ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಅನುಕೂಲವಾಗುವ ದರ ನಿಗದಿಪಡಿಸಿ

ಸಹಕಾರಿ ರಸಗೊಬ್ಬರ ಮಾರಾಟಗಾರರ ಸಮ್ಮೇಳನದಲ್ಲಿ ಗಿರೀಶ್
Last Updated 28 ಜೂನ್ 2016, 11:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಿಸಬೇಕಾದರೆ ಇಂಡಿಯನ್ ಫಾರ್ಮರ್‌್ಸ ಫರ್ಟಿಲೈಜರ್‌್ಸ ಕೋ – ಆಪರೇಟಿವ್‌ ಲಿಮಿಟೆಡ್‌ನವರು ರೈತರಿಗೆ ಮತ್ತು ಸಹಕಾರ ಸಂಘಗಳಿಗೆ ಅನುಕೂಲವಾಗುವ ದರದಲ್ಲಿ ರಸಗೊಬ್ಬರ ನೀಡಬೇಕು ಎಂದು ರಾಜ್ಯ ಸಹಕಾರಿ ಮಹಾ ಮಂಡಳಿ ನಿರ್ದೇಶಕ ಗಿರೀಶ್ ಸಲಹೆ ನೀಡಿದರು.

ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಹಾಸನದ ಇಂಡಿಯನ್ ಫಾರ್ಮರ್‌್ಸ ಫರ್ಟಿಲೈಜರ್‌್ಸ ಕೋ – ಆಪರೇಟಿವ್‌ ಲಿಮಿಟೆಡ್‌, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಯಮಿತ, ಸಹಕಾರ ಇಲಾಖೆ, ಕೃಷಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಹಕಾರಿ ರಸಗೊಬ್ಬರ ಮಾರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳ ಮೂಲಕ ರೈತರಿಗೆ ರಸಗೊಬ್ಬರ ವಿತರಣೆ ಮಾಡಿ ಎಂಬುದಾಗಿ ಇಫ್ಕೋದವರು ಮನವಿ ಮಾಡುತ್ತೀರಿ. ಆದರೆ, ಖಾಸಗಿ ಮಾರಾಟಗಾರರು ನಿಮಗಿಂತ ಕಡಿಮೆ ದರದಲ್ಲಿ ವಿತರಣೆ ಮಾಡುತ್ತಿದ್ದಾರೆ ಎಂದರು.

‘ಪೈಪೋಟಿ ಇರುವ ಪ್ರಸ್ತುತ ದಿನಗಳಲ್ಲಿ ಅಕ್ಕಪಕ್ಕದ ಖಾಸಗಿ ಅಂಗಡಿಗಳಲ್ಲಿ ಕಡಿಮೆ ದರದಲ್ಲಿ ಸಿಗುವಾಗ ಸಹಕಾರ ಸಂಘಗಳತ್ತ ರೈತರೇಕೆ ಮುಖ ಮಾಡುತ್ತಾರೆ. ನೀವು ವ್ಯಾವಹಾರಿಕ ದೃಷ್ಟಿ ಬದಿಗೊತ್ತಿ, ಪೈಪೋಟಿ ಹಿನ್ನೆಲೆಯಲ್ಲಿ ಸಂಘ ಹಾಗೂ ರೈತರಿಗೆ ಅನುಕೂಲ ಆಗುವ ರಿಯಾಯಿತಿ ದರದಲ್ಲಿ ರಸಗೊಬ್ಬರ ವಿತರಣೆ ಮಾಡಬೇಕು. ಆಗ ಮಾತ್ರ ಮಾರಾಟಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ’ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಎಸ್‌ ಕಳ್ಳೆನ್ನವರ್ ಮಾತನಾಡಿ, ‘ಮುಂಗಾರು ಹಂಗಾಮು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭ ಪಡೆಯಲು ರೈತ ಸಮುದಾಯ ಮುಂದಾಗಬೇಕಿದೆ. ಕೇಂದ್ರ ಸರ್ಕಾರ ಶೇ 50ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 50ರಷ್ಟು ಅನುದಾನವನ್ನು ವಿಮಾ ಯೋಜನೆಗೆ ನೀಡುತ್ತಿದ್ದು, ಇದು ರೈತರಿಗೆ ಅನುಕೂಲವಾದ ಯೋಜನೆಯಾಗಿದೆ ಎಂದು ಹೇಳಿದರು.

ಹಾಸನದ ಇಫ್ಕೋ ಪ್ರಧಾನ ಪ್ರಾದೇಶಿಕ ವ್ಯವಸ್ಥಾಪಕ ಶಿವಪುತ್ರ ಡಿ.ಮುಕಾರ್ತಿಹಾಳ ಮಾತನಾಡಿ, ‘ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಫ್ಕೋ ವತಿಯಿಂದ 38 ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಅಗತ್ಯವಾಗಿ ಬೇಕಾದಂತಹ ಕೀಟ ನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಕಾಳಸಂತೆಯಲ್ಲಿ ದುಪ್ಪಟ್ಟು ದರದಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಯಲು ಸಹಕಾರ ಸಂಘಗಳು ನಮ್ಮೊಂದಿಗೆ ಕೈಜೋಡಿಸಬೇಕು. ಶ್ರೇಷ್ಠವಾದ ಗುಣಮಟ್ಟದ ಗೊಬ್ಬರಗಳನ್ನು ಸೂಕ್ತ ಸಮಯಕ್ಕೆ ಸರಿಯಾದ ಸ್ಥಳಗಳಿಗೆ ತಲುಪಿಸುವ ಉದ್ದೇಶದಿಂದ ದೇಶ ಮತ್ತು ವಿದೇಶಗಳಲ್ಲಿ ಇಫ್ಕೋ ಸ್ಥಾಪಿಸಿರುವ ಕೈಗಾರಿಕಾ ಘಟಕಗಳಿಂದ ರಸಗೊಬ್ಬರ ತಯಾರಿಸಿ ಪೂರೈಸುತ್ತಿದೆ ಎಂದು ಹೇಳಿದರು.

ಇಫ್ಕೋ ಲಿಮಿಟೆಡ್‌ ನವದೆಹಲಿಯ ಆರ್‌ಜಿಬಿ ಸದಸ್ಯ ಎಚ್.ಎಂ.ಮಂಜುನಾಥಪ್ಪ ಮಾತನಾಡಿ, ರೈತರಿಗೆ ಅನುಕೂಲ ಆಗುವಂತಹ ಯಾವುದೇ ಕಾರ್ಯಕ್ರಮಗಳಿರಲಿ ಅವುಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಶ್ರಮಿಸಬೇಕು ಎಂದರು. ಕೃಷಿ ಇಲಾಖೆ ಜಾಗೃತದಳದ ಪ್ರಸನ್ನ ಕುಮಾರ್, ತಿಮ್ಮಣ್ಣ ಇತರರು ಇದ್ದರು. ಎಚ್‌.ಡಿ.ಶೇಷಾದ್ರಿ ಪ್ರಾರ್ಥಿಸಿದರು. ಆರ್‌.ಲಕ್ಷ್ಮೀಶ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT