ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಕೆಚ್ಚೆದೆಯ ಆಟಕ್ಕೆ ಒಲಿದ ಜಯ

ಪ್ರೊ ಕಬಡ್ಡಿ: ಕೋಲ್ಕತ್ತ ಚರಣಕ್ಕೆ ತೆರೆ: ಡೆಲ್ಲಿಗೆ ಮತ್ತೆ ನಿರಾಸೆ
Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ರೈಡಿಂಗ್‌ ವೇಳೆ ಬಲಗಣ್ಣಿನ ಹುಬ್ಬಿಗೆ ಪೆಟ್ಟು ಬಿದ್ದು ರಕ್ತ  ಸೋರುತ್ತಿತ್ತು. ಹೀಗಿದ್ದರೂ ಅಂಜದೆ ಬ್ಯಾಂಡೇಜ್‌ ಕಟ್ಟಿಕೊಂಡು ಆಡಿದ ರಾಹುಲ್‌ ಚೌಧರಿ, ಅಂಗಳದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿ ಕೋಲ್ಕತ್ತದ ಕಬಡ್ಡಿ ಪ್ರಿಯರ ಮನಗೆದ್ದರು.

ರಾಹುಲ್‌ ಅವರ ಕೆಚ್ಚೆದೆಯ ಆಟದಿಂದಾಗಿ ತೆಲುಗು ಟೈಟನ್ಸ್‌ ತಂಡ ಪ್ರೊ ಕಬಡ್ಡಿ ನಾಲ್ಕನೇ ಆವೃತ್ತಿಯ ಪಂದ್ಯದಲ್ಲಿ   38–26 ಪಾಯಿಂಟ್ಸ್‌ನಿಂದ ದಬಂಗ್‌ ಡೆಲ್ಲಿ ವಿರುದ್ಧ ಗೆದ್ದಿತು.

ಕೋಲ್ಕತ್ತ ಚರಣದ ಕೊನೆಯ ದಿನವಾದ ಮಂಗಳವಾರ ಕಬಡ್ಡಿ ಆಟದ ಸೊಬಗನ್ನು ಕಣ್ತುಂಬಿಕೊಳ್ಳಲು ನೇತಾಜಿ ಸುಭಾಷ್‌ ಚಂದ್ರಬೋಸ್‌ ಕ್ರೀಡಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಯಾವ ಹಂತದಲ್ಲಿಯೂ ನಿರಾಸೆಯಾಗಲಿಲ್ಲ.

ಆರಂಭದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕವಾಗಿ ಆಡಿದ್ದರಿಂದ ಮೊದಲ ಮೂರು ರೈಡ್‌ಗಳಲ್ಲಿ ಯಾರಿಗೂ ಪಾಯಿಂಟ್‌ ಸಿಗಲಿಲ್ಲ. ಅದರೆ ಎರಡನೇ ನಿಮಿಷದಲ್ಲಿ ‘ಡೂ ಆರ್‌ ಡೈ ರೈಡ್‌’ಗೆ ಬಂದ ಕಾಶಿಲಿಂಗ ಅಡಕೆಯವರನ್ನು ಬಂಧಿಸಿದ ಟೈಟನ್ಸ್‌ ತಂಡ ಪಾಯಿಂಟ್‌ ಬೇಟೆಗೆ ಮುನ್ನುಡಿ ಬರೆಯಿತು. ನಾಯಕ ರಾಹುಲ್‌ ಮಾಡು ಇಲ್ಲವೇ ಮಡಿ ರೈಡ್‌ನಲ್ಲಿ ಪಾಯಿಂಟ್‌ ಹೆಕ್ಕಿ ತಂದು ಮುನ್ನಡೆ ಹೆಚ್ಚಿಸಿದರು.

ಮೂರನೇ ನಿಮಿಷದಲ್ಲಿ ವೈಯಕ್ತಿಕ ಎರಡನೇ ರೈಡ್‌ಗೆ ಬಂದ ಇರಾನ್‌ನ ಆಟಗಾರ ಮೆರಾಜ್‌ ಶೇಖ್‌ ಅವರನ್ನು ಸಂದೀಪ್‌ ನರ್ವಾಲ್‌ ಹಿಡಿಯಲು ಮುಂದಾದರು. ಅವರ ಪಟ್ಟನ್ನು ಬಿಡಿಸಿಕೊಂಡ ಮೆರಾಜ್‌ ಮುಂದಕ್ಕೆ ಜಿಗಿದು ಪಾಯಿಂಟ್‌ ಗೆರೆ ಮುಟ್ಟಿದ ರೀತಿಯಂತೂ ಸೊಗಸಾಗಿತ್ತು. ಹೀಗಾಗಿ ತಂಡ 2–2ರಲ್ಲಿ ಸಮಬಲ ಮಾಡಿಕೊಂಡಿತು.

ಬಳಿಕ ರೈಡ್‌ಗೆ ಹೋದ ರಾಹುಲ್‌ ಚೌಧರಿ ಎದುರಾಳಿಗಳ ರಕ್ಷಣಾ ಕೋಟೆಯನ್ನು ಭೇದಿಸಿ ತಂಡಕ್ಕೆ ಮತ್ತೆ ಮುನ್ನಡೆ  ತಂದುಕೊಟ್ಟರು. ನಂತರ  ಕಾಶಿಲಿಂಗ ಅಡಕೆ ಒಂದು ಪಾಯಿಂಟ್‌ ಗಳಿಸಿದರು. ಇದರ ಬೆನ್ನಲ್ಲೆ  ರಾಹುಲ್‌  ಅವರನ್ನು ಕಟ್ಟಿಹಾಕಿದ ಡೆಲ್ಲಿ 3–2ರ ಮುನ್ನಡೆ ತನ್ನದಾಗಿಸಿಕೊಂಡಿತು.

12ನೇ ನಿಮಿಷದ ಆಟ ಮುಗಿದಾಗ ಎರಡೂ ತಂಡಗಳು 5–5ರಲ್ಲಿ ಸಮಬಲ ಹೊಂದಿದ್ದವು. ಡೆಲ್ಲಿ ಆವರಣದಲ್ಲಿ ಆರು ಮಂದಿ ಇದ್ದರೆ, ಟೈಟನ್ಸ್‌ ಕೋರ್ಟ್‌ನಲ್ಲಿ  ಐದು ಮಂದಿ ಉಳಿದಿದ್ದರು. ಈ ಹಂತದಲ್ಲಿ ದಾಳಿಗೆ ಹೋದ ಸಂದೀಪ್‌ ನರ್ವಾಲ್‌  ಬೋನಸ್‌ ಅಂಕ ಗಳಿಸಿ ಟೈಟನ್ಸ್‌ 6–5ರ ಮುನ್ನಡೆ ಗಳಿಸುವಂತೆ ನೋಡಿಕೊಂಡರು. ಮರು ಕ್ಷಣವೇ ಸೆಲ್ವಮಣಿ ಅವರನ್ನು ಟೈಟನ್ಸ್‌ ಆಟಗಾರರು  ರಕ್ಷಣಾ ಬಲೆಯಲ್ಲಿ ಸಿಲುಕಿಸುವಲ್ಲಿ ಯಶಸ್ವಿಯಾದರು.

18ನೇ ನಿಮಿಷದಲ್ಲಿ  ರೈಡ್‌ಗೆ ಬಂದ ಕಾಶಿಲಿಂಗ ಅಡಕೆ, ಸಂದೀಪ್‌ ನರ್ವಾಲ್‌ ಅವರಿಗೆ ಚಳ್ಳೆ ಹಣ್ಣು ತಿನ್ನಿಸಿದರಲ್ಲದೆ ಎರಡು ಪಾಯಿಂಟ್‌ ಗಳಿಸಿ ತಂಡ 8–8ರಲ್ಲಿ ಸಮಬಲ ಸಾಧಿಸುವಂತೆ ಮಾಡಿದರು. 19ನೇ ನಿಮಿಷದಲ್ಲಿ ಟೈಟನ್ಸ್‌ ನಾಯಕ ರಾಹುಲ್‌ ‘ಸೂಪರ್‌ ರೈಡ್‌’ ಮೂಲಕ ಮೂರು ಪಾಯಿಂಟ್‌ ತಂದು ಮುನ್ನಡೆ ಏರುವಂತೆ ನೋಡಿಕೊಂಡರು.

ಮರು ರೈಡ್‌ನಲ್ಲಿ ಅವರು ಮತ್ತೊಮ್ಮೆ ಮೋಡಿ ಮಾಡಿದರು.  ಹೀಗಾಗಿ ತಂಡ 14–8ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ಟೈಟನ್ಸ್‌ ತಂಡ ದ್ವಿತೀಯಾರ್ಧದ ಆಟ ಶುರುವಾಗಿ ಒಂದು ನಿಮಿಷ ಆಗುವಷ್ಟರಲ್ಲಿ ಎದುರಾಳಿಗಳನ್ನು ಆಲೌಟ್‌ ಮಾಡಿ ಮುನ್ನಡೆಯನ್ನು 18–9ಕ್ಕೆ ಹೆಚ್ಚಿಸಿಕೊಂಡಿತು.
ರಾಹುಲ್‌ ಆಟದ ರಂಗು ದ್ವಿತೀಯಾರ್ಧದಲ್ಲಿ ಟೈಟನ್ಸ್‌ ತಂಡದ ರಾಹುಲ್‌ ಚೌಧರಿ ಅವರ ಆಟ ರಂಗೇರಿತು.

28ನೇ ನಿಮಿಷದಲ್ಲಿ ರೈಡ್‌ಗೆ ಹೋದ ಅವರನ್ನು ಡೆಲ್ಲಿ ಆಟಗಾರರು ಹಿಡಿಯಲು ಮುಂದಾದರು. ಅವರ ರಕ್ಷಣಾಕೋಟೆಯನ್ನು ಭೇದಿಸಿದ ರಾಹುಲ್‌ ಪಾಯಿಂಟ್‌ ಗೆರೆ ಮುಟ್ಟಿದ್ದರು. ಆಗ ರೆಫರಿ, ರಾಹುಲ್‌ ಔಟ್‌ ಎಂದು ತೀರ್ಪು ನೀಡಿದ್ದರು. ಇದರ ವಿರುದ್ಧ ಟೈಟನ್ಸ್‌ ಆಟಗಾರ ಮೇಲ್ಮನವಿ ಸಲ್ಲಿಸಿದರು. ಟಿ.ವಿ. ಅಂಪೈರ್‌, ರಾಹುಲ್‌ ಯಶಸ್ವಿ ರೈಡ್‌ ಮಾಡಿರುವುದನ್ನು ಖಚಿತಪಡಿಸಿದರು.

ಹೀಗಾಗಿ ‘ಸೂಪರ್‌ ರೈಡ್‌’ ರೂಪದಲ್ಲಿ ಟೈಟನ್ಸ್‌ ಖಾತೆಗೆ ಮೂರು ಪಾಯಿಂಟ್‌ ಸೇರ್ಪಡೆಯಾಯಿತು. ಜತೆಗೆ ತಂಡದ ಮುನ್ನಡೆಯೂ 23–12ಕ್ಕೆ ಹಿಗ್ಗಿತು. 29ನೇ ನಿಮಿಷದ ಆಟ ಮುಗಿದಾಗ ಡೆಲ್ಲಿ 15–24ರಿಂದ ಹಿಂದಿತ್ತು. ನಂತರದ 11 ನಿಮಿಷದಲ್ಲಿ ತಂಡ ಪುಟಿದೇಳಬಹುದೆಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಸೆಲ್ವಮಣಿ ಸಂಚಲನ
ಡೆಲ್ಲಿ ತಂಡದ ಸೆಲ್ವಮಣಿ ತಮ್ಮ ಎರಡು ಯಶಸ್ವಿ ರೈಡ್‌ಗಳಲ್ಲಿ ಐದು ಪಾಯಿಂಟ್‌ ಗಳಿಸಿ ಮೈದಾನದಲ್ಲಿ ಸಂಚಲನ ಸೃಷ್ಟಿಸಿದರು. ಹೀಗಾಗಿ ಟೈಟನ್ಸ್‌ ಆಲೌಟ್‌ ಭೀತಿ ಎದುರಿಸಿತ್ತು. ಆದರೆ ನಾಯಕ ರಾಹುಲ್‌ ಇದಕ್ಕೆ ಅವಕಾಶ ನೀಡಲಿಲ್ಲ. ರೈಡಿಂಗ್‌ನಲ್ಲಿ ಒಂದು ಪಾಯಿಂಟ್‌ ತಂದ ಅವರು 33ನೇ ನಿಮಿಷದಲ್ಲಿ ‘ಸೂಪರ್‌ ಟ್ಯಾಕಲ್‌’ ಮೂಲಕ ತಂಡದ ಖಾತೆಗೆ ಮೂರು ಪಾಯಿಂಟ್‌ ಸೇರಿಸಿ ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು.

36ನೇ ನಿಮಿಷದಲ್ಲಿ  ಡೆಲ್ಲಿ ನಾಯಕ ಮೆರಾಜ್‌ ಎರಡು ಪಾಯಿಂಟ್‌ ತಂದಿತ್ತು ಹಿನ್ನಡೆಯನ್ನು 22–29ಕ್ಕೆ ತಗ್ಗಿಸಿದರು. ಮರು ರೈಡ್‌ನಲ್ಲೇ ರಾಹುಲ್‌ ಬೋನಸ್‌ ಸಹಿತ ಮೂರು ಪಾಯಿಂಟ್‌ ಗಳಿಸಿ 32–23ರ ಮುನ್ನಡೆಗೆ ಕಾರಣರಾದರು.

ಮರು ನಿಮಿಷದಲ್ಲಿ ಮೆರಾಜ್‌ ಎದುರಾಳಿ ಆವರಣದಲ್ಲಿದ್ದ ಇಬ್ಬರನ್ನು ಔಟ್‌ ಮಾಡುವ ಮೂಲಕ ಟೈಟನ್ಸ್‌ ಆವರಣವನ್ನು ಖಾಲಿ ಮಾಡಿದರಲ್ಲದೆ ಲೋನಾ ಸೇರಿದಂತೆ ನಾಲ್ಕು ಪಾಯಿಂಟ್‌ ಹೆಕ್ಕಿ ತಂದು ತಂಡದ ಜಯದ ಆಸೆಗೆ ಜೀವ ತುಂಬಿದರು. ಆ ಬಳಿಕ ಟೈಟನ್ಸ್‌ ತಂಡ ರಕ್ಷಣಾ ವಿಭಾಗದಲ್ಲಿ ದಿಟ್ಟ ಆಟ ಆಡಿ ಎದುರಾಳಿಗಳ  ಗೆಲುವಿನ ಕನಸಿಗೆ ತಣ್ಣೀರೆರಚಿತು.

ಜಯದ ಹಾದಿಗೆ ಬುಲ್ಸ್‌..
ತವರಿನಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋತು ನಿರಾಸೆ ಮೂಡಿಸಿದ್ದ ಬೆಂಗಳೂರು ಬುಲ್ಸ್‌ ತಂಡ ಸೋಲಿನ ಸರಪಳಿ ಕಳಚುವಲ್ಲಿ ಯಶಸ್ವಿಯಾಯಿತು. ದಿನದ ಎರಡನೇ ಪಂದ್ಯದಲ್ಲಿ ಬುಲ್ಸ್‌ 27–25ರಿಂದ ಆತಿಥೇಯ ಬೆಂಗಾಲ್‌ ವಾರಿಯರ್ಸ್‌ಗೆ ಸೋಲಿನ ರುಚಿ ತೋರಿಸಿತು. ಮೊದಲರ್ಧದಲ್ಲಿ 8–15ರಿಂದ ಹಿನ್ನಡೆ ಕಂಡಿದ್ದ ಬುಲ್ಸ್‌ ಬಳಿಕ ಚೇತರಿಕೆಯ ಆಟ ಆಡಿತು.

ಮುಖ್ಯಾಂಶಗಳು
* ಟೈಟನ್ಸ್‌ ಸೆಮಿ ಕನಸಿಗೆ ಬಲ
* 16 ಪಾಯಿಂಟ್ಸ್‌ ಗಳಿಸಿದ ರಾಹುಲ್‌
* ಜಯದ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್

ಇಂದಿನ ಪಂದ್ಯಗಳು
ಯು ಮುಂಬಾ–ಪುಣೇರಿ ಪಲ್ಟನ್‌
ಆರಂಭ: ರಾತ್ರಿ 8ಕ್ಕೆ

ಮಹಿಳಾ ವಿಭಾಗ
ಸ್ಟಾರ್ಮ್‌ ಕ್ವೀನ್ಸ್‌–ಫೈರ್‌ ಬರ್ಡ್ಸ್‌

ಆರಂಭ: ರಾತ್ರಿ 9
ಸ್ಥಳ: ಮುಂಬೈ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT