ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಮನೋಭಾವದಿಂದ ಬದಲಾವಣೆ

15ನೇ ಅಖಿಲ ಭಾರತ ಜನ ವಿಜ್ಞಾನ ಸಮ್ಮೇಳನದಲ್ಲಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ
Last Updated 22 ಮೇ 2015, 20:21 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗಾಗಿ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಿದೆ ಎಂದು ಉಪ ರಾಷ್ಟ್ರಪತಿ ಎಂ.ಹಮೀದ್‌ ಅನ್ಸಾರಿ ಅಭಿಪ್ರಾಯಪಟ್ಟರು.

ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಪರಿಷತ್ತುಗಳ ಸಹಯೋಗದೊಂದಿಗೆ ‘ಅಖಿಲ ಭಾರತ ಜನ ವಿಜ್ಞಾನ ಚಳವಳಿಗಳ ಜಾಲ’ ಸಂಘಟನೆಯು ಆಯೋಜಿಸಿರುವ ನಾಲ್ಕು ದಿನಗಳ 15ನೇ ಅಖಿಲ ಭಾರತ ಜನ ವಿಜ್ಞಾನ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾನವನ ಇತಿಹಾಸದಲ್ಲಿ ಆರ್ಕಿಮಿಡೀಸ್‌ಗೂ (ಗ್ರೀಕ್‌ ಗಣಿತಶಾಸ್ತ್ರಜ್ಞ) ಮುಂಚಿನ ಕಾಲದಿಂದಲೂ ವಿಜ್ಞಾನವು ಸಾಮಾಜಿಕ ಬದಲಾವಣೆಯ ಹರಿಕಾರನಾಗಿದೆ. ದೊಡ್ಡ ಸಂಶೋಧನೆಗಳು, ಹುಡುಕಾಟಗಳು ಸಾಮಾಜಿಕ ವ್ಯವಸ್ಥೆಗಳನ್ನು ಪ್ರಭಾವಿಸುತ್ತಾ ಬಂದಿವೆ. ಜತೆಗೆ ಭೌತಿಕ ಮತ್ತು ಬೌದ್ಧಿಕ ಲಾಭಗಳನ್ನೂ ತಂದುಕೊಟ್ಟಿವೆ’ ಎಂದು  ಹೇಳಿದರು.

‘ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಜನರಲ್ಲಿ ವಿವೇಚನಾ ಶಕ್ತಿ ಬೆಳೆಯುತ್ತದೆ. ಅದರಿಂದ ಜಾತ್ಯತೀತ ಮನೋಧರ್ಮ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.   ಅಜ್ಞಾನ, ಅಸಹಿಷ್ಣುತೆ, ಮೂಢ ನಂಬಿಕೆಗಳನ್ನು ತೊಡೆದುಹಾಕುವಲ್ಲಿ ವಿಜ್ಞಾನ ಮಹತ್ತರ ಪಾತ್ರ ವಹಿಸುತ್ತದೆ’ ಎಂದು ಅವರು ನುಡಿದರು.

‘ಇನ್ನೊಂದೆಡೆ ವಿಜ್ಞಾನವು ಕೃಷಿ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ.  ಹೊಸ ಹೊಸ ಕಚ್ಚಾ ವಸ್ತುಗಳು, ನಿಪುಣ ಮಾನವ ಸಂಪನ್ಮೂಲ ಹಾಗೂ ದಕ್ಷ ತಯಾರಿಕಾ ಪ್ರಕ್ರಿಯೆಗಳೆಲ್ಲವೂ ವಿಜ್ಞಾನದ ಕೊಡುಗೆಗಳಾಗಿದ್ದು, ಆರ್ಥಿಕ ಪ್ರಗತಿಗೆ ದಾರಿದೀಪಗಳಾಗಿವೆ’ ಎಂದು ಅವರು ತಿಳಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ‘ದೇಶವು ಆರ್ಥಿಕವಾಗಿ ಹಿಂದುಳಿದಿರಬಹುದು. ಜ್ಞಾನ ಮತ್ತು ಬುದ್ಧಿಮತ್ತೆಯ ವಿಚಾರದಲ್ಲಿ ಯಾವತ್ತೂ ಹಿಂದುಳಿದಿಲ್ಲ’ ಎಂದರು.

‘ನಮ್ಮಲ್ಲಿ ಶತಾವಧಾನ ಪದ್ಧತಿ ಇದೆ.  ಅದರಲ್ಲಿ ನೂರು ಜನರಿಂದ ಪ್ರಶ್ನೆ ಕೇಳಿ, ಒಬ್ಬೊಬ್ಬರ ಹೆಸರು ಹೇಳಿ ಉತ್ತರ ನೀಡಲಾಗುತ್ತದೆ. ಹೀಗೆ ಉತ್ತರಿಸುವ ಶತಾವಧಾನಿಯು ಕಂಪ್ಯೂಟರ್‌ಗಿಂತಲೂ ಸೂಕ್ಷ್ಮಮತಿ ಆಗಿರುತ್ತಾರೆ’ ಎಂದು ಅವರು ಹೇಳಿದರು.

ಶಿಕ್ಷಣದಲ್ಲಿ ಭಾರತದ ಸ್ಥಾನ: ಕಳವಳ
‘ಅತ್ಯುತ್ತಮ ಶಿಕ್ಷಕರನ್ನು ಹೊಂದಿರುವ ವಿಚಾರದಲ್ಲಿ ಫಿನ್ಲೆಂಡ್‌, ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಕೊನೆಯ ಸ್ಥಾನದಲ್ಲಿದೆ’ ಎಂದು  ಹಿರಿಯ ವಿಜ್ಞಾನಿ ಡಾ.ಸಿ.ಎನ್‌.ಆರ್‌. ರಾವ್‌ ಕಳವಳ ವ್ಯಕ್ತಪಡಿಸಿದರು.

‘ದೇಶದಲ್ಲಿ ಮುಂದಿನ 10ರಿಂದ 15 ವರ್ಷಗಳಲ್ಲಿ 3ರಿಂದ 4 ಕೋಟಿ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬರುತ್ತಾರೆ. ಅವರಿಗೆ ಎಂತಹ ಶಿಕ್ಷಣ ಸಿಗಬಹುದು ಎಂಬುದನ್ನು ನೆನೆಸಿಕೊಂಡರೆ ದಿಗಿಲಾಗುತ್ತದೆ’ ಎಂದು ಅವರು ಹೇಳಿದರು.

‘ಸರ್ಕಾರದ ಮಟ್ಟದಲ್ಲಿ ಬಜೆಟ್‌ನಲ್ಲಿ ಶಿಕ್ಷಣ ವ್ಯವಸ್ಥೆಗೆ ಆದ್ಯತೆ ಸಿಗಬೇಕು. ಶಾಲಾ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ  ಸಾಮಾಜಿಕ ಕಾರ್ಯಕರ್ತರು, ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಕರು ಮಾತ್ರವಲ್ಲದೇ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು  ಕರೆ ನೀಡಿದರು.

‘ಜ್ಞಾನ– ವಿಜ್ಞಾನದ ಪ್ರಸಾರಕ್ಕೆ ಸಂಬಂಧಿಸಿದಂತೆ  ಮಾಧ್ಯಮಗಳ ಕೊಡುಗೆ ಅತ್ಯಲ್ಪ.  ಯಾವ ಸಂಶೋಧನೆಗಳೂ ಪ್ರಕಟಗೊಳ್ಳುವುದಿಲ್ಲ. ಪತ್ರಿಕೆಗಳ ಮುಖಪುಟದಲ್ಲಿ ಕೊಲೆ, ಅತ್ಯಾಚಾರದಂತಹ ಕೆಡುಕಿನ ಸುದ್ದಿಗಳೇ ತುಂಬಿಕೊಂಡಿರುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇಸ್ರೊ ಮಾಜಿ ಅಧ್ಯಕ್ಷ ಯು.ಆರ್‌.ರಾವ್‌ ಮಾತನಾಡಿ, ‘ಈ ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ಜನಸಂಖ್ಯೆ 800 ಕೋಟಿಗಳಷ್ಟು ಆಗಲಿದೆ. ಭಾರತದ ಜನಸಂಖ್ಯೆಯೇ 180 ಕೋಟಿಗಳಷ್ಟು ಆಗುವ ಸಾಧ್ಯತೆ ಇದೆ. ಹೀಗೆ ಹೆಚ್ಚಾಗುವ ಜನಸಂಖ್ಯೆಗೆ ಆಹಾರ ಸೇರಿದಂತೆ ಬದುಕಲು ಬೇಕಾದ ಪರಿಸರ ನಿರ್ಮಿಸುವ ಸವಾಲನ್ನು ವಿಜ್ಞಾನ ಮಾತ್ರ ಎದುರಿಸಬಲ್ಲುದು’ ಎಂದರು.

‘ಮುಂದಿನ ದಿನಗಳಲ್ಲಿ  ಸಂಪನ್ಮೂಲಗಳಿಗಾಗಿ ಅನ್ಯ ಗ್ರಹಗಳನ್ನು ಅವಲಂಬಿಸುವುದು ಅನಿವಾರ್ಯವಾಗಲಿದೆ.  ಅನ್ಯ ಗ್ರಹಗಳಲ್ಲಿ ಮಾನವ ಕಾಲೋನಿಗಳನ್ನು ನಿರ್ಮಿಸಬೇಕಾಗುತ್ತದೆ’ ಎಂದು  ಭವಿಷ್ಯ ನುಡಿದರು.

‘ಒಂದೆಡೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳಾಗುತ್ತಿವೆ. ಇನ್ನೊಂದೆಡೆ ಟಿವಿ ಚಾನೆಲ್‌ಗಳಲ್ಲಿ ವಾಸ್ತು, ಜ್ಯೋತಿಷಗಳ ಹೆಸರಲ್ಲಿ ಕಾಗಕ್ಕ ಗುಬ್ಬಕ್ಕ ಕಥೆಗಳು ಹೆಚ್ಚೆಚ್ಚು ಪ್ರಸಾರವಾಗುತ್ತಿವೆ. ಉನ್ನತ ಶಿಕ್ಷಣ ಪಡೆದವರು, ಕೆಲ ವಿಜ್ಞಾನಿಗಳು ಮೂಢನಂಬಿಕೆಗಳ ಹಿಂದೆ ಬಿದ್ದಿದ್ದಾರೆ’ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT