ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ: ಕಾನೂನು ಏನು ಹೇಳುತ್ತದೆ?

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಯಂತೆಯೇ ಇರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಹೇಳಲಾಗಿದೆ.

ನ್ಯಾಯಮೂರ್ತಿಗಳ (ವಿಚಾರಣೆ) ಕಾಯ್ದೆ 1968ರ ಪ್ರಕಾರ, ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸುವುದಾದರೆ 100 ಸಂಸದರ ಸಹಿ ಬೇಕು. ರಾಜ್ಯಸಭೆಯಲ್ಲಿ ಮಂಡಿಸಲು ಕನಿಷ್ಠ  50 ಸದಸ್ಯರ ಸಹಿ ಬೇಕು.
ಆದರೆ ಲೋಕಾಯುಕ್ತರ ಪದಚ್ಯುತಿ ನಿರ್ಣಯವನ್ನು ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಮಂಡಿಸಲು ಎಷ್ಟು ಸದಸ್ಯರ ಸಹಿ ಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

‘ವಿಧಾನಸಭೆಯಲ್ಲಿ 50 ಸದಸ್ಯರ ಸಹಿ ಸಾಕು’ ಎಂದು ಜೆಡಿಎಸ್, ಬಿಜೆಪಿ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು. ಈ ನಿರ್ಣಯ ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಸ್ಪೀಕರ್ ಮತ್ತು ಸಭಾಪತಿ ಅವರಿಗೆ ಇದೆ.

ಲೋಕಾಯುಕ್ತರ ಪದಚ್ಯುತಿ ಹೇಗೆ?
ಲೋಕಾಯುಕ್ತ ಕಾಯ್ದೆ 1985ರ ಸೆಕ್ಷನ್ 6, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದೆ. ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆ 1968ರ ಪ್ರಕಾರವೇ ಅವರನ್ನು ಹುದ್ದೆಯಿಂದ ತೆಗೆಯಬಹುದು.

* ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ವಿರುದ್ಧದ ಆರೋಪಗಳು ಸಾಬೀತಾದ ನಂತರ ರಾಜ್ಯಪಾಲರು ತಮ್ಮ ವಿಶೇಷ ಆದೇಶದ ಮೂಲಕ ವಿಧಾನಮಂಡಲದ ಉಭಯ ಸದನಗಳ ನಿರ್ಣಯವನ್ನು ಗಣನೆಗೆ ತೆಗೆದುಕೊಂಡು ಅವರನ್ನು ಪದಚ್ಯುತಗೊಳಿಸಬಹುದು.

* ಇಂತಹ ನಿರ್ಣಯಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಇರಬೇಕು.

* ಲೋಕಾಯುಕ್ತರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ, ಸಭಾಧ್ಯಕ್ಷರು ಅದರ ಬಗ್ಗೆ ತಮಗೆ ಸೂಕ್ತವೆನಿಸಿದ ವ್ಯಕ್ತಿಗಳ ಜೊತೆ ಸಮಾಲೋಚನೆ ನಡೆಸಬಹುದು. ತಮಗೆ ಸೂಕ್ತ ಎಂದು ಕಂಡುಬಂದ ದಾಖಲೆಗಳನ್ನು ಪರಿಶೀಲಿಸಬಹುದು. ನಂತರ, ಪದಚ್ಯುತಿ ನಿರ್ಣಯವನ್ನು ಒಪ್ಪಲು ನಿರಾಕರಿಸಬಹುದು ಅಥವಾ ನಿರ್ಣಯ ಒಪ್ಪಬಹುದು.

* ಪದಚ್ಯುತಿ ನಿರ್ಣಯವನ್ನು ಒಪ್ಪಿಕೊಂಡರೆ ಸಭಾಧ್ಯಕ್ಷರು ಆ ನಿರ್ಣಯವನ್ನು ತಮ್ಮ ಬಳಿ ಇರಿಸಿಕೊಂಡು, ಲೋಕಾಯುಕ್ತರ ವಿರುದ್ಧ ಇರುವ ಆರೋಪಗಳ ಬಗ್ಗೆ ಪರಿಶೀಲನೆಗೆ ಒಂದು ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಇಬ್ಬರು ನ್ಯಾಯಮೂರ್ತಿಗಳು, ಒಬ್ಬರು ನ್ಯಾಯವಿಜ್ಞಾನ ತಜ್ಞರಿರಬೇಕು.

* ಸಮಿತಿಯು ಲೋಕಾಯುಕ್ತರ ವಿರುದ್ಧ ಇರುವ ನಿರ್ದಿಷ್ಟ ಆರೋಪಗಳ ಪಟ್ಟಿ ಸಿದ್ಧಪಡಿಸಿ, ಲೋಕಾಯುಕ್ತರಿಗೆ ನೀಡಬೇಕು. ತನ್ನ ವಿರುದ್ಧ ಇರುವ ಆರೋಪಗಳ ಬಗ್ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ಲೋಕಾಯುಕ್ತರಿಗೂ ಕಾಲಾವಕಾಶ ನೀಡಬೇಕು.

* ಲೋಕಾಯುಕ್ತರು ತಪ್ಪೆಸಗಿರುವುದು ನಿಜ ಎಂಬ ವರದಿಯನ್ನು ಸಮಿತಿಯು ಸಭಾಧ್ಯಕ್ಷರಿಗೆ ನೀಡಿದರೆ, ಅದನ್ನು ಸಭಾಧ್ಯಕ್ಷರು ಮತಕ್ಕೆ ಹಾಕುತ್ತಾರೆ. ಮತದಾನ ನಡೆಯುವ ವೇಳೆ ಸದನದಲ್ಲಿ ಹಾಜರಿರುವ ಸದಸ್ಯರಲ್ಲಿ ಮೂರನೆಯ ಎರಡರಷ್ಟು ಜನ, ಪದಚ್ಯುತಿ ಪರವಾಗಿ ಮತ ಚಲಾಯಿಸಿದರೆ ಆ ನಿರ್ಣಯವನ್ನು ಸಭಾಧ್ಯಕ್ಷರು ರಾಜ್ಯಪಾಲರಿಗೆ ತಿಳಿಸುತ್ತಾರೆ. ರಾಜ್ಯಪಾಲರುಇದನ್ನು ಆಧರಿಸಿ, ಲೋಕಾಯುಕ್ತರ ಪದಚ್ಯುತಿ ಆದೇಶ ಹೊರಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT