ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚಿತರನ್ನು ಮುಖ್ಯವಾಹಿನಿಗೆ ತರಬೇಕು

‘ಅರಸು ಮತ್ತು ಆಧುನಿಕ ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಮುಖ್ಯಮಂತ್ರಿ ಅಭಿಮತ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿವ್ಯವಸ್ಥೆಯಿಂದ ಅನ್ಯಾಯಕ್ಕೆ ಒಳಗಾಗಿರುವ, ಅವಕಾಶಗಳಿಂದ ವಂಚಿತರಾಗಿರುವ ಜನರಿಗೆ ವಿಶೇಷ ಸವಲತ್ತುಗಳನ್ನು ನೀಡಿ ಅವರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನಗಳನ್ನು ಮಾಡಲೇಬೇಕು. ಅದು ಅನಿವಾರ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಅರಸು ಮತ್ತು ಆಧುನಿಕ ಕರ್ನಾಟಕ’ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆ ಹೊಸದೆನಲ್ಲ. ರಾಜ್ಯದಲ್ಲಿ ಬಸವಣ್ಣನವರ ಕಾಲದಲ್ಲಿಯೇ ಅದರ ಬೀಜಾಂಕುರವಾಗಿತ್ತು. ಸಂವಿಧಾನದಲ್ಲಿ ಕೂಡ ನಾವು ಸಮಾಜದ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಕೊಡಬೇಕು ಎಂದು ಹೇಳಿಕೊಂಡಿದ್ದೇವೆ. ಆದರೆ ಅದು ಈವರೆಗೆ ಎಲ್ಲಿಯೂ ಜಾರಿಗೆ ಬರಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂವಿಧಾನದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂದಿಗೂ ವಿಧಾನಸಭೆ ಮತ್ತು ಸಂಸತ್‌ನಲ್ಲಿ ರಾಜಕೀಯ ಮೀಸಲಾತಿ ಇಲ್ಲ. ಈ ಬಗ್ಗೆ ಚರ್ಚೆಯಾಗಬೇಕು. ಅಕ್ಷರಶಃ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೆ ಬರಬೇಕು. ಆಗ ಮಾತ್ರ ಬದಲಾವಣೆ ತರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಮೀಸಲಾತಿ ಎಷ್ಟು ವರ್ಷ ಇರಬೇಕು? ಏಕೆ ಇರಬೇಕು? ಅದರಿಂದ ಮೆರಿಟ್‌ ಹೋಗುತ್ತದೆ.. ಇತ್ಯಾದಿ ಮಾತುಗಳು ಅರ್ಥಹೀನ. ಇವು ಪಟ್ಟಭದ್ರ ಹಿತಾಸಕ್ತಿಗಳು ದಾರಿ ತಪ್ಪಿಸಲು ಮಾಡುವ ವಾದಗಳೇ ಹೊರತು ಇವುಗಳಲ್ಲಿ ಸಾಮಾಜಿಕ, ಆರ್ಥಿಕ ನ್ಯಾಯದ ತಿರುಳಿಲ್ಲ’ ಎಂದರು.

‘ಹಿಂದುಳಿದವರಿಗೆ ಸರ್ಕಾರಿ ಸೇವೆ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಐತಿಹಾಸಿಕ ತೀರ್ಮಾನ ಸೇರಿದಂತೆ ಅರಸು ಅವರು ಸಾಮಾಜಿಕ ನ್ಯಾಯಕ್ಕೆ ಸಂಬಂಧಪಟ್ಟ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವುಗಳಿಂದಾಗಿ ಅವರು ರಾಜ್ಯವಾಳಿದ ಮುಖ್ಯಮಂತ್ರಿಗಳಲ್ಲಿ ಪೈಕಿ ಸದಾ ನೆನಪಿನಲ್ಲಿ ಉಳಿಯುತ್ತಾರೆ.  ಅಗ್ರಸ್ಥಾನದಲ್ಲಿರುತ್ತಾರೆ’ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮಾತನಾಡಿ,‘ಇಂದಿರಾ ಗಾಂಧಿ ಅವರು ಜಾರಿಗೆ ತಂದ 20 ಅಂಶದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅರಸು ಅವರು ಬದ್ಧತೆ ಮೆರೆದರು. ಲಕ್ಷಾಂತರ ಭೂಹೀನರನ್ನು ಭೂಮಾಲೀಕರನ್ನಾಗಿ ಮಾಡಿದರು. ಕೆಲವರಲ್ಲೇ ಕೇಂದ್ರೀಕೃತವಾಗಿದ್ದ ರಾಜಕೀಯ ಶಕ್ತಿಯನ್ನು ವಿಕೇಂದ್ರೀಕರಿಸಿ ಶೋಷಿತ ವರ್ಗಕ್ಕೆ ನೀಡಿದರು’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ‘ಅರಸು ಅವರ ಶ್ರಮದ ಪ್ರತಿಫಲದಿಂದಾಗಿಯೇ ಇವತ್ತು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ವಿದ್ಯಾವಂತರಾಗಿ ಮುಖ್ಯವಾಹಿನಿಯಲ್ಲಿ ಸೇರುತ್ತಿದ್ದೇವೆ. ಆದರೆ, ಇದೇ ಸಂದರ್ಭದಲ್ಲಿ ಅವರನ್ನು ನಾವು ಮರೆಯುತ್ತಿದ್ದೇವೆ ಎನ್ನುವುದು ಬಹಳ ದುರಾದೃಷ್ಟ’ ಎಂದು ವಿಷಾದಿಸಿದರು.

‘ಬಹುಶಃ ಆ ಕಾಲಘಟ್ಟದಲ್ಲಿ ಅರಸು ಅವರಂತಹ ಮಹನೀಯರು ಬಾರದಿದ್ದರೆ ಪಟ್ಟಭದ್ರ ಹಿತಾಸಕ್ತಿಗಳು, ಮೇಲ್ವರ್ಗದ ಜನರು ನಮ್ಮನ್ನು ಇಂದಿಗೂ ಉಸಿರುಗಟ್ಟಿಸುವ ವಾತಾವರಣದಲ್ಲಿಯೇ ಇರಿಸುತ್ತಿದ್ದರು. ಇಂದಿನ ಯುವ ಪೀಳಿಗೆ  ಅರಸು ಅವರ ಬದುಕು, ಚಿಂತನೆಗಳ ಕುರಿತು ಮಾಹಿತಿ ಒದಗಿಸುವ ಪುಸ್ತಕಗಳನ್ನು ಓದಬೇಕು’ ಎಂದು ಹೇಳಿದರು.

ಅರಸು ಜನ್ಮಶತಮಾನೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ, ‘ಅರಸು ಅವರು ಬರೀ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನಷ್ಟೇ ಕೊಟ್ಟಿದ್ದರೆ ಜನರ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಿರಲಿಲ್ಲ. ಆದರೆ ಅವರು, ಜನತಂತ್ರ ವ್ಯವಸ್ಥೆಯಲ್ಲಿ ಮುಖ್ಯವಾಗಿ ಆಗಬೇಕಾಗಿದ್ದ ಭೂಮಿ ಮತ್ತು ರಾಜಕೀಯ ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡುವ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ಮಾಡಿದರು. ಅವು ಅವರನ್ನು ಸದಾ ಸ್ಮರಣಿಯರನ್ನಾಗಿ ಮಾಡಿದವು’ ಎಂದು ವಿಶ್ಲೇಷಿಸಿದರು.

‘ಇವತ್ತು ಕೇವಲ 12–15 ಜಾತಿಗಳು ಮಾತ್ರ ರಾಜಕೀಯ ಅಧಿಕಾರವನ್ನು ಅನುಭವಿಸುತ್ತಿವೆ. ಹೀಗಾದರೆ ಮಿಕ್ಕವರ ಪಾಡು ಏನಾಗಬೇಕು? ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿವಾರು ಜನಗಣತಿ ವರದಿಯ ಆಧಾರದಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ವಾರ್ತಾ ಇಲಾಖೆ ವತಿಯಿಂದ ಅರಸು ಅವರ ಕುರಿತು ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT