾಜ್ಯದ ರೈತರು  ಅವಲಂಬಿತರಾಗಬೇಕಾದ ಅನಿವಾರ್ಯತೆ ಇದೆ.  ಇದರಿಂದ ಎಷ್ಟೇ ಒಳ್ಳೆಯ ಬೆಳೆ ಬೆಳೆದರೂ ಅದರ ನಿರೀಕ್ಷಿತ ಲಾಭ ರೈತರಿಗೆ ದಕ್ಕುತ್ತಿಲ್ಲ.

ಮಾವು ರಫ್ತು ಮಾಡಲು ಕೇಂದ್ರ ಕೃಷಿ ಸಚಿವಾಲಯದ ಪರವಾನಗಿ ಅಗತ್ಯ. ಇದನ್ನು ಮನಗಂಡು ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಇನೋವಾ ಬಯೊ ಪಾರ್ಕ್‌ಗೆ ರಫ್ತು ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರ ಕೃಷಿ ಮತ್ತು ವಾಣಿಜ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ. 

15–20  ಸಾವಿರ ಟನ್‌ ರಫ್ತು ಗುರಿ
ರಾಜ್ಯದಿಂದ ಇದುವರೆಗೂ ವಾರ್ಷಿಕ  ಸರಾಸರಿ 500 ಟನ್‌ ಮಾವು ರಫ್ತಾಗುತ್ತಿತ್ತು. ಮಾವು ರಫ್ತು ಮಾಡಲು ಎದುರಾಗಿದ್ದ  ತಾಂತ್ರಿಕ ಅಡಚಣೆ  ನಿವಾರಣೆಯಾಗಿ ಈಗ ಹಾದಿ ಸುಗಮವಾಗಿದೆ. 

ಈ ವರ್ಷ ರಾಜ್ಯದ ಮಾವಿಗೆ  ಅಮೆರಿಕ, ಬ್ರಿಟನ್‌, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲ್ಲಿ ರಾಷ್ಟ್ರಗಳಿಂದ  ಬೇಡಿಕೆ ಬಂದಿದೆ. ಈ ವರ್ಷ ನಿಗಮ 15-20 ಸಾವಿರ ಟನ್ ಮಾವು  ರಫ್ತು   ಗುರಿ ಹೊಂದಿದೆ. ಅಷ್ಟೇ ಅಲ್ಲ, ಮಾವು ಮೇಳದ ಮೂಲಕ  ಹೊರ ರಾಜ್ಯಗಳನ್ನು ತಲುಪಲಿವೆ ಎನ್ನುತ್ತಾರೆ ಮಾವು ಅಭಿವೃದ್ಧಿ  ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ.

ಮಲೇಷ್ಯಾದಲ್ಲಿ ರಾಜ್ಯದ ಮಾವು
ಇಲ್ಲಿಯ ಹಣ್ಣಿನ ರುಚಿಗೆ ಮನಸೋತ ಮಲೇಷ್ಯಾ, 10  ಸಾವಿರ ಟನ್‌ ಅಲ್ಫಾನ್ಸೊ ಹಣ್ಣಿಗೆ ಬೇಡಿಕೆ ಸಲ್ಲಿಸಿ ನಾಲ್ಕು ತಿಂಗಳ ಹಿಂದೆ ನಿಗಮಕ್ಕೆ ಪತ್ರ ಬರೆದಿದೆ.ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ರಾಜ್ಯದ ಮಾವು ಬೆಳೆಗಾರರು ಇದೇ ಮೊದಲ ಬಾರಿಗೆ ನಿಗಮದ ನೆರವಿನಿಂದ ಹೊರ ದೇಶಕ್ಕೆ ಇಷ್ಟು ದೊಡ್ಡ ಪ್ರಮಾಣದ ಮಾವಿನ ಹಣ್ಣು ರಫ್ತು ಮಾಡಲಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಕೇಂದ್ರ ಕೃಷಿ ಮತ್ತು ಸಂಸ್ಕರಿತ ಆಹಾರ ರಫ್ತು ಅಭಿವೃದ್ಧಿ  ಪ್ರಾಧಿಕಾರದ (ಅಪೆಡಾ) ಮೂಲಕ ಮಾವು ರಫ್ತು ಮಾಡಲು ರಾಜ್ಯದ  4,500 ಮಾವು ಬೆಳೆಗಾರರು  ಹೆಸರು ನೋಂದಾಯಿಸಿಕೊಂಡಿದ್ದಾರೆ.  ಇನ್ನು ಮುಂದೆ ‘ಕರ್ನಾಟಕದ ಮಾವು’ ಎಂಬ  ಸ್ವಂತ ಹೆಸರಿನಲ್ಲಿ (ಬ್ರ್ಯಾಂಡ್‌)  ಮಾರಾಟವಾಗಲಿದೆ.  ಇದು ನಿಗಮದ ಪ್ರಯತ್ನಕ್ಕೆ ಸಂದ ಯಶಸ್ಸು ಎನ್ನುವ ಸಂಗತಿ ಕಮಲಾಕ್ಷಿ ಅವರ ಸಂತಸಕ್ಕೆ ಕಾರಣವಾಗಿದೆ.

ತೋತಾಪುರಿ, ನೀಲಂಗೆ ಭಾಗ್ಯ
ಅಲ್ಫಾನ್ಸೊ, ಕೇಸರ್‌,  ಮಲ್ಲಿಕಾ, ಬೈಗನಪಲ್ಲಿ, ಮಲಗೋವಾ ರಫ್ತು ಮಾಡಲು ನಿಗಮ ಅನುಮತಿ ಪಡೆದುಕೊಂಡಿದೆ. ಆದರೆ, ನೀಲಂ, ತೋತಾಪುರಿ ಸೇರಿದಂತೆ ಕೆಲವು  ಹಣ್ಣಿನ ತಳಿ ಬೇಗ ಕೆಡುವುದರಿಂದ ರಫ್ತಿಗೆ ಅನುಮತಿ ನಿರಾಕರಿಸಲಾಗಿದೆ. ಹೊರದೇಶಗಳಿಗೆ ರಫ್ತು ಮಾಡುವ 14 ದಿನಗಳ ಮೊದಲು ಅನುಮತಿ ಪಡೆಯಬೇಕಾಗುತ್ತದೆ. ಅಲ್ಲಿಯವರೆಗೂ ಹಣ್ಣು ಬಾಳಿಕೆ ಬರಬೇಕು.

ಅಂತರರಾಷ್ಟ್ರೀಯ ಮಾರುಕಟ್ಟೆಗೆ  ಕಳುಹಿಸುವಾಗ ಹಣ್ಣು ಸಂಗ್ರಹ, ಶುಚಿತ್ವ, ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಗುಣಮಟ್ಟ ಕಾಪಾಡುವುದು ನಿಜಕ್ಕೂ ಸವಾಲಿನ ಕೆಲಸ ಎನ್ನುವುದು ನಿಗಮದ ಅಧ್ಯಕ್ಷರ ಅಭಿಪಾಯ.

ಅದಕ್ಕೆ ರೈತರು ಮತ್ತು ರಫ್ತುದಾರರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ.  ಕಾರ್ಬೈಡ್ ಹಾಗೂ ಇನ್ನಿತರ ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳ ರಫ್ತನ್ನು ಸಂಪೂರ್ಣ ನಿಷೇಧಿಸಲಾಗಿದೆ. ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು  ಮಾತ್ರ ಸಂಸ್ಕರಿಸಿ ವಿದೇಶಕ್ಕೆ ಸಾಗಿಸಲಾಗುವುದು ಎಂದು ಅವರು ಹೇಳುತ್ತಾರೆ.

‘ಕೀಟನಾಶಕದ ಅಂಶ ಇದೆ ಎಂದು ಕಳೆದ ವರ್ಷ  ಐರೋಪ್ಯ ಒಕ್ಕೂಟ ಭಾರತದ ಅಲ್ಫಾನ್ಸೊ ಹಣ್ಣನ್ನು ನಿಷೇಧಿಸಿತ್ತು. ಇದರಿಂದ ರಫ್ತು ವಹಿವಾಟು  ಶೇ 1ರಷ್ಟು ಕುಸಿದಿತ್ತು. ಇದು ದೊಡ್ಡ ನಷ್ಟ ಅಲ್ಲ. ನಿಷೇಧ ತೆರವಾಗಿದ್ದು ಮತ್ತೆ ರಫ್ತು ಮಾರುಕಟ್ಟೆ ಮರಳಿ ಲಯ ಕಂಡುಕೊಂಡಿದೆ’ ಎನ್ನುತ್ತಾರೆ ಕಮಲಾಕ್ಷಿ ರಾಜಣ್ಣ.

80  ತಳಿ ಮಾವು
ರಾಜ್ಯದ ಮಾವಿಗೆ ದೇಸಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ರಾಜ್ಯದ 15 ಜಿಲ್ಲೆಗಳಲ್ಲಿ  80 ತಳಿಯ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಬಿಸಿಲು ಹೆಚ್ಚಾದ ಕಾರಣ ಮಾವಿನ ಇಳುವರಿ ಶೇ 10–20ರಷ್ಟು (2–3 ಲಕ್ಷ ಟನ್‌) ಕಡಿಮೆಯಾಗುವ ಸಾಧ್ಯತೆ ಇದೆ ಅಂದಾಜಿಸಲಾಗಿತ್ತು.

ಅದರ ಪರಿಣಾಮ ಬೆಲೆ ಕೂಡ ತುಟ್ಟಿಯಾಗುವ ಆತಂಕ ಇತ್ತು.  ಮಾರುಕಟ್ಟೆಗೆ ಮಾವು ಲಗ್ಗೆ ಇಡುತ್ತಿರುವ ಭರಾಟೆ ನೋಡಿದರೆ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ಸುಡುಬಿಸಿಲಿನ ನಡುವೆಯೂ ಬಂಪರ್ ಬೆಳೆ ಬಂದಿದೆ.

ರಾಜ್ಯದಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 12-14 ಲಕ್ಷ ಟನ್ ಇಳುವರಿ ಅಂದಾಜಿಸಲಾಗಿದೆ. ಏರು ಹಂಗಾಮಿನಲ್ಲಿ ಕನಿಷ್ಠ 10 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಇಳಿ ಹಂಗಾಮಿನಲ್ಲಿ ಸುಮಾರು 4 ರಿಂದ 5 ಲಕ್ಷ ಟನ್ ಉತ್ಪಾದನೆಯಾಗುತ್ತದೆ.

ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, 40 ಸಾವಿರ ಹೆಕ್ಟೇರ್ ಪ್ರದೇಶ ಮಾವಿಗೆ ಮೀಸಲಾಗಿದೆ. ರಾಮನಗರದಲ್ಲಿ 20 ಸಾವಿರ ಹೆಕ್ಟೇರ್, ಉಳಿದಂತೆ ಧಾರವಾಡ, ಹಾವೇರಿ, ಬೆಳಗಾವಿ ಈ ಮೂರು ಜಿಲ್ಲೆಗಳಲ್ಲಿ 15ರಿಂದ 19 ಸಾವಿರ  ಹೆಕ್ಟೇರ್‌ನಲ್ಲಿ ಅಲ್ಫಾನ್ಸೊ ಮಾವು ಬೆಳೆಯಲಾಗುತ್ತಿದೆ. ಪ್ರತಿ ಹೆಕ್ಟೇರ್‌ಗೆ 2ರಿಂದ 2.5 ಟನ್‌ ಇಳುವರಿ ಪಡೆಯಲಾಗುತ್ತದೆ.

ಹಾವೇರಿ ಜಿಲ್ಲೆಯ ಹಾನಗಲ್‌ ಮತ್ತು ರಾಮನಗರದ ಹಣ್ಣುಗಳು ಮಾರುಕಟ್ಟೆಗೆ ಮೊದಲು ಪ್ರವೇಶಿಸುತ್ತವೆ.  ನಂತರ ಧಾರವಾಡ, ಬೆಳಗಾವಿ ಹಣ್ಣು ಕೊಯ್ಲಿಗೆ ಬರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾವು ಅಭಿವೃದ್ಧಿ ನಿಗಮವು, ಮೊದಲ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಎರಡು ತಿಂಗಳ ಕಾಲ ತಾತ್ಕಾಲಿಕ ಮಾವು ಮಾರುಕಟ್ಟೆ ತೆರೆದಿದೆ.  ಒಟ್ಟು 250–300 ಟನ್‌ ಮಾವು ಮಾರಾಟವಾಗುವ ಅಂದಾಜಿದೆ ಎನ್ನುವ ವಿಶ್ವಾಸ ಕಮಲಾಕ್ಷಿ ಅವರದ್ದು.

ಮಾರುಕಟ್ಟೆ ಕೊರತೆ
ಮಾರುಕಟ್ಟೆ ವ್ಯವಸ್ಥೆಯಾದರೆ ಮಾವು ಬೆಳೆಗಾರರ ಮೊದಲ ಹಾಗೂ ದೊಡ್ಡ ಸಮಸ್ಯೆ ಬಗೆಹರಿದಂತಾಗುತ್ತದೆ. ಆ ನಿಟ್ಟಿನಲ್ಲಿ ನಿಗಮ ಪ್ರಯತ್ನಿಸುತ್ತಿದೆ. ಗುಣಮಟ್ಟ ನಿಯಂತ್ರಣ, ಅವೈಜ್ಞಾನಿಕ ಕೊಯ್ಲು ಪದ್ಧತಿ, ರೈತರು, ವರ್ತಕರು ಹಾಗೂ ಮಾರುಕಟ್ಟೆ ನಡುವೆ ಹೊಂದಾಣಿಕೆ ಕೊರತೆಯಿಂದ ಮಾವು ರಫ್ತು ವಹಿವಾಟಿನಲ್ಲಿ ರಾಜ್ಯ ಹಿಂದೆ ಬೀಳಲು ಕಾರಣ ಎಂದು ಅವರು ವಿಶ್ಲೇಷಿಸುತ್ತಾರೆ.

ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆ ಜತೆಗೆ ರೈತರು ಮತ್ತು ಖರೀದಿದಾರರ ಮಧ್ಯೆ ಸಂಪರ್ಕ ಸೇತುವೆಯಾಗಿ ನಿಗಮ ಕೆಲಸ ಮಾಡತ್ತಿದೆ. ರಾಜ್ಯ ಸರ್ಕಾರ ನೀಡುತ್ತಿರುವ ₹ 11 ಕೋಟಿ  ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ₹50 ಕೋಟಿಗೆ ಹೆಚ್ಚಿಸುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.

ಮಾವು ಮೇಳದ ಯಶೋಗಾಥೆ
ರಾಜ್ಯದ ವಿವಿಧ ಮೂಲೆಗಳಲ್ಲಿ ಬೆಳೆಯುವ ವೈವಿಧ್ಯಮಯ ಮಾವಿನ ಹಣ್ಣುಗಳ ರುಚಿಯನ್ನು ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ನಿಗಮವು ಮಾವು ಮೇಳ ಆಯೋಜಿಸುತ್ತಿದೆ.  ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಮೇಳಕ್ಕೆ ರೈತರು, ವರ್ತಕ ವಲಯ ಮತ್ತು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದೇ ಸೂರಿನಡಿ ಗುಣಮಟ್ಟದ, ನೈಸರ್ಗಿಕವಾಗಿ ಮಾಗಿಸಿದ ಹಲವು ಜಾತಿಯ ಸ್ವಾದಿಷ್ಟ  ಮಾವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ.

ಪ್ರತಿ ಮೇಳದಲ್ಲೂ  100–200ಕ್ಕೂ ಹೆಚ್ಚು ಟನ್ ಹಣ್ಣು ಮಾರಾಟವಾಗುತ್ತಿದೆ. ಇದರಿಂದ ರೈತರ ಉತ್ಪನ್ನಕ್ಕೆ ಯೋಗ್ಯ ಬೆಲೆ ದೊರೆಯುತ್ತಿದೆ. ಮೇಳದಲ್ಲಿ 20ಕ್ಕೂ ಹೆಚ್ಚು ವಿವಿಧ ಜಾತಿಯ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತದೆ.

ಲಾಲ್‌ಬಾಗ್‌ ಸೇರಿ ಬೆಂಗಳೂರು ನಗರದ ಐದು ಕಡೆ  ಮತ್ತು ಹೆಚ್ಚು ಮಾವು ಬೆಳೆಯವ  22 ಜಿಲ್ಲೆಗಳಲ್ಲಿ ಮಾವು ಮೇಳ  ನಡೆಯುತ್ತಿವೆ. ಹೊರ ರಾಜ್ಯಗಳಿಗೂ ನಮ್ಮ ಹಣ್ಣುಗಳ ರುಚಿಯನ್ನು ಪರಿಚಯಿಸಲು ಗೋವಾ, ದೆಹಲಿ ಮತ್ತು ಕೇರಳದಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಮಾವು ಮೇಳಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ  ಮಲೇಷ್ಯಾ ಸೇರಿ ಇತರ ರಾಷ್ಟ್ರಗಳಲ್ಲೂ ಮಾವು ಮೇಳ ನಡೆಸುವ ಉದ್ದೇಶ ನಿಗಮಕ್ಕಿದೆ.    

ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಾವು ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಮಾವು ಉತ್ಪಾ­ದನೆಯಲ್ಲಿ ಭಾರತದ ಪಾಲು ಅರ್ಧ­ದಷ್ಟಿದೆ. ದೇಶದಲ್ಲಿ ಸುಮಾರು 15.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, 95 ಲಕ್ಷ ಟನ್ ಇಳುವರಿ ಪಡೆಯಲಾಗುತ್ತಿದೆ.

ದೇಶದ ಒಟ್ಟು ಮಾವು ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳದ್ದು.  ಈ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಹೊರ ರಾಜ್ಯಗಳಿಗೆ ಹೋಗುವ ಮಾವು ರಾಜ್ಯದ ಲೆಕ್ಕಕ್ಕೆ ಜಮಾ ಆದರೆ, ಖಂಡಿತವಾಗಿಯೂ ಎರಡನೇ ಸ್ಥಾನಕ್ಕೆ ಏರುತ್ತದೆ. ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ಉತ್ತರ ಪ್ರದೇಶ ಹಾಗೂ ಆಂಧ್ರ ಪ್ರದೇಶಗಳಿವೆ.

ರುಚಿಗೆ ಸಮನಾರು ಇಲ್ಲ
ಪಾಕಿಸ್ತಾನ, ಚೀನಾ ಸೇರಿದಂತೆ ಆಫ್ರಿಕಾ ಮತ್ತು ಪೆಸಿಫಿಕ್‌ ರಾಷ್ಟ್ರಗಳು ಮಾವು ಬೆಳೆದರೂ ಭಾರತದ ಮಾವಿಗಿರುವ ರುಚಿ, ಬೇಡಿಕೆ ಮತ್ತು ಮಾರುಕಟ್ಟೆ ಇವುಗಳಿಗಿಲ್ಲ.ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ಅರಬ್ ಹಾಗೂ  ಪೆಸಿಫಿಕ್‌ ರಾಷ್ಟ್ರಗಳಲ್ಲಿ ಭಾರತದ ಮಾವಿನ ಪರಿಮಳ  ಹರಡಿದ್ದು, ಪ್ರಪಂಚದ ಒಟ್ಟು 80ಕ್ಕೂ ಹೆಚ್ಚು ರಾಷ್ಟ್ರಗಳಿಗೆ  ಭಾರತದ ಮಾವು ರಫ್ತು ಆಗುತ್ತಿದೆ.

ವಿದೇಶಕ್ಕೆ 60 ಸಾವಿರ ಟನ್‌
ಕೇಂದ್ರ ವಾಣಿಜ್ಯ ಇಲಾಖೆಯ ರಫ್ತು– ಆಮದು ಅಂಕಿ ಅಂಶಗಳ ಪ್ರಕಾರ ಭಾರತದಿಂದ ಪ್ರತಿ ವರ್ಷ 40ರಿಂದ 60 ಸಾವಿರ ಟನ್‌ ಮಾವು ವಿದೇಶಗಳಿಗೆ ರವಾನೆಯಾಗುತ್ತದೆ. 

ಕಳೆದ ಕೆಲವು ವರ್ಷಗಳಲ್ಲಿ ಮಾವು ಇಳುವರಿ ಸ್ಥಿರವಾಗಿದೆ. ಆದರೆ, ಗುಣಮಟ್ಟದ ಕಾರಣ ಕಳೆದ ಹಣಕಾಸು ವರ್ಷದಲ್ಲಿ 46,500 ಟನ್‌ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು.

ಗುಣಮಟ್ಟದ ಮಾವಿನ ಹಣ್ಣಿನ ಕೊರತೆಯು ರಫ್ತು ಪ್ರಮಾಣ  ಕುಸಿಯಲು ಕಾರಣ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ  (ಎಪಿಇಡಿಎ) ತಿಳಿಸಿದೆ.

ದೇಶದಲ್ಲಿ ಬೆಳೆಯುವ ಶೇ 70ರಷ್ಟು ಹಣ್ಣು ತಂಪು ಪಾನೀಯ, ಹಣ್ಣು ಸಂಸ್ಕರಣಾ ಕಂಪೆನಿಗಳ ಪಾಲಾದರೆ, ಉಳಿದ ಶೇ 20ರಿಂದ 30ರಷ್ಟು ತಾಜಾ ಹಣ್ಣುಗಳು ಮಾತ್ರ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸುತ್ತವೆ.  ಮಹಾರಾಷ್ಟ್ರದಿಂದ ಹೆಚ್ಚಿನ ಮಾವು ವಿದೇಶಗಳಿಗೆ ರಫ್ತಾಗುತ್ತಿರುವ ಕಾರಣ ಮುಂಬೈ, ದೇಶದ ಮಾವು ರಫ್ತು ಚಟುವಟಿಕೆಯ ಕೇಂದ್ರವಾಗಿ ಬೆಳೆದಿದೆ.

ನಿಗಮದ ಸಾಧನೆ
* ಮಾವು ಕೊಯ್ಲು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ತಂತ್ರಜ್ಞಾನ ಮೂಲಕ ತರಬೇತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಬಳಿಯ ಹೊಗಳಗೆರೆಯಲ್ಲಿ ₹3.5 ಕೋಟಿ ವೆಚ್ಚದಲ್ಲಿ  ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿಯ ಮಾಡಿಕೆರೆಯಲ್ಲಿ ₹8 ಕೋಟಿ ವೆಚ್ಚದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ

* ಇಸ್ರೇಲ್, ಯೂರೋಪ್ ಹಾಗೂ ಅಮೆರಿಕಾದಲ್ಲಿ ಅಧ್ಯಯನಕ್ಕಾಗಿ ರಾಜ್ಯದಿಂದ 25 ಮಂದಿ
ರೈತರ ಆಯ್ಕೆ

ನಿಗಮದ ಮುಂದಿರುವ ಯೋಜನೆ
* ಕೋಲಾರ-ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ ಸೇರಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ಮಾವು ಮಾರಾಟಕ್ಕೆ  ಪ್ರತ್ಯೇಕ ಮಾರುಕಟ್ಟೆ ಸ್ಥಾಪನೆ

* ಮಾವಿನ  ಹೊಸ ತಳಿಗಳ ಸಂಶೋಧನೆ,    ಮಾರಾಟ ಮತ್ತು ರಫ್ತಿಗೆ ಉತ್ತೇಜನ

* ₹ 2 ಕೋಟಿ ವೆಚ್ಚದಲ್ಲಿ ಮಾವಿನ ರಸ ಉತ್ಪಾದನಾ ಮತ್ತು ಉಪ್ಪಿನಕಾಯಿ ತಯಾರಿಕಾ ಘಟಕ ಸ್ಥಾಪನೆ

* ಮಾವಿನ ಹಣ್ಣಿನ ತಿರುಳು ತೆಗೆದು ಸಂಸ್ಕರಿಸಿ ಮಾರಾಟ ಮಾಡುವ ಉದ್ಯಮ ಸ್ಥಾಪನೆಗೆ ನಿಗಮದಿಂದ ₹10 ಲಕ್ಷ ಸಬ್ಸಿಡಿ 

* ರಾಜ್ಯದ ವಿವಿಧೆಡೆ ತಲಾ ₹4 ಲಕ್ಷ ವೆಚ್ಚದಲ್ಲಿ ಬಿಸಿ ನೀರಿನ ಉಗಿಯಿಂದ ಮಾವು ಮಾಗಿಸುವ 100  ಘಟಕ ಸ್ಥಾಪನೆ .  ನಿಗಮದಿಂದ ₹2 ಲಕ್ಷ ಸಬ್ಸಿಡಿ 

* ಬರಡು ಭೂಮಿ ಖರೀದಿಸಿ ಮಾವು ಅಭಿವೃದ್ಧಿ

ವೆಬ್‌ಸೈಟ್‌: www.karnataka.gov.in/ ksmdmcl,  ಇ–ಮೇಲ್‌:  ksmdmcl@gmail.com, ದೂರವಾಣಿ ಸಂಖ್ಯೆ: 080–22236837

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT