ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಆತಂಕ ದೂರ, ಪೋಷಕರು ನಿರಾಳ

‘ಪ್ರಜಾವಾಣಿ’, ಡೆಕ್ಕನ್‌ ಹೆರಾಲ್ಡ್‌ ಬಳಗದ ‘ಜ್ಞಾನ ದೇಗುಲ’ ಶಿಕ್ಷಣ ಮೇಳಕ್ಕೆ ತೆರೆ
Last Updated 24 ಮೇ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು:‌ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದ ನೂರಾರು ಪೋಷಕರು ಅಲ್ಲಿದ್ದರು. ಉನ್ನತ ಶಿಕ್ಷಣದ ಯಾವ ದಾರಿಯಲ್ಲಿ ಹೆಜ್ಜೆ ಹಾಕಬೇಕು ಎಂಬ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಚಡಪಡಿಸುತ್ತಿದ್ದ ವಿದ್ಯಾರ್ಥಿಗಳೂ ಇದ್ದರು. 
ತಮ್ಮಲ್ಲಿದ್ದ ಗೊಂದಲಗಳಿಗೆ, ಅನುಮಾನಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಏಕಮಾತ್ರ  ಉದ್ದೇಶವಾಗಿತ್ತು. ದಿನದ ಕೊನೆಯಲ್ಲಿ ಅವರ ಉದ್ದೇಶ ಈಡೇರಿತು. ಅವರೆಲ್ಲ ನಿರಾಳದಿಂದ ಮನೆಯತ್ತ ಹೆಜ್ಜೆ ಹಾಕಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಜ್ಞಾನ ದೇಗುಲ’ ಶಿಕ್ಷಣ ಮೇಳದ ಕೊನೆಯ ದಿನವಾದ ಭಾನುವಾರ ಕಂಡು ಬಂದ ದೃಶ್ಯಗಳಿವು.

ಮೊದಲ ದಿನದಂತೆಯೇ ಎರಡನೇ ದಿನವೂ ಸಾವಿರಾರು ಸಂಖ್ಯೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಮೇಳದಲ್ಲಿ ಭಾವಹಿಸಿದ್ದರು.
ಸಂಪೂರ್ಣ ವಿವರ: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ  (ಸಿಇಟಿ) ಹಾಗೂ ಫಲಿತಾಂಶದ ನಂತರದ ದಾಖಲಾತಿ ಪ್ರಕ್ರಿಯೆ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕಾರಿ ಶ್ರೀನಾಥ್‌ ಅವರು  ನೀಡಿದರು.

ಪರಿಶೀಲನೆ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು, ಸೀಟು ಹಂಚಿಕೆ ಪ್ರಕ್ರಿಯೆ ನಡೆಯುವ ಬಗೆ, ಸೀಟು ಆಯ್ಕೆ ಮಾಡುವಾಗ ಪಾಲಿಸಬೇಕಾದ ಕ್ರಮ, ಶುಲ್ಕ ಪಾವತಿ ಮಾಡುವ ವಿಧಾನಗಳನ್ನು   ಅವರು ವಿವರಿಸಿದರು.

ಪ್ರತಿಯೊಂದು ಹಂತಗಳ ಬಗ್ಗೆ ವಿವರಣೆ ನೀಡುವಾಗಲೂ, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮನ್ನು ಗೊಂದಲಕ್ಕೀಡು ಮಾಡುತ್ತಿದ್ದ  ವಿಷಯಗಳನ್ನು ಪ್ರಸ್ತಾಪಿಸಿ ಕೆಇಎ ಪ್ರತಿನಿಧಿಯಿಂದ ಮಾಹಿತಿ ಪಡೆದರು.

ಮಳಿಗೆಗಳಲ್ಲಿ ವಿಚಾರಣೆ: ಮೇಳದಲ್ಲಿದ್ದ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಮತ್ತು ಪೋಷಕರು, ಕೋರ್ಸ್‌ಗಳು, ಪ್ರವೇಶ ಶುಲ್ಕ, ಮತ್ತು ಕಾಲೇಜುಗಳಲ್ಲಿರುವ ಮೂಲಸೌಕರ್ಯಗಳ ಬಗ್ಗೆ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದರು.

ಮೆಚ್ಚುಗೆಯ ಮಹಾಪೂರ:  ಮೇಳದಲ್ಲಿ ಭಾಗವಹಿಸಿದ್ದವರು ‘ಜ್ಞಾನ ದೇಗುಲ’ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ತಂದೆ ತಾಯಿಗಳಿಗೆ ಮಕ್ಕಳ ಬಗ್ಗೆ, ಅವರಿಗೆ ನೀಡಬೇಕಾದ ಶಿಕ್ಷಣದ ಬಗ್ಗೆ ಯೋಚನೆ ಇರುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿರುವ ಅನುಮಾನಗಳನ್ನು ಪರಿಹರಿಸಲು ಈ ಮೇಳ ವೇದಿಕೆಯಾಗಿದೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’‌ ಪತ್ರಿಕಾ ಬಳಗ ಉತ್ತಮ ಕೆಲಸ ಮಾಡಿದೆ’ ಎಂದು ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಕೃಷ್ಣ ಪ್ರಸಾದ್‌ ಹೇಳಿದರು.

‘ತಜ್ಞರ ಮಾತುಗಳು ಮಾಹಿತಿ ಪೂರ್ಣವಾಗಿತ್ತು. ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ನನ್ನ ಮುಂದಿನ ಶಿಕ್ಷಣದ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಇದು ನೆರವಾಗಿದೆ’ ಎಂದು ದ್ವಿತೀಯ ಪಿಯುಸಿ ಮುಗಿಸಿರುವ  ಫರಿಯಾ ಝೈನ್‌ ಹೇಳಿದರು.
‘ರಾಜ್ಯದ ಪ್ರಮುಖ ಕಾಲೇಜುಗಳನ್ನು ಒಂದೇ ಕಡೆ ಸೇರಿಸಿರುವುದು ಶ್ಲಾಘನೀಯ ಕಾರ್ಯ. ಇದೊಂದು ಅತ್ಯುತ್ತಮ ಮೇಳ. ಇಂತಹ ಈ ಮೇಳ ಆಯೋಜಿಸಲಿ’ ಎಂದು ಪೋಷಕರಾದ ನರೇಂದ್ರನಾಥ್‌ ಆಶಿಸಿದರು.

ಇತರ ಶಿಕ್ಷಣ ಕವಲುಗಳ ಬಗ್ಗೆಯೂ ಮಾಹಿತಿ ಇರಲಿ: ‘ಉತ್ತಮ ಮೇಳ ಎಂಬುದರಲ್ಲಿ ಎರಡು ಮಾತಿಲ್ಲ. ವೃತ್ತಿ ಶಿಕ್ಷಣ ಕೋರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿತು.  ಶಿಕ್ಷಣ ಕ್ಷೇತ್ರದಲ್ಲಿರುವ ಇತರ ಅವಕಾಶಗಳ ಬಗ್ಗೆ  ವಿವರಗಳನ್ನು ನೀಡಿದ್ದರೆ ಇನ್ನೂ ಚೆನ್ನಾಗಿತ್ತು’ ಎಂದು ಹಲಸೂರಿನ ಹರ್ಷಿತ್‌ ಯಾದವ್‌ ಹೇಳಿದರು.

‘ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ನನಗೆ ವಿದೇಶದಲ್ಲಿ ಸ್ನಾತಕೋತ್ತರ  ಶಿಕ್ಷಣ ಪಡೆಯುವುದು ಹೇಗೆ ಎಂಬ ಬಗ್ಗೆ ವಿವರಗಳು ಬೇಕಿತ್ತು. ಇಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಇತರ ವಿಷಯಗಳ ಬಗ್ಗೆಯೂ ಮಾಹಿತಿ ಸಿಕ್ಕಿದ್ದರೆ ಒಳ್ಳೆಯದಿತ್ತು’ ಎಂದು ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ದೊಮ್ಮಲೂರು ನಿವಾಸಿ ಶಿಖಾ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯಲ್ಲಿ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕಾ ಬಳಗ, ಇದೇ 30 ಮತ್ತು 31ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನ್‌ನಲ್ಲಿ ‘ಜ್ಞಾನ ದೇಗುಲ’ ಶಿಕ್ಷಣ ಮೇಳ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT