ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಂಪಾದನಾ ಸ್ವರೂಪಕ್ಕೆ ಹೊಸರೂಪ

Last Updated 27 ಜನವರಿ 2015, 19:30 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಎರಡು ದಶಕಗಳ ಹಿಂದೆ ಹದಿನೈದು ಸಂಪುಟ­ಗಳಲ್ಲಿ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿ­ಸಿತ್ತು. ಇವು­­ಗಳನ್ನು ಸಂಪಾದಿಸಿದವರ ಕಾರ್ಯ ಯೋಜನೆ, ಕನಸು, ಈ ಆವೃತ್ತಿಗಳಿಗೆ ದುಡಿದ ಎಲ್ಲರೂ ಕನ್ನಡದ ಓದುಗರಿಗೆ ಒಂದು ದೊಡ್ಡ ಜ್ಞಾನಪರಂಪರೆಯನ್ನು ಕಟ್ಟಿಕೊಟ್ಟು ಉಪಕಾರ ಮಾಡಿದ್ದಾರೆ. ಇದನ್ನು ಸ್ಮರಿಸುತ್ತಲೇ   ಬಹುದಿನ­ಗಳಿಂದ ಕಾಡುತ್ತಿದ್ದ ಕೆಲವು ತಾತ್ವಿಕ ವಿಚಾರ-­ಗಳನ್ನು ಹಂಚಿಕೊಳ್ಳುವೆ.

ಮುಖ್ಯವಾಗಿ ಈ ಸಮಗ್ರತೆಯ ಕಟ್ಟುವಿಕೆಯ ಸ್ವರೂಪದೊಳಗೇ ಇರಬಹುದಾದಂತಹ ದೂರ­ದೃಷ್ಟಿಯ ದೋಷ. ಅದರಲ್ಲೂ ಬಸವಣ್ಣ, ಅಲ್ಲಮ­ಪ್ರಭು, ಚೆನ್ನಬಸವಣ್ಣ, ಸಿದ್ಧರಾಮ ಈ ವಚನ­ಕಾರರನ್ನು ಸರ್ವಸ್ವತಂತ್ರ ಕಲ್ಯಾಣದ ಶರಣ­ರಂತೆ ಚಿತ್ರಿಸಿ, ಶಿವ-ಶರಣೆಯರನ್ನೆಲ್ಲಾ ಒಂದೆಡೆಗೆ ಸೇರಿಸಿ, ಉಳಿದ ಹಲವಾರು ವೃತ್ತಿಮೂಲ,- ಕುಲ­ಮೂಲ ವಚನಕಾರರನ್ನು ‘ಸಂಕೀರ್ಣ’ ವಚನ ಸಂಪುಟ­ಗಳಲ್ಲಿ ಸೇರಿಸಿರುವುದೇ ಒಂದು ದೋಷ.

ಮೇಲಿನ ನಾಲ್ಕು ಮಂದಿ ವಚನಕಾರರನ್ನು ತುಂಬಾ ಆಪ್ತವಾಗಿ, ಸೆಕ್ಯುಲರ್ ಆಗಿ, ಸ್ವತಂತ್ರ­ವಾಗಿ ಓದುವಂತೆ ಉಳಿದ ವಚನಕಾರರನ್ನೂ ಅದೇ ದೃಷ್ಟಿಯಲ್ಲಿ ಓದುವುದಕ್ಕೆ ಈ ‘ಸಂಕೀರ್ಣ’ತೆ ಮಾನಸಿಕವಾಗಿ ಅಡ್ಡಿಯಾಗುತ್ತದೆ.

ಒಟ್ಟಾರೆ ಈ ಸಂಪಾದನಾ ಸ್ವರೂಪವನ್ನೇ ಬದಲಾಯಿಸಿ, ಮರುಮೌಲ್ಯಮಾಪನಗೊಳಿಸಿ ಹೊಸ ರೀತಿಯಲ್ಲಿ ವಚನ ಸಂಪುಟಗಳನ್ನು ಕಟ್ಟುವುದು ಸಾಧ್ಯವಿದೆ ಎನ್ನುವುದು ನನ್ನ ನಮ್ರ ಅನಿಸಿಕೆ. ಮುಂದಿನ ಯೋಜನೆಗಳಲ್ಲಾದರೂ ಇವನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ.

ವಚನ ಸಂಪಾದನಾ ಕಾರ್ಯದಲ್ಲಿ ರೂಪಿಸಿ­ಕೊಳ್ಳ­ಬಹುದಾದ ಹಲವು ಅಂಶಗಳು:
*ಹಲವು ಸಾಮಾಜಿಕ, ಭೌಗೋಳಿಕ ಸಂರಚನೆ­ಗಳಿಂದ ವಚನಕಾರನ, ವಚನಕಾರ್ತಿಯ ಹಿನ್ನೆಲೆ, ಕುಲಮೂಲ-, ವೃತ್ತಿಮೂಲ ಸಂಗತಿ ಗಳನ್ನು ಇಟ್ಟುಕೊಂಡು ಒಂದು ಚಾರಿತ್ರಿಕ, ಸಾಂಸ್ಕೃತಿಕ ಕಣ್ಣೋಟವನ್ನು ಪ್ರತಿಯೊಬ್ಬ ವಚನಕಾರ, ವಚನಕಾರ್ತಿಯ ಸ್ವತಂತ್ರ ಸಂಪುಟದಲ್ಲಿ ಒದಗಿಸುವುದು.
*ಅಧ್ಯಯನದ ದೃಷ್ಟಿಯಿಂದ  ‘ಪ್ರಸ್ತಾವನೆ’ ಭಾಗವು  ಆಯಾ ಸಂಪುಟಗಳಿಗೆ ಮತ್ತು ವಚನ­ಕಾರ, ವಚನಕಾರ್ತಿಯನ್ನು ರೂಪಿಸಿದ ಸಾಮಾಜಿಕ ಸಂಗತಿ, ಭಾಷಿಕ ಸಂರಚನೆ­ಗಳಿಗೆ ಇಂಬು ನೀಡುವಂತಿರಬೇಕು. ಇವುಗಳು ಹೆಚ್ಚು ವಸ್ತುನಿಷ್ಠವೂ, ಸಮಾಜನಿಷ್ಠವೂ ಆಗಿರಬೇಕು.
*ಸಂಕೀರ್ಣ ವಚನ ಸಂಪುಟದಲ್ಲಿರುವ ಎಲ್ಲ ಬಗೆಯ ಸಮುದಾಯಗಳ ಕಾಯಕದ ವಚನ­ಕಾರರು ಬಸವಣ್ಣ, ಅಲ್ಲಮಪ್ರಭು, ಚೆನ್ನ­ಬಸವಣ್ಣ, ಸಿದ್ಧರಾಮರಂತೆ ಮುಖ್ಯವಾಹಿನಿಗೆ ಬರಬೇಕು. ಹೇಗೆ ಮೊದಲಿನ ನಾಲ್ಕು ಸಂಪುಟ­­ಗಳನ್ನು ಕ್ರಮವಾಗಿ ರೂಪಿಸಿ­ದ್ದಾರೋ, ಹಾಗೆ ಪ್ರತ್ಯೇಕವಾಗಿ ಉಳಿದ ಶಿವ-ಶರಣೆಯರ ವಚನ ಸಂಪುಟದಿಂದ ಹಿಡಿದು ಸಂಕೀರ್ಣ ವಚನ ಸಂಪುಟಗಳಲ್ಲಿರುವ ಸುಮಾರು ಈ ಒಂಬತ್ತು ಸಂಪುಟಗಳಲ್ಲಿ ಹರಿದು ಹಂಚಿಹೋಗಿರುವ ಈ ಎಲ್ಲ ವಚನ­ಕಾರರನ್ನು ಅತ್ಯಂತ ಆತ್ಮ­ಗೌರವದ ಸ್ಥಾನ­ದಲ್ಲಿ ನಿಲ್ಲಿಸಿ ಅವರಿಗೂ ಒಂದು ಸಾಮಾಜಿಕ ನ್ಯಾಯದ ‘ಪ್ರಧಾನ ಭೂಮಿಕೆ’ ನೀಡ­ಬೇಕಾದ ಅನಿವಾರ್ಯವನ್ನು, ಒಂದು ತುರ್ತನ್ನು ಈ ಹಳೆಯ ಸಂಪಾದನಾ ಕಾರ್ಯ ನೆನಪಿಸುತ್ತದೆ.

ಮೊದಲಿನ ಸಂಗತಿಗೆ ಬರುವುದಾದರೆ, ಪ್ರತಿಯೊಬ್ಬ ವಚನಕಾರರ ಬಾಳಿನ ನಿಜವಾದ ಅಸ್ಮಿತೆಗಳನ್ನು, ಅವರ ಕುಲ ಸಂಬಂಧೀ ಸದಾಶ­ಯದ ವಚನಗಳನ್ನು, ಜೊತೆಗೆ ಬಸವಣ್ಣ, ಅಲ್ಲಮ­ಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧ­ರಾಮ ಇವರೆಲ್ಲರ ಜೊತೆ ನಡೆಸಿರಬಹು­ದಾದ ಸಾಂಸ್ಕೃತಿಕ, ತಾತ್ವಿಕ ಸಂವಾದಗಳನ್ನು ಅಥವಾ ಸುತ್ತಲಿನ ಪರಿಸರ ಸಂಬಂಧಿತ ವಿಚಾರ­ಗಳನ್ನು ಎಲ್ಲವನ್ನೂ ಮರುಶೋಧಿಸಿ, ಲಿಖಿತ-, ಅಲಿಖಿತ ದಾಖಲೆ­ಗಳನ್ನು ಅಳವಡಿಸಿ ಅತ್ಯುತ್ತಮ ಪ್ರಸ್ತಾವನೆ­ಯನ್ನು ನೀಡುವುದು ಆಯಾ ಸಂಪಾ­ದ­ಕನ ಕರ್ತವ್ಯವಾಗಬೇಕು.

ಒಟ್ಟಾರೆ ಸಂಪಾದನಾ ಕಾರ್ಯದ ಸ್ವರೂಪ­ವನ್ನೇ ಸಾಮಾಜಿಕಗೊಳಿಸಬೇಕು. ನಾಲ್ಕಾರು ವಚನಕಾರರನ್ನು ತುಂಬಾ ಜಾತ್ಯತೀತ­ರೆಂದೂ, ಉಳಿದ ನೂರಾರು ವಚನ­ಕಾರರನ್ನು ನಾನ್-ಸೆಕ್ಯುಲರ್ ಎಂಬ ರೀತಿಯಲ್ಲಿ ಇನ್ನಷ್ಟು ಸಂಕೀರ್ಣ­ಗೊಳಿಸಿ ಬಂಧಿಸಿಡುವಂತಹ ಯೋಜನೆ ಇದಾಗಬಾರದು.

ಪ್ರತಿಯೊಬ್ಬರಿಗೂ ಅವರದೇ ಆದ ಓದಿನ -ಆತ್ಮಗೌರವದ ವಿವೇಕದ ಸ್ಥಾನವಿರಬೇಕು. ಇದು ಸಾಧ್ಯವಾಗದೇ ಹೋದರೆ ಇಡೀ ಯೋಜನೆ­ಯನ್ನೇ ಒಂದಾಗಿಸಬೇಕು. ಬಸವಣ್ಣ, ಅಲ್ಲಮ­ಪ್ರಭು, ಚೆನ್ನಬಸವಣ್ಣ, ಸಿದ್ಧರಾಮ, ಅಕ್ಕಮಹಾ­ದೇವಿ ಇವರೆಲ್ಲರ, ನೂರಾರು ಶರಣರ ವಚನ­ಗಳೆಲ್ಲ ಒಂದೇ ಬೃಹತ್ತಾದ ಸಮಗ್ರ ಸಂಪುಟದಲ್ಲಿ ಸೇರಿ ಬರಬೇಕು. ಇವರೆಲ್ಲ ಕೂಡಿ ಕಲ್ಯಾಣ ಕಟ್ಟಿದ ಹಾಗೆ ಇರಬೇಕು. ಈ ಸಮಗ್ರ ವಚನ ಸಂಪುಟ ಮಾಲೆ ಪ್ರತಿಯೊಬ್ಬ ವಚನಕಾರನನ್ನೂ ಸಂಕೀರ್ಣ­ತೆಯ ಸಿಕ್ಕುಗಳಿಂದ ಬಿಡಿಸಿ ಒಂದೇ ಭೂಮಿಯಲ್ಲಿ ಹುಲುಸಾದ ಬೆಳೆ ಕಾಣುವಂತಾದರೆ ಎಷ್ಟು ಚೆನ್ನ ಎಂಬ ಸದಾಶಯ ಇಲ್ಲಿನದು.

ಡೆಮ್ಮಿ, ಕ್ರೌನ್‌ಗಿಂತಲೂ ದೊಡ್ಡದಾದ, ಓದಲು, ಎದೆಗವಚಿಕೊಂಡು ಅಭಿಮಾನಪಡಲು ಹಗುರವಾದ, ದೋಷರಹಿತವಾದ ಸುಂದರ­ವಾದ ಒಂದೇ ಒಂದು ಸಮಗ್ರ ಸಂಪುಟವಿದ್ದರೆ ಚೆನ್ನಲ್ಲವೇ..? ಇಲ್ಲವೇ ಪ್ರತಿಯೊಬ್ಬ ವಚನಕಾರನ ಹೆಸರಿನಲ್ಲಿ, ಅವನು ನೂರಾರು ವಚನ, ಸಾವಿರಾರು ವಚನಗಳನ್ನು ಬರೆದಿರಲಿ, ಇಲ್ಲವೇ ಒಂದೇ ಒಂದು ವಚನವನ್ನಾದರೂ ಬರೆದಿರಲಿ ಸಂಖ್ಯೆಯ, ಅದರ ‘ಪ್ರಮಾಣ’ದ ದೃಷ್ಟಿಯಿಂದ ಎರಡೂ ಮಹತ್ವವೇ.

ಒಂದು, ಎರಡು, ನೂರು, ಸಾವಿರ ಇದೆಲ್ಲವೂ ನಮ್ಮ ಕನ್ನಡದ ಬದುಕಿನ ತತ್ತ್ವ, ಸಾಂಸ್ಕೃತಿಕ ಜ್ಞಾನದ ದೃಷ್ಟಿಯಿಂದ ಮುಖ್ಯವಾದವು. ಈ ಸಮಗ್ರತೆಯನ್ನೇ ‘ವಚನ ಕಲ್ಯಾಣ’ ವೆಂದೋ, ‘ಕಲ್ಯಾಣ ಕರ್ನಾಟಕ’ವೆಂದೋ ನೋಡುವುದಾ­ದರೆ, ಈ ನೆಲದ ಜ್ಞಾನವಾಗಲು ಎಲ್ಲ ದೇಶ-ಕೋಶದ ವಿವೇಕದ ಧಾರೆಗಳು ಹೇಗೆ ಹರಿದು ಬಂದವು, ಇಲ್ಲಿನ ಜ್ಞಾನದ ಜತೆ ಹೇಗೆ ಅನು­ಸಂಧಾನ ಪಡೆದವು, ಸಮಾಜಗಳ ಜತೆ, ಅದರ ಧಾರ್ಮಿಕ ಸಂಗತಿಗಳ ಜತೆ ತಾತ್ವಿಕತೆಯನ್ನು ರೂಪಿಸಿಕೊಳ್ಳಲು ಇವು ಹೇಗೆ ಹೆಣಗಿದವು ಎಂಬ ಸಂಗತಿಗಳನ್ನೆಲ್ಲ ಇಲ್ಲಿ ಕಾಣಿಸಲು ಸಾಧ್ಯವಿದೆ.

ಹಿಂದೆ ದುಡಿದ ಆರು ಜನ ಸಂಪಾದನಾ­ಕಾ­ರರು (ಇಲ್ಲಿ ಒಬ್ಬರೇ ಐದು ಸಂಪುಟಗಳನ್ನು ಸಂಪಾದಿಸಿರುವ ಸಾಹಸವೂ ಇದೆ!) ಇನ್ನಷ್ಟು ಶ್ರದ್ಧೆ ತೋರಿ ವಚನಗಳ ಸಂಪಾದನೆ ಮಾಡಲು ತೊಡಗಿದಾಗ ಇದ್ದ ಸ್ವರೂಪಕ್ಕೂ, ಈಗ ಇವು ಸಂಪಾದನೆಗೊಂಡ ಇಪ್ಪತ್ತೊಂದು ವರ್ಷಗಳ ನಂತರ ದೊರಕಿರಬಹುದಾದ ವಚನಗಳು ಒಟ್ಟು­ಗೂಡಿ, ಹಿಂದಿನ ದೋಷಗಳನ್ನು ಪುನರ್ ಪರಿ­ಶೀಲಿಸಿ, ಸಂಕಲಿಸಿ, ಹೊಸ ಯೋಜನೆಗೆ ಸರಿ­ಯಾಗಿ ಯಾದೃಚ್ಛಿಕಗೊಳಿಸಿ ಕನ್ನಡ ನೆಲದ ದೊಡ್ಡ ಜ್ಞಾನ ಪರಂಪರೆಯನ್ನು ವಿಸ್ತರಿಸ­ಬೇಕಾದ ಅನಿವಾರ್ಯ ಎಂದಿಗಿಂತ ಇಂದು ಅಗತ್ಯವಿದೆ.

ಮೇಲಿನ ಹಲವು ಅಂಶಗಳ ಜೊತೆಗೆ ವಚನ ಸಂಪುಟಗಳನ್ನು ಬೈಬಲ್ಲಿನ ಮಾದರಿಯಲ್ಲಿ ತರ­ಬೇಕೆನ್ನುವ ಯೋಜನೆಗಳಿರಲಿ, ಮತ್ತಾವುದೇ ಸ್ವರೂಪದ ಕನಸುಗಳಿರಲಿ, ಪುಸ್ತಕ ಪ್ರಾಧಿ­ಕಾರ, ಅಕಾಡೆಮಿ, ಇಲಾಖೆಗಳು ಈ ಯೋಜನೆಗೆ ಸಂಪಾ­ದಕ­ರನ್ನು, ಕನ್ನಡದ ಬೇರೆ ಬೇರೆ ಮಾನವಿಕ ನೆಲೆಯ ತಾತ್ವಿಕ ಮನಸ್ಸುಳ್ಳವರನ್ನು, ಚಿಂತಕರನ್ನು ಒಂದೆಡೆ ಸೇರಿಸಿ, ಚರ್ಚಿಸಿ, ಮುಂದಿನ ಬದಲಾಗ­ಬೇಕಾದ ವಚನ ಸಂಪಾದನಾ ಸ್ವರೂಪದ ಬಗೆಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು. ಎಲ್ಲ ತಲೆಮಾರುಗಳ ಸಹೃದಯ ಅಭಿಪ್ರಾಯವನ್ನು ಪಡೆಯುವುದೂ ಪ್ರಜಾತಾಂತ್ರಿಕ ದೃಷ್ಟಿಯಿಂದ ಯೋಗ್ಯ. ಮೊದಲು ಸಂಪಾದನೆ ಮಾಡಿದವ­ರನ್ನು ಜತೆಯಲ್ಲಿರಿಸಿಕೊಂಡು, ಈ ಯೋಜನೆಯ ಹೊಸ ಸಂಪಾದನೆಯಲ್ಲಿಯೂ ‘ಸಾಮಾಜಿಕ ನ್ಯಾಯ’ವನ್ನು ಹೆಣೆದುಕೊಂಡು ‘ಸಮಗ್ರ ವಚನ ಸಂಪುಟ’ಗಳನ್ನು ರೂಪಿಸುವುದು  ಅಗತ್ಯವಿದೆ.


ನಮ್ಮಂಥವರು ಹೇಗೆ ಮೊದಲಿನ ಹದಿನೈದು ಸಂಪುಟಗಳನ್ನು ‘ಹಸಿದವನಿಗೆ ಅನ್ನ ಸಿಕ್ಕಂತೆ’ ಹಂಬಲಿಸಿ ಹಣ ಹೊಂದಿಸಿ ನಮ್ಮಲ್ಲಿ ಕಾಪಿಟ್ಟು­ಕೊಂಡಿದ್ದೇವೆಯೋ, ನಮ್ಮ ಹೊಸ ತಲೆಮಾರಿನ ವಿವೇಕದ ಮಿತ್ರರೂ, ಪರಂಪರೆಯ ಹಿರಿ-ಕಿರಿಯ ಮನಸ್ಸುಗಳೂ ಅಂಥದೇ ಶ್ರದ್ಧೆಯಿಂದ ಹೊಸ­ದಾಗಿ ಮನಸ್ಸಿಗೆ, ಬುದ್ಧಿಗೆ ಆಪ್ತವಾಗಿ, ಸ್ವತಂತ್ರ­ವಾಗಿ ದೊರಕಿಸಿಕೊಳ್ಳಬೇಕಾದ ಜರೂರು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT