ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಖೆಗಳ ಮೋಡಿಯಲ್ಲಿ...!

ಧಾರವಾಡ ಸಾಹಿತ್ಯ ಸಂಭ್ರಮ
Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಒಂದು ಕೈಯಲ್ಲಿ ಕಸಬರಿಗೆ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಕೈಯಿಂದ  ಮಹಾತ್ಮ ಗಾಂಧೀಜಿಯನ್ನು ಚಿತ್ರದ ಚೌಕಟ್ಟಿನಿಂದ ಹೊರಗೆ ಎಳೆದೊಯ್ಯುತ್ತಿದ್ದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹತಾಶರಾಗಿ ಪರಿತಪಿಸುತ್ತಿದ್ದಾರೆ. ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ‘ಸ್ವಚ್ಛ ಭಾರತ’ ಬ್ಯಾನರ್ ಮಂದಹಾಸ ಬೀರುತ್ತಿದೆ!

ಈ ಪ್ರಹಸನ ನಡೆದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದ ಆವರಣದಲ್ಲಿ. ಇಲ್ಲಿ ನಡೆಯುತ್ತಿರುವ ‘ಧಾರವಾಡ ಸಾಹಿತ್ಯ ಸಂಭ್ರಮ–2015’ರಲ್ಲಿ ಪ್ರದರ್ಶಿಸಲಾಗಿರುವ ವಿ.ಜಿ. ನರೇಂದ್ರ ಅವರ ವ್ಯಂಗ್ಯಚಿತ್ರಗಳಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಚಿತ್ರವಿದು. ಮೋದಿಯವರು ಸ್ವಚ್ಛ ಭಾರತ ಅಭಿಯಾನದ ಮೂಲಕ ಗಾಂಧೀಜಿಯನ್ನು ಕಾಂಗ್ರೆಸ್‌ ಕೈಗಳಿಂದ ಬಿಡಿಸಿ ಬಿಜೆಪಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಸಂದೇಶ ರೇಖೆಗಳಲ್ಲಿ ಒಡಮೂಡಿದೆ.

ಸುಮಾರು 45 ವರ್ಷಗಳಿಂದ ದೇಶದ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ದಿನಪತ್ರಿಕೆಗಳಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ಸೇವೆ ಸಲ್ಲಿಸಿರುವ ನರೇಂದ್ರ ಮೂಲತಃ ಧಾರವಾಡದವರು. ಸದ್ಯ ಬೆಂಗಳೂರಿನ ನಿವಾಸಿ.  ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ (ಐಐಸಿ) ವ್ಯವಸ್ಥಾಪಕ ಟ್ರಸ್ಟಿಯೂ ಹೌದು. ಅವರ ಕೈಚಳಕದಲ್ಲಿ ಅರಳಿದ 85 ವ್ಯಂಗ್ಯಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅದರಲ್ಲಿ 1973 ರಿಂದ 2014ರ ವರೆಗಿನ ಆಯ್ದ ಚಿತ್ರಗಳಿವೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತೋರಿದ ಧೋರಣೆಗೆ  ಅಂಕುಡೊಂಕು ರೇಖೆಗಳ ಮೂಲಕ ಚಾಟಿಯೇಟು ನೀಡಿದ್ದಾರೆ. ಸಚಿವ ಸಂಪುಟದ ಸಹೋದ್ಯೋಗಿಗಳ ಮೇಲೆ ಅವರು ಸಾಧಿಸಿದ್ದ  ಬಿಗಿಹಿಡಿತ, ಯೋಜನೆಗಳನ್ನು ಜಾರಿಗೊಳಿಸಲು ತಳೆಯುತ್ತಿದ್ದ ಕಠೋರ ನಿಲುವುಗಳನ್ನು ವ್ಯಂಗ್ಯಚಿತ್ರಗಳು ಪರಿಣಾಮಕಾರಿಯಾಗಿ ಬಿಂಬಿಸಿವೆ.

ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ ನಿರ್ಣಯಗಳನ್ನೂ ಇಲ್ಲಿ ಬಿಂಬಿಸಲಾಗಿದೆ. ಸಚಿವ ಸಂಪುಟ ಸಮಿತಿ ಮತ್ತು ಯೋಜನಾ ಆಯೋಗವನ್ನು ರದ್ದುಗೊಳಿಸಿದ ನಿರ್ಧಾರಗಳ ಚಿತ್ರಗಳು ಇಲ್ಲಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಗೆದ್ದ ಮೋದಿಯವರಿಗೆ  ಆಂಜನೇಯನ ರೂಪವನ್ನು ನೀಡಿದ್ದಾರೆ. ಒಂದು ಕಾಲು ವಾರಣಾಸಿಯಲ್ಲಿ ಮತ್ತೊಂದು ಕಾಲು ವಡೋದರಾದಲ್ಲಿ. ಒಂದು ಭುಜದ ಮೇಲೆ ಆರ್‌ಎಸ್‌ಎಸ್‌ ನಾಯಕರು, ಮತ್ತೊಂದು ಭುಜದ ಮೇಲೆ ಬಿಜೆಪಿ ನಾಯಕರನ್ನು ಕೂರಿಸಿಕೊಂಡಿರುವ ಈ ಆಂಜನೇಯ ತನ್ನ ಉದ್ದನೆಯ ಬಾಲದಲ್ಲಿ ವಿರೋಧಿಗಳನ್ನು ಹೆಡೆಮುರಿ ಕಟ್ಟಿದ್ದಾನೆ!

ರಾಜಕೀಯ ವ್ಯಂಗ್ಯಚಿತ್ರಗಳ ಜೊತೆಗೆ ಕ್ರಿಕೆಟ್ ಸೇರಿದಂತೆ ಮತ್ತಿತರ ವಿಷಯಗಳ ವ್ಯಂಗ್ಯಚಿತ್ರಗಳೂ ಇಲ್ಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಆರೋಪಿಯಾಗಿದ್ದ ಬಿಸಿಸಿಐ ಅಧ್ಯಕ್ಷ  ಶ್ರೀನಿವಾಸನ್ ಅವರನ್ನು ಸಂಪೂರ್ಣ ನಿರ್ದೋಷಿ  ಎಂದು ಬಿಸಿಸಿಐ ತನಿಖಾ ಸಮಿತಿ ಘೋಷಿಸಿತು. ಆ ಸಮಿತಿಯು ಶ್ರೀನಿವಾಸನ್ ಕಪಿಮುಷ್ಟಿಯಲ್ಲಿತ್ತು ಎಂಬುದನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ. 

‘ನಾನು ವಿದ್ಯಾಭ್ಯಾಸ ಮಾಡಿದ್ದು ಧಾರವಾಡದಲ್ಲಿಯೇ. 45 ವರ್ಷಗಳ ಹಿಂದೆ ವ್ಯಂಗ್ಯಚಿತ್ರಕಾರನಾಗಿ ಕಾರ್ಯಾರಂಭ ಮಾಡಿದ್ದು ಇಲ್ಲಿಂದಲೇ. ಸಾಹಿತ್ಯ ಸಂಭ್ರಮದಲ್ಲಿ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ಸಂತಸವಾಗಿದೆ’ ಎಂದು ನರೇಂದ್ರ ಹೇಳುತ್ತಾರೆ.
ಈ ಪ್ರದರ್ಶನದಲ್ಲಿರುವ ಬಹುತೇಕ ಚಿತ್ರಗಳು ಕಪ್ಪುಬಿಳುಪು ವರ್ಣದ್ದಾಗಿದ್ದು, ಕೆಲವು ಚಿತ್ರಗಳು ಮಾತ್ರ ಜಲವರ್ಣದಿಂದ ರಚಿತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT