ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆನೋಟ

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕೆಡಿಪಿ ಸಭೆ ಎಂಬ ಜಾತ್ರೆ
ಕಲಬುರ್ಗಿ:
ಅದು ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆ. ಬಹುಪಾಲು ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಇನ್ನು ಕೆಲವರು ತಮ್ಮ ಕೆಳ ಹಂತದ ಸಿಬ್ಬಂದಿಯನ್ನು ಕಳಿಸಿದ್ದರು. ಬಂದವರೂ ಸರಿಯಾಗಿ ಮಾಹಿತಿ ನೀಡಲಿಲ್ಲ. ಒಬ್ಬ ಅಧಿಕಾರಿ ‘ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಕೆಡಿಪಿ ಸಭೆಗೆ ಮಾಹಿತಿ ನೀಡಿದ್ದೇವೆ. ಈ ಸಭೆಗೆ ನೀಡಿಲ್ಲ’ ಎಂದು ಉತ್ತರಿಸಿದರು. ಇದರಿಂದ ಕೆರಳಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಅವರು, ‘ಇದು ಕೆಡಿಪಿ ಸಭೆ ಅಲ್ವಾ? ಈ ಸಭೆ ಏನು ಜಾತ್ರೆನಾ’ ಎಂದು ಪ್ರಶ್ನಿಸಿದರು.

ನಿಗಮ–ಮಂಡಳಿಗಳು, ಸರ್ಕಾರಿ ಇಲಾಖೆಗಳು ಸೇರಿದಂತೆ ವಿಷಯ ಪಟ್ಟಿಯಲ್ಲಿ 45 ಅಂಶಗಳಿದ್ದವು. ಒಂದೇ ದಿನ ಇಷ್ಟೊಂದು ಯೋಜನೆಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲು ಸಾಧ್ಯವೇ? ಅಧಿಕಾರಿಗಳೂ ಅಷ್ಟೆ. ಕೆಲವರು ಅರ್ಜಿ ನಮೂನೆಗಳನ್ನೂ ಸರಿಯಾಗಿ ಭರ್ತಿ ಮಾಡಿರಲಿಲ್ಲ. ಅರ್ಥವಾಗದ ಅಂಕಿ–ಅಂಶಗಳ ಲೆಕ್ಕ ಒಪ್ಪಿಸಿ ಮೌನಕ್ಕೆ ಶರಣಾಗುತ್ತಿದ್ದರು. ‘ಅಂಗೈ ತೋರಿಸಿ ಏಕೆ ಅವಲಕ್ಷಣಕ್ಕೆ ಒಳಗಾಗಬೇಕು’ ಎಂಬ ಜಾಣ ನಡೆ ಅವರದ್ದಾಗಿತ್ತು.

ಇನ್ನು ವೇದಿಕೆಯಲ್ಲಿದ್ದ ಸ್ಥಾಯಿ ಸಮಿತಿಯ ಅಧ್ಯಕ್ಷೆಗೆ ಸಭಾಂಗಣದಲ್ಲಿ ಕುಳಿತಿದ್ದ ಅವರ ಪತಿ ಪದೇ ಪದೇ ಮೊಬೈಲ್‌ ಕರೆ ಮಾಡಿ ಪ್ರಶ್ನೆ ಕೇಳಲು ‘ಮಾರ್ಗದರ್ಶನ’ ಮಾಡುತ್ತಿದ್ದರು; ಅವರು ‘ಗಿಳಿಪಾಠ’ ಒಪ್ಪಿಸುತ್ತಿದ್ದರು! ಸಭಾ ಗಾಂಭೀರ್ಯವೇ ಅಲ್ಲಿರಲಿಲ್ಲ. ಸ್ವತಃ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಮೊಬೈಲ್‌ ಫೋನ್‌ ಕೈಯಲ್ಲಿ ಹಿಡಿದುಕೊಂಡು ವೇದಿಕೆಯಿಂದ ಓಡಿ ಹೋಗಿ ಕರೆ ಸ್ವೀಕರಿಸುತ್ತಿದ್ದರು. ಹೀಗಾಗಿ ಈ ಸಭೆ ಅಕ್ಷರಶಃ ಜಾತ್ರೆಯಂತೆಯೇ ಭಾಸವಾಯಿತು!

ನಂದಿನಿ ಹಾಲಿಗೆ ರೂ 15!
ಬೆಂಗಳೂರು: ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಜೋರಾಗಿ ನಡೆದಿತ್ತು. ‘ನಗರದ ಅನೇಕ ನೀರಿನ ಸಂಸ್ಕರಣಾ ಘಟಕಗಳು ಕಲುಷಿತ ನೀರನ್ನು ಪೂರೈಕೆ ಮಾಡುತ್ತಿವೆ’ ಎಂದು ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌ ಆರೋಪಿಸಿದರು.

ಆಗ ಎದ್ದು ನಿಂತ ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ, ‘ಒಂದು ಲೀಟರ್‌ ನಂದಿನಿ ಹಾಲಿನ ಬೆಲೆ ರೂ 15. ಈಗ ಹಾಲಿಗಿಂತ ನೀರೇ ದುಬಾರಿ ಆಗಿದೆ’ ಎಂದರು. ಮಹಿಳಾ ಸದಸ್ಯರೆಲ್ಲ ಒಟ್ಟಾಗಿ ‘ಹೋ’ ಎಂದು ಕೂಗಿ ‘ಯಾವ ಡೇರಿಯಲ್ಲಿ ಈ ಬೆಲೆ ಅಣ್ಣಾ. ‌ನಮಗೂ ರೂ 15ಕ್ಕೆ ಹಾಲು ಕೊಡಿಸಣ್ಣ’ ಎಂದು ವಿನಂತಿಸಿದರು.

‘ಪದ್ಮನಾಭ ರೆಡ್ಡಿ ಅವರ ಮನೆಯಲ್ಲಿ ಪತ್ನಿಯೇ ಎಲ್ಲವನ್ನೂ ನಿರ್ವಹಣೆ ಮಾಡುತ್ತಾರೆ. ಅವರಿಗೆ ಮನೆಯ ತಲೆ ಬಿಸಿ ಇಲ್ಲ. ಹಾಗಾಗಿ ಬೆಲೆ ಗೊತ್ತಿಲ್ಲ’ ಎಂದು ರಮೇಶ್‌ ಸಮಜಾಯಿಷಿ ನೀಡಿದರು. ಮಹಿಳಾ ಸದಸ್ಯರು, ‘ನಂದಿನಿ ಹಾಲಿನ ಬೆಲೆ ರೂ 30 ದಾಟಿದೆ’ ಎಂದೂ ನೆನಪಿಸಿದರು. ಆಗ ತಬ್ಬಿಬ್ಬಾಗುವ ಸರದಿ ಪದ್ಮನಾಭ ರೆಡ್ಡಿ ಅವರದ್ದು.

ಸಚಿವರ ಮೇಲೆ ಅಂತರಂಗದ ಪ್ರೀತಿ!
ವಿಜಯಪುರ: ಆಡಳಿತಾರೂಢ ಕಾಂಗ್ರೆಸ್‌ನ ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಉತ್ತರ ಕರ್ನಾಟಕದ ಅಭಿವೃದ್ಧಿ ಪರ ಪ್ರತ್ಯೇಕ ರಾಜ್ಯಕ್ಕಾಗಿ ತಮ್ಮದೇ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ.

ಪತ್ರಿಕಾಗೋಷ್ಠಿಗಳಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವಾಗ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ವಿರುದ್ಧವೂ ಗರಂ ಆಗುತ್ತಾರೆ. ‘ನೀರಾವರಿ ಸೌಲಭ್ಯ ಒದಗಿಸಲು ವಿಫಲರಾಗಿರುವ ಜಲಸಂಪನ್ಮೂಲ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತೀರಾ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರೆ ಮಾತ್ರ, ಶಾಸಕರ ಪ್ರತಿಕ್ರಿಯೆಯ ವರಸೆ ತಕ್ಷಣವೇ ಬದಲಾಗುತ್ತದೆ.

‘ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಂ.ಬಿ.ಪಾಟೀಲ ನನಗೆ ಆತ್ಮೀಯರು. ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ನಾನು ಪಾಟೀಲರ ಪರ ಎಐಸಿಸಿಗೆ ಪತ್ರ ಕೊಡುವುದರ ಜತೆಗೆ ಖುದ್ದು ಭೇಟಿ ಮಾಡಿ ಹೇಳಿದ್ದೆ. ಅವರೂ ಅಷ್ಟೆ. ನನಗೆ ಸಚಿವ ಸ್ಥಾನ ನೀಡಲು ಬೆಂಬಲ ನೀಡಿದ್ದರು. ಸಚಿವರು ನೀರಾವರಿ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ದಾರಿ ತಪ್ಪುತ್ತಿದ್ದಾರೆ. ಆದರೂ ಉಳಿದ ಮೂರು ವರ್ಷವೂ ಪಾಟೀಲರು ಜಲಸಂಪನ್ಮೂಲ ಸಚಿವರಾಗಿಯೇ ಮುಂದುವರಿಯಬೇಕು ಎಂದು ಬಯಸುವವರಲ್ಲಿ ನಾನೂ ಒಬ್ಬ’ ಎಂದು ತಮ್ಮ ಅಂತರಂಗದ ಪ್ರೀತಿಯನ್ನು ಹೊರಹಾಕುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಅಂತರಂಗದ ಪ್ರೀತಿ ಹೊಂದಿರುವವರು ಇವರೊಬ್ಬರೇ ಅಲ್ಲ. ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರೂ ಇದೇ ಒಲವನ್ನು ಹೊಂದಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT