ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರ ಹೈಟೆಕ್‌ ಮನೆ!

Last Updated 11 ಜೂನ್ 2015, 19:30 IST
ಅಕ್ಷರ ಗಾತ್ರ

ವೃದ್ಧಾಶ್ರಮಗಳ ಹಂಗಿನ ಕಥೆಗಳನ್ನು ಕೇಳಿ ಮರುಕಪಡಬೇಕಾದ ನಗರದಲ್ಲಿ ಅಜ್ಜ–ಅಜ್ಜಿಯರಿಗೆಂದೇ ಐಷಾರಾಮಿ ಅಪಾರ್ಟ್‌ಮೆಂಟ್‌ ನಿರ್ಮಿತವಾಗಿರುವುದು ಅಚ್ಚರಿಯ ಸಂಗತಿಯೇ ಹೌದು.

ಇತ್ತೀಚಿನ ದಿನಗಳಲ್ಲಿ ಯಾಂತ್ರಿಕ ಬದುಕು ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಅವಿಭಕ್ತ ಕುಟುಂಬಗಳು ನಶಿಸುತ್ತಿವೆ. ನಗರಗಳಲ್ಲಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಣ್ಮರೆಯಾಗಿವೆ. ಹೀಗಾಗಿ ವೃದ್ಧಾಶ್ರಮಗಳ ಸಂಖ್ಯೆ ಮತ್ತು ಅಲ್ಲಿ ದಾಖಲಾಗುವವರ ಪ್ರಮಾಣ ಏರುತ್ತಿದೆ. ಆದರೆ ಹಿರಿಜೀವಿಗಳು ಸಮಾಜದ ಮಾರ್ಗದರ್ಶಕರು.

ಅವರನ್ನು ಕಡೆಗಣಿಸುವುದು ಸರಿಯಲ್ಲ. ವೃದ್ಧಾಪ್ಯದಲ್ಲಿಯೂ ಅವರಿಗೆ ಉತ್ತಮವಾದ ಜೀವನವನ್ನು ನೀಡಬೇಕು. ಅವರು ವಾಸಿಸುವ ಪರಿಸರ ಅವರ ಮಾನಸಿಕ ಸಮತೋಲಕ್ಕೆ ಪೂರಕವಾಗಿರುವಂತಿರಬೇಕು ಎಂಬ ಪರಿಕಲ್ಪನೆಯೊಂದಿಗೆ ಪ್ರಾರಂಭವಾಗಿದೆ ‘ಪ್ರೈಮಸ್‌ ಸೀನಿಯರ್‌ ಲಿವಿಂಗ್‌ ಹೋಮ್‌’.

ಮಂತ್ರಿ ಡೆವಲಪರ್ಸ್‌ ಸಹಯೋಗದಲ್ಲಿ ನಗರದ  ಕನಕಪುರ ರಸ್ತೆಯ ಬಳಿ ಪ್ರಾರಂಭವಾಗಿರುವ ಈ ಐಷಾರಾಮಿ ವೃದ್ಧರ ಗೃಹದಲ್ಲಿ ಸದ್ಯ ಇರುವುದು ಹದಿನೈದು ಮಂದಿ. 4.5 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ‘ಲಿವಿಂಗ್‌ ಹೋಮ್‌’ ಪ್ರವೇಶಿಸುತ್ತಿದ್ದಂತೆ ಯಾವುದೋ ರೆಸಾರ್ಟ್‌ ಒಳಗೆ ಹೋದಂತಹ ಅನುಭವವಾಗುತ್ತದೆ.

ವಿದೇಶಗಳಲ್ಲಿ ಈಗಾಗಲೇ ಪ್ರಚಲಿತದಲ್ಲಿರುವ ಈ ಲಕ್ಷುರಿ ಲಿವಿಂಗ್ ಹೋಮ್‌ ಪರಿಕಲ್ಪನೆಯನ್ನು ಬೆಂಗಳೂರಿಗರಿಗೂ ಪರಿಚಯಿಸುವ ಮೂಲಕ ಮಂತ್ರಿ ಡೆವಲಪರ್ಸ್‌ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ.

‘ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ಈ ಲಕ್ಷುರಿ ಲಿವಿಂಗ್‌ ಹೋಮ್‌ ಪರಿಕಲ್ಪನೆ ನಗರಕ್ಕೆ ಹೊಸತಾದರೂ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಪ್ರಾರಂಭವಾದ ಒಂದೇ ವರ್ಷದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ’ ಎನ್ನುತ್ತಾರೆ ಪ್ರೈಮಸ್‌ ಲಿವಿಂಗ್‌ ಹೋಮ್‌ ಜನರಲ್‌ ಮ್ಯಾನೇಜರ್‌ ಶಂಕರ್‌ ಮೆನನ್‌.

‘ಐವತ್ತೈದು ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಇಲ್ಲಿ ವಾಸಿಸಲು ಅವಕಾಶ. ಅವರು ಪ್ರತಿ ಗಳಿಗೆಯನ್ನು ಚಟುವಟಿಕೆಯಿಂದ ಕಳೆಯಲು ಅನುಕೂಲವಾಗುವ ವಾತಾವರಣ ಇಲ್ಲಿದೆ. ಈ ಮನೆಗೆ ಪ್ರವೇಶ ಪಡೆಯುತ್ತಿದ್ದಂತೆ ನಿವಾಸಿಗಳಿಗೆ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಪ್ಯಾನಿಕ್‌ ಅಲಾರ್ಮ್‌ ಎಂಬ ಉಪಕರಣವನ್ನು ನೀಡುತ್ತೇವೆ. ತುರ್ತು ಪರಿಸ್ಥಿತಿಯಲ್ಲಿ ಇದರ ಬಟನ್‌ ಒತ್ತಿದರೆ ಸಿಬ್ಬಂದಿ ಕ್ಷಣದಲ್ಲಿ ಅವರ ಮುಂದೆ ಹಾಜರಾಗುತ್ತಾರೆ. 

ದಿನದ 24 ಗಂಟೆಯೂ ಡಾಕ್ಟರ್‌ ಮತ್ತು ನರ್ಸ್‌ ಸೌಲಭ್ಯವನ್ನು  ಕಲ್ಪಿಸಲಾಗಿದೆ’ ಎನ್ನುತ್ತಾರೆ ಅವರು. ಆರೋಗ್ಯ ಕಾಳಜಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಎಲ್ಲಾ ವಯಸ್ಸಿನವರಿಗೂ  ಫಿಟ್‌ನೆಸ್‌ ಅಗತ್ಯ. ಹಾಗಾಗಿ ಇಲ್ಲಿ ಜಿಮ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಯಸ್ಸಾದವರಿಗೆ ಅನುಕೂಲವಾಗುವಂತಹ ರೀತಿಯಲ್ಲಿಯೇ ಇಲ್ಲಿನ ಸಾಧನಗಳನ್ನು ತಯಾರು ಮಾಡಲಾಗಿದೆ. ಇದರ ಜೊತೆಗೆ ಮನಸ್ಸಿಗೆ ಆರಾಮದಾಯಕ ಅನುಭವ ನೀಡಲು ಸ್ಪಾ ಮತ್ತು ಮಸಾಜ್‌ ಸೆಂಟರ್‌ ಸೌಲಭ್ಯವೂ ಇದೆ. 

ಹಿರಿಯರು ಲವಲವಿಕೆಯಿಂದ ಪ್ರತಿ ಕ್ಷಣವನ್ನು ಕಳೆಯಬೇಕು. ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ಉದ್ದೇಶದಿಂದ ದೇಹ ಮತ್ತು ಮನಸು ಎರಡಕ್ಕೂ ಕೆಲಸ ಕೊಡುವ ಕೇರಂ, ಚೆಸ್‌, ಬ್ಯಾಡ್ಮಿಂಟನ್‌, ಈಜು ಕೊಳ, ಗಾಲ್ಫ್‌ ಕೋರ್ಟ್‌ ಸೇರಿದಂತೆ ಹಲವು ಹೊರಾಂಗಣ ಮತ್ತು ಒಳಾಂಗಣ ಕ್ರೀಡಾ ಸೌಕರ್ಯವನ್ನು ಒದಗಿಸಲಾಗಿದೆ. ಇಲ್ಲಿಯ ನಿವಾಸಿಗಳು ಯಾವಾಗ ಬೇಕಾದರೂ ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ಇದರ ಜೊತೆಗೆ ಸುಸಜ್ಜಿತವಾದ ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ. ಇತಿಹಾಸ, ಆಧ್ಯಾತ್ಮಿಕ ಲೈಫ್‌ಸ್ಟೈಲ್‌, ಆಟೊ ಬಯೋಗ್ರಫಿ ಸೇರಿದಂತೆ ಸುಮಾರು 300 ಪುಸ್ತಕಗಳು ಇಲ್ಲಿ ಲಭ್ಯ. ಓದಿನ ಗೀಳಿರುವವರು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಹಿರಿಯರ ಊಟದ ವ್ಯವಸ್ಥೆಯ ಕುರಿತು ತುಸು ಹೆಚ್ಚಿನ ಕಾಳಜಿಯನ್ನೇ ವಹಿಸಬೇಕಾಗುತ್ತದೆ. ಹಾಗಾಗಿ ಇಲ್ಲಿನ ‘ಮೆನು’ ನ್ಯೂಟ್ರಿಷಿಯನ್‌ ಸಲಹೆಯ ಮೇರೆಗೆ ತಯಾರಾಗುತ್ತದೆ. 75 ಜನರು ಕೂರಬಹುದಾದ ಸುಸಜ್ಜಿತವಾದ ಊಟದ ಕೋಣೆಯನ್ನು‌ ಯಾವುದೇ ಪಂಚತಾರಾ ಹೋಟೆಲ್‌ಗೂ ಕಡಿಮೆ ಇಲ್ಲದಂತೆ ವಿನ್ಯಾಸಗೊಳಿಸಲಾಗಿದೆ.

‘ಇಲ್ಲಿನ ಶುಲ್ಕ ತುಸು ದುಬಾರಿ ಇರಬಹುದು. ಆದರೆ ನಾವು ಇಲ್ಲಿ ವಾಸಿಸುವ ಮಂದಿಗೆ  ಉತ್ತಮ ಜೀವನ ನಡೆಸಲು ಅಗತ್ಯವಾದಂತಹ ಸಕಲ ಸೌಲಭ್ಯಗಳನ್ನು ಒದಗಿಸುತ್ತೇವೆ. ವೃದ್ಧಾಶ್ರಮಕ್ಕೂ ಇಲ್ಲಿನ ಸೌಕರ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ.  ಉತ್ತಮ ಹುದ್ದೆಯಲ್ಲಿದ್ದು, ನಿವೃತ್ತಿಯಾದವರು ಮತ್ತು ವಿದೇಶದಲ್ಲಿರುವ ಮಕ್ಕಳ ಬಳಿ ಹೋಗಲು ಸಾಧ್ಯವಾಗದೇ ಇರುವಂತಹವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅವರ ಜೀವನ ಶೈಲಿಗೆ ಅಗತ್ಯವಾದ ವಾತಾವರಣವನ್ನು ನಾವು ಇಲ್ಲಿ  ಒದಗಿಸಿದ್ದೇವೆ’ ಎನ್ನುತ್ತಾರೆ ಶಂಕರ್‌ ಮೆನನ್‌. ‘ಹಿರಿ ಜೀವಗಳ ಅಗತ್ಯಗಳನ್ನು ಮನಗಂಡು ಅವರಿಗೆ ಇಷ್ಟವಾಗುವ ರೀತಿಯಲ್ಲಿಯೇ ಈ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಅವರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಪೀಠೋಪಕರಣಗಳ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ಅವರು. 

ಈ ಪರಿಸರ ಸ್ನೇಹಿ ಕಟ್ಟಡದಲ್ಲಿ ಕೈತೋಟಕ್ಕೆ ಒಂದಿಷ್ಟು ಸ್ಥಳವನ್ನು ಮೀಸಲಿಡಲಾಗಿದೆ. ಇಲ್ಲಿನ ನಿವಾಸಿಗಳು ಕೈತೋಟ ಪ್ರಿಯರಾಗಿದ್ದಾರೆ ಇದರ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಆದರೆ ಸದ್ಯ ಇದರಲ್ಲಿ ಆಸಕ್ತಿ ಇರುವವರು ಇಲ್ಲಿ ಇಲ್ಲದೇ ಇರುವುದರಿಂದ ಪ್ರೀಮಸ್ ಸಿಬ್ಬಂದಿಯೇ ಇಲ್ಲಿ  ತರಕಾರಿ ಬೆಳೆಯುತ್ತಿದ್ದಾರೆ.  ಅವನ್ನು ಅಡುಗೆಗೆ ಬಳಸಲಾಗುತ್ತದೆ.

ಶುಲ್ಕ:  ₨25 ಲಕ್ಷ ಠೇವಣಿಯನ್ನು ನೀಡಬೇಕು. ಇದರ ಹೊರತಾಗಿ ಒಂದು  ಕೊಠಡಿಯ ಕೋಣೆಗೆ ತಿಂಗಳಿಗೆ  ₨35,000 –45,000  ಪಾವತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT