ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಂಬನೆಯಲ್ಲಿ ಸಮಕಾಲೀನ ವಿಚಾರ ವಿಮರ್ಶೆ

‘ಬೀಚಿ ಶತಮಾನೋತ್ಸವ’ದಲ್ಲಿ ಡಾ.ಬಿ.ರಾಜಶೇಖರಪ್ಪ ಅಭಿಮತ
Last Updated 11 ಜುಲೈ 2014, 10:57 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬೀಚಿ ಅವರ ಸಾಹಿತ್ಯ ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗದೇ, ಸಮಕಾಲೀನ ವಿಚಾರಗಳ ಬಗ್ಗೆ ವಿಮರ್ಶಿಸುವ ಸಮಾಜವನ್ನು ತಿದ್ದುವಂತಹ ವಿಡಂಬನಾ ಸಾಹಿತ್ಯವಾಗಿ ಜನರನ್ನು ತಲುಪುತ್ತಿತ್ತು’ ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅಭಿಪ್ರಾಯ ಪಟ್ಟರು.

ನಗರದ ಕ್ರೀಡಾ ಸಂಕೀರ್ಣ ಭವನದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ‘ಬೀಚಿ ಅವರ ಜನ್ಮಶತಮಾನೋತ್ಸವ’ದ ಅಂಗವಾಗಿ ಆಯೋಜಿಸಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನಪ್ರಿಯ ಕಾದಂಬರಿಗಳ ಮೂಲಕ ಅನಕೃ ಅವರಂಥವರು ಅಡುಗೆ ಮನೆಗೂ ಸಾಹಿತ್ಯ ಕೊಂಡೊಯ್ದರು. ಅಂಥ ಕಾದಂಬರಿಗಳ ಬಿರುಗಾಳಿಯಲ್ಲಿ ಬೀಚಿ ಅವರು ತಮ್ಮ ಹಾಸ್ಯ ಸಾಹಿತ್ಯವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದರು. ಬೀಚಿ ಅವರ ಸಾಹಿತ್ಯ ಆ ಕಾಲ ಘಟ್ಟದಲ್ಲಿ ಇವತ್ತಿನ ಟಿವಿ ಧಾರವಾಹಿಗಳಷ್ಟೇ ಆಕರ್ಷಕವಾಗಿ ಜನರನ್ನು ಸೆಳೆದಿತ್ತು’ ಎಂದು ಬೀಚಿ ಬರಹಗಳ  ಜನಪ್ರಿಯತೆಯನ್ನು ರಾಜಶೇಖರಪ್ಪ ಬಣ್ಣಿಸಿದರು.

‘ಬೀಚಿ ಅವರು ಮನರಂಜನೆಗಾಗಿ ಸಾಹಿತ್ಯ ಬರೆಯಲಿಲ್ಲ. ರಂಜನೆ ಎನ್ನುವುದು ಬಹಳ ದಿನ ಜನಮಾನಸದಲ್ಲಿ ಉಳಿಯುವುದಿಲ್ಲ ಎಂಬ ಅರಿವು ಅವರಿಗಿತ್ತು. ಹಾಗಾಗಿಯೇ ಸಾಹಿತ್ಯದಲ್ಲಿ ಹಾಸ್ಯ ವಿಡಂಬನೆ ಬೆರೆಸಿ, ಅದರಲ್ಲಿ ಸಮಾಜದ ಸಮಕಾಲೀನ ವಿಚಾರವನ್ನು ನಿರ್ದಾಕ್ಷಿಣ್ಯವಾಗಿ ವಿಮರ್ಶೆಗೆ ಒಳಪಡಿಸುತ್ತಿದ್ದರು. ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಾಗುತ್ತಿದ್ದ ವ್ಯತ್ಯಾಸಗಳನ್ನು ಸಾಹಿತ್ಯದಲ್ಲಿ ಕಟುವಾಗಿ ಟೀಕಿಸುತ್ತಿದ್ದರು. ಆ ಕಾರಣದಿಂದಲೇ ಬೀಚಿ ಅವರನ್ನು ನಾವು ಇವತ್ತಿಗೂ ಸ್ಮರಿಸುತ್ತೇವೆ. ಅವರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಬೀಚಿ ಅವರು ಅಂದು ಬರೆದಿಟ್ಟ ತಿಮ್ಮನ ತಲೆ, ಬೆಳ್ಳಿ ತಿಮ್ಮ  ಹೆಸರಿನ ಕೃತಿಗಳು ಇವತ್ತಿಗೂ ಜನಪ್ರಿಯ. ‘ಬೆಂಗಳೂರು ಬಸ್, ಖಾದಿ ಸೀರೆ ’ಯಂತಹ ಕಾದಂಬರಿಗಳಲ್ಲಿ ಸಮಕಾಲೀನ ಸಾಮಾಜಿಕ ಪರಿಸರ, ರಾಜಕೀಯದ ಏರಿಳಿತಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ’ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಸ್ಪೇನ್ ಬರಹಗಾರ ಸರ್ವಾಂಟೀಸ್, ತನ್ನ ಬರಹಗಳಲ್ಲಿ ‘ಡಾನ್ ಕ್ವಿಕ್ಸೋಟ್’ ಎಂಬ ಒಂದು ಅವಿಸ್ಮರಣೀಯ ಪಾತ್ರವನ್ನು ಸೃಷ್ಟಿಸಿದ್ದರು. ಅದೇ ರೀತಿ ಬೀಚಿ ಅವರು ‘ತಿಮ್ಮ’ ಎಂಬ ಪಾತ್ರವನ್ನು ಸೃಷ್ಟಿಸುವ ಮೂಲಕ ‘ಕನ್ನಡ ಸಾಹಿತ್ಯದ ಸರ್ವಾಂಟೀಸ್’ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬರಹಗಾರ ಸಮಾಜದ ಶಸ್ತ್ರ ಚಿಕಿತ್ಸಕ (ರೈಟರ್ ಈಸ್ ಎ ಸರ್ಜನ್ ಆಫ್ ದ ಸೊಸೈಟಿ) ಎಂಬ ಇಂಗ್ಲಿಷ್ ಮಾತಿನಂತೆ ಬೀಚಿ ಅವರನ್ನು ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕು ತಿದ್ದುವಂತಹ ಶಸ್ತ್ರಚಿಕಿತ್ಸಕ’ ಎಂದು ಮಾಲತಿಪಟ್ಟಣಶೆಟ್ಟಿ ವರ್ಣಿಸಿದರು.


‘ಬೀಚಿ ಬಳ್ಳಾರಿಯವರು. ಅವರ ಜನ್ಮ ಶತಮಾನೋತ್ಸವವನ್ನು ಬಳ್ಳಾರಿಯಲ್ಲೇ ಆಚರಿಸಬೇಕಿತ್ತು. ಅಲ್ಲಿ ಅಕಾಡೆಮಿಯ ಸದಸ್ಯರು ಇಲ್ಲದಿದ್ದರಿಂದ ಪಕ್ಕದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ಜಿಲ್ಲಾ ಸಾಹಿತ್ಯ ವಲಯದಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ’ ಎಂದು ಶ್ಲಾಘಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಜಿ.ಶರಣಪ್ಪ ಆಶಯ ನುಡಿಗಳನ್ನಾಡಿದರು. ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಭಾಗ್ಯಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಹಾಜರಿದ್ದರು. ಹುರುಳಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಬಿ.ವಿಶ್ವನಾಥ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT