ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಅಮ್ಮಂದಿರು!

Last Updated 21 ಜೂನ್ 2013, 19:59 IST
ಅಕ್ಷರ ಗಾತ್ರ

ಸೌಮ್ಯ ಬಹುರಾಷ್ಟ್ರೀಯ ಬ್ಯಾಂಕೊಂದರಲ್ಲಿ ಉದ್ಯೋಗಿ. ಪತಿ ಪ್ರದೀಪ್ ವಿದೇಶಿ ಮೂಲದ ಕಂಪೆನಿಯಲ್ಲಿ ಮ್ಯಾನೇಜರ್. ತಡರಾತ್ರಿವರೆಗೂ ಕೆಲಸ. ವಿವಾಹವಾದ ಎರಡು ವರ್ಷಕ್ಕೆ ಮಗುವಿನ ಆಗಮನ. ಪ್ರೀತಿಯ ಮಗುವಿನ ಪಾಲನೆಗೇ ಇಬ್ಬರ ಮೊದಲ ಆದ್ಯತೆ. ಆದರೆ ಇಷ್ಟು ದಿನ ಇಲ್ಲದ ಸಮಸ್ಯೆಯೊಂದು ಥಟ್ಟನೆ ಹುಟ್ಟಿಕೊಳ್ಳುತ್ತದೆ. `ಇಬ್ಬರೂ ಕೆಲಸಕ್ಕೆ ಹೋದರೆ ತಡರಾತ್ರಿವರೆಗೂ ಮಗುವನ್ನು ನೋಡಿಕೊಳ್ಳುವವರು ಯಾರು?' ಬಾಣಂತನ ಮುಗಿಸಿಕೊಂಡು ಕಚೇರಿಗೆ ಹೋಗಲು ಅನುವಾದಾಗಲೇ ಸೌಮ್ಯಾಗೆ ಈ ಪ್ರಶ್ನೆ ಎದುರಾದದ್ದು.

ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮನೆಯವರಿಂದ ದೂರ. ತಮ್ಮ ಪೋಷಕರನ್ನು ಕೇಳೋಣವೆಂದರೆ ಮುಜುಗರ. ಮೇಲಾಗಿ ವಿವಾಹವಾದ ಬಳಿಕ ಒಂದು ಬಾರಿಯೂ ಮನೆಗೆ ಬಾರದ ಅಪ್ಪ- ಅಮ್ಮ ಮಗುವನ್ನು ನೋಡಿಕೊಳ್ಳುತ್ತಾರೆಯೇ? ಅದು ಅಸಾಧ್ಯದ ಮಾತು. ಡೇ ಕೇರ್‌ಗೆ ಬಿಟ್ಟರೆ ಸೂರ್ಯ ಅಸ್ತಮಿಸುತ್ತಲೇ ಫೋನು- `ವೇಳೆ ಆಯಿತು ನಿಮ್ಮ ಮಗುವನ್ನು ಕರೆದುಕೊಂಡು ಹೋಗಿ' ಎಂದು.

ಆದರೆ ಈಗ ಆ ಚಿಂತೆ ಇಲ್ಲ. ತಡರಾತ್ರಿ ಎಷ್ಟು ಹೊತ್ತಾದರೂ ತಮ್ಮ ಮಗು ಸುರಕ್ಷಿತವಾಗಿರುತ್ತದೆ ಎಂಬ ಖಾತರಿ ಸೌಮ್ಯಾಗೆ. ಹೊತ್ತೊತ್ತಿಗೆ ಊಟ, ನಿದ್ರೆ, ಆಟ ಎಲ್ಲವೂ ಸಾಂಗವಾಗಿ ನೆರವೇರುತ್ತಿದೆ. ಸೌಮ್ಯಾ, ಪ್ರದೀಪ್ ಮೊರೆ ಹೋದದ್ದು ನೈಟ್ ಕೇರ್‌ಗೆ.
***
ರಚನಾಳ ಮದುವೆಯಾಗಿ 5 ವರ್ಷವಾಯಿತು, ವಿಚ್ಛೇದಿತೆ. ಮೂರು ವರ್ಷದ ಮಗಳು ಆಹನಾಳೊಂದಿಗೆ ಜೀವನ. ಸಾಫ್ಟ್‌ವೇರ್ ಉದ್ಯೋಗಿ. ಇದ್ದಕ್ಕಿದ್ದಂತೆ ರಚನಾಗೆ ಈಗಿರುವುದಕ್ಕಿಂತ ಉತ್ತಮ ಕೆಲಸವೊಂದು ಹುಡುಕಿಕೊಂಡು ಬರುತ್ತದೆ. ಆದರೆ ಅಲ್ಲಿ ರಾತ್ರಿ ಪಾಳಿ ಕಡ್ಡಾಯ. ಈ ಅವಕಾಶವನ್ನು ಒಪ್ಪಿಕೊಂಡರೆ ಮಗುವಿಗೆ ತೊಂದರೆ ಆಗುತ್ತದೆಂದು ಮನಸ್ಸು ಹಿಂದೇಟು ಹಾಕುತ್ತದೆ.

ಆದರೂ ವೃತ್ತಿಯಲ್ಲಿ  ತನ್ನನ್ನು ತಾನು ಗುರುತಿಸಿಕೊಳ್ಳಬೇಕೆಂಬ ಬಯಕೆ ರಚನಾಳದ್ದು. ಕಡೆಗೆ ಆಕೆ ಮೊರೆ ಹೋದದ್ದು ನೈಟ್ ಕೇರ್‌ಗೆ. ರಾತ್ರಿ 8ರಿಂದ ಬೆಳಿಗ್ಗೆ 8 ಗಂಟೆವರೆಗೆ ಮಗುವಿಗೆ `ರಾತ್ರಿ ಅಮ್ಮ'ನೇ ಆಸರೆ.  ಪ್ರತಿ ದಿನ ಇದೇ ಪರಿಪಾಠ. ಮೊದಮೊದಲು ಈ ಬದಲಾವಣೆಗೆ ಹೊಂದಿಕೊಳ್ಳಲು ಹೆಣಗಾಡಿದ ಆಹನಾ ಈಗ ನೈಟ್ ಕೇರ್‌ನಲ್ಲಿರುವ ಇತರ ಮಕ್ಕಳೊಂದಿಗೆ ಆಟ, ಊಟ, ಪಾಠ, ನಿದ್ದೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾಳೆ.
***
ಇದು ಒಬ್ಬಿಬ್ಬರ ಕಥೆಯಲ್ಲ. ಪ್ರಮುಖ ನಗರಗಳಲ್ಲಿನ ಉದ್ಯೋಗಸ್ಥ ತಾಯಂದಿರು ಅನಿವಾರ್ಯವಾಗಿ ಕಂಡುಕೊಂಡ ಪರಿಹಾರ ಇದು. ಇಂದಿನ ಬಹುತೇಕ ತಾಯಂದಿರು ನಾಲ್ಕು ಗೋಡೆಗಳ ಮಧ್ಯೆ ಕೂರುವ ಮಾತು ದೂರವೇ. ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕಬೇಕೆಂಬ ತುಡಿತವೇ ಹೆಚ್ಚು. ಈ ತಹತಹಿಕೆಯಲ್ಲಿ ಎದುರಾಗುವ ತೊಡಕುಗಳೂ ಹಲವಾರು. ಅವನ್ನೆಲ್ಲ ಮೆಟ್ಟಿ ನಿಲ್ಲುವ ಸಾಮರ್ಥ್ಯ ತಾಯಂದಿರಿಗೆ ಇದೆಯಾದರೂ, ಸುತ್ತಮುತ್ತಲ ಸಮಾಜದ ನೆರವು ಆಕೆಗೆ ಅಗತ್ಯ. ಇಂತಹ ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗಾಗೇ ನೈಟ್ ಕೇರ್ ತಾಯಂದಿರು ಹುಟ್ಟಿಕೊಂಡಿದ್ದಾರೆ. ಅವಿವಾಹಿತ ತಾಯಿ, ವಿಚ್ಛೇದಿತ ತಾಯಿ ಅಥವಾ ತಂದೆ, ಉದ್ಯೋಗಸ್ಥ ದಂಪತಿ ಹೀಗೆ ನಾನಾ ರೀತಿಯ ಪೋಷಕರು ನೈಟ್ ಕೇರ್‌ಗಳ ಮೊರೆ ಹೊಗುತ್ತಿದ್ದಾರೆ.

`ಬಹಳಷ್ಟು ಪೋಷಕರು ವಾರಾಂತ್ಯದಲ್ಲಿ, ಅಂದರೆ ಶುಕ್ರವಾರ, ಶನಿವಾರ, ಭಾನುವಾರ ತಮ್ಮ ಮಕ್ಕಳನ್ನು ನೈಟ್ ಕೇರ್‌ಗಳಲ್ಲಿ ಬಿಡುವ ಪರಿಪಾಠ ಹೆಚ್ಚಾಗಿದೆ' ಎನ್ನುತ್ತಾರೆ ನೈಟ್ ಕೇರ್ ನಡೆಸುತ್ತಿರುವ ಸುಚೇತಾ. ಇದಕ್ಕೆ ಕಾರಣವೂ ಉಂಟು. ಉದ್ಯೋಗಸ್ಥ ದಂಪತಿಗೆ ಸಿಗುವ ವಾರಾಂತ್ಯದ ರಜೆಯಲ್ಲಿ ಇಬ್ಬರೂ ಖಾಸಗಿಯಾಗಿ ಕಾಲ ಕಳೆಯಬೇಕೆಂದು ಬಯಸುವವರೇ ಹೆಚ್ಚು. ಒಂದು ವಾರಾಂತ್ಯ ಮಗುವಿಗಾಗಿ ಮೀಸಲಿಟ್ಟರೆ, ಇನ್ನೊಂದು ವಾರಾಂತ್ಯವನ್ನು ತಮ್ಮ ಸಂಗಾತಿಗಾಗಿ ಮೀಸಲಿಡಲು ಇಚ್ಛಿಸುವ ದಂಪತಿ ಸಾಮಾನ್ಯವಾಗಿ ನೈಟ್ ಕೇರ್‌ಗಳ ಹಂಗು ಬಯಸುತ್ತಾರೆ.

ವಿದೇಶಗಳಲ್ಲಿ ನೈಟ್ ಕೇರ್ ಸಂಸ್ಕೃತಿ ಈ ಮೊದಲೇ ಇತ್ತಾದರೂ ಭಾರತದಂಥ ದೇಶಗಳಲ್ಲಿ ಇದು ತೀರಾ ಹೊಸದು. ಬೆಂಗಳೂರು, ಹೈದರಾಬಾದ್, ದೆಹಲಿ, ಪುಣೆ, ಕೋಲ್ಕತ್ತ ಮೊದಲಾದ ಪ್ರಮುಖ ನಗರಗಳಲ್ಲಿ ನೈಟ್ ಕೇರ್ ಕೇಂದ್ರಗಳು ನಾಯಿಕೊಡೆಗಳಂತೆ ಸದ್ದಿಲ್ಲದೇ ತಲೆ ಎತ್ತುತ್ತಿವೆ.

`ನಾನು ನನ್ನ ಪತಿ ಇಬ್ಬರೂ ವಿದೇಶಿ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇವೆ. ಕಳೆದ ಏಪ್ರಿಲ್‌ನಲ್ಲಿ ಯಾವುದೋ ತರಬೇತಿ ನಿಮಿತ್ತ ಇಬ್ಬರೂ ಮೂರು ದಿನಗಳ ಕಾಲ ದೆಹಲಿಗೆ ಹೋಗುವ ಸಂದರ್ಭ ಎದುರಾಯಿತು. 14 ತಿಂಗಳ ಮಗುವನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಆಲೋಚನೆ ಶುರುವಾಯಿತು. ಆಗ ನಮ್ಮ ಸಹೋದ್ಯೋಗಿಯೊಬ್ಬರು ನೈಟ್ ಕೇರ್ ಬಗ್ಗೆ ತಿಳಿಸಿದರು. ಕೂಡಲೇ ನಮ್ಮ ಮನೆಯ ಹತ್ತಿರದ ನೈಟ್ ಕೇರ್‌ನಲ್ಲಿ ವಿಚಾರಿಸಿ ಮಗುವನ್ನು ಅಲ್ಲಿ ಬಿಟ್ಟು ಹೋದೆವು. ಮೂರು ದಿನ ನಿಶ್ಚಿಂತೆಯಾಗಿ ತರಬೇತಿ ಮುಗಿಸಿಕೊಂಡು ಬಂದೆವು. ಥ್ಯಾಕ್ಸ್ ಟು ನೈಟ್ ಕೇರ್' ಎಂದು ಹರ್ಷಿತರಾಗುತ್ತಾರೆ ರಿಥಿಕಾ ಜೈನ್.

ಬಹುಶಃ ಇದೊಂದು ಉದಾಹರಣೆ ಸಾಕು ಇಂದಿನ ನಗರವಾಸಿಗಳಿಗೆ ನೈಟ್ ಕೇರ್‌ಗಳ ಅವಶ್ಯಕತೆ ಎಷ್ಟಿದೆ ಎಂಬುದನ್ನು ಅರಿಯಲು. ಬೇಕೆಂದಾಗ, ಬೇಕಾದಷ್ಟು ಸಮಯ ಮಗುವನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡು ಸಲಹುತ್ತಾರೆ `ರಾತ್ರಿ ಅಮ್ಮಂದಿರು'.

ಇನ್ನು ಮಗುವನ್ನು ಬೇರೊಬ್ಬರ ಅಂಕೆಯಲ್ಲಿ ಬಿಟ್ಟು ಬಂದ ಕೆಲವು ಪೋಷಕರಿಗೆ `ಮಗು ಏನು ಮಾಡುತ್ತಿದೆಯೋ' ಎನ್ನುವ ಆತಂಕ ಕಾಡುವುದು ಸಹಜ. ಈ ಬಗೆಯ ಆತಂಕ ನಿವಾರಣೆಗೂ ಇಲ್ಲಿ ವ್ಯವಸ್ಥೆಯುಂಟು. ಮಗುವಿನ ಪ್ರತಿ ಚಲನವಲನವನ್ನೂ ಪೋಷಕರು ಕುಳಿತಲ್ಲೇ ವೀಕ್ಷಿಸಬಹುದು. ಅದಕ್ಕಾಗೇ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಲಾಗಿರುತ್ತದೆ. ಆನ್‌ಲೈನ್ ಮೂಲಕ ಪೋಷಕರು ಬೇಕೆಂದಾಗ ತಮ್ಮ ಮಗುವನ್ನು ನೋಡಬಹುದು. ಮೊಬೈಲ್ ಫೋನ್‌ಗಳಲ್ಲೂ ಈ ವ್ಯವಸ್ಥೆ ಲಭ್ಯ. (ಕೆಲವು ನೈಟ್ ಕೇರ್‌ಗಳು ಮಾತ್ರ ಈ ಸೌಲಭ್ಯ ಹೊಂದಿವೆ) ಇನ್ನು ಕೆಲವು ನೈಟ್‌ಕೇರ್‌ಗಳು ಪೋಷಕರ ಮನೆಗೆ ಮಗುವನ್ನು ತಲುಪಿಸುವುದು, ಮಗುವಿಗೆ ಅನಾರೋಗ್ಯ ಉಂಟಾದರೆ ಪ್ರಥಮ ಚಿಕಿತ್ಸೆ ನೀಡುವುದು... ಹೀಗೆ ಮಗುವಿಗೆ ಅತಿ ಅನಿವಾರ್ಯ ಎನಿಸುವ ತತ್‌ಕ್ಷಣದ ಸೇವಾ ಸೌಲಭ್ಯವನ್ನೂ ಹೊಂದಿವೆ.

`ಇಲ್ಲಿ ಕಾರ್ಯ ನಿರ್ವಹಿಸುವ ದಾದಿಯರಿಗೆ ತರಬೇತಿ ನೀಡಲಾಗುತ್ತದೆ. ಒಂದು ವರ್ಷದ ಒಳಗಿನ ಮಗುವಿಗೆ ಎಷ್ಟು ಸಮಯಕ್ಕೆ ಊಟ, ನಿದ್ದೆ ಮಾಡಿಸಬೇಕು, ಯಾವ ಸಮಯದಲ್ಲಿ ಹಾಲುಣಿಸಬೇಕು ಹೀಗೆ ಎಲ್ಲವನ್ನೂ ಪ್ರತಿ ಮಗುವಿನ ಶಾರೀರಿಕ ಬೆಳವಣಿಗೆಯನ್ನು ಆಧರಿಸಿ ಕಾಳಜಿ ವಹಿಸಲಾಗುತ್ತದೆ. ಆರು ತಿಂಗಳ ಮಗುವಿದ್ದರೆ ಅದಕ್ಕೆ ಡೈಪರ್ ಬದಲಾಯಿಸುವುದರಿಂದ ಹಿಡಿದು ಆಹಾರ ಕ್ರಮದವರೆಗೆ ಚಾರ್ಟ್ ತಯಾರಿಸಲಾಗುತ್ತದೆ. ಆ ಪ್ರಕಾರ ಮಗುವನ್ನು ಸಲಹುತ್ತೇವೆ. ಇದೆಲ್ಲವೂ ಮಗುವಿನ ತಾಯಿಯ ಸಲಹೆ ಸೂಚನೆ ಮೇರೆಗೆ ನಡೆಯುತ್ತದೆ' ಎಂದು ತಮ್ಮ ಜವಾಬ್ದಾರಿಗಳನ್ನು ವಿವರಿಸುತ್ತಾರೆ ಹೈದರಾಬಾದ್‌ನಲ್ಲಿ ನೈಟ್ ಕೇರ್ ನಡೆಸುತ್ತಿರುವ ಎಡ್ವಿನ್.

ಬೆಂಗಳೂರಲ್ಲಿ ಹೀಗೆ ಶುರುವಾಯಿತು...

`ಅಂದು ಮುಂಜಾನೆ ಮಗುವಿಗೆ ಸ್ವಲ್ಪ ಜ್ವರ ಬಂದಂತಾಗಿತ್ತು. ಆಫೀಸ್‌ನಿಂದ ಬೇಗ ಮನೆಗೆ ಬಂದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಮನದಲ್ಲೇ ಎಣಿಸಿ ಎಂದಿನಂತೆ ಡೇ ಕೇರ್‌ಗೆ ಬಿಟ್ಟುಬಂದಿದ್ದೆ. ಆದರೇ ಅಂದು ಮಾತ್ರ ಮೀಟಿಂಗು ಅದು ಇದು ಎಂದು ನಮ್ಮ ಬಾಸ್ `ಬೇಗ ಹೋಗಬೇಕೆಂಬ' ನನ್ನ ಮನವಿಗೆ ಓಗೊಡಲೇ ಇಲ್ಲ. ಡೇ ಕೇರ್‌ನಿಂದ ಮಗುವನ್ನು ಕರೆದುಕೊಂಡು ಹೋಗಲು ಕರೆ ಮೇಲೆ ಕರೆ.

ರಾತ್ರಿ ಎಂಟಾಯಿತು, ಹತ್ತಾಯಿತು. ಮತ್ತೊಂದು ಕೆಲಸ ಮಾಡುವಂತೆ ಬಾಸ್ ಆಜ್ಞೆಯಿತ್ತರು. ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಇನ್ನು ಕಾಯಲು ಸಾಧ್ಯವಿಲ್ಲ ಎಂದು ಅಂದೇ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದೆ. ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಶುಶ್ರೂಷೆ ಮಾಡಿಸಿದೆ. ಅಂದೇ ಅರಿವಾದದ್ದು ನನ್ನಂತೆ ಹಲವಾರು ಉದ್ಯೋಗಸ್ಥ ಮಹಿಳೆಯರಿಗೆ ಈ ರೀತಿಯ  ಸಂದಿಗ್ಧ ಸ್ಥಿತಿ ಎದುರಾಗಿಯೇ ಇರುತ್ತದೆ. ಅವರಿಗೆ ನಾನು ನೆರವಾಗಬೇಕೆಂದು ನಿರ್ಧರಿಸಿದೆ. ಅದರ ಫಲವೇ `24್ಡ7 ಕಿಡ್ಸ್ ಕೇರ್'. ಹೀಗೆ ನಾನು ನೈಟ್ ಕೇರ್ ಆರಂಭಿಸಿದ್ದಕ್ಕೆ ಸಾಕಷ್ಟು ಪೋಷಕರು ಖುಷಿಯಾಗಿದ್ದಾರೆ. ಅದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ' ಎಂದು ಹರ್ಷಿತರಾಗುತ್ತಾರೆ ಸುಚೇತಾ ಮಧುಸೂದನ್.

`ಆರು ವರ್ಷಗಳಿಂದ ಡೇ ಕೇರ್ ನಡೆಸುತ್ತಿದ್ದೇನೆ. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೆ. ಸುಮಾರು 30 ಮಕ್ಕಳು ನಮ್ಮಲ್ಲಿದ್ದಾರೆ. ಹತ್ತು ತಿಂಗಳ ಹಿಂದೆ ರಾಜನ್ ಎಂಬ ಮೂರು ವರ್ಷದ ಮಗುವಿನ ಪೋಷಕರು ಸಂಜೆ ಏಳು ಗಂಟೆಯಾದರೂ ತಮ್ಮ ಮಗುವನ್ನು ಕರೆದೊಯ್ಯಲು ಬರಲಿಲ್ಲ. ಕರೆ ಮಾಡಿ ವಿಚಾರಿಸಿದೆ. ಆಗ ರಾಜನ್ ಅಮ್ಮನಿಗೆ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು. ಇದೊಂದು ರಾತ್ರಿ ಹೇಗಾದರೂ ಮಾಡಿ ಮಗುವನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ ಎಂಬ ವಿನಂತಿ ರಾಜನ್ ಅಪ್ಪನಿಂದ ಬಂದಿತು. ಇನ್ನೇನು ಮಾಡುವುದು ಎಂದು ಆ ರಾತ್ರಿ ಮಗುವನ್ನು ನಮ್ಮಲ್ಲೇ ಉಳಿಸಿಕೊಂಡೆ. ಅಂದಿನಿಂದ ಶುರುವಾಯಿತು `ನೈಟ್ ಕೇರ್'ನ ಪರಿಪಾಠ ಎಂದು ತಮ್ಮ ನೈಟ್ ಕೇರ್ ವೃತ್ತಿ ಆರಂಭವಾದ ಬಗೆಯನ್ನು ವಿವರಿಸುತ್ತಾರೆ ವೈಟ್‌ಫೀಲ್ಡ್‌ನ ಅನಿಷಾ ಮಿತ್ರಾ.

`ಕೆಲ ತಾಯಂದಿರು ರಾತ್ರಿ 9-10ರವರೆಗೂ ಮಕ್ಕಳನ್ನು ನೋಡಿಕೊಳ್ಳಲು ಹೇಳುತ್ತಾರೆ. ಇಲ್ಲ ಎನ್ನಲಾಗೋಲ್ಲ. ಮೊದಮೊದಲು ರಾತ್ರಿಯೆಲ್ಲ ಮಕ್ಕಳನ್ನು ಸಂಭಾಳಿಸುವುದು ಕಷ್ಟ ಎನಿಸುತ್ತಿತ್ತು. ಈಗ ರೂಢಿಯಾಗಿದೆ. ಒಮ್ಮಮ್ಮೆ ಇಬ್ಬರು ಮೂವರು ಮಕ್ಕಳು ತಡರಾತ್ರಿವರೆಗೂ ಇರುತ್ತಾರೆ' ಎಂದು ಅವರು ಹೇಳುತ್ತಾರೆ.

ಇವು ಒಂದೆರಡು ಉದಾಹರಣೆಗಳಷ್ಟೇ. ಪೋಷಕರ ಒತ್ತಾಯದ ಮೇರೆಗೆ ರಾತ್ರಿ ಹೊತ್ತೂ ಮಕ್ಕಳನ್ನು ಪೋಷಿಸುವ ಸಂಸ್ಕೃತಿ ಶುರುವಾಯಿತು ಎನ್ನುವ ಅನಿಸಿಕೆ ಬಹುತೇಕ ನೈಟ್ ಕೇರ್ ಮಾಲೀಕರದು. ಇದೇ ಉದ್ದೇಶದಿಂದಲೇ ಬೆಂಗಳೂರಿನಲ್ಲಿ ಈಗ 15ರಿಂದ 20 ನೈಟ್ ಕೇರ್‌ಗಳು ಕಾರ್ಯ ನಿರ್ವಹಿಸುತ್ತಿವೆ.

ಕೆಲಸಕ್ಕೆ ಅಡ್ಡಿ ಆಗಲಿಲ್ಲ

ನಾನು ನನ್ನ ಪತ್ನಿ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳು. ಮಗುವಿಗೆ 15 ತಿಂಗಳು ತುಂಬುವಾಗ ಇಬ್ಬರಿಗೂ ರಾತ್ರಿ ಪಾಳಿಯ ಕೆಲಸ ಬಂತು. ಮಗುವನ್ನು ಹೇಗೆ ನೋಡಿಕೊಳ್ಳುವುದು ಎಂಬ ಯೋಚನೆ ಶುರುವಾಯಿತು. ಒಬ್ಬ ಮಹಿಳೆಯನ್ನು ಅದಕ್ಕಾಗೇ ನೇಮಿಸಿಕೊಂಡೆವು. ಆಕೆ ನಮ್ಮ ಮನೆಗೇ ಬಂದು ಮಗುವನ್ನು ನೋಡಿಕೊಳ್ಳುತ್ತಿದ್ದಳು. ಆದರೆ ಕೆಲವೊಮ್ಮೆ ಗೈರುಹಾಜರಾಗಿ ಹೇಳದೆ ಕೇಳದೆ ಊರಿಗೆ ಹೋಗಿಬಿಡುತ್ತಿದ್ದಳು. ಆಗೆಲ್ಲ ನಮ್ಮಿಬ್ಬರಲ್ಲಿ ಒಬ್ಬರು ರಜೆ ಹಾಕಿ ಮಗುವನ್ನು ನೋಡಿಕೊಳ್ಳಬೇಕಿತ್ತು.

ಕಡೆಗೆ ಆಕೆ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿದಳು. ಮತ್ತೊಬ್ಬ ಮಹಿಳೆಗಾಗಿ ಹುಡುಕಾಡಿದೆವು. ಪ್ರಯತ್ನ ವಿಫಲವಾಯಿತು. ಸ್ನೇಹಿತರಿಂದ ನೈಟ್ ಕೇರ್ ವಿಷಯ ತಿಳಿಯಿತು. ಹಲವೆಡೆ ವಿಚಾರಿಸಿ ಉತ್ತಮವಾದುದನ್ನು ಆಯ್ದು ಮಗುವನ್ನು ಅಲ್ಲಿ ಬಿಟ್ಟೆವು. 6ರಿಂದ 7 ತಿಂಗಳು ಮಗು ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ನೈಟ್ ಕೇರ್‌ನಲ್ಲೇ ಬೆಳೆಯಿತು. ನಮ್ಮ ಕೆಲಸಕ್ಕೂ ಯಾವುದೇ ಅಡ್ಡಿಯಾಗಲಿಲ್ಲ. ನೈಟ್ ಕೇರ್‌ನವರೂ ಅಷ್ಟೇ ಆಸ್ಥೆಯಿಂದ ಮಗುವನ್ನು ನೋಡಿಕೊಂಡರು.
- ಸಂತೋಷ್ ಕುಮಾರ್

ಆಘಾತಕಾರಿ ಬೆಳವಣಿಗೆ ಅಲ್ಲ

ಉದ್ಯೋಗಸ್ಥ ತಂದೆ- ತಾಯಿಗೆ ಮಕ್ಕಳನ್ನು ನೈಟ್ ಕೇರ್‌ನಲ್ಲಿ ಬಿಡದೆ ಬೇರೆ ದಾರಿಯಿಲ್ಲ. ಮಕ್ಕಳ ಸಲುವಾಗೇ ಮಾಡುತ್ತಿರುವ ಉದ್ಯೋಗ ಬಿಡುವ ದಡ್ಡತನಕ್ಕೆ ಪೋಷಕರು ಮುಂದಾಗಬಾರದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ತಾಯಂದಿರಿಗೆ ನೆರವಾಗುವ ಉದ್ದೇಶದಿಂದ ನೈಟ್ ಕೇರ್‌ಗಳು ಆರಂಭ ಆಗಿರುವುದು ಸಮಾಜದ ಬದಲಾವಣೆಗೆ ಸಮಾಜವೇ ಹೊಂದಿಕೊಳ್ಳುತ್ತಿರುವುದರ ಸೂಚಕ.

ಇಷ್ಟಕ್ಕೂ ಪೋಷಕರು ದಿನದ 12 ಗಂಟೆ ಕಚೇರಿಯಲ್ಲಿ ಕೆಲಸ ಮಾಡಿದರೆ, ಉಳಿದ 12 ಗಂಟೆ ಮನೆಯಲ್ಲಿ ಇರುತ್ತಾರಲ್ಲವೇ. ಮಕ್ಕಳು ಪೋಷಕರನ್ನು ಹೆಚ್ಚು ಬಯಸುವುದು ಹಗಲು ಹೊತ್ತಿನಲ್ಲಿ. ಆಗ ಮಕ್ಕಳೊಂದಿಗೆ ಒಡನಾಟ ಇದ್ದೇ ಇರುತ್ತದೆ. ರಾತ್ರಿ ಸಮಯದಲ್ಲಿ ಕೆಲವು ಮಕ್ಕಳು ತಾಯಂದಿರನ್ನು ಬಯಸಿದರೂ ಬದಲಾವಣೆಗೆ ಆ ಮಕ್ಕಳೂ ಹೊಂದಿಕೊಳ್ಳುತ್ತವೆ.

ಮೊದಲೆಲ್ಲ ಅಜ್ಜ- ಅಜ್ಜಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಬದಲಾದ ಸಾಮಾಜಿಕ ಚಿತ್ರಣದಲ್ಲಿ `ನಿಮ್ಮನ್ನು ಇಷ್ಟು ದಿನ ಸಾಕಿಲ್ಲವೇ. ನಾವ್ಯಾಕೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು. ಅದು ನಿಮ್ಮ ಕರ್ತವ್ಯ' ಎಂದು ಕೈತೊಳೆದು ಕೊಳ್ಳುವವರೇ ಹೆಚ್ಚು. ಹೀಗಿರುವಾಗ ನೈಟ್ ಕೇರ್‌ಗಳ ಹಂಗು ತಾಯಿ- ಮಕ್ಕಳಿಗೆ ಅನಿವಾರ್ಯ ಉತ್ತಮ ದಾರಿ.
- ಡಾ. ಅ.ಶ್ರೀಧರ, ಮನೋವಿಜ್ಞಾನಿ

ಏಕೆ ಈ ನೆಚ್ಚಿಕೆ?
-ಉದ್ಯೋಗದ ಅನಿವಾರ್ಯತೆ
- ದಂಪತಿಗೆ ಮಕ್ಕಳನ್ನು ಸಾಕಲು ಪೋಷಕರ ನೆರವು ಸಿಗದಿದ್ದಾಗ
- ಪತಿ- ಪತ್ನಿ ಹೋಗಲೇಬೇಕಾದಂತಹ ಕಾರ್ಯಕ್ರಮ ಇದ್ದಲ್ಲಿ
- ಕೆಲಸದ ನಿಮಿತ್ತ ಹೋರದೇಶಕ್ಕೆ ಹೋಗಬೇಕಾದಾಗ
- ಪತಿ-ಪತ್ನಿಗೆ ಏಕಾಂತದಲ್ಲಿ ಇರಬೇಕು ಎನ್ನಿಸಿದಾಗ
- ವಾರಾಂತ್ಯದಲ್ಲಿ ಪ್ರವಾಸ, ಪಾರ್ಟಿ, ಸಿನಿಮಾಗೆ ಹೋಗುವಾಗ
- ಇಬ್ಬರಲ್ಲಿ ಒಬ್ಬರಿಗೆ ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆ ಸೇರಿ, ಅವರ ಆರೈಕೆಗಾಗಿ ಇನ್ನೊಬ್ಬರು ಸಮಯ ತೊಡಗಿಸಬೇಕಾದಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT