ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಣ್ಣ ನೆನಪುಗಳ ಸುತ್ತ...

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಧಾರವಾಡ: ಕೆಲವು ಲೇಖಕರು ಹಳೆಯ ದಿನಗಳ ವಿಷಣ್ಣ ನೆನಪುಗಳಿಂದ (ನಾಸ್ಟಾಲ್ಜಿಯಾ) ಬರೆಯುತ್ತಾರೆಯೇ ಹೊರತೂ ತಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಸಾಹಿತಿ ಗಿರೀಶ ಕಾರ್ನಾಡ ವಿಷಾದ ವ್ಯಕ್ತಪಡಿಸಿದರು.

`ಎಲ್ಲರೂ ಅಂತಲ್ಲ. ಕನ್ನಡದ ಕೆಲವು ಲೇಖಕರು ಇನ್ನೂ ಧಾರವಾಡ, ಶಿವಮೊಗ್ಗ, ತೀರ್ಥಹಳ್ಳಿ ಬಗ್ಗೆ ಬರೀತಾರೆ. ಆದರೆ ಇರೋದು ಬೆಂಗಳೂರಿನಲ್ಲಿ. ಕಳೆದು ಹೋದ ದಿನಗಳ ಗೀಳಿನಲ್ಲಿ  ಬರೀತಾರೆಯೇ ಹೊರತೂ ತಮ್ಮ ಸುತ್ತಲು ನಡೆಯುವ ಸಂಗತಿಗಳ ಬಗ್ಗೆ ಬರೆಯುವುದು ಕಡಿಮೆ' ಎಂದು ನುಡಿದರು.

ಸಾಹಿತ್ಯ ಸಂಭ್ರಮದ ಅಂಗವಾಗಿ ಶನಿವಾರ ನಡೆದ `ಜ್ಞಾನಪೀಠ ಸಾಹಿತಿಗಳೊಂದಿಗೆ ಸಂವಾದ'ದಲ್ಲಿ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ಮೂವತ್ತು ವರ್ಷಗಳ ಹಿಂದೆ 30 ಲಕ್ಷದಷ್ಟಿದ್ದ ಬೆಂಗಳೂರು ಜನಸಂಖ್ಯೆ ಒಂದು ಕೋಟಿಯಾಗಿದೆ. ಅಲ್ಲಿ ಹುಟ್ಟಿದವರೇ ಕಡಿಮೆ; ಹೊರಗಿನವರೇ ಹೆಚ್ಚಿಗೆ ಅಲ್ಲಿದ್ದಾರೆ. ಅಲ್ಲಿನ ಸಂಗತಿಗಳ ಬಗ್ಗೆ ಬರೆಯುವುದನ್ನು ಬಿಟ್ಟು ಲೇಖಕರು ಬೇರೇನನ್ನೋ ಬರೆಯುತ್ತಿದ್ದಾರೆ ಎಂದರು.

`ಮೊದಲೆಲ್ಲ ಪುರಾಣ, ಇತಿಹಾಸ, ಜಾನಪದ ಘಟನೆ ಆಧರಿಸಿ ನಾನು ನಾಟಕ ಬರೆಯುತ್ತಿದ್ದೆ. ಆದರೆ ಮನೆಯಲ್ಲಿ ಕೂತು, ಅಲ್ಲೆಲ್ಲ ನಡೆಯುತ್ತಿರುವುದನ್ನು ಗಮನಿಸಿದರೆ ಸಾಕು; ಒಳ್ಳೆ ನಾಟಕಕ್ಕೆ ಸಾಮಗ್ರಿ ಸಿಗುತ್ತದೆ. ಮನೆಯ ಹೆಣ್ಣುಮಕ್ಕಳು, ಆಳುಗಳ ಮಾತು ಅದರಲ್ಲೇ ಎಷ್ಟೊಂದು ಡ್ರಾಮಾ ಇರುತ್ತದೆ! ಅದನ್ನು ಹುಡುಕಿಕೊಂಡು ಬೇರೆಲ್ಲೋ ಹೋಗಬೇಕಾಗಿಲ್ಲ. `ಒಡಕಲು ಬಿಂಬ', `ಮದುವೆ ಅಲ್ಬಂ' ಹಾಗೂ `ಬೆಂದ ಕಾಳು ಆನ್ ಟೋಸ್ಟ್' ನಾಟಕಗಳು ಇದೇ ಆಧಾರದಲ್ಲಿ ರಚನೆಗೊಂಡವು” ಎಂದು ಕಾರ್ನಾಡ ಹೇಳಿದರು.

ನಾಟಕಕಾರನಿಗೆ ಅಧಿಕಾರವಿಲ್ಲ: ನಾಟಕ ಬರೆದ ಮೇಲೆ ಅದಕ್ಕೇನು ಆಗಬೇಕು ಎಂದು ಹೇಳುವ ಅಧಿಕಾರ ನಾಟಕಕಾರನಿಗೆ ಇಲ್ಲ ಎಂದ ಗಿರೀಶ ಕಾರ್ನಾಡ, ನಾಟಕದ ವೈಶಿಷ್ಟ್ಯ ಹಾಗೂ ಶಕ್ತಿಯೇ ಬೇರೆ ರೀತಿಯದು. ಸಿನಿಮಾದಲ್ಲಿ ಪ್ರೇಕ್ಷಕರು ಮೂಕವಾಗಿರುತ್ತಾರೆ; ಆದರೆ ನಾಟಕದಲ್ಲಿ ಪ್ರೇಕ್ಷಕರೂ ಆ ಪ್ರಯೋಗದ ಭಾಗವಾಗಿರುತ್ತಾರೆ. ಅವರಿಂದ ಸತತ ಪ್ರತಿಸ್ಪಂದನೆ ಬರುತ್ತಲೇ ಇರುತ್ತದೆ. ಅದಕ್ಕೆ ಪ್ರತಿಯಾಗಿ ನಾಟಕ ಪ್ರದರ್ಶನ ದಿನದಿಂದ ದಿನಕ್ಕೆ ಬೇರೆಯ ತೆರನಾಗಿರುತ್ತದೆ. ನಾಟಕಕಾರ ಈ ಹೊಣೆಯನ್ನು ಒಪ್ಪಿಕೊಳ್ಳಲೇ ಬೇಕು ಎಂದರು.

ಪ್ರಶಸ್ತಿ ಅಪಾಯ!: ಜ್ಞಾನಪೀಠ ಪ್ರಶಸ್ತಿ ಕುರಿತು ಸಭಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ನಾಡ, `ಈ ಪ್ರಶಸ್ತಿಯ ಅಪಾಯವೆಂದರೆ, ನನ್ನ ಬರವಣಿಗೆಯೆಲ್ಲ ನನ್ನೊಬ್ಬನದೇ ಎಂಬ ಭಾವನೆ ಸೃಷ್ಟಿಯಾಗುತ್ತದೆ. ಅದಕ್ಕೆ ಯಾರು ಕೊಡುಗೆ ಕೊಟ್ಟಿರುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಲೇಖಕ ದೈವಾಂಶಸಂಭೂತನಾಗಿ ಕಾಣಿಸಿಕೊಂಡು ಬಿಡುವಷ್ಟು ಗೌರವ ಸಿಗುತ್ತದೆ. ಕನ್ನಡ ಶಾಲೆಗಳಲ್ಲಿ ನಮ್ಮ ಮುಖ ಮೂಡಿ ಬಿಡುತ್ತದೆ' ಎಂದು ಉದ್ಗರಿಸಿದರು. ಪ್ರಶಸ್ತಿ ಬಂದಿರುವುದಕ್ಕೆ ತಮಗೆ ಭಾರಿ ಖುಷಿಯಿದೆ. ಆದರೆ ಅದನ್ನು ಪಡೆದ ಕಾರಣಕ್ಕಾಗಿಯೇ ಮತ್ತೆ ಮತ್ತೆ ಬೇರೆ ಪ್ರಶಸ್ತಿ ಕೊಡಬಾರದು ಎಂದರು.

ಭಾಗ -2: ಅನುಮಾನ: `ಆತ್ಮಕಥೆ `ಆಡಾಡತಾ ಆಯುಷ್ಯ' ರಚನೆಗೆ ನನ್ನ ತಲೆಮಾರು ಪ್ರೇರಣೆ ನೀಡಿತು. ಎರಡನೇ ಭಾಗ ಬರ್ತದೋ ಇಲ್ವೋ ಡೌಟು. ಆದರೆ ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ ಬಗ್ಗೆ ಬರೆಯೋದಕ್ಕಿಂತ ಮಾನವೀಯ ಘಟನೆಗಳ ಸಂಗ್ರಹ ಅದರಲ್ಲಿ ಬರೆಯೋಣ ಅಂತಿದೀನಿ.  ಆತ್ಮಕಥೆಯಲ್ಲಿ  ನನಗೆ ಯಾವ ಆಸಕ್ತಿಯೂ ಇಲ್ಲ. ನಾನು ಬೇರೆ ಬೇರೆ ವಯಸ್ಸಿನಲ್ಲಿ ಬರೆದ ನಾಟಕಗಳಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವುದು ಪ್ರಮುಖ ಅನಿಸುತ್ತದೆ' ಎಂದರು. ಹಿರಿಯ ವಿಮರ್ಶಕ ಡಾ. ಸಿ.ಎನ್.ರಾಮಚಂದ್ರನ್ ಗೋಷ್ಠಿ ನಡೆಸಿಕೊಟ್ಟರು.

`ಭೈರಪ್ಪ ಕಾದಂಬರಿ ಸಿನಿಮಾ ಮಾಡಿ ತಪ್ಪು ಮಾಡಿದೆ'
`ಎಸ್.ಎಲ್.ಭೈರಪ್ಪ ಅವರ ಎರಡು ಕಾದಂಬರಿಗಳನ್ನು ನಾನು ಸಿನಿಮಾ ಮಾಡಿ ತಪ್ಪು ಮಾಡಿದೆ' ಎಂದು ಗಿರೀಶ ಕಾರ್ನಾಡ ಹೇಳಿದರು.

`ಅವುಗಳನ್ನು ಚಿತ್ರ ಮಾಡಿ ನಾನು ತಪ್ಪು ಮಾಡಿದೆ. ಅಷ್ಟೇ ಅಲ್ಲ; ಭೈರಪ್ಪ ಅವರಿಗೂ ಅನ್ಯಾಯ ಮಾಡಿದೆ. ಅವರು ಯಾವ ಉದ್ದೇಶ ಇಟ್ಟುಕೊಂಡು ಬರೆದಿದ್ದರೋ ಅದನ್ನು ಬಿಟ್ಟು ಬೇರೊಂದು ಉದ್ದೇಶದಿಂದ ಸಿನಿಮಾ ಮಾಡುವುದು ತಪ್ಪು. ಅದು ಆಷಾಢಭೂತಿತನ' ಎಂದು ನುಡಿದರು.

ವಿಮರ್ಶಕ ಸಿ.ಎನ್. ರಾಮಚಂದ್ರನ್ ಕೇಳಿದ `ಸಂಪೂರ್ಣ ಪರಂಪರಾಗತ ಮೌಲ್ಯ ವ್ಯವಸ್ಥೆ ಒಪ್ಪಿಕೊಳ್ಳುವಂಥ ಕಾದಂಬರಿ ನಿರ್ದೇಶಿಸಲು ಯಾಕೆ ಒಪ್ಪಿಕೊಂಡಿರಿ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ನಾಡ, `ಭೈರಪ್ಪನವರ ಎರಡೂ ಕೃತಿಗಳ ಮೂಲತತ್ವದಲ್ಲಿ ನನಗೆ ಒಪ್ಪಿಗೆ ಇರಲಿಲ್ಲ' ಎಂದರು.

`ನನ್ನ ಸಮಕಾಲೀನ ಕಾದಂಬರಿಕಾರರ ಪೈಕಿ ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ ಹಾಗೂ ಭೈರಪ್ಪ ಅವರ ಎರಡು ಕಾದಂಬರಿಗಳನ್ನು ಸಿನಿಮಾ ಮಾಡಿದೆ. ವಂಶವೃಕ್ಷ ಮಾತ್ರವಲ್ಲ. ತಬ್ಬಲಿಯು ನೀನಾದೆ ಮಗನೇ ಕೃತಿಯ ಮೂಲ ತತ್ವಕ್ಕೆ ನನಗೆ ಒಪ್ಪಿಗೆ ಇರಲಿಲ್ಲ. ಆದರೆ ವಂಶವೃಕ್ಷದ ಪಾತ್ರಧಾರಿಯೊಬ್ಬನ ಬಾಯಿಯಿಂದ ಒಂದು ಹೇಳಿಕೆ ಹೊರಡಿಸಿ ಸಿನಿಮಾ ಮುಗಿಸಿದೆವು. ಗೋಹತ್ಯೆ ವಿರುದ್ಧ ನಿಬಂಧನೆ ಹಾಕಬಾರದು; ಗೋಮಾಂಸ ತಿನ್ನುವವರಿಗೆ ಅದರ ಅಧಿಕಾರ ಇರಬೇಕು. ನಮ್ಮ ಸಮಾಜದಲ್ಲಿ ಎಷ್ಟೋ ಜನ ಅದನ್ನು ತಿನ್ನುತ್ತಾರೆ. ಅದು ಮುಂದುವರಿಯಬೇಕು ಎಂದು ಅನಂತಮೂರ್ತಿ ಹಾಗೂ ನಾನು ಭಾಷಣ ಮಾಡುತ್ತಿದ್ದೆವು. ನಾವು ಆ ಸಿನಿಮಾಗಳನ್ನು ಮಾಡಬಾರದಿತ್ತು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT