ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ತಂದ ಸಂಕಷ್ಟ

ಪ್ರಥಮ ದರ್ಜೆ ಕಾಲೇಜು ಪದವಿ ವಿದ್ಯಾರ್ಥಿಗಳಿಗೆ ತೊಂದರೆ
Last Updated 30 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ಸಾಮಾನ್ಯ ವರ್ಗಾವಣೆಯಿಂದಾಗಿ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಕಾಯಂ ಪ್ರಾಧ್ಯಾಪಕರಿಲ್ಲದಂತೆ ಆಗಿದೆ!

ಕಾಲೇಜು ಶಿಕ್ಷಣ ಇಲಾಖೆಯು ಆಗಸ್ಟ್‌ 28 ಮತ್ತು 29ರಂದು ಸಹಾಯಕ, ಸಹ ಪ್ರಾಧ್ಯಾಪಕರು, ಗ್ರಂಥಪಾಲಕರು ಮತ್ತು  ದೈಹಿಕ ಶಿಕ್ಷಣ ಬೋಧಕರ (ಹೈದರಾಬಾದ್‌ ಕರ್ನಾಟಕ ಭಾಗದವರ ಹೊರತಾಗಿ) ಸಾಮಾನ್ಯ ವರ್ಗಾವಣೆಗೆ ಕೌನ್ಸೆಲಿಂಗ್‌ ನಡೆಸಿತ್ತು. ವರ್ಗಾವಣೆಗೆ ಅರ್ಜಿ ಸಲ್ಲಿಸಲು 752 ಪ್ರಾಧ್ಯಾಪಕರು, 66  ಗ್ರಂಥಪಾಲಕರು ಮತ್ತು 76 ದೈಹಿಕ ಶಿಕ್ಷಣ ಬೋಧಕರು ಅರ್ಹತೆ ಹೊಂದಿದ್ದರು.  ಈ ಪೈಕಿ 380 ಮಂದಿ ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಹ ಪ್ರಾಧ್ಯಾಪಕರು ಕೌನ್ಸೆಲಿಂಗ್‌ನಲ್ಲಿ ಬೇರೆ ತಾಲ್ಲೂಕು ಇಲ್ಲವೇ ಜಿಲ್ಲಾಮಟ್ಟ ಅಥವಾ ನಗರ ಪ್ರದೇಶದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅವರ ಜಾಗಕ್ಕೆ ಹೊಸಬರು ಬಂದಿಲ್ಲ.

ಹೋಬಳಿ ಮಟ್ಟದ ಬಹುತೇಕ ಕಾಲೇಜುಗಳಲ್ಲಿ ಒಬ್ಬರು ಇಲ್ಲವೇ ಇಬ್ಬರು  ಕಾಯಂ ಪ್ರಾಧ್ಯಾಪಕರಿದ್ದಾರೆ. ಉಳಿದವರೆಲ್ಲರೂ ಅರೆಕಾಲಿಕ ಬೋಧಕರು. ಇರುವ ಕಾಯಂ ಪ್ರಾಧ್ಯಾಪಕರು ಬೇರೆ ಕಡೆ ಹೋದರೆ, ಈ ಕಾಲೇಜುಗಳ ವಿದ್ಯಾರ್ಥಿಗಳ ಪರಿಸ್ಥಿತಿ ಏನು   ಎಂಬ ಪ್ರಶ್ನೆಯನ್ನು ಪೋಷಕರು ಮತ್ತು ಪ್ರಾಧ್ಯಾಪಕರು ಎತ್ತಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಯ ಆನವಟ್ಟಿ, ತಿಳುವಳ್ಳಿ, ಸಿದ್ದಾಪುರದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿಷಯವಾರು ಕಾಯಂ ಪ್ರಾಧ್ಯಾಪಕರು ಒಬ್ಬರು ಅಥವಾ ಇಬ್ಬರು ಇದ್ದಾರೆ. ಇವರೆಲ್ಲ ಈಗ  ವರ್ಗವಾಗಿದ್ದಾರೆ. ಇವರ ಜಾಗಕ್ಕೆ ಬೇರೆಯವರು ಬಂದಿಲ್ಲ’ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿ ಕಾಲೇಜು,  ಶಿವಮೊಗ್ಗ ಜಿಲ್ಲೆಯ ಸೊರಬ ಕಾಲೇಜಿನಲ್ಲಿರುವ ಇಂತಹುದೇ ಸ್ಥಿತಿಯನ್ನು ಅವರು ಮತ್ತೊಂದು ಉದಾಹರಣೆಯಾಗಿ ನೀಡಿದರು.

‘ಇಲ್ಲಿ ಮಾತ್ರವಲ್ಲ; ಉಳಿದ ಕಡೆಗಳಲ್ಲೂ ಇದೇ ರೀತಿ ಆಗಿದೆ. ವರ್ಗ ಆಗಿರುವವರಲ್ಲಿ ಪ್ರಾಂಶುಪಾಲರು ಕೂಡ ಇದ್ದಾರೆ. ಹೊಸ ಪ್ರಾಂಶುಪಾಲರು ಬಾರದಿದ್ದಾರೆ ಈಗಿರುವವರು ಯಾರಿಗೆ  ಅಧಿಕಾರ ಹಸ್ತಾಂತರಿಸಬೇಕು’ ಎಂದು  ಪ್ರಶ್ನಿಸಿದರು.

ಸರಿ ಬರದ ‘ಎ’ ‘ಬಿ’ ‘ಸಿ’ ಲೆಕ್ಕಾಚಾರ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವ್ಯಾಪ್ತಿಯನ್ನು ‘ಎ’, ‘ಬಿ’ ಮತ್ತು ‘ಸಿ’ ವಲಯಗಳಾಗಿ ವಿಂಗಡಿಸಲಾಗಿದೆ. ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ, ‘ಸಿ’ ವಲಯದಲ್ಲಿ ಬರುವ ಕಾಲೇಜುಗಳ ಪ್ರಾಧ್ಯಾಪಕರು ‘ಬಿ’ ವಲಯಕ್ಕೆ, ‘ಬಿ’ ವಲಯದವರು ‘ಎ’ ವಲಯದ ಕಾಲೇಜುಗಳಿಗೆ ಮತ್ತು ‘ಎ’ ವಲಯದವರು ‘ಸಿ’ ವಲಯದ ಕಾಲೇಜುಗಳಿಗೆ  ವರ್ಗವಾಗಬೇಕು. ಆದರೆ, ಅದು ಆಗುತ್ತಿಲ್ಲ ಎಂಬುದು  ದೀರ್ಘಕಾಲದಿಂದ ‘ಸಿ’ ವಲಯದ ಕಾಲೇಜುಗಳಲ್ಲಿ ಸೇವ ಸಲ್ಲಿಸುತ್ತಿರುವ ಬೋಧಕರ ದೂರು.

‘ನಗರ, ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವುದಿಲ್ಲ. ರಾಜಕೀಯ ಪ್ರಭಾವ ಬಳಸಿ ಅಲ್ಲೇ ಉಳಿದುಕೊಳ್ಳುತ್ತಾರೆ. ಈ ಬಾರಿ, ‘ಸಿ’ ಮತ್ತು ‘ಬಿ’ ವಲಯಗಳ  ಪ್ರಾಧ್ಯಾಪಕರು ‘ಬಿ’ ಮತ್ತು ‘ಎ’ ವಲಯಗಳಿಗೆ ವರ್ಗವಾಗಿದ್ದಾರೆ. ಆದರೆ, ‘ಎ’ ವಲಯದ ಪ್ರಾಧ್ಯಾಪಕರು ‘ಸಿ’ ವಲಯದತ್ತ ಮುಖಮಾಡಿಲ್ಲ’ ಎಂದು ಮತ್ತೊಬ್ಬ ಪ್ರಾಧ್ಯಾಪಕ ಆರೋಪಿಸಿದರು.

‘ವಲಯಗಳ ಪರಿಕಲ್ಪನೆಯೇ ತಪ್ಪು. ನಗರ, ಜಿಲ್ಲಾ ಕೇಂದ್ರಗಳಲ್ಲಿ ಗರಿಷ್ಠ 5 ವರ್ಷ ಸೇವೆ ಸಲ್ಲಿಸಿದವರ ಹುದ್ದೆಗಳನ್ನು ವರ್ಗಾವಣೆ ಸಂದರ್ಭದಲ್ಲಿ ಖಾಲಿ ಎಂದು  ತೋರಿಸಬೇಕು.  ಜೊತೆಗೆ ‘ಬಿ’ ಮತ್ತು ‘ಸಿ’ ವಲಯದವರಿಗೆ ತಮಗೆ ಬೇಕಾದ ವಲಯಗಳ ಕಾಲೇಜುಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ವಲಯಗಳ ವಿಚಾರದಲ್ಲಿ ಗೊಂದಲ ಇದೆ. ವರ್ಗಾವಣೆ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡುವುದರಿಂದ ಅದನ್ನು ಸರಿಪಡಿಸಬಹುದು. ಇಲಾಖೆ ಇದಕ್ಕೆ ಮನಸ್ಸು ಮಾಡಬೇಕಷ್ಟೆ’ ಎಂದು ರಾಜ್ಯ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಎಚ್‌.ಸಿ. ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
*

ಕೌನ್ಸೆಲಿಂಗ್‌ ಸಮಯಕ್ಕೂ ಆಕ್ಷೇಪ
ಶೈಕ್ಷಣಿಕ ವರ್ಷ ಆರಂಭಗೊಂಡ ನಂತರ ಇಲಾಖೆ ಕೌನ್ಸೆಲಿಂಗ್‌ ನಡೆಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ‘ಆಗಸ್ಟ್–ಸೆಪ್ಟೆಂಬರ್‌ ತಿಂಗಳು ವರ್ಗಾವಣೆಗೆ ಸೂಕ್ತ ಸಮಯ ಅಲ್ಲ. ಈಗಾಗಲೇ ಕಾಲೇಜುಗಳು ಆರಂಭವಾಗಿವೆ. ಈಗ ವರ್ಗಾವಣೆ ಮಾಡುವುದರಿಂದ ಬೋಧನೆಗೆ ತೊಂದರೆಯಾಗುತ್ತದೆ. ಶೈಕ್ಷಣಿಕ ಆರಂಭಕ್ಕೂ ಮುನ್ನ ಈ ಪ್ರಕ್ರಿಯೆ ಮುಗಿಯಬೇಕು’ ಎಂಬುದು ಪ್ರಾಧ್ಯಾಪಕರು ಮತ್ತು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮ ಪಂಚಾಯಿತಿ, ಬಿಬಿಎಂಪಿ ಚುನಾವಣೆಯ ಕಾರಣಕ್ಕೆ ವರ್ಗಾವಣೆ ಕೌನ್ಸೆಲಿಂಗ್‌ ವಿಳಂಬವಾಯಿತು ಎಂದು ಇಲಾಖೆಯ ಅಧಿಕಾರಿಗಳು ಕಾರಣ ನೀಡುತ್ತಾರೆ.
ಇಲಾಖೆಯು ಇದಕ್ಕೂ ಮುನ್ನ ಆಗಸ್ಟ್‌ 3 ಮತ್ತು 4ರಂದು ವರ್ಗಾವಣೆ ಕೌನ್ಸೆಲಿಂಗ್‌ ನಡೆಸಿತ್ತು. ಆದರೆ, ಆ ಸಂದರ್ಭದಲ್ಲಿ ನಿಗದಿತ ಪ್ರಮಾಣವಾದ ಶೇ 8ರಷ್ಟು  ಸಿಬ್ಬಂದಿ ವರ್ಗಾವಣೆ ಆಗದ ಕಾರಣಕ್ಕೆ ಆಗಸ್ಟ್ 28 ಮತ್ತು 29ರಂದು ಕೌನ್ಸೆಲಿಂಗ್‌ ಮತ್ತೆ ನಡೆಸಲಾಗಿತ್ತು. (ವರ್ಗಾವಣೆ ಕಾಯ್ದೆ ಅಡಿಯಲ್ಲಿ ವೃಂದವಾರು ಗರಿಷ್ಠ ಶೇ 8ರಷ್ಟು ಸಿಬ್ಬಂದಿಯನ್ನು ವರ್ಗಾವಣೆಗೆ ಪರಿಗಣಿಸಬಹುದು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT