ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಡಿಪ್ಲೊಮಾ

ವಿಟಿಯು ಮತ್ತೊಂದು ಹೊಸ ಹೆಜ್ಜೆ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಧಿಯಲ್ಲೇ ಸಂವಹನ ಕಲೆ, ನಾಯಕತ್ವ ಗುಣ, ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವೃದ್ಧಿ ಇತ್ಯಾದಿಗಳ ಬಗ್ಗೆ ತಿಳಿಸಿಕೊಡುವ ಮತ್ತು ಅವರ ಮುಂದಿನ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ‘ಡಿಪ್ಲೊಮಾ ಇನ್ ಪರ್ಸನಲ್ ಮ್ಯಾನೇಜ್‌ಮೆಂಟ್ ಕೋರ್ಸ್’ ಆರಂಭಿಸಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿ ಹೊರ ಬರುತ್ತಾರೆ. ಆದರೆ, ಅವರಿಗೆ ಉದ್ಯೋಗದಲ್ಲಿ ತೊಡಗಲು ಬೇಕಾದ ನೈಪುಣ್ಯತೆ, ಕೌಶಲ ಇರುವುದಿಲ್ಲ ಎಂಬ ಮಾತುಗಳು ಅನೇಕ ವರ್ಷಗಳಿಂದ ಕೇಳಿಬರುತ್ತಿವೆ. ಶೇ 85ರಷ್ಟು ಎಂಜಿನಿಯರಿಂಗ್ ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ. ಅವರಲ್ಲಿ ಸೂಕ್ತ ಕೌಶಲ ಇರುವುದಿಲ್ಲ ಎಂಬ ಮಾತನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಬಹಿರಂಗವಾಗಿಯೇ ಹೇಳಿದ್ದರು.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪದವಿ ಹಂತದಲ್ಲೇ ಮುಂದೆ ಉದ್ಯೋಗಕ್ಕೆ ಬೇಕಾದ ಕೌಶಲವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ತಾಂತ್ರಿಕ ವಿಶ್ವವಿದ್ಯಾಲಯವು ಮೈಸೂರಿನ ರಾಮ್ ಪರಿವರ್ತನಾ ಟ್ರಸ್ಟ್‌ನ ಸಹಯೋಗದೊಂದಿಗೆ ಡಿಪ್ಲೊಮಾ ಕೋರ್ಸ್ ಶುರು ಮಾಡಿದೆ. ಈ ಸಂಬಂಧ ವಿಶ್ವವಿದ್ಯಾಲಯ ಮತ್ತು ಟ್ರಸ್ಟ್ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ. ವಿಟಿಯು ಕುಲಪತಿ ಡಾ. ಎಚ್‌. ಮಹೇಶಪ್ಪ ಅವರ ವಿಶೇಷ ಕಾಳಜಿಯಿಂದಾಗಿ ಈ ಕೋರ್ಸ್‌ ರೂಪುಗೊಂಡಿದೆ.

ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಅದರ ಸಂಯೋಜಿತ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಪರ್ಸನಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಇದು ತಲಾ ಆರು ತಿಂಗಳ ಎರಡು ಸೆಮಿಸ್ಟರ್‌ಗಳನ್ನು ಒಳಗೊಂಡಿದೆ.

ಮೊದಲ ಸೆಮಿಸ್ಟರ್–ಬೇಸಿಕ್: ಇದರಲ್ಲಿ ವ್ಯಕ್ತಿತ್ವ ವಿಕಸನ, ಸಂಪನ್ಮೂಲ ನಿರ್ವಹಣೆ, ಪರಿಣಾಮಕಾರಿ ಸಂವಹನ ಸೇರಿದಂತೆ ಮುಖ್ಯವಾಗಿ ಮೂರು ವಿಷಯಗಳು ಇರುತ್ತವೆ. ಈ ಕೋರ್ಸ್‌ನ ಶುಲ್ಕ ರೂ 5 ಸಾವಿರ. ಎರಡನೇ ಸೆಮಿಸ್ಟರ್ –ಅಡ್ವಾನ್ಸಡ್: ಬೇಸಿಕ್‌ನಲ್ಲಿ ಪಾಸಾದವರು ಮಾತ್ರ ಇದಕ್ಕೆ ಸೇರಬಹುದು. ಇದರಲ್ಲಿ ಮುಖ್ಯವಾಗಿ ವೃತ್ತಿಪರ ಪರಿಣತಿ, ಕಾರ್ಪೋರೇಟ್ ಸಂವಹನ ಮತ್ತು ಇಂಗ್ಲಿಷ್ ಹಾಗೂ ನಾಯಕತ್ವಕ್ಕೆ ಸಂಬಂಧಪಟ್ಟ ವಿಷಯಗಳು ಇರುತ್ತವೆ. ಈ ಕೋರ್ಸ್‌ನ ಶುಲ್ಕ ರೂ 6 ಸಾವಿರ.

ವಿಶ್ವವಿದ್ಯಾಲಯದ ಬೆಳಗಾವಿ, ಗುಲ್ಬರ್ಗ, ಮೈಸೂರು ಮತ್ತು ಬೆಂಗಳೂರು ಪ್ರಾದೇಶಿಕ ಕೇಂದ್ರ, ದಾವಣಗೆರೆಯ ಯುಬಿಡಿಟಿ ಕಾಲೇಜು ಹಾಗೂ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಪ್ರತಿ ಭಾನುವಾರ ಮಾತ್ರ ತರಗತಿಗಳು ನಡೆಯುತ್ತವೆ. ತರಗತಿಗಳನ್ನು ಆಯೋಜಿಸುವುದು, ತಜ್ಞರಿಂದ ತರಬೇತಿ ಕೊಡಿಸುವುದು, ಪರೀಕ್ಷೆ ನಡೆಸುವುದು ರಾಮ್ ಪರಿವರ್ತನಾ ಟ್ರಸ್ಟ್‌ನ ಜವಾಬ್ದಾರಿ. ತಾಂತ್ರಿಕ ವಿಶ್ವವಿದ್ಯಾಲಯವು ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಿದೆ.
ಎಂಜಿನಿಯರಿಂಗ್ ಪದವಿ ಪಡೆದ ನಂತರ ಉದ್ಯೋಗ ಬಯಸಿ ಯಾವುದೇ ಕಂಪೆನಿಗೆ ಅರ್ಜಿ ಹಾಕಿದಾಗ ಸಂದರ್ಶನ ಪತ್ರ ಬರುತ್ತದೆ.

ಆದರೆ, ಸಂದರ್ಶನವನ್ನು ಎದುರಿಸುವುದು ಹೇಗೆ? ಅದಕ್ಕೆ ಯಾವ ರೀತಿ ಸಿದ್ಧರಾಗಬೇಕು ಎಂಬುದು ಬಹಳಷ್ಟು ಮಂದಿಗೆ ಗೊತ್ತಿರುವುದಿಲ್ಲ. ಗುಂಪು ಚರ್ಚೆ, ಸಂವಹನ ಕೌಶಲದ ಕೊರತೆಯಿಂದಾಗಿ ಕೆಲಸ ಪಡೆಯಲು ವಿಫಲರಾಗುತ್ತಾರೆ. ಇದಕ್ಕೆಲ್ಲ ಮುಖ್ಯವಾದ ಕಾರಣ ಅಭ್ಯರ್ಥಿಗಳ ಹಿನ್ನೆಲೆ ಎನ್ನುತ್ತಾರೆ ರಾಮ್‌ಪರಿವರ್ತನಾ ಟ್ರಸ್ಟ್‌ನ ಮುಖ್ಯಸ್ಥ ಆರ್.ಎ. ಚೇತನ್‌ರಾಮ್.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕಾಲೇಜುಗಳಿವೆ. ಅಲ್ಲಿ ವ್ಯಾಸಂಗ ಮಾಡುವ ಬಹಳಷ್ಟು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವಗುಣ, ಸಂವಹನ ಕೌಶಲ ಮಹತ್ವದ ಅರಿವು ಇರುವುದಿಲ್ಲ. ಅವರಿಗೆ ವ್ಯಾಸಂಗದ ಅವಧಿಯಲ್ಲೇ ಈ ಅಂಶಗಳ ಬಗ್ಗೆ ತರಬೇತಿ ನೀಡಿದರೆ ಮುಂದೆ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಎಂಬುದು ಅವರ ಅನಿಸಿಕೆ.

ವ್ಯಾಸಂಗ ಅವಧಿಯಲ್ಲೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಸರ್ಟಿಫಿಕೇಟ್ ನೀಡುವುದರಿಂದ ಕಂಪೆನಿಗಳು ಸುಲಭವಾಗಿ ಕೆಲಸ ನೀಡುತ್ತವೆ. ಸಂದರ್ಶನಕ್ಕೆ ಹೋದಾಗ ಸರ್ಟಿಫಿಕೇಟ್ ತೋರಿಸಿದರೆ ಸಾಕು. ಅಂತಹವರಿಗೆ ಮತ್ತೆ ತರಬೇತಿ ನೀಡುವ ಅಗತ್ಯವಿಲ್ಲ ಎಂದು ಭಾವಿಸಿ ಮೊದಲ ಪ್ರಾಶಸ್ತ್ಯ ನೀಡುತ್ತವೆ. ಈ ರೀತಿಯ ಕೋರ್ಸ್ ಮಾಡುವುದರಿಂದ ಕೆಲಸ ಪಡೆಯುವುದು ಸುಲಭವಾಗುತ್ತದೆ. ಅಲ್ಲದೆ ಉದ್ಯೋಗಕ್ಕೆ ಸೇರಿದ ನಂತರ ತರಬೇತಿ ನೀಡುವುದೂ ತಪ್ಪುತ್ತದೆ. ಒಟ್ಟಿನಲ್ಲಿ ಎರಡೂ ದೃಷ್ಟಿಯಿಂದ ಅನುಕೂಲವಿದೆ.
ಜನವರಿಯಿಂದ ಈ ಕೋರ್ಸ್ ಶುರುವಾಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ: www.vtu.ac.in/www.amcad.in. ದೂರವಾಣಿ ಸಂಖ್ಯೆ: ೦೮೨೧–೨೫೬೧೭೫೫

ವಿದ್ಯಾರ್ಥಿಗಳಿಗೆ ಅನುಕೂಲ

ಕಂಪೆನಿಗಳು ಉದ್ಯೋಗ ನೀಡುವಾಗ ಪದವೀಧರರಿಂದ ಏನನ್ನು ಅಪೇಕ್ಷಿಸುತ್ತವೆ. ಯಾವ ಯಾವ ಕ್ಷೇತ್ರದಲ್ಲಿ ಅವರಿಗೆ ಕೌಶಲದ ಅಗತ್ಯವಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ. ಕೋರ್ಸ್ ಪೂರ್ಣಗೊಂಡ ಯಾವ ಎಂಜಿನಿಯರಿಂಗ್ ಪದವೀಧರರೂ ಉದ್ಯೋಗವಿಲ್ಲದೆ ನಿರುದ್ಯೋಗಿಯಾಗಿ ಮನೆಯಲ್ಲಿ ಕೂರಬಾರದು. ಒಂದಲ್ಲ ಒಂದು ಕಡೆ ಉದ್ಯೋಗ ಅವಕಾಶ ಸಿಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಆರಂಭಿಸಿರುವ ಕೋರ್ಸ್‌ನಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
– ಡಾ. ಎಚ್. ಮಹೇಶಪ್ಪ
ಕುಲಪತಿ, ವಿಟಿಯು


ನಿರೀಕ್ಷೆಗೆ ತಕ್ಕಂತೆ ಸಜ್ಜು


ಒತ್ತಡ, ಸಮಯ ನಿರ್ವಹಣೆ, ಗುಂಪು ಚರ್ಚೆ, ಪರಿಣಾಮಕಾರಿ ಸಂವಹನ, ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಮಾತನಾಡುವ ಕಲೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ನಾಯಕತ್ವಗುಣ ಇತ್ಯಾದಿ ಅಂಶಗಳನ್ನು ಕರಗತ ಮಾಡಿಕೊಂಡರೆ ಕೆಲಸ ಪಡೆಯುವುದು ಸುಲಭವಾಗುತ್ತದೆ. ಅನೇಕ ವರ್ಷಗಳಿಂದ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ನೀಡುತ್ತಿದ್ದು, ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದೆ. ಉದ್ಯೋಗ ನೀಡುವಾಗ ಸಂಸ್ಥೆಯ ಮುಖ್ಯಸ್ಥ ಏನನ್ನು ನಿರೀಕ್ಷೆ ಮಾಡುತ್ತಾರೆ ಎಂಬುದನ್ನು ಆಧರಿಸಿ, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂಬುದು ನಮ್ಮ ಟ್ರಸ್ಟ್‌ನ ಆಶಯ.
– ಆರ್.ಎ. ಚೇತನ್‌ರಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT