ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿ: ಸಮಿತಿ ಕರೆಗೆ ಓಗೊಟ್ಟವರು ಬರೀ 70 ಮಂದಿ!

Last Updated 20 ಫೆಬ್ರುವರಿ 2015, 20:06 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಗೌರವಕ್ಕೆ ಅರ್ಹರ ಹೆಸರು ಸೂಚಿಸಿ ಎಂದು ‘ರಾಷ್ಟ್ರಕವಿ ಆಯ್ಕೆ ಸಲಹಾ ಸಮಿತಿ’ ನೀಡಿದ್ದ ಸಾರ್ವಜನಿಕ ಕರೆಗೆ ಓಗೊಟ್ಟು ಬಂದಿರುವ ಪ್ರತಿಕ್ರಿಯೆಗಳು 70 ಮಾತ್ರ!

ರಾಷ್ಟ್ರಕವಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂಬುದನ್ನು ನಿರ್ಧರಿಸಲು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಏಳು ಮಾನದಂಡ ಗಳನ್ನು ರೂಪಿಸಲಾಯಿತು. ಈ ಮಾನ ದಂಡಗಳ ಪ್ರಕಾರ ರಾಷ್ಟ್ರಕವಿ ಯಾರಾ­ಗಬಹುದು ಎಂಬುದನ್ನು ಸೂಚಿಸುವಂತೆ ಸಾಹಿತಿ ಕೋ. ಚೆನ್ನಬಸಪ್ಪ ಅಧ್ಯಕ್ಷತೆಯ ಸಮಿತಿ ಜನವರಿ 9ರಂದು ಕರೆ ನೀಡಿತು.

ಅಭಿಪ್ರಾಯ ತಿಳಿಸಲು ಜ. 27 ಅಂತಿಮ ದಿನ ಎಂದು ಸಮಿತಿ ಹೇಳಿತ್ತು. ಸಾರ್ವಜನಿಕರಿಂದ ಇದುವರೆಗೆ 70 ಪತ್ರಗಳು ಬಂದಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಷ್ಟ್ರಕವಿ ಗೌರವಕ್ಕೆ ಅರ್ಹರ ಹೆಸರು ಸೂಚಿಸುವುದೊಂದೇ ಅಲ್ಲ, ಅರ್ಹರ ಶ್ರೇಷ್ಠ ಸಾಹಿತ್ಯ ಕೃತಿ, ಆ ಕೃತಿಯ ಕೆಲವು ಸಾಲುಗಳನ್ನು ಪತ್ರದ ಜೊತೆ ಉಲ್ಲೇಖಿಸಿರಬೇಕು ಎಂದೂ ಸೂಚಿಸಲಾಗಿತ್ತು. ಹಾಗಾಗಿ ಪ್ರತಿಕ್ರಿಯೆ ಗಳ ಸಂಖ್ಯೆ ಕಡಿಮೆ ಇದ್ದಿರಬಹುದು' ಎಂದು ಅವರು ಹೇಳಿದರು.

ಸಾರ್ವಜನಿಕರಿಂದ ಮಾತ್ರವಲ್ಲದೆ 200 ವಿದ್ವಾಂಸರಿಂದಲೂ ಅಭಿಪ್ರಾಯ ಕೇಳಲಾಗಿದೆ. ಸುಮಾರು 150 ವಿದ್ವಾಂಸರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ರಾಷ್ಟ್ರಕವಿ ಎಂಬ ಗೌರವ ನೀಡುವುದನ್ನು ಇನ್ನೂ ಮುಂದುವರಿಸ ಬೇಕೇ ಎಂಬ ಪ್ರಶ್ನೆಯನ್ನು ಸಮಿತಿಯ ಮುಂದಿಟ್ಟಿದ್ದಾರೆ ಎಂದು ಅವರು ತಿಳಿಸಿದರು. ಕಡಿಮೆ ಸಂಖ್ಯೆಯ ಪ್ರತಿಕ್ರಿಯೆಗಳು ಬಂದಿರುವುದರಿಂದ ಸಮಿತಿಗೆ ನಿರಾಸೆ ಇಲ್ಲ ಎಂದರು.

ಮಾನದಂಡ ಇದೇ ಮೊದಲು
ರಾಜ್ಯದ ಏಕೀಕರಣದ ನಂತರ ಸರ್ಕಾರ ಇಬ್ಬರಿಗೆ (ಕುವೆಂಪು ಮತ್ತು ಜಿ.ಎಸ್‌. ಶಿವರುದ್ರಪ್ಪ) ರಾಷ್ಟ್ರಕವಿ ಗೌರವ ನೀಡಿದೆ. ಇದಕ್ಕೂ ಮುನ್ನ ಹಿಂದಿನ ಮದ್ರಾಸ್ ಸರ್ಕಾರ ಎಂ. ಗೋವಿಂದ ಪೈ ಅವರಿಗೆ ಈ ಗೌರವ ನೀಡಿತ್ತು.
ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿ, ರಾಷ್ಟ್ರಕವಿ ಗೌರವಕ್ಕೆ ಯಾರು ಅರ್ಹರು ಎಂಬುದನ್ನು ನಿರ್ಧರಿಸಲು ಮುಂದಾಗಿರುವುದು ರಾಜ್ಯದಲ್ಲಿ ಇದೇ ಮೊದಲು.

ಚರ್ಚೆಯಾಗಿದೆ
‘ರಾಷ್ಟ್ರಕವಿ’ ಗೌರವ ಪಡೆದಿರುವ ಯಾರೂ ಈಗ ರಾಜ್ಯದಲ್ಲಿ ಇಲ್ಲ. ಈ ಸ್ಥಾನವನ್ನು ತಕ್ಷಣಕ್ಕೆ ತುಂಬುವ ಅಗತ್ಯ ಇದೆಯೇ? ರಾಜಸತ್ತೆಯ ನೆನಪು ಮುಂದುವರಿಸುವ ‘ರಾಷ್ಟ್ರಕವಿ’ ಗೌರವ ನೀಡುವ ಪದ್ಧತಿ ಉಳಿಸಿಕೊಳ್ಳಬೇಕೇ? ಈ ಗೌರವವನ್ನು ಯಾರಿಗೆ ನೀಡಬಹುದು? ಎಂಬ ಅಂಶಗಳ ಕುರಿತು ಸಮಿತಿಯ ಇತ್ತೀಚಿನ ಸಭೆಯಲ್ಲಿ ಚರ್ಚೆಯಾಗಿದೆ. ಯಾವುದೇ ತೀರ್ಮಾನ ಆಗಿಲ್ಲ.
– ಬಂಜಗೆರೆ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT