ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನಕ್ಕೆ ಸ್ಪಂದಿಸುವ ಶಾಕುಂತಲ

ರಂಗಕರ್ಮಿ ಸಿ.ಬಸವಲಿಂಗಯ್ಯ ಅಭಿಮತ
Last Updated 4 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ವೃತ್ತಿ ರಂಗಭೂಮಿಯ ದೃಶ್ಯ ವೈಭವ ಮತ್ತು ಹವ್ಯಾಸಿ ರಂಗಭೂಮಿಯ ಪ್ರಯೋಗಶೀಲ ಮನೋಭಾವ ಅನಭಿಜ್ಞ ಶಾಕುಂತಲ ನಾಟಕದಲ್ಲಿ ಹದವಾಗಿ ಮೇಳೈಸಿದ್ದು, ಹೊಸದೊಂದು ರಂಗಮಾರ್ಗ ಸೃಷ್ಟಿಯಾಗಿದೆ' ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

ಪ್ರಸಂಗ ತಂಡದ `ಅನಭಿಜ್ಞ ಶಾಕುಂತಲ' ರಂಗಪ್ರಯೋಗ ಕುರಿತು ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ನಾಟಕ ರಚನಾ ತಂತ್ರದಲ್ಲಿ ಕೆ.ವೈ. ನಾರಾಯಣಸ್ವಾಮಿ ಹೊಸತನ ಕಂಡುಕೊಂಡಿದ್ದು, ಭಾರತೀಯ ಅಸ್ಮಿತೆ ಅದರಲ್ಲಿ ಮಡುಗಟ್ಟಿದೆ. ಕಥಾವಸ್ತು ಹಳೆಯದಾದರೂ ಈಗಿನ ಕಾಲಕ್ಕೆ ಸ್ಪಂದಿಸುತ್ತಿದೆ' ಎಂದು ವಿಶ್ಲೇಷಿಸಿದರು.

`ಹವ್ಯಾಸಿ ರಂಗ ಚಳವಳಿ ಗುಳೆ ಹೊರಟ ಕಾಲ ಇದು. ಹೊಸ ಕಲಾವಿದರನ್ನು ನಂಬುವುದೇ ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ನಿರ್ದೇಶಕ ಪ್ರಕಾಶ ಶೆಟ್ಟಿ 60 ಜನ ಕಲಾವಿದರನ್ನು ಒಟ್ಟುಗೂಡಿಸಿ ಮಾಡಿದ ಸಾಹಸ ದೊಡ್ಡದು' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಪ್ರಭುತ್ವದ ವಿರುದ್ಧ ಮುಗ್ದರನ್ನು ತಂದು ನಿಲ್ಲಿಸುವಲ್ಲಿ ನಾಟಕ ಯಶಸ್ವಿಯಾಗಿದೆ' ಎಂದ ಅವರು, `ಶಾಕುಂತಲ ಉಂಗುರ ಕಳೆದುಕೊಂಡ ಮಾತ್ರಕ್ಕೆ ದುಷ್ಯಂತನಿಗೆ ಅವಳ ನೆನಪು ಬಾರದ ಘಟನೆ ಬಲು ವಿಚಿತ್ರವಾಗಿದೆ' ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, `ಪ್ರತಿಭೆಗಳನ್ನು ಅಪವ್ಯಾಖ್ಯಾನ ಮಾಡುವ ಕೆಲಸ ಮೊದಲಿನಿಂದಲೂ ನಡೆದಿದೆ. ಕಾಳಿದಾಸ ತಾನು ಕುಳಿತ ರೆಂಬೆಯನ್ನೇ ಕಡಿಯುತ್ತಿದ್ದ. ಕಾಳಿಮಾತೆ ಅವನ ನಾಲಿಗೆ ಮೇಲೆ ಬರೆದ ಬಳಿಕ ಆತ ಮಹಾಕವಿಯಾದ ಎನ್ನುವುದೆಲ್ಲ ವೈದಿಕ ದೃಷ್ಟಿಕೋನದಿಂದ ಹೆಣೆದ ಕಲ್ಪಿತ ಕಥೆಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಕಾಳಿದಾಸನ ಬದುಕು ಮತ್ತು ಬರಹಗಳ ಅನ್ವೇಷಣೆ ನಾಟಕದಲ್ಲಿ ಎದ್ದು ಕಾಣುತ್ತದೆ. ಹೆಣ್ತನವನ್ನು ಗೌರವದಿಂದ ಕಂಡಿರುವುದು ಈ ಕೃತಿಯ ಹೆಗ್ಗಳಿಕೆಯಾಗಿದೆ' ಎಂದು ಹೇಳಿದರು.

`ರಂಗ ತಂತ್ರಗಳನ್ನೇ ಪ್ರಶ್ನಿಸಲು ಹೋದರೆ ಯಾವುದೇ ನಾಟಕವನ್ನು ಪ್ರಯೋಗಕ್ಕೆ ತರಲು ಸಾಧ್ಯವಿಲ್ಲ' ಎಂದು ನಾಟಕ ತಂತ್ರದ ಕುರಿತು ಆಕ್ಷೇಪ ಎತ್ತಿದ ರಂಗ ವಿಮರ್ಶಕ ಪ್ರದೀಪ್ ಮಾಲ್ಗುಡಿ ಅವರ ಟೀಕೆಗೆ ಸಿದ್ದರಾಮಯ್ಯ ಉತ್ತರ ನೀಡಿದರು.

ಮತ್ತೊಬ್ಬ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, `ಎಲ್ಲವನ್ನೂ ಕೂದಲು ಸೀಳಿ ನೋಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಅತಿಯಾಗಿದೆ. ನಾಟಕದ ಬಗೆಗೆ ವಿನಾಕಾರಣ ಟೀಕೆ ಮಾಡದೆ ಆ ಅದ್ಭುತ ದೃಶ್ಯ ರೂಪಕವನ್ನು ಆಸ್ವಾದಿಸಬೇಕು' ಎಂದು ಸಲಹೆ ನೀಡಿದರು.

`ಕಾವ್ಯಮಯವಾದ ಈ ನಾಟಕ ಕವಿಗೆ ತಕ್ಕ ಗೌರವ ಸಲ್ಲಿಸಿದೆ. ಇಂತಹ ಮರುಸೃಷ್ಟಿಗಳು ಮೂಲಸೃಷ್ಟಿಯಲ್ಲಿ ಎತ್ತಿದ ಪ್ರಶ್ನೆಗಳಿಗೆ ಉತ್ತರವಾಗಲಿವೆ' ಎಂದು ಪ್ರತಿಪಾದಿಸಿದರು.

`ಹೊಸ ನಾಟಕ ಕೃತಿ ಕುರಿತಂತೆ ಹಿಂದಿನಂತೆ ಈಗ ಚರ್ಚೆಗಳೇ ನಡೆಯುತ್ತಿಲ್ಲ' ಎಂದು ನಾಟಕದ ಕರ್ತೃ ಕೆ.ವೈ. ನಾರಾಯಣಸ್ವಾಮಿ ಹೇಳಿದರು. `ಶಾಕುಂತಲ ಬೆರಳಿನಿಂದ ಜಾರಿದ ಉಂಗುರ ಮೀನಿನ ಬಾಯಿಗೆ ಸೇರದೆ ಕರಗಿ ಹೋಯಿತು ಎನ್ನುವ ಜಾನಪದ ಹಾಡೇ ನನ್ನ ಈ ನಾಟಕಕ್ಕೆ ಪ್ರೇರಣೆ' ಎಂದು ಹೇಳಿದರು. ನಿರ್ದೇಶಕ ಪ್ರಕಾಶ ಶೆಟ್ಟಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT