ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತದ ಚಾಟಿ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೇರೆಯವರ ವಿರುದ್ಧ ಒಂದು ಬೆರಳು ತೋರಿದರೆ, ಇನ್ನುಳಿದ ನಾಲ್ಕು ಬೆರಳುಗಳು ನಮ್ಮತ್ತಲೇ ಗುರಿ ಇಟ್ಟಿರುತ್ತವೆ ಎನ್ನುವ ನಾಣ್ಣುಡಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಪಾಲಿಗೆ ನಿಜವಾಗಿದೆ. ಉಪ ಮುಖ್ಯಮಂತ್ರಿಗಳ ಮನೆಗಳು ಹಾಗೂ ಅವರಿಗೆ ಸೇರಿದ ಒಂಬತ್ತು ಸಂಸ್ಥೆಗಳ ಮೇಲೆ ದಾಳಿ ನಡೆದಿರುವುದು, ಭ್ರಷ್ಟಾಚಾರದ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವ ಲೋಕಾಯುಕ್ತದ ಬಗ್ಗೆ ಜನತೆಗೆ ಭರವಸೆ ಮೂಡುವಂತಾಗಿದೆ. ಭ್ರಷ್ಟಾಚಾರ ಇಲ್ಲದ ಇಲಾಖೆ ಯಾವುದಿದೆ? ರಾಜ್ಯದಲ್ಲಿ ಭ್ರಷ್ಟಾಚಾರ ಅನಿಯಂತ್ರಿತವಾಗಿ ಬೇರು ಬಿಟ್ಟಿದೆ. ಭ್ರಷ್ಟಾಚಾರಿಯಲ್ಲದ ಒಬ್ಬ ಸಚಿವನನ್ನು, ಶಾಸಕನನ್ನು ಹುಡುಕಬೇಕಿದೆ. ಲೋಕಾಯುಕ್ತ ದಾಳಿಯಲ್ಲಿ ಹಲವಾರು ಅಧಿಕಾರಿಗಳ ಅಕ್ರಮ ಗಳಿಕೆ ಬಯಲಾಗುತ್ತಿದ್ದರೂ ಭ್ರಷ್ಟಾಚಾರದ ಪ್ರಮಾಣವೇನೂ ಕಡಿಮೆಯಾಗಿಲ್ಲ. ರಕ್ತಬೀಜಾಸುರನ ಹಾಗೆ ಬೆಳೆಯುತ್ತಲೇ ಇದೆ. ಅಸಹಾಯಕರಾದ ಜನತೆಗೆ ಲೋಕಾಯುಕ್ತ ವ್ಯವಸ್ಥೆಯೇ ಭರವಸೆಯ ಆಶಾಕಿರಣವಾಗಿದೆ.

ಜನರ ಭರವಸೆಯನ್ನು ಲೋಕಾಯುಕ್ತ ಸಮರ್ಥವಾಗಿ ಈಡೇರಿಸುತ್ತಲೂ ಇದೆ. ರಾಜ್ಯದ ಅಧಿಕಾರಾರೂಢ ಪಕ್ಷದ ಮುಖ್ಯಮಂತ್ರಿಯ ತಲೆದಂಡವೇ ಲೋಕಾಯುಕ್ತದ ತನಿಖೆಯಿಂದ ಆಯಿತು ಎನ್ನುವುದು ಇತಿಹಾಸ.  ಮುಖ್ಯಮಂತ್ರಿ ತಲೆದಂಡ ಪಡೆದ ಘಟನೆ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆ ಆಗಿದೆ. ಈ ಬೆಳವಣಿಗೆ ಲೋಕಾಯುಕ್ತ ತನಿಖೆಯ ನಿಷ್ಠುರ ನ್ಯಾಯ ನಿಷ್ಠೆಗೆ ನಿದರ್ಶನ. ಈಗ ಉಪ ಮುಖ್ಯಮಂತ್ರಿಯವರನ್ನೇ ಕೇಂದ್ರೀಕರಿಸಿ ದಾಳಿ ನಡೆಸಿರುವುದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದು, ಲೋಕಾಯುಕ್ತದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಂಪುಟದಲ್ಲೇ ಇರುವ ಇನ್ನೂ ಹಲವರ ಮೇಲೂ ಆಪಾದನೆಗಳ ಪಟ್ಟಿಯೇ ಇದೆ. ಎಲ್ಲರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದು ಸತ್ಯಾಸತ್ಯತೆಗಳು ಬಯಲಾಗಬೇಕು ಎಂದು ಸಾರ್ವಜನಿಕರು ಅಪೇಕ್ಷೆಪಟ್ಟರೆ ಅದರಲ್ಲಿ ತಪ್ಪೇನೂ ಇಲ್ಲ.

ಈಗ ಉಪ ಮುಖ್ಯಮಂತ್ರಿಗಳ ಮನೆ, ಕಚೇರಿಗಳು, ವಿದ್ಯಾಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಪ್ರಬಲ ಮಾಹಿತಿಗಳಿರುವುದರಿಂದಲೇ ಲೋಕಾಯುಕ್ತ ಈ ಧೈರ್ಯ ತೆಗೆದುಕೊಂಡಿದೆ. ಸಚಿವರ ನಿಕಟವರ್ತಿಗಳು, ಸ್ಟಾಂಪ್‌ವೆಂಡರ್‌ಗಳು, ಪುತ್ರನ ಗಣಿಗಾರಿಕೆ ಮೊದಲಾದ ಎಲ್ಲ ವ್ಯವಹಾರಗಳ ದಾಖಲೆಗಳೂ ಈಗ ಲೋಕಾಯುಕ್ತರ ಬಳಿ ಇದೆ. ಕಾಕತಾಳೀಯವೆಂದರೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರೂ, ರಾಜ್ಯ ಬಿಜೆಪಿ ಅಧ್ಯಕ್ಷರ ರೀತಿಯಲ್ಲೇ ತೊಂದರೆಯಲ್ಲಿದ್ದಾರೆ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರು ರಾಜೀನಾಮೆ ಕೊಟ್ಟು, ತನಿಖೆ ಎದುರಿಸಬೇಕೆಂಬ ಒತ್ತಡವಿದೆ. ಆದರೆ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷರ ರಕ್ಷಣೆಗೆ ಹಿಂದೆ ಮುಂದೆ ನೋಡದೆ ಧಾವಿಸಿರುವ ಮುಖ್ಯಮಂತ್ರಿಗಳು “ಈಶ್ವರಪ್ಪ ರಾಜೀನಾಮೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿರುವುದು ಅವಸರದ ಹೇಳಿಕೆಯಂತಿದೆ. ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ.

ಈಶ್ವರಪ್ಪನವರು ಅಲಂಕರಿಸಿರುವ ಹುದ್ದೆಗೆ ಪಾವಿತ್ರ್ಯವಿದೆ. ಅವರು ಇಡೀ ಪಕ್ಷಕ್ಕೆ ಮಾರ್ಗದರ್ಶಕರಾಗಿರತಕ್ಕಂತಹವರು. ದಾಳಿಯಿಂದಾಗಿ ಅನುಮಾನಗಳು ಅವರ ಸುತ್ತಲೇ ತಿರುಗುತ್ತಿವೆ. ತನಿಖೆ ನಡೆದು ನಿಜ ಸಂಗತಿ ನ್ಯಾಯಾಲಯದ ಮೂಲಕ ಹೊರಬರುವವರೆಗೂ ಅವರು ಮತ್ತೊಬ್ಬರಿಗೆ ಅಧಿಕಾರಯುತವಾಗಿ ಏನನ್ನಾದರೂ ಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ. ಸಿದ್ಧಾಂತ, ತತ್ವಗಳೇ ತಳಹದಿಯಾಗಿರುವ ಪಕ್ಷದಲ್ಲಿ ನಾವಿದ್ದೇವೆ ಎಂದು ಹೇಳಿಕೊಳ್ಳುವ ರಾಜಕಾರಣಿಗಳು ರಾಜಕೀಯ ಪ್ರಬುದ್ಧತೆಯನ್ನು ಪ್ರದರ್ಶಿಸಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT