ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಅನಾವೃಷ್ಟಿ ಆತಂಕ

ಪ್ರತಿ ವರ್ಷ ಮೆಕ್ಕೆಜೋಳ, ಹತ್ತಿ ಬೆಳೆದು ಇಳುವರಿ, ಬೆಲೆ ಕಡಿಮೆ; ರೈತರಲ್ಲಿ ಮೂಡಿದ ಹತಾಶೆ
Last Updated 31 ಜುಲೈ 2015, 11:00 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಈ ಬಾರಿ ಜುಲೈ ತಿಂಗಳಲ್ಲಿ ವಾಡಿಕೆಯ ಸುಮಾರು ಅರ್ಧದಷ್ಟು ಮಳೆ ಮಾತ್ರ ಸುರಿದಿದ್ದು, ರೈತರಲ್ಲಿ  ಅನಾವೃಷ್ಟಿಯ ಆತಂಕ ಸೃಷ್ಟಿಸಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಗರಿಷ್ಠ ಮಳೆಯಾಗಿ ಅತಿವೃಷ್ಟಿ ಉಂಟಾಗಿತ್ತು. ಹಲವೆಡೆ ರೈತರು ಬೆಳೆಹಾನಿ ಅನುಭವಿಸಿದ್ದರು. ಆದರೆ, ಈ ಬಾರಿ ಇನ್ನೊಂದು ವಾರದಲ್ಲಿ ಮಳೆಯಾಗ ದಿದ್ದರೆ ಬೆಳದು ನಿಂತ ಪೈರುಗಳು ಒಣಗಿ ಹೋಗುವ ಅಪಾಯವಿದೆ. 

ಬದಲಾದ ಬೆಳೆ: ರಾಣೆಬೆನ್ನೂರು ರೈತರು ಕೆಲವು ದಶಕದಿಂದ ರೈತರು ಮೆಕ್ಕೆಜೋಳ ಮತ್ತು ಹತ್ತಿಯನ್ನು ಅಧಿಕ ವ್ಯಾಪ್ತಿಯಲ್ಲಿ ಬೆಳೆಯುತ್ತಿದ್ದರು. ಈ ಬಾರಿಯ ಬೆಲೆ ಕುಸಿತ ಹಾಗೂ ಕ್ರಮೇಣವಾಗಿ ಇಳುವರಿ ಕುಸಿತ ಕಾಣುತ್ತಿರುವುದು ರೈತರಿಗೆ ಆತಂಕ ಮೂಡಿಸಿದೆ. ಹೀಗಾಗಿ, ಈ ಬಾರಿ ದ್ವಿದಳ ಧಾನ್ಯ ಬೆಳೆಯಲು ಮುಂದಾಗಿದ್ದಾರೆ. ಈ ಬಾರಿ ಕೃಷಿ ಇಲಾಖೆಯು ತಾಲ್ಲೂಕಿನಲ್ಲಿ 499 ಹೆಕ್ಟೇರ್‌ ದ್ವಿದಳ ಧಾನ್ಯ ಬಿತ್ತನೆ ನಿರೀಕ್ಷಿಸಿದ್ದರೆ, 1,733 ಹೆಕ್ಟೇರ್‌ ದ್ವಿದಳ ಧಾನ್ಯ ಬಿತ್ತನೆಯಾಗಿದೆ. ಕುಪ್ಪೇಲೂರು ಹೋಬಳಿಯಲ್ಲಿ ಈ ಬಾರಿ ಮಳೆಯಾಶ್ರಿತ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಮೆಕ್ಕೆಜೋಳದ ಸಾಲಿನ ನಡುವೆಯೂ ರೈತರು ತೊಗರಿ, ಹುರುಳಿ, ಮಡಿಕೆ ಹಾಗೂ ಅಕಡಿ ಕಾಳು ಬೆಳೆಯುತ್ತಿದ್ದಾರೆ.

ಬಿತ್ತನೆ: ಈ ಬಾರಿ 26,375 ಹೆಕ್ಟೇರ್ ಮೆಕ್ಕೆಜೋಳ ನಿರೀಕ್ಷಿಸಿದ್ದರೆ, 23,531 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.   15,950 ಹೆಕ್ಟೇರ್ ಹತ್ತಿ ನಿರೀಕ್ಷಿಸಿದ್ದರೆ 12,702 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಆದರೆ, 303 ಹೆಕ್ಟೇರ್‌ ಗುರಿಯಿದ್ದ ಹೈಬ್ರಿಡ್‌ ಜೋಳ 450 ಹೆಕ್ಟೇರ್‌ ಆಗಿದೆ. ಆದರೆ,  ದ್ವಿದಳ ಧಾನ್ಯ ಮಾತ್ರ 499 ಹೆಕ್ಟೇರ್‌ ಗುರಿಯಿದ್ದರೆ, 1,733 ಹೆಕ್ಟೇರ್‌ ಬಿತ್ತನೆಯಾಗಿದೆ. ದ್ವಿದಳ ಧಾನ್ಯಗಳ ಪೈಕಿ ಅಲಸಂದಿ, ಸೋಯಾಬಿನ್‌, ಮಡಿಕೆ, ಹುರುಳಿ, ಉದ್ದು, ಅವರೆ ಪ್ರಮುಖವಾಗಿವೆ. ಅಲ್ಲದೇ,  270 ಹೆಕ್ಟೇರ್‌ ಗುರಿಯಿದ್ದ ತೊಗರಿಯು 1,256 ಹೆಕ್ಟೇರ್‌ಗೆ ಹೆಚ್ಚಿದೆ.

ಹತೋಟಿ ಕ್ರಮಗಳು: ಮೆಕ್ಕೆಜೋಳದಲ್ಲಿ ಕೆಲವೆಡೆ ಕಾಂಡಕೊರಕದ ಬಾಧೆ ಕಂಡು ಬಂದಿದ್ದು, ಅದರ ಹತೋಟಿಗೆ ಪಿರೋಡಾನ್‌ 10ಜಿ ಮತ್ತು ಕ್ಲೋರೊಪೆರಿಪಾಸ್‌ 2 ಎಂ.ಎಲ್‌ ಪ್ರತಿ ಲೀಟರ್‌ಗೆ ನೀರು ಬೆರೆಯಿಸಿ ಸುಳಿಗೆ ಹಾಕಬೇಕು. ಹತ್ತಿ ಜಿಗಿ ಹುಳ (ನುಸಿ ಬಾಧೆ) ಕಂಡು ಬಂದಲ್ಲಿ ಮನೋಕೃಟೋಪಾಸ್‌ ಪ್ರತಿ ಲೀ. 2 ಎಂ.ಎಲ್‌ ಮತ್ತು ಅಸಿಪೆಟ್‌ 2 ಗ್ರಾಂ. ನೀರು ಬೆರೆಯಿಸಿ ಸಿಂಪಡಿಸಬೇಕು. ಸೋಯಾಬಿನ್‌ ಮತ್ತು ಶೇಂಗಾ ಬೆಳೆಗೆ ಎಲೆ ತಿನ್ನುವ ಕೀಟ ಕಂಡು ಬಂದಲ್ಲಿ  ಪ್ರೊಫಿನೋಪಾಕ್ಸ್‌ ಲೀಟರ್‌ ನೀರಿಗೆ 2 ಎಂ.ಎಲ್‌ ಸಿಂಪಡಿಸಬೇಕು ಎಂದು ರೈತರಿಗೆ ಕೃಷಿ ಇಲಾಖೆ ಸಲಹೆ ನೀಡಿದೆ.   -ಮುಕ್ತೇಶ್ವರ ಪಿ. ಕೂರಗುಂದಮಠ

ತಾಲ್ಲೂಕಿನಲ್ಲಾದ ಮಳೆ
ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ : 
614ಮಿ.ಮೀ, 2014ರಲ್ಲಿ  ಸುರಿದ ವಾರ್ಷಿಕ ಮಳೆ :  885.68 ಮಿ.ಮೀ, ಈ ವರ್ಷ  ಜು.27ರ ತನಕ ಸುರಿದ ಮಳೆ: 310.07ಮಿ.ಮೀ, 2014ರಲ್ಲಿ  ಜು.27ರ ತನಕ ಮಳೆ: 412.2 ಮಿ.ಮೀ, ಜುಲೈ ತಿಂಗಳ ವಾಡಿಕೆ ಮಳೆ:    94.4ಮಿ. ಮೀ, ಜುಲೈ 28ರ ತನಕ ಸುರಿದ ಮಳೆ:  50.5 ಮಿ.ಮೀ.

ಮೆಕ್ಕೆಜೋಳ, ಹತ್ತಿ, ಹೈಬ್ರೀಡ್‌ ಜೋಳ, ಸೋಯಾಬಿನ್‌, ಶೇಂಗಾ ಸೇರಿದಂತೆ ದ್ವಿದಳ ಧಾನ್ಯಗಳು ಬಿತ್ತನೆಯಾಗಿ 30–40 ದಿನವಾಗಿದ್ದು, ಬೆಳವಣಿಗೆ ಹಂತದಲ್ಲಿವೆ.  ಸದ್ಯ ಮಳೆ ಬೇಕು.  -ಎಫ್‌.ಎ ಭಾಗವಾನ್‌, ಸಹಾಯಕ ಕೃಷಿ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT