ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗಳಲ್ಲಿ ಜಪಾನಿ ಭಾಷೆ ಕಲಿಕೆಗೆ ವ್ಯವಸ್ಥೆ

ಜಪಾನ್‌ನಲ್ಲಿ ಹೇರಳ ಉದ್ಯೋಗಾವಕಾಶ: ಬಳಸಲು ಯತ್ನ
Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಪಾನ್‌ನಲ್ಲಿ ಭಾರತೀಯರಿಗೆ ಹೇರಳ ಉದ್ಯೋಗಾವಕಾಶಗಳಿವೆ. ಅಲ್ಲಿ ಉದ್ಯೋಗ ಪಡೆಯುವುದಕ್ಕೆ ನೆರವಾಗುವ ಸಲುವಾಗಿ ನಮ್ಮ ವಿಶ್ವವಿದ್ಯಾಲಯ­ಗಳಲ್ಲಿ ವಿದ್ಯಾರ್ಥಿಗಳಿಗೆ ಜಪಾನಿ ಭಾಷೆಯನ್ನು ಕಲಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಜಪಾನ್‌ನ ‘ಸಿಲ್ವರ್‌ ಪೀಕ್‌’ ಕಂಪೆನಿಯ ನಿಯೋಗದ ಜತೆ ಶನಿವಾರ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರರಿಗೆ ಈ ವಿಷಯ ತಿಳಿಸಿದರು. ‘ನಿಯೋಗವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಾಗೂ ಹಲವಾರು ಕಾಲೇಜುಗಳಿಗೆ ಭೇಟಿ ನೀಡಿದೆ. ಇಲ್ಲಿನ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದರು.

‘ಮೇ 3ರಂದು ಉನ್ನತ ಶಿಕ್ಷಣ ಪರಿಷತ್ತಿನ ಸಭೆ ನಡೆಯಲಿದ್ದು,  ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗವಹಿಸಲಿದ್ದಾರೆ.  ಸಭೆಯಲ್ಲಿ ಜಪಾನ್‌ ನಿಯೋಗವೂ ಅವರ ಅಗತ್ಯಗಳ ಬಗ್ಗೆ  ವಿವರಿಸಲಿದೆ.  ಇದರ ಆಧಾರದಲ್ಲಿ ವಿ.ವಿ.ಗಳಲ್ಲಿ  ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.

‘ಸಿಲ್ವರ್‌ ಪೀಕ್‌ ಗ್ಲೋಬಲ್‌’ ಅಧ್ಯಕ್ಷ ಸುಭಾ ಭಟ್ಟಾಚಾನ್‌ ಮಾತನಾಡಿ, ‘ನಮಗೆ (ಜಪಾನ್‌ಗೆ) ಇನ್ನು 5 ವರ್ಷಗಳಲ್ಲಿ 40 ಸಾವಿರಕ್ಕೂ ಅಧಿಕ ಎಂಜಿನಿಯರ್‌ಗಳ ಅಗತ್ಯ ಇದೆ. ನಮ್ಮಲ್ಲಿ

ವೃದ್ಧರ ಸಂಖ್ಯೆ ಜಾಸ್ತಿ. ಅವರ ಆರೈಕೆಗೆ 4 ಲಕ್ಷಕ್ಕೂ ಅಧಿಕ ಶುಶ್ರೂಷಕರು ಬೇಕು. ಭಾರತ ಹಾಗೂ ವಿಯೆಟ್ನಾಂ ನಡುವೆ ನಮ್ಮ ತಾಂತ್ರಿಕ ಸಂಬಂಧ ಚೆನ್ನಾಗಿದೆ.  ಗುಣಮಟ್ಟದ ಶಿಕ್ಷಣಕ್ಕೆ ಈ ದೇಶಗಳು ಹೆಸರುವಾಸಿ. ಹಾಗಾಗಿ ಈ 2 ದೇಶದವರಿಗೆ ಮಾತ್ರ ಉದ್ಯೋಗಾವಕಾಶ ನೀಡಲು ನಮ್ಮ ಸರ್ಕಾರ  ನಿರ್ಧರಿಸಿದೆ’ ಎಂದರು.

‘ಉದ್ಯೋಗಿಗಳನ್ನು ಸೆಳೆಯುವ ಸಲುವಾಗಿ ವೀಸಾ ನಿಯಮಗಳನ್ನೂ ಸಡಿಲಿಸಿದ್ದೇವೆ. ದಾಖಲೆಪತ್ರಗಳು ಸರಿಯಾಗಿದ್ದರೆ,  ಮೂರು ದಿನಗಳೊಳಗೆ ವೀಸಾ ವಿತರಿಸುತ್ತೇವೆ’ ಎಂದು ತಿಳಿಸಿದರು.

ಸಂಬಳ ಎಷ್ಟು: ‘ಎಂಜಿನಿಯರಿಂಗ್‌ ಪದವೀಧರರು   ಮಾಸಿಕ ಕನಿಷ್ಠ ₹ 2.5 ಲಕ್ಷದಷ್ಟು ಸಂಬಳ ಪಡೆಯಲಿದ್ದಾರೆ. ಇದು ₹ 4 ಲಕ್ಷದಷ್ಟು ಹೆಚ್ಚಲೂ ಬಹುದು’ ಎಂದು ಭಟ್ಟಾಚಾನ್‌ ವಿವರಿಸಿದರು.

‘ಮೆಕ್ಯಾನಿಕಲ್‌, ದೂರಸಂವಹನ ಹಾಗೂ ಎಲೆಕ್ಟ್ರಿಕಲ್‌ ಕ್ಷೇತ್ರಗಳಲ್ಲಿ ಜಪಾನ್‌  ಉತ್ತಮ ಸಾಧನೆ ಮಾಡಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿದೆ. ಹಾಗಾಗಿ ನಮ್ಮ ಅಗತ್ಯದ ಪೈಕಿ ಶೇ 70ರಷ್ಟು ಎಂಜಿನಿಯರ್‌ಗಳು ಮಾಹಿತಿ ತಂತ್ರಜ್ಞಾನ ಅಥವಾ ಕಂಪ್ಯೂಟರ್‌ ಸೈನ್ಸ್‌ ಪದವೀಧರರಾಗಿರಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ
ಕರ್ನಾಟಕಕ್ಕೆ ಒಳ್ಳೆಯ ಹೆಸರಿದೆ.  ಹಾಗಾಗಿ ಇಲ್ಲಿನವರಿಗೆ ಉದ್ಯೋಗಾವಕಾಶ ನೀಡಲು ನಾವು ಉತ್ಸುಕರಾಗಿದ್ದೇವೆ’ ಎಂದರು.

‘ಜಪಾನ್‌ಗೆ ವೆಲ್ಡರ್‌, ಕಾರ್ಪೆಂಟರ್‌, ಪ್ಲಂಬರ್‌, ಕೃಷಿಕರ ಅಗತ್ಯವೂ ಇದೆ. ಮಿಟ್ಸುಬಿಷಿ ಕಂಪೆನಿಯೊಂದಕ್ಕೆ 6 ಸಾವಿರಕ್ಕೂ ಅಧಿಕ ವೆಲ್ಡರ್‌ಗಳು ಬೇಕು.  ನಮ್ಮ ಕಂಪೆನಿಗಳು ವಿವಿಧ ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿವೆ. ಅಲ್ಲೂ ಕೆಲಸ ನಿರ್ವಹಿಸಬಹುದು. ಆದರೆ ಉದ್ಯೋಗ ಪಡೆಯಲು ಜಪಾನಿ ಭಾಷೆ ಕಲಿಯುವುದು ಅತ್ಯಗತ್ಯ’ ಎಂದರು. 

‘ವಿದ್ಯಾರ್ಥಿ ವೀಸಾ ಪಡೆದು ಜಪಾನ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದಕ್ಕೂ ಅವಕಾಶ ಇದೆ. ಅರೆಕಾಲಿಕ ಉದ್ಯೋಗ ಮಾಡುವವರಿಗೆ ಮಾತ್ರ ವಿದ್ಯಾರ್ಥಿ ವೀಸಾ ನೀಡುತ್ತೇವೆ. ವಾರದಲ್ಲಿ 28 ತಾಸು ಕೆಲಸ ಮಾಡಲು ವಿದ್ಯಾರ್ಥಿಗಳು ಸಿದ್ಧ ಇರಬೇಕು. ತಿಂಗಳಿಗೆ ₹ 70 ಸಾವಿರದಷ್ಟು ದುಡಿಯಲು ಅವಕಾಶ ಇದೆ’ ಎಂದರು.

ಜಪಾನ್‌ ಸರ್ಕಾರದ ಪ್ರತಿನಿಧಿಗಳಾದ ಟಾಕಿಮೊಟೊ ಹಿರೊಸುಕೆ, ಇಸಾಕು ಮೊರಿ, ಸಿಲ್ವರ್‌ ಪೀಕ್‌ ಕಂಪೆನಿಯ ಭಾರತೀಯ ವ್ಯವಹಾರಗಳ ನಿರ್ದೇಶಕ ಎನ್‌.ವಿನಯ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT