ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಮಂಡಳಿಗೆ ಏನಾಗಿದೆ?

Last Updated 22 ಮೇ 2016, 19:30 IST
ಅಕ್ಷರ ಗಾತ್ರ

ವೆಸ್ಟ್ ಇಂಡೀಸ್‌ ಕ್ರಿಕೆಟ್ ಮಂಡಳಿಯ ಆವಾಂತರಕ್ಕೆ ಕೊನೆಯೇ ಇಲ್ಲವೇನೋ? ಒಂದು ಮಂಡಳಿ ಆಯಾ ದೇಶದ ಕ್ರಿಕೆಟ್‌ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿಭಾನ್ವಿತ ಆಟಗಾರರನ್ನು ಹುಡುಕಿ ದೇಶದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ವೇದಿಕೆಯಾಗಬೇಕು. ಆದರೆ ವಿಂಡೀಸ್‌ ಮಂಡಳಿಗೆ ಇದೆಲ್ಲ ಬೇಕಾಗಿಯೇ ಇಲ್ಲವೆನಿಸುತ್ತಿದೆ.

ಇತ್ತೀಚಿನ ಎರಡು ಮೂರು ತಿಂಗಳಲ್ಲಿ ಆದ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಮಾರ್ಚ್‌ನಲ್ಲಿ ಭಾರತದಲ್ಲಿ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಕೆರಿಬಿಯನ್ ನಾಡಿನ ಪುರುಷರ ಮತ್ತು ಮಹಿಳಾ ತಂಡಗಳು ಚಾಂಪಿಯನ್ ಆದವು. ಇದೇ ವರ್ಷದ ಜನವರಿಯಲ್ಲಿ  ಜೂನಿಯರ್‌ ವಿಶ್ವಕಪ್‌ನಲ್ಲಿಯೂ ವಿಂಡೀಸ್‌ ಆಟಗಾರರು ಪ್ರಶಸ್ತಿ ಗೆದ್ದರು. ಒಂದೇ ವರ್ಷದಲ್ಲಿ ಮೂರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಅಪರೂಪದ ಸಾಧನೆಯನ್ನು ವಿಂಡೀಸ್‌ ತಂಡ ಮಾಡಿತು. ಆದರೂ ಆಟಗಾರರು ಮತ್ತು ಆಟಗಾರ್ತಿಯರಿಗೆ ಸಿಕ್ಕಿದ್ದು ಟೀಕೆಗಳ ಬಹುಮಾನ.

ಕೋಲ್ಕತ್ತದ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಚುಟುಕು ಟೂರ್ನಿಯ ಫೈನಲ್‌ ಪಂದ್ಯದ ಸಂಭ್ರಮ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ವಿಂಡೀಸ್‌ ತಂಡಗಳು ಚಾಂಪಿಯನ್‌ ಆಗುತ್ತಿದ್ದಂತೆ ಭಾರತದ ಅಭಿಮಾನಿಗಳು ನಮ್ಮ ದೇಶವೇ ಪ್ರಶಸ್ತಿ ಗೆದ್ದಷ್ಟು ಖುಷಿಪಟ್ಟರು. ಕ್ರೀಡಾಂಗಣದ ಸುತ್ತಲೂ ಬಾಣಬಿರುಸುಗಳ ಚಿತ್ತಾರ ಹರಿಸಿದರು.

ಮಂಡಳಿಯ ಒಳಗಿನ ಅರಾಜಕತೆ ಹಾಗೂ ಆಂತರಿಕ ಕಚ್ಚಾಟದಿಂದ ವಿಂಡೀಸ್‌ ಆಟಗಾರರು ಹತಾಶರಾಗಿ ಹೋಗಿದ್ದರು. ಅವರಿಗೆ ಭಾರತದಲ್ಲಿ ಸಿಕ್ಕ ಈ ಅಭೂತಪೂರ್ವ ಗೆಲುವು ದೊಡ್ಡ ವಿಶ್ವಾಸವನ್ನೇ ತುಂಬಿತ್ತು. ವಿಂಡೀಸ್ ಆಟಗಾರರ ಜೊತೆ ನಮ್ಮವರಿಗೆ ಕ್ರಿಕೆಟ್‌ ನಂಟಿನ ಜೊತೆಗೆ ಭಾವನಾತ್ಮಕ ಬೆಸುಗೆಯೂ ಇದೆ. ಐಪಿಎಲ್‌ನಲ್ಲಿ ಆಡಿರುವ ಕ್ರಿಸ್‌ ಗೇಲ್‌, ಡ್ವೇನ್‌ ಬ್ರಾವೊ, ಡರೆನ್ ಸ್ಯಾಮಿ, ಕಾರ್ಲೊಸ್‌ ಬ್ರಾಥ್‌ವೈಟ್‌, ಲೆಂಡ್ಲ್‌ ಸಿಮನ್ಸ್‌, ಮರ್ಲಾನ್ ಸ್ಯಾಮುಯೆಲ್ಸ್‌, ಆ್ಯಂಡ್ರೆ ರಸೆಲ್‌, ಕೀರನ್‌ ಪೊಲಾರ್ಡ್‌, ಸುನಿಲ್ ನಾರಾಯಣ್‌, ಟಿನೊ ಬಿಸ್ಟ್‌, ಡ್ವೇನ್‌ ಸ್ಮಿತ್‌ ಇವರೆಲ್ಲರೂ ಭಾರತದ ಆಟಗಾರರೇನೊ ಎನ್ನುವಂತೆ ಆಗಿಬಿಟ್ಟಿದ್ದಾರೆ. ಐಪಿಎಲ್‌ನ ವಿವಿಧ ಫ್ರಾಂಚೈಸ್‌ಗಳು ‘ನಮ್ಮೂರ ಹುಡುಗರು’ ಎನ್ನುವಂತೆ ನೋಡಿಕೊಳ್ಳುತ್ತಾರೆ.

ಆದ್ದರಿಂದ ಕ್ರಿಕೆಟ್‌ ಅನ್ನು ಧರ್ಮ ಎಂದು ಪೂಜಿಸುವ ಭಾರತದಲ್ಲಿ ಗೇಲ್‌ ಹೀರೋ ಆಗಿಬಿಟ್ಟಿದ್ದಾರೆ. ವಿಂಡೀಸ್ ಆಟಗಾರರು ಕ್ರೀಡಾಂಗಣದಲ್ಲಿರಲಿ ಅಥವಾ ಹೊರಗಡೆ ಸುತ್ತಾಡುತ್ತಿರಲಿ ಭಾರತದ ಅಭಿಮಾನಿಗಳು ಮುಗಿಬೀಳುತ್ತಾರೆ. ಅವರೊಂದಿಗೆ ಆಟೋಗ್ರಾಫ್‌ ಹಾಗೂ ಫೋಟೊಗ್ರಾಫ್‌ಗೆ ಗಂಟೆಗಟ್ಟಲೇ ಕಾಯುತ್ತಾರೆ.

ಆದರೆ ಇದೆಂಥ ದುರ್ದೈವ ನೋಡಿ. ವಿಂಡೀಸ್‌ ಆಟಗಾರರು ವಿಶ್ವವಿಖ್ಯಾತಿ ಹೊಂದಿದ್ದರೂ ತಮ್ಮ ದೇಶದ ಕ್ರಿಕೆಟ್‌ ಮಂಡಳಿಗೆ ‘ಹೊರಗಿನವರು’. ಎಡಗೈ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌, ಆಲ್‌ರೌಂಡರ್‌ಗಳಾದ ಡರೆನ್‌ ಸ್ಯಾಮಿ ಮತ್ತು ಡ್ವೇನ್‌ ಬ್ರಾವೊ ಅವರನ್ನು ಅಲ್ಲಿನ ಮಂಡಳಿ ಗಂಭೀರವಾಗಿ ಪರಿಣಿಸಿಯೇ ಇಲ್ಲ. ಗೇಲ್‌ ಮತ್ತು ವಿಂಡೀಸ್‌ ಮಂಡಳಿ ನಡುವೆ ಅನೇಕ ವರ್ಷಗಳಿಂದ ತಿಕ್ಕಾಟ ನಡೆ ಯುತ್ತಲೇ ಇದೆ. ಅದು ಬೇರೆ ಮಾತು. ಮಹತ್ವದ ಟೂರ್ನಿಗಳಿಗೆ ಈ ಪ್ರತಿಭಾನ್ವಿತ ಆಟಗಾರರನ್ನು ಹೊರಗಿಟ್ಟು ಮಂಡಳಿ ಹಿಂದಿನ ದ್ವೇಷವನ್ನು ಮುಂದುವರಿಸುತ್ತಿದೆ. ಜೂನ್‌ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್ ನಡುವೆ ನಡೆಯಲಿರುವ ತ್ರಿಕೋನ ಏಕದಿನ ಸರಣಿಗೆ ಈ ಆಟಗಾರರನ್ನು ತಂಡಕ್ಕೆ ಆಯ್ಕೆಯೇ ಮಾಡಿಲ್ಲ!

ಆಟಗಾರರು ಮತ್ತು ಆಯಾ ದೇಶದ ಕ್ರಿಕೆಟ್ ಮಂಡಳಿಗಳ ನಡುವಣ ಮನಸ್ತಾಪ, ಒಣಕಚ್ಚಾಟ ಇದೇ ಮೊದಲೇನಲ್ಲ. ವಿಂಡೀಸ್‌ ಮಂಡಳಿ ವಿಚಾರದಲ್ಲಿಯಂತೂ ಇದು ಅತ್ಯಂತ ಹಳೆಯ ವಿಷಯ. ಪಾಕಿಸ್ತಾನ, ಜಿಂಬಾಬ್ವೆ, ಶ್ರೀಲಂಕಾ ಮಂಡಳಿಗಳಲ್ಲಿ ವಿವಾದಗಳೆಲ್ಲಾ ಮಾಮೂಲಾಗಿ ಬಿಟ್ಟಿವೆ. ಅಷ್ಟೇ ಏಕೆ, ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಎನಿಸಿರುವ ಬಿಸಿಸಿಐ ಕೂಡ ಆಟಗಾರರ ಜೊತೆ ಸಂಘರ್ಷ ಎದುರಿಸಿದೆ.

ಬಿಸಿಸಿಐಗೆ ಸಡ್ಡು ಹೊಡೆದು 2007ರಲ್ಲಿ ನಡೆದ ಇಂಡಿಯನ್‌ ಕ್ರಿಕೆಟ್‌ ಲೀಗ್‌ ಭಾರತದಲ್ಲಿ ದೊಡ್ಡ ಕೋಲಾಹಲವನ್ನೇ ಉಂಟು ಮಾಡಿತ್ತು. ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್‌ ತಂದುಕೊಟ್ಟ ನಾಯಕ ಕಪಿಲ್‌ ದೇವ್‌ ಈ ಲೀಗ್‌ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದ ಕೆಂಡಾಮಂಡಲವಾಗಿದ್ದ ಭಾರತದ ಕ್ರಿಕೆಟ್‌ ಆಡಳಿತ ಐಸಿಎಲ್‌ನಲ್ಲಿ ಆಡಿದ್ದ ಕೆಲ ಆಟಗಾರರಿಗೆ ಹಲವು ವರ್ಷ ರಾಷ್ಟ್ರೀಯ ತಂಡದಲ್ಲಿ ಅವಕಾಶ ಕೊಡದೇ ಸೇಡು ತೀರಿಸಿಕೊಂಡಿತ್ತು. ಐಸಿಎಲ್‌ನಲ್ಲಿ  ರೋಹನ್ ಗಾವಸ್ಕರ್‌, ಮದನ್‌ ಲಾಲ್‌, ಅಂಬಟಿ ರಾಯುಡು, ಕರ್ನಾಟಕದ ಸ್ಟುವರ್ಟ್‌ ಬಿನ್ನಿ, ಈಗ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಸಂದೀಪ್‌ ಪಾಟೀಲ್‌  ಆಡಿದ್ದರು.

ಹಿಂದಿನ ಸಂಘರ್ಷವನ್ನು ಬಿಸಿಸಿಐ ಈಗಲೂ ಮುಂದುವರಿಸಿಕೊಂಡು ಹೋಗಿದ್ದರೆ ಭಾರತದಲ್ಲಿ ಅಂಬಟಿ ರಾಯುಡು ಮತ್ತು ಬಿನ್ನಿ ಅವರಂಥ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತಿತ್ತೇ?  ವಿಂಡೀಸ್‌ ಮಂಡಳಿ ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು. ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿರುವ ಗೇಲ್‌, ಬ್ರಾವೊ, ಸ್ಯಾಮಿ ಅವರನ್ನು ತಂಡದಿಂದ ಹೊರಗಿಟ್ಟು ವಿಂಡೀಸ್‌ ಮಂಡಳಿಯ ಆಯ್ಕೆ ಸಮಿತಿಯವರು ಸಾಧಿಸುತ್ತಿರುವುದಾರೂ ಏನನ್ನು? ಅಷ್ಟಕ್ಕೂ ತ್ರಿಕೋನ ಏಕದಿನ ಸರಣಿ ನಡೆಯುತ್ತಿರುವ ವಿಂಡೀಸ್‌ ನೆಲದಲ್ಲಿ.

ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಆಸ್ಟ್ರೇಲಿಯಾ ಮತ್ತು ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳು ವೆಸ್ಟ್‌ ಇಂಡೀಸ್‌ಗೆ ಬಂದು ಸರಣಿ ಆಡಲಿವೆ.

ಈ ಮಹತ್ವದ ಸರಣಿಗೆ ಪ್ರಮುಖ ಆಟಗಾರರು ಇಲ್ಲದೇ ಹೋದರೆ ವಿಂಡೀಸ್ ತಂಡದಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡುವುದಾದರೂ ಹೇಗೆ? ಆಟಗಾರರ ವಿಷಯದಲ್ಲಿ ವಿಂಡೀಸ್‌ ಆಡಳಿತ ಮೊದಲಿನಿಂದಲೂ ನಿರ್ಲಕ್ಷ್ಯ ತೋರುತ್ತಲೇ ಬಂದಿರುವುದು ಗುಟ್ಟಾಗಿ ಉಳಿದಿಲ್ಲ. 2014ರಲ್ಲಿ ವಿಂಡೀಸ್‌ ತಂಡ ಐದು ಪಂದ್ಯಗಳ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿತ್ತು.

ವಿವಾದ ಮತ್ತು ಮಂಡಳಿ ಜೊತೆಗಿನ ಕಲಹದ ನಡುವೆಯೇ ಮೊದಲ ಮೂರು ಪಂದ್ಯಗಳನ್ನು ಆಡಿತ್ತು. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ನಾಲ್ಕನೇ ಪಂದ್ಯದ ವೇಳೆ ಬಿಕ್ಕಟ್ಟು ಬಿಗಡಾಯಿಸಿದ್ದರಿಂದ ಆಟಗಾರರು ಸರಣಿ ಪೂರ್ಣಗೊಳಿಸದೇ ತವರಿಗೆ ತೆರಳಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಗ ಬಿಸಿಸಿಐ ವಿಂಡೀಸ್‌ ಮಂಡಳಿಯಿಂದ ದಂಡ ಕಟ್ಟಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಒಂದೂವರೆ ವರ್ಷದ ಬಳಿಕ ಈಗ ಈ ವಿವಾದವೆಲ್ಲವೂ ತಣ್ಣಗಾಗಿದೆ.

ವಿಶ್ವ  ಟೂರ್ನಿಯಲ್ಲಿ ವಿಂಡೀಸ್‌ ಜೂನಿಯರ್‌ ಮತ್ತು ಸೀನಿಯರ್‌ ತಂಡ ನೀಡಿದ ಅಪ್ರತಿಮ ಸಾಧನೆಯಿಂದ ಅಲ್ಲಿನ ಕ್ರಿಕೆಟ್‌ ಮಂಡಳಿಯ ಗೌರವವೂ ಹೆಚ್ಚಾಗಿದೆ. ಹಿಂದಿನ ಸಂಘರ್ಷವನ್ನೆಲ್ಲಾ ಮರೆತು ಆಟಗಾರರ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಂಡು ಹೋಗಿದ್ದರೆ ವಿಂಡೀಸ್‌ ಕೂಡ ಹಿಂದಿನ ಗತ ವೈಭವ ಮರಳಿ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು.

ಇದೆಲ್ಲವನ್ನೂ ಬಿಟ್ಟು ಅಲ್ಲಿನ ಮಂಡಳಿ ಈಗಲೂ ಸಂಘರ್ಷ ಮುಂದುವರಿಸುತ್ತಿದೆ. ಆದ್ದರಿಂದಲೇ ಗೇಲ್‌ ಆಕ್ರೋಶ ವ್ಯಕ್ತಪಡಿಸಿದ್ದು  ‘ಮಹತ್ವದ ಸರಣಿಗೆ ಪ್ರಮುಖ ಆಟಗಾರರನ್ನು ಹೊರಗಿಟ್ಟ ಮಂಡಳಿಯೇ ಭೇಷ್. ಇದೆಲ್ಲವೂ ವೆಸ್ಟ್‌ ಇಂಡೀಸ್‌ನಲ್ಲಿ ಮಾತ್ರ ಆಗಲು ಸಾಧ್ಯ’ ಎಂದು ಚಾಟಿ ಬೀಸಿದ್ದಾರೆ.

ಆಲ್‌ರೌಂಡರ್‌ ಬ್ರಾವೊ 2014ರಲ್ಲಿ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆಡಿದ್ದೇ ಕೊನೆಯದು. ಬಳಿಕ ಅವರಿಗೆ ರಾಷ್ಟ್ರೀಯ ಏಕದಿನ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಹೋದ ವರ್ಷದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಸರಣಿಯಲ್ಲಿ ಗೇಲ್‌ ಕೊನೆಯ ಬಾರಿಗೆ ಆಡಿದ್ದರು. ಬಲಗೈ ಬ್ಯಾಟ್ಸ್‌ಮನ್‌ ಮತ್ತು ಬಲಗೈ ವೇಗದ ಬೌಲರ್‌ ಆಗಿರುವ ಸ್ಯಾಮಿ ಕೂಡ ಹೋದ ವರ್ಷ ಕೊನೆಯ ಸರಣಿ ಆಡಿದ್ದರು. 

ಲೀಗ್‌ ಹೀರೊಗಳು, ಮಂಡಳಿಗೆ ಖಳನಾಯಕರು
ಸ್ಫೋಟಕ ಬ್ಯಾಟ್ಸ್‌ಮನ್‌ ಗೇಲ್‌ ಅವರಲ್ಲಿನ ನಿಜವಾದ ಸಾಮರ್ಥ್ಯ ಬೆಳಕಿಗೆ ಬಂದಿದ್ದೇ ಐಪಿಎಲ್‌ ಮೂಲಕ. ವೇಗವಾಗಿ ರನ್ ಹಾಕುವ ಛಾತಿ, ಅರ್ಧಶತಕ  ಹಾಗೂ ಶತಕ ಗಳಿಸಿದಾಗ ಅವರು ಮಾಡುವ ಭಾವ ಭಂಗಿ ಹಾಗೂ ನೃತ್ಯ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಆರ್‌ಸಿಬಿ ತಂಡ ಸೇರಿದ ಬಳಿಕವಂತೂ ಗೇಲ್‌ ಆಟ ನೋಡಲು ಪ್ರತಿಯೊಬ್ಬರೂ ಮುಗಿ ಬೀಳುತ್ತಿದ್ದಾರೆ.

ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಮೂರೂ ಮಾದರಿಗಳಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯನ್ನು ಗೇಲ್‌ ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎನ್ನುವ ದಾಖಲೆಯೂ ಇವರ ಹೆಸರಿನಲ್ಲಿದೆ. ಟ್ವೆಂಟಿ–20 ಮಾದರಿಯಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ನಡೆದ್ದಿ ಪುಣೆ ವಾರಿಯರ್ಸ್‌ ವಿರುದ್ಧದ

ಐಪಿಎಲ್‌ ಪಂದ್ಯದಲ್ಲಿ ರನ್ ಮಳೆ ಸುರಿಸಿದ್ದ ಗೇಲ್‌ ಔಟಾಗದೆ 175 ರನ್ ಗಳಿಸಿದ್ದರು. ಮೇ 20ರ ಅಂತ್ಯಕ್ಕೆ ಒಟ್ಟು 89 ಐಪಿಎಲ್‌ ಪಂದ್ಯಗಳನ್ನು ಆಡಿರುವ ಗೇಲ್‌ 3340 ರನ್ ಗಳಿಸಿದ್ದಾರೆ. 19 ಅರ್ಧಶತಕ ಮತ್ತು ಐದು ಶತಕಗಳನ್ನೂ ಬಾರಿಸಿದ್ದಾರೆ. ಐಪಿಎಲ್‌ ಅಷ್ಟೇ ಅಲ್ಲದೆ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌, ಪಾಕಿಸ್ತಾನ ಸೂಪರ್‌ ಲೀಗ್‌, ಬಿಗ್‌ಬ್ಯಾಷ್‌ ಲೀಗ್‌ಗಳಲ್ಲಿಯೂ ಗೇಲ್‌ ಅಚ್ಚುಮೆಚ್ಚಿನ ಆಟಗಾರ.

ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳಲ್ಲಿದ್ದ ಡ್ವೇನ್ ಬ್ರಾವೊ ಈಗ ಗುಜರಾತ್‌ ಲಯನ್ಸ್‌ನಲ್ಲಿದ್ದಾರೆ. 2012ರ ಐಪಿಎಲ್ ಟೂರ್ನಿಯ ವೇಳೆ ಸೂಪರ್‌ಕಿಂಗ್ಸ್‌ನಲ್ಲಿ ಅವರು ಒಟ್ಟು 461 ರನ್‌ ಗಳಿಸಿದ್ದರು. ಹೋದ ವರ್ಷ ಕೂಡ ಒಟ್ಟು 26 ವಿಕೆಟ್‌ಗಳನ್ನು ಕಬಳಿಸಿ ‘ಪರ್ಪಲ್‌ ಕ್ಯಾಪ್‌’ ಪಡೆದಿದ್ದರು. ಟೂರ್ನಿಯಲ್ಲಿ ಎರಡು ಸಲ ಈ ಸಾಧನೆ ಮಾಡಿದ ಏಕೈಕ ಆಟಗಾರ ಬ್ರಾವೊ.

ಸನ್‌ರೈಸರ್ಸ್‌ ಹೈದರಾಬಾದ್‌, ವಿಂಡ್‌ವಾರ್ಡ್‌ ಐಸ್ಲಾಂಡ್ಸ್‌, ಹೊಬಾರ್ಟ್‌ ಹರಿಕೇನ್ಸ್‌, ಆರ್‌ಸಿಬಿ ಮತ್ತು ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡಗಳಲ್ಲಿ ಮಿಂಚಿರುವ ಡರೆನ್‌ ಸ್ಯಾಮಿ ಚುಟುಕು ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ಈ ಮೂವರು ಆಟಗಾರರು ಐಪಿಎಲ್‌ನಷ್ಟೇ ಅಲ್ಲದೆ ವಿದೇಶಿ ಲೀಗ್‌ಗಳಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.ಆದರೆ ’ಲೀಗ್‌ನ ಈ ಹೀರೊಗಳು’ ವಿಂಡೀಸ್‌ ಮಂಡಳಿ ಪಾಲಿಗೆ ‘ಖಳನಾಯಕರಂತೆ’ ಗೋಚರಿಸುತ್ತಿರುವುದು ಮಾತ್ರ ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT