ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣಚಿತ್ರಗಳ ಪ್ರಾಚೀನ ಗವಿಗಳು ಪತ್ತೆ

Last Updated 24 ಮೇ 2013, 20:00 IST
ಅಕ್ಷರ ಗಾತ್ರ

ಅಮೀನಗಡ (ಬಾಗಲಕೋಟೆ ಜಿಲ್ಲೆ): ಇತಿಹಾಸ ಪ್ರಸಿದ್ಧ ಐಹೊಳೆ, ಪಟ್ಟದಕಲ್ಲು ಪ್ರವಾಸಿ ತಾಣಗಳ ಮಾರ್ಗ ಮಧ್ಯದಲ್ಲಿ ಬರುವ  ಉಪನಾಳ  ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಬೃಹದಾಕಾರದ ಕಲ್ಲುಫಡಿಯ ಬೆಟ್ಟದಲ್ಲಿ (ಹುಲಿ ಫಡಿ) ವರ್ಣಚಿತ್ರಗಳಿರುವ ಪ್ರಾಗೈತಿಹಾಸಿಕ ಗವಿಗಳು ಪತ್ತೆಯಾಗಿವೆ.

ಉಪನಾಳ ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಬೆಟ್ಟ 400ರಿಂದ 500 ಮೀ. ಉದ್ದವಿದೆ. ಇಲ್ಲಿ ಸುಮಾರು 30ಕ್ಕೂ ಹೆಚ್ಚು ಗವಿಗಳಿವೆ. ಮಂಗಗಳು, ಮುಳ್ಳುಹಂದಿ, ನರಿ, ತೋಳ ಮತ್ತಿತರ ಪ್ರಾಣಿಗಳು ಇಲ್ಲಿ ವಾಸವಾಗಿವೆ. ಎರಡು ಗವಿಗಳಲ್ಲಿ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಒಂದು ಗವಿಯ ಮೇಲ್ಭಾಗದಲ್ಲಿ ಕೆಂಪು, ಬಿಳಿ ಬಣ್ಣದಿಂದ ವಿವಿಧ ಚಿತ್ರಗಳನ್ನು ಬಿಡಿಸಿದ್ದನ್ನು ಕಾಣಬಹುದಾಗಿದೆ. ಮೀನು, ನವಿಲು, ಹುಲಿ, ಬೇಟೆ ನಾಯಿ, ಸಿಂಹ, ಆಂಜನೇಯ, ಗಿಟಾರ, ಗಾಳಿಪಟ, ಮನುಷ್ಯರು, ಆಯುಧಗಳು, ಬಿಲ್ಲುಬಾಣಗಳಂತಹ ಚಿತ್ರಗಳಿವೆ.

ಕಮತಗಿಯ ಹುಚ್ಚೇಶ್ವರ ಬಿಎಡ್ ಕಾಲೇಜಿನ ಇತಿಹಾಸ ಉಪನ್ಯಾಸಕ, ಪ್ರವಾಸಿ ಮಾರ್ಗದರ್ಶಕ ಪರಶುರಾಮ ಗೋಡಿ ಅವರು ಈ ರೇಖಾಚಿತ್ರ ಗವಿಯನ್ನು ಪತ್ತೆ ಹಚ್ಚಿದ್ದಾರೆ.

`ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿರುವ ವರ್ಣರೇಖಾಚಿತ್ರಗಳು, ಕೊರೆದ, ಗೀರಿದ, ಕುಟ್ಟಿದ ಚಿತ್ರಗಳು ಇವೆ. ಆಕೃತಿಜ್ಞಾನ, ದೇಹದ ಪ್ರಮಾಣ ಬದ್ಧತೆ, ಕ್ರಿಯೆಗನುಗುಣವಾದ ಭಂಗಿ ಮೊದಲಾದವುಗಳಿಂದ ಕೂಡಿದ ಈ ಚಿತ್ರಗಳು ಆಯಾ ಕಾಲದ ಜನರ ಸೌಂದರ್ಯಪ್ರಜ್ಞೆ, ಕಲ್ಪನೆ ಹಾಗೂ ಕರಕುಶಲತೆಗೆ ಸಾಕ್ಷಿಯಾಗಿವೆ'

`ಕಾಲದ ದೃಷ್ಟಿಯಿಂದ ಇವು ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ, ಶಿಲಾ-ತಾಮ್ರಯುಗ, ಕಬ್ಬಿಣಯುಗ, ಇತಿಹಾಸಾರಂಭಯುಗ ಅಂದರೆ ಸ್ಥೂಲವಾಗಿ ಕ್ರಿ. ಪೂರ್ವ 10 ಸಾವಿರ ವರ್ಷ ಹಿಂದಿನ,  ಕ್ರಿ.ಶ. 2ನೇ ಶತಮಾನದವರೆಗಿನವು. ಬಾದಾಮಿಯ ಬಳಿಯ ಶಿಡ್ಲಫಡಿ ಗುಹೆ, ಕುಟಗನಕೇರಿ, ಆಡಗಲ್ಲ ಗುಡ್ಡಗಳಲ್ಲಿ ಈ ರೀತಿಯ ಉತ್ತಮ ಚಿತ್ರಗಳನ್ನು ಕಾಣಬಹುದಾಗಿದೆ' ಎಂದು ಪರಶುರಾಮ ಗೋಡಿ ಹೇಳುತ್ತಾರೆ.

ಈ ಮೊದಲು ಇಲ್ಲಿ ಹುಲಿ, ಕಾಡುಮೃಗಗಳು ವಾಸವಾಗಿದ್ದವು ಎನ್ನುವ ಕಾರಣಕ್ಕಾಗಿ ಸ್ಥಳೀಕರು ಈ ಬೆಟ್ಟವನ್ನು `ಹುಲಿ ಫಡಿ' ಎಂದು ಕರೆಯುತ್ತಾರೆ. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಈ ರೀತಿಯ ವರ್ಣಚಿತ್ರಗಳನ್ನು ಪ್ರಾಚ್ಯವಸ್ತುಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT