ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ

Last Updated 20 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೌದ್ಧಿಕ ವಿಶ್ಲೇಷಣೆಯ ಪೋಸಿನಲ್ಲಿ `ನಂಬಿಕೆ'ಯನ್ನು ವಿವರಿಸುವ ನೆಪ ಮಾಡಿಕೊಂಡು ಮಡೆಸ್ನಾನದಂಥ ಅಮಾನವೀಯ ಆಚರಣೆಯನ್ನು ಸಂಸ್ಕೃತಿಯ ಭಾಗವಾಗಿ ಸಮರ್ಥಿಸುವ ಹುನ್ನಾರದ ವಿವಾದ ಇನ್ನೂ ಜನಮನದಲ್ಲಿ ಹಸಿಹಸಿಯಾಗಿದೆ.

ಈಗ ಮರು ಓದಿನ ನೆಪದಲ್ಲಿ `ವಚನಗಳು ಜಾತಿ ಪದ್ಧತಿ, ಬ್ರಾಹ್ಮಣವಿರೋಧಿ ಚಳವಳಿಯ ಅಭಿವ್ಯಕ್ತಿಗಳೆಂದು ಹೇಳಲು, ವಚನಗಳಲ್ಲಿಯೇ ಆಧಾರವಿಲ್ಲ' ಎಂಬ ಅಪಕ್ವ ಓದಿನ ತೇಲಿಕೆಯ ಮಾತುಗಳನ್ನು ವಿವಾದದ ರೂಪದಲ್ಲಿ ಎಸೆಯಲಾಗಿದೆ. ಇಂಥ ವಿವಾದಗಳು ಕನ್ನಡ ನೆಲದಲ್ಲಿ ಬಹಳ ಹಿಂದಿನಿಂದಲೂ ಎರಡು ಬಗೆಯಲ್ಲಿ ಹರಿದುಬಂದಿವೆ.

ನೇರವಾಗಿ ವಿರೋಧಿಸಿ ಮಾತನಾಡುವ ಮೂಲಭೂತವಾದಿ ಬಲಪಂಥೀಯರ ಬಗೆ ಒಂದನೆಯದು. ಇದರ ಅಪಾಯ ಮೂರ್ತರೂಪದ್ದು. ಆದರೆ ತಾವು ಪ್ರಗತಿಪರರು, ವಿಚಾರವಾದಿಗಳು ಎಂಬ ಮುಖವಾಡ ತೊಟ್ಟು ಬೌದ್ಧಿಕತೆಯ ಪೋಸಿನಲ್ಲಿ ಮೂಲಭೂತವಾದಿ ವಿಚಾರಗಳನ್ನು ಬಿತ್ತುವ ಹುಸಿ ಬುದ್ಧಿಜೀವಿಗಳ ಪಡೆಯೊಂದಿದೆ; ಮೊದಲನೆಯ ಪಡೆಗಿಂತ ಈ ಗುಂಪು ಹೆಚ್ಚು ಅಪಾಯಕಾರಿ.

ಹೊಸ ಸಂಶೋಧನೆ - ಬೌದ್ಧಿಕ ವಿಚಾರಗಳ ಹೆಸರಿನಲ್ಲಿ ಸುಳ್ಳುಗಳನ್ನು ಅಪಕ್ವ ಹೇಳಿಕೆಗಳನ್ನು ಮಂಡಿಸಲು ಇವರಿಗಿರುವ ಒಂದೇ ಒಂದು ಶಕ್ತಿ ಎಂದರೆ ಆಧುನಿಕ ವಿಮರ್ಶಾಪರಿಭಾಷೆಗಳನ್ನು ಬಳಸುತ್ತಾ ಸಂಕೀರ್ಣವೂ ಗಹನವೂ ಆದ ವಿಚಾರ ಎಂಬಂತೆ ನಂಬಿಸುವ ನಾಜೂಕಿನ ವಿಧಾನ.

ವಚನಗಳು ಶರಣ ಚಳವಳಿಯ ಉಪ ಉತ್ಪನ್ನಗಳು. ಚಳವಳಿಯ ಸ್ವರೂಪವನ್ನು ಅರಿಯಲು ಬೇರೆ ಪ್ರಮಾಣಗಳ ಅಗತ್ಯವಿಲ್ಲ. ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಚಳವಳಿಯ ನಿಜಾಂಶ ಅರಿವಿಗೆ ಬರುತ್ತದೆ.

ಡಂಕಿನ್ ಝಳಕಿ ಮತ್ತು ಬಾಲಗಂಗಾಧರ ಎಂಬುವವರು ವಚನಗಳನ್ನು ಅನುಭವಗಳ ಅಂತರಂಗ ಪ್ರಮಾಣವಾಗಿ ಗ್ರಹಿಸುವ ಗೋಜಿಗೇ ಹೋಗದೆ ಜಾತಿಗೆ ಸಂಬಂಧಿಸಿದ ಪದಗಳ ಪ್ರಯೋಗ ಮತ್ತು ಪದಾರ್ಥಗಳ ಲೆಕ್ಕಾಚಾರದಲ್ಲಿ ಗುಣಿಸಿ ಭಾಗಿಸಿ ಸತ್ಯವನ್ನು ಶೋಧಿಸಿ  ತೆಗೆದಿದ್ದಾರೆ. ಇವರ ವಾದದ ಅಪಕ್ವತೆಯನ್ನು ಮನಗಾಣಿಸುವುದಕ್ಕೆ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ. 

ವರ್ಣವ್ಯವಸ್ಥೆಯ ಸಮಾಜದಲ್ಲಿ ಮೂರು ನೆಲೆಗಳಿಗೆ ಸೇರಿದ ಮೂರು ಜನ ವಚನಕಾರರ ನಿಲುವುಗಳನ್ನು ಇಲ್ಲಿ ಪ್ರಾತಿನಿಧಿಕವಾಗಿ ಉದಾಹರಣೆಗೆ ಎತ್ತಿಕೊಳ್ಳಬಹುದು:

ವರ್ಣ ವ್ಯವಸ್ಥೆಯಲ್ಲಿ ಶ್ರೇಷ್ಠವೆಂದು ಭ್ರಮಿಸಲ್ಪಟ್ಟಿರುವ ಬ್ರಾಹ್ಮಣ ಮೂಲದಿಂದ ಬಂದ ಬಸವಣ್ಣನಿಗೆ ತನ್ನ ಹುಟ್ಟಿನ ಮೂಲ ಕಷ್ಟದ ಹೊರೆಯಾಗಿ ಕಂಡಿದೆ.  `ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟದ ಹೊರೆಯ ಹೊರಿಸದಿರಯ್ಯೊ'ಎನ್ನುತ್ತಾರೆ ಬಸವಣ್ಣ.

ಸಹಸ್ರಾರು ವರ್ಷಗಳಿಂದಲೂ ಶೋಷಣೆಯನ್ನು ಉದರಂಭರಣದ ದಾರಿಯಾಗಿಸಿಕೊಂಡು ಬಂದ ಪುರೋಹಿತ ವರ್ಣದ ಪಾಪಕಲುಷಿತ ಮೂಲದವನು ತಾನು ಎಂಬ ಅರಿವು ಬಸವಣ್ಣನಿಗೆ ಭರಿಸಲಾಗದ ಪಾಪಪ್ರಜ್ಞೆಯಾಗಿ ಕಾಡಿದೆ.

ವರ್ಣಮೂಲದ ಸಾಮೂಹಿಕ ಪಾಪವನ್ನು ವೈಯಕ್ತಿಕ ನೆಲೆಯಲ್ಲಿ ಭರಿಸಿದಂತೆ ಪಾಪಪ್ರಜ್ಞೆಯಲ್ಲಿ ನರಳಿ ತನ್ನನ್ನು ಅದರಿಂದ ಬಿಡುಗಡೆಗೊಳಿಸಿಕೊಳ್ಳಲು ಬಸವಣ್ಣ ತುಳಿದ ದಾರಿ ಅಪವರ್ಣೀಕರಣ. ಇದುವರೆಗೂ ಯಾವುದನ್ನು ನೀಚವೆಂದು ಕನಿಷ್ಠವೆಂದು ಕರೆಯಲ್ಪಟ್ಟಿತ್ತೋ ಅಂಥ ಮೂಲವನ್ನು ಪವಿತ್ರವೆಂದು ಪರಿಗಣಿಸಿದ್ದು, ಆ ಮೂಲದಲ್ಲಿ ತನ್ನ ಹುಟ್ಟನ್ನು ಗುರುತಿಸಿಕೊಂಡಿದ್ದು ಬಸವಣ್ಣನ ಬಹುದೊಡ್ಡ ನಡೆಯಾಗಿದೆ. ಶರಣ ಚಳವಳಿಯ ಚಲನೆಯನ್ನು ನಿರ್ದೇಶಿಸುವ ದಾರಿದೀಪವಾಗಿದೆ.

ಚನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ
ಗಂಡು ಹೆಣ್ಣುಗಳ ಸಂಬಂಧವನ್ನು ಜಡ ವರ್ಣ ವ್ಯವಸ್ಥೆ ಅರ್ಥೈಸುವ ಕ್ರಮವನ್ನು ತಿರಸ್ಕರಿಸಿದ, ಸಮಾಜದ ರೂಢಿಗತ ಕಟ್ಟುಪಾಡುಗಳನ್ನು ಧಿಕ್ಕರಿಸಿದ ಈ ನಡೆ ವಿಶ್ವಮಾನ್ಯ ಗೌರವಕ್ಕೆ ಭಾಜನವಾದ ಪರಿಕ್ರಮವಾಗಿದೆ.

ವಿಶೇಷವೆಂದರೆ, ಕೀಳರಿಮೆಯಲ್ಲಿ ಬಳಲುವ ವರ್ಣಮೂಲದವರ ಆತ್ಮಗೌರವವನ್ನು ಮನ್ನಿಸಿದ ನಡೆಯಾಗಿದೆ. ನೈತಿಕತೆ, ಚಾರಿತ್ರ್ಯ, ಇಂಥ ಪರಿಕಲ್ಪನೆಗಳಿಗೆ ಪುರೋಹಿತಶಾಹಿಯು ಕೊಟ್ಟಿದ್ದ ತಿರೋಗಾಮಿ ಅರ್ಥವನ್ನು ಧಿಕ್ಕರಿಸಿ ಹೊಸ ಬಗೆಯ ಅರ್ಥತೇಜಸ್ಸನ್ನು ನೀಡಿದ ಪುರೋಗಾಮಿ ಬೆಳವಣಿಗೆಯಾಗಿದೆ. ಇಲ್ಲಿ ಪಾಪಪ್ರಜ್ಞೆಯನ್ನು ನೀಗಿಕೊಳ್ಳುವ ಹಾಗೂ ಪಶ್ಚಾತ್ತಾಪದಲ್ಲಿ ಪವಿತ್ರೀಕರಿಸಿಕೊಳ್ಳುವ ಪರಸ್ಪರಾವಲಂಬಿ ಗುಣವಿದೆ. ಇದು ಆತ್ಮವಿಮರ್ಶೆಯ ಮಾರ್ಗ.

ಆತ್ಮವಿಮರ್ಶೆಯೆಂಬುದು ವ್ಯಕ್ತಿನಿಷ್ಠ ನೆಲೆಯಲ್ಲಿ ಮೂಡಿದ್ದಾದರೂ ಸಮುದಾಯ ವ್ಯಾಪ್ತಿಯ ಪಾಪಪ್ರಜ್ಞೆಯಲ್ಲಿ ನರಳಿದ್ದು. ಜಾತಿಯ ಶ್ರೇಣೀಕರಣದಲ್ಲಿ ಶ್ರೇಷ್ಠತೆಯ ಭ್ರಾಮಕತೆಯಲ್ಲಿ ಬೀಗುತ್ತಿರುವ ಎಲ್ಲ ಮೇಲುಜಾತಿಯ ಮನಸ್ಸುಗಳೂ ಈ ಬಗೆ ಬಸವಪ್ರಜ್ಞೆಯಲ್ಲಿ ನಡೆದುಕೊಳ್ಳಬೇಕಾದ ಅಗತ್ಯವಿದೆ.

ಬಸವಣ್ಣನವರು ಮುಂದುವರಿದು ಈ ಅಪವರ್ಣೀಕರಣವನ್ನು ಬಳಗ ಪ್ರಜ್ಞೆಯ ಭಾವದಲ್ಲಿ ವಿಸ್ತರಿಸುತ್ತಾರೆ :

ಹರನು ಮೂಲಿಗನಾಗಿ, ಪುರಾತರೊಳಗಾಗಿ
ಬಳಿಬಳಿಯಲು ಬಂದ ಮಾದಾರನ ಮಗ ನಾನಯ್ಯ
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂಚಕ
ಮಾದಾರನ ಮಗ ನಾನಯ್ಯ
ಪನ್ನಗಭೂಷಣ ಕೂಡಲಸಂಗಯ್ಯ
- ಹೀಗೆ ಅಸ್ಪೃಶ್ಯ ಮೂಲದ ಶರಣರ ಬಳಗ ಸಾಲಿನಲ್ಲಿ ತನ್ನ ಬಂಧುತ್ವವನ್ನು ಗುರುತಿಸಿಕೊಳ್ಳುವ ಮೂಲಕ ಪವಿತ್ರೀಕರಿಸಿಕೊಳ್ಳುವ ಬಸವಣ್ಣನವರ ಈ ನಡೆ ಜಾತಿ ವ್ಯವಸ್ಥೆಯ ಶಾಪಗ್ರಸ್ತ ಸಮಾಜದಲ್ಲಿ ಶ್ರೇಷ್ಠತೆಯ ಮೂಲದ ಎಲ್ಲಾ ಮನಸ್ಸುಗಳೂ ಅನುಸರಿಸಬೇಕಾದ ಮಾದರಿ ನಡೆ.

ಬ್ರಾಹ್ಮಣ್ಯದ ಮರೆಮೋಸ ಕುರಿತಂತೆ ನೇರವಾಗಿ ಬಸವಣ್ಣ
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮಮುನಿಗೆ ಗೋವೇಧೆಯಾಯಿತ್ತು
ಬಲಿಗೆ ಬಂಧನವಾಯಿತ್ತು, ಕರ್ಣನ ಕವಚ ಹೋಯಿತ್ತು.
ದಕ್ಷಂಗೆ ಕುರಿದಲೆಯಾಯಿತ್ತು. ನಾಗಾರ್ಜುನನ ತಲೆ ಹೋಯಿತ್ತು
ಎಂದು ಬ್ರಾಹ್ಮಣನನ್ನು ದೈವವೆಂದು ನಂಬಿದವರಿಗೆ ಆದ ಗತಿವಿವರಗಳ ಪಟ್ಟಿ ಮಾಡಿದ್ದಾನೆ.

`ಏನಯ್ಯ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯೊ?' ಎಂದು ಪ್ರಶ್ನಿಸಿದ್ದಾನೆ. ಇಷ್ಟು ಢಾಳಾಗಿ ಬಸವಣ್ಣನವರ ವಚನಗಳು ವೈದಿಕ ವಿರೋಧಿ ನಿಲುವನ್ನು ಸಾರುತ್ತಿರುವಾಗ ಝಳಕಿ ಮತ್ತು ಬಾಲಗಂಗಾಧರರಿಗೆ ಇದು ಅರ್ಥವಾಗದೇ ಹೋದದ್ದು ಜಾಣಕುರುಡಿರಬಹುದೇ?
ಕಾಳವ್ವೆ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ. ದಲಿತ ವಚನಕಾರ್ತಿ. ಅವಳ ಒಂದು ವಚನ ಹೀಗಿದೆ;

ಕುರಿಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತ ಕರೆವ ಪಶುವತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಆದೆಂತೆಂದಡೆ:ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯೊ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ

- ಈ ವಚನ ಹಲವು ಪ್ರಶ್ನೆಗಳನ್ನೆತ್ತುತ್ತದೆ. ಆಹಾರ ಪದ್ಧತಿಯಲ್ಲಿ `ಶ್ರೇಷ್ಠ,ಕನಿಷ್ಠ'  ಎಂಬ ತಾರತಮ್ಯ ನೀತಿಯನ್ನು ವರ್ಣ ವ್ಯವಸ್ಥೆಯು ಹುಟ್ಟುಹಾಕಿದೆ. ಗೋವನ್ನು ದೇವತೆಗಳ ಆವಾಸಸ್ಥಾನವಾಗಿ ಕಲ್ಪಿಸಿ ಅದನ್ನು ಮಾತೆಯಾಗಿ ಪೂಜಿಸುತ್ತ ಆ ನಂಬಿಕೆಯನ್ನು ಬಂಡವಾಳವನ್ನಾಗಿಸಿಕೊಂಡಿರುವ ವೈದಿಕಶಾಹಿ ಇಂದಿಗೂ ಈ ನಂಬಿಕೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಕೋಮುದ್ವೇಷವನ್ನು ಬಿತ್ತಿ ಬೆಳೆಯುತ್ತಿದೆ.

ಆಹಾರ ಪದ್ಧತಿಯಲ್ಲಿ ಧರ್ಮಕಾರಣವನ್ನು ಬೆರೆಸಿ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡುತ್ತಿದೆ. ಆಹಾರ ಪದ್ಧತಿ ತಿನ್ನುವವರ ಇಚ್ಛೆಗೆ ಬಿಟ್ಟ ವಿಚಾರ. ವರ್ಣ ನೀತಿ ಎಷ್ಟು ಅವೈಚಾರಿಕವಾದುದು ಎಂಬುದನ್ನು ಕಾಳವ್ವೆಯ ವಚನ ತರ್ಕಬದ್ಧವಾಗಿ ಹೇಳುತ್ತಿದೆ. ಧಾರ್ಮಿಕ ಸಾಂಸ್ಕೃತಿಕ ಮೂಲದ ನೈತಿಕ ವಿಚಾರಗಳನ್ನು ಪರಿಶೀಲನೆಗೆ ಒಳಗುಮಾಡುತ್ತಾ ಸಾಮಾಜಿಕ ನ್ಯಾಯಕ್ಕಾಗಿ ದನಿಯೆತ್ತಿರುವ ಈ ವಚನ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಹತ್ವದ ವಚನವಾಗಿದೆ.

ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಹೇಸುವ ಮನಸ್ಸುಗಳ ಹೀನತನವನ್ನು ತರ್ಕಬದ್ಧವಾಗಿ ಪ್ರಶ್ನಿಸಿದೆ. ಇದೇ ಭಾವದ ವಚನಗಳು ಹಲವು ಜನ ವಚನಕಾರರಲ್ಲಿ ಬಂದಿವೆ. ಭಾಷಾ ಪ್ರಯೋಗದಲ್ಲಿ ಕೆಲವು ವ್ಯತ್ಯಾಸಗಳನ್ನು ಬಿಟ್ಟರೆ ಒಡ್ಡುವ ತರ್ಕಗಳು ಮುಂದೊಡ್ಡುವ ಪ್ರಶ್ನೆಗಳು ಒಂದೇ ನೆಲೆಯಲ್ಲಿ ಹರಿದಿವೆ. ಇದಕ್ಕೆ ಉದಾಹರಣೆಯಾಗಿ ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವರ ಇನ್ನು ಮುಂತಾದವರ ವಚನಗಳನ್ನು ಗಮನಿಸಬಹುದು.

ಎಂಜಲು ತಿಂಬ ಜಡದೊಳಗೆ ಹದಿನೆಂಟುಜಾತಿಯ
ಎಂಜಲು ಭಂಜಿಸಿ, ಉತ್ತಮರೆನಿಸಿಕೊಂಬ ಭವಜೀವಿಗಳು ಕೇಳಿರೊ.
ಕುಂಜರನಾಗಿ ನಡೆದು ಸುಜಾತರೆನಿಸಿಕೊಂಬಿರಿ.
ಅಜವಧೆ ಗೋವಧೆ ಮಾಡುವ ಅನಾಚಾರಿಗಳು ನೀವು ಕೇಳಿರೊ.
ಬ್ರಾಹ್ಮಣ ವಾಕ್ಯವ ಕಲಿತು ಬ್ರಾಹ್ಮಣರೆನಿಸಿಕೊಂಬಿರಿ.
ಮರ್ಮವಿಡಿದು ನೋಡಹೋದಡೆ ನಿಮ್ಮಿಂದ ಕರ್ಮಿಗಳಿಲ್ಲ.

ಹದಿನೆಂಟು ಜಾತಿಗೆ ಅಧಿಕವೆನಿಸಿಕೊಂಬಿರಿ
ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕವೆಂದ ಕಲಿದೇವರ ದೇವಯ್ಯ.
ಮುಟ್ಟಿಯೂ ಮುಟ್ಟದಿಹೆ : ಸ್ಪೃಶ್ಯ ಮುಟ್ಟಿಸಿಕೊಳ್ಳುವವನಾದರೆ ಅಸ್ಪೃಶ್ಯ ಮುಟ್ಟಬಾರದವನು. ಇವನನ್ನು ಶ್ವಪಚ, ಚಂಡಾಲ, ಹೊಲೆಯ, ಮಾದಿಗ ಇತ್ಯಾದಿ ಶಬ್ದಗಳಲ್ಲಿ ಗುರುತಿಸಿ ಅವಮಾನಿಸಲಾಗಿದೆ.

ಮುಟ್ಟುವುದು ಆಪ್ತತೆಯ, ಆರ್ದ್ರತೆಯ ಭಾವ ಸಂಪನ್ನಕ್ರಿಯೆ. ಹಿಂದೂ ಸಂಸ್ಕೃತಿ ಎಂದೂ ಒಳಗೊಳ್ಳುವ ಸಂಸ್ಕೃತಿಯಲ್ಲ; ಮುಟ್ಟಬೇಡ ಎನ್ನುವ ನಡೆಯದು. ಹೊರಗಿನವರು ಒಳಗಿನವರು ಮುಟ್ಟಬಹುದಾದವರು, ಮುಟ್ಟಬಾರದವರು ಎಂಬ ನೆಲೆಗಳಲ್ಲಿ ಮನುಷ್ಯರ ಬಗೆಗಿನ ತನ್ನ ಸಣ್ಣತನವನ್ನು ಭಿನ್ನಭೇದವನ್ನು ಉದ್ದಕ್ಕೂ ಉಳಿಸಿಕೊಂಡೇ ಬಂದಿದೆ. ಡೋಹರ ಕಕ್ಕಯ್ಯನ ವಚನಗಳಲ್ಲಿ ಈ ಮುಟ್ಟುವ ಸಂಗತಿ ಮುಟ್ಟುವ   ಮುಟ್ಟದಿರುವ ಎರಡೂ ನೆಲೆಗಳಲ್ಲೂ ಅನುಭವದ್ರವ್ಯವಾಗಿ ಮಾತಾಡಿದೆ.

ಎನ್ನ ಕಷ್ಟಕುಲದಲ್ಲಿ ಹುಟ್ಟಿದವನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯ ಎನ್ನ ಕರಸ್ಥಲಕ್ಕೆ ಲಿಂಗವ
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯ
ಸಂಗನ ಬಸವಣ್ಣನ ಕರುಣದಿಂದ
-ಮುಟ್ಟಿನ ಅವಮಾನದಲ್ಲಿ ಬಂಧಿತನಾಗಿದ್ದ ಕಕ್ಕಯ್ಯನನ್ನು ಅದರಿಂದ ಬಿಡುಗಡೆಗೊಳಿಸಿದ್ದು ಇಷ್ಟಲಿಂಗದ ಸೋಂಕು. ಅದು ಲಿಂಗದೀಕ್ಷೆಯಲ್ಲ. ಸೋಂಕಿನ ಸಂಗದ ಕರುಣೆ. ಅಸ್ಪೃಶ್ಯತೆಯ ಅವಮಾನದಿಂದ ಪಾರಾಗಿರುವ ಈ ಬಗೆ ಅಪರೂಪವಾದುದು.

ಹೀಗೆ ಕೆಳಸ್ತರದಿಂದ ಹಿಡಿದು ಮೇಲಿನವರೆಗಿನ ಎಲ್ಲ ವಚನಕಾರರಲ್ಲೂ ವರ್ಣವ್ಯವಸ್ಥೆಯ ವಿರುದ್ಧವಾದ ದನಿ ಕೇಳಿಬರುತ್ತದೆ. ಕೆಲವರ ದನಿ ಮುಖಕ್ಕೆ ಹೊಡೆದಂತೆ  ನೇರವಾಗಿದ್ದರೆ ಇನ್ನು ಹಲವರ ದನಿ ಆರ್ದ್ರತೆಯಲ್ಲಿ ಅನುಭವವಾಗಿ ಹರಿದ ಪಿಸುದನಿಯಾಗಿದೆ. ವಚನಗಳನ್ನು ನಮ್ಮ ಸಾಮಾಜಿಕ ಮನಶ್ಶಾಸ್ತ್ರೀಯ ಹಿನ್ನೆಲೆಯಲ್ಲಿ ವಿವೇಚಿಸಿ ವಿಶ್ಲೇಷಿಸುವ ಅಗತ್ಯವಿದೆ.

ಮೇಲುಜಾತಿಯ ಮನಸ್ಸುಗಳ ಆತ್ಮವಿಮರ್ಶಾ ಪ್ರಜ್ಞೆ, ಮಧ್ಯಮ ಜಾತಿಯ ಮನಸ್ಸುಗಳ ಆಚಾರ-ವಿಚಾರನಿಷ್ಠ ನೈತಿಕಪ್ರಜ್ಞೆ ಹಾಗೂ ಅಸ್ಪೃಶ್ಯಮೂಲದ ಮನಸ್ಸುಗಳ ಆತ್ಮಪ್ರತ್ಯಯ ಪ್ರಜ್ಞೆ ವಚನ ಸಾಹಿತ್ಯದ ಬಯಲಿನಲ್ಲಿ ಸಂಘರ್ಷಾತ್ಮಕವಾಗಿ ಚಲಿಸಿವೆ.

ಅವುಗಳ ವೈದಿಕ ವಿರೋಧಿ ನಿಲುವು ಸ್ಪಷ್ಟವೂ ನಿಷ್ಠುರವೂ ಆಗಿದೆ. ಹಾಗೆಯೇ ಜಾತಿ ನಿರಸನ ಪ್ರಜ್ಞೆ ಪಾರದರ್ಶಕತ್ವವನ್ನು ಅವುಗಳಲ್ಲಿ ಕಾಣಬಹುದಾಗಿದೆ. ಈ ಅಂತರಂಗವನ್ನು ಅರಿತಾಗ ವಚನಗಳ ಓದಿನಲ್ಲಿ ಚಳವಳಿಯ ಆತ್ಮದರ್ಶನವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT