ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ, ಸಮೃದ್ಧ ಭಾರತ ನಿರ್ಮಿಸಿ: ಸಚಿವ

Last Updated 27 ಜನವರಿ 2015, 11:23 IST
ಅಕ್ಷರ ಗಾತ್ರ

ಹಾಸನ: ‘ಇತರೆ ರಾಷ್ಟ್ರಗಳ ಪ್ರಜೆಗಳಿಗೆ ಹೊಲಿಸಿದರೆ ಭಾರತೀಯರು ಹೆಚ್ಚು ಸಮಾನತೆ ಹಾಗೂ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ. ಅದಕ್ಕೆ ನಮ್ಮ ಶ್ರೇಷ್ಠ ಸಂವಿಧಾನವೇ ಕಾರಣ. ಸಂವಿಧಾನದ ಆಶಯ ಉಳಿಸಿಕೊಂಡು ಸಮೃದ್ಧ ರಾಷ್ಟ್ರ ನಿರ್ಮಿಸುವುದು ಎಲ್ಲರ ಕರ್ತವ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಪಟ್ಟಣದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ನಮ್ಮ ಸಂವಿಧಾನದ ಸಿದ್ಧಾಂತ. ಮೌಢ್ಯತೆ ಕಿತ್ತೊಗೆದು, ಶಾಂತಿ, ಸಮೃದ್ಧಿಯ ಭಾರತ ನಿರ್ಮಿಸುವ ಮೂಲಕ ನಾವು ಪ್ರಜಾಪ್ರಭುತ್ವದ ಧ್ಯೇಯೋದ್ದೇಶ ಈಡೇರಿಸ­ಬೇಕಾಗಿದೆ ಎಂದರು.

ಇದಕ್ಕೂ ಮೊದಲು ಅವರು ತೆರೆದ ಜೀಪ್‌ನಲ್ಲಿ ಪರೇಡ್‌ ವೀಕ್ಷಿಸಿ ಧ್ವಜವಂದನೆ ಸ್ವೀಕರಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಜಿಲ್ಲೆಗೆ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಶಾಲೆಗಳ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ‘ಸ್ವಾತಂತ್ರ್ಯ ಸಂಗ್ರಾಮದ ಗೀತ ಕಥನ’ ನಡೆಸಿಕೊಟ್ಟರು.

ದೇಶದ ಸಮಗ್ರತೆ ಕಾಪಾಡಿ
ಆಲೂರು: ಭವ್ಯ ಇತಿಹಾಸ ಪರಂಪರೆ ಹೊಂದಿರುವ ಭಾರತೀಯ ಸಂಸ್ಕೃತಿ, ಏಕತೆ, ಸಮಗ್ರತೆ ಹಾಗೂ ರಾಷ್ಟ್ರೀಯತೆ ಕಾಪಾಡುವುದು ಎಲ್ಲ ವರ್ಗದ ಜನರ ಹೊಣೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಟಿ.ಆರ್. ಮಹದೇವಯ್ಯ, ಯುವಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ದೇಶದ ಪ್ರಾಮಾಣಿಕ ನಾಗರಿಕರಾಗಿ ರೂಪಗೊಳ್ಳಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಲಕ್ಷ್ಮಣಯ್ಯ ಮಾತನಾಡಿದರು. ಪೊಲೀಸ್ ಮತ್ತು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷೆ ನಾಗಮ್ಮ ಅಜ್ಜೇಗೌಡ, ಉಪಾಧ್ಯಕ್ಷೆ ರಾಧಾ ಕುಮಾರ್, ಪ.ಪಂ. ಅಧ್ಯಕ್ಷೆ ನೀಲೋಫರ್, ಸದಸ್ಯ ಜಯಣ್ಣ, ಸೈಯ್ಯದ್ ಜಾಫರ್, ತಾಲ್ಲೂಕು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಹಾಜರಿದ್ದರು.

ಸಂವಿಧಾನದ ಆಶಯ ಪಾಲಿಸಿ
ಅರಕಲಗೂಡು:  ಕಟ್ಟುನಿಟ್ಟಾಗಿ ಸಂವಿಧಾನದ ಆಶಯ ಪಾಲಿಸಿ­ದಾಗ ಮಾತ್ರ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಲು ಸಾಧ್ಯ ಎಂದು ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ಆರ್. ಮೋಹನ್ ಧ್ವಜಾರೋಹಣ ನೆರವೇರಿಸಿದರು. ಹಾಸನ ಸರ್ಕಾರಿ ಕಲಾ ಕಾಲೇಜು ಸಹ ಪ್ರಾಧ್ಯಾಪಕ ಎನ್.ಎಂ. ಲಕ್ಷ್ಮಣ ಪ್ರಧಾನ ಭಾಷಣ ಮಾಡಿದರು. ತಾ.ಪಂ. ಅಧ್ಯಕ್ಷ ನರಸೇಗೌಡ, ಉಪಾಧ್ಯಕ್ಷೆ ಮಾಕಮ್ಮ, ಪ.ಪಂ. ಅಧ್ಯಕ್ಷೆ ಮಂಜುಳಾ, ಸದಸ್ಯರಾದ ನಂದಕುಮಾರ್, ಮಂಜುನಾಥ್, ಮಂಜುಳಾ ವಿರೂಪಾಕ್ಷ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ನಾಗೇಶ್  ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪತ್ರಕರ್ತ
ಸಿ. ಜಯಕುಮಾರ್, ಕಂಚಿರಾಯ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಬಿ. ಲಿಂಗರಾಜು, ವೃತ್ತಿ ಶಿಕ್ಷಕ ಸಿ. ಗಂಗಾಧರಯ್ಯ, ಕ್ರೀಡಾಪಟು ಡಿ. ಹರೀಶ್, ಪ್ರಗತಿಪರ ರೈತ ಕೊಳ್ಳಂಗಿ ಪವನಕುಮಾರ್, ಅಂತರಾಜ್ಯ ಗುಡ್ಡಗಾಡು ಕಾರ್ ರೈಡರ್ ಕೊಣನೂರು ಎ. ಅಶ್ವಿನ್ ಅವರನ್ನು ಗೌರವಿಸಲಾಯಿತು. ಪಟ್ಟಣದ ಕಂಚಿರಾಯ ಪ್ರೌಢಶಾಲೆ ನಿರ್ಮಿಸಿದ್ದ ಆಧಾರ್ ಕಾರ್ಡ್  ಮಹತ್ವ ತಿಳಿಸುವ ಸ್ಥಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು.

ಸಾಂಸ್ಕೃತಿಕ ಲೋಕ ಅನಾವರಣ
ಅರಸೀಕೆರೆ: ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ­ದಲ್ಲಿ ನಗರದ 20 ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿವಿಧ 10 ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಸೇರಿದಂತೆ ನಾನಾ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ­ದರು. ಇದು ಪ್ರೇಕ್ಷಕರ ಮನಸೂರೆಗೊಂಡಿತು.

ಹಾಸನ ರಸ್ತೆಯ ಸರ್ಕಾರಿ ಶಾಲೆ ಹಾಗೂ ಜೇನುಕಲ್‌ ನಗರ ಬಡಾವಣೆಯ ಸರ್ಕಾರಿ ಶಾಲೆ  ಮತ್ತು ಸಂತ ಮೇರಿ ಪ್ರೌಢಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ದುಷ್ಟ ಶಕ್ತಿಗಳ ದಮನಕ್ಕೆ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ ಎಂದರು.

2 ಗ್ರೇಡ್‌ ತಹಶೀಲ್ದಾರ್‌ ವೈ.ಪಿ. ಪಾಲಾಕ್ಷ ಧ್ವಜಾ­ರೋಹಣ ನೆರವೇರಿಸಿದರು. ಪೊಲೀಸ್‌, ಗೃಹ ರಕ್ಷಕ ದಳ, ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ನಗರಸಭಾ ಅಧ್ಯಕ್ಷ ಕೆ.ಸಿ. ಪಂಚಾಕ್ಷರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಮೀವುಲ್ಲಾ, ಉಪಾಧ್ಯಕ್ಷೆ ಅನ್ನಪೂರ್ಣ ಸತೀಶ್‌, ತಾ.ಪಂ. ಅಧ್ಯಕ್ಷ ಎತ್ತಿನಮನೆ ಲಕ್ಷ್ಮಣ, ಎಪಿಎಂಸಿ ಅಧ್ಯಕ್ಷ ವಾಲೇಹಳ್ಳಿ ಕಲ್ಲೇಶಪ್ಪ ಇದ್ದರು.

ಮಾದರಿ ಸಂಸ್ಕೃತಿ, ಸಂಸ್ಕಾರ
ಬಾಣಾವರ: ವಿಭಿನ್ನತೆಯಲ್ಲಿ ಏಕತೆ ಕಾಣುವ ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಜಗತ್ತಿಗೆೇ ಮಾದರಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ಸತೀಶ್‌ ಹೇಳಿದರು.

ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.

ನಿವೃತ್ತ ಯೋಧ ಬಿ.ಎಸ್‌. ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಪೊಲಿೇಸ್‌ ತಂಡ, ಎನ್‌ಸಿಸಿ, ಹೊಂಗಾರ್ಡ್‌, ಸೇವಾದಳ ಪಥ ಸಂಚಲನ ನಡೆಸಿದವು. ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾ.ಪಂ. ಸದಸ್ಯ ಬಿ. ರವಿಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಬಿ.ಆರ್‌. ಜಯಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಆರ್‌. ಶ್ರೀಧರ್, ಪಿ.ಆರ್‌. ನಾಗೇಂದ್ರ, ವಿಶಾಲಾಕ್ಷಮ್ಮ, ಕರವೇ ಗೌರವಾಧ್ಯಕ್ಷ ಲಕ್ಷ್ಮೀಶ್‌, ಪ್ರಾಂಶುಪಾಲ ವಿಜಯ­ಕುಮಾರ್, ಉಪಪ್ರಾಂಶುಪಾಲ ಶಿವಕುಮಾರ್‌, ಕೆಡಿಪಿ ಸದಸ್ಯ ಶಮ್ಮಿಉಲ್ಲಾ ಷರೀಫ್  ಭಾಗವಹಿಸಿದ್ದರು.

ಸುಭದ್ರ ಸಂವಿಧಾನ
ಹಳೇಬೀಡು: ಸ್ವಾತಂತ್ರ್ಯ ದಿನಾಚರಣೆಯಷ್ಟೆ ಮಹತ್ವ ಗಣರಾಜ್ಯೋತ್ಸವಕ್ಕೆ ಇದೆ ಎಂದು ಭಾಗ್ಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್‌. ಲಿಂಗೇಶ್‌ ಹೇಳಿದರು.

ಪಟ್ಟಣದ ಕಲ್ಪತರು ವಿದ್ಯಾಲಯ ಆವರಣದಲ್ಲಿ ಕಲ್ಪತರು ಪದವಿಪೂರ್ವ ಕಾಲೇಜು, ಕಲ್ಪತರು ಆಂಗ್ಲ ಮಾಧ್ಯಮ ಶಾಲೆ, ಕನ್ನಡ ಮಾಧ್ಯಮ ಶಾಲೆ ಹಾಗೂ ಕೆಎಸ್‌ಎಸ್‌ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಾಂಶುಪಾಲ ಎಂ.ಸಿ. ಕುಮಾರ್‌, ಮುಖ್ಯಶಿಕ್ಷಕ­ಈಶ್ವರಪ್ಪ, ರಮೇಶ್‌, ಅಂಗ್ಲಮಾಧ್ಯಮ ಶಿಕ್ಷಕ ಮಧುಕುಮಾರ್‌ ಹಾಜರಿದ್ದರು. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಕೃಷ್ಣ ಧ್ವಜಾರೋಹಣ ನೆರವೇರಿಸಿದರು.

ವಿವಿಧತೆಯಲ್ಲಿ ಏಕತೆ
ಹೊಳೆನರಸೀಪುರ: ಹತ್ತಾರು ಧರ್ಮಗಳು, ಸಾವಿರಾರು ಭಾಷೆಗಳು ಹೀಗೆ ಹಲವಾರು ವಿಭಿನ್ನತೆ ಹೊಂದಿದ್ದರೂ ಏಕತೆ ಇರುವ ಏಕೈಕ ರಾಷ್ಟ್ರ ಭಾರತ. ಇದಕ್ಕೆ ಕಾರಣವಾಗಿರುವುದು ನಮ್ಮ ಸಂವಿಧಾನ ಎಂದು ತಹಶೀಲ್ದಾರ್‌ ಎಸ್‌. ನಾಗರಾಜ್‌ ಹೇಳಿದರು.
ಇಲ್ಲಿನ ಬಯಲು ರಂಗಮಂದಿರದ ಆವರಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಉಪನ್ಯಾಸಕ ಪ್ರಭುಶಂಕರ್‌ ಮಾತನಾಡಿ, ೬೬ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದರೂ ಇನ್ನೂ ದೇಶದಲ್ಲಿ ಜನರಿಗೆ ಸಾಮಾಜಿಕ ನ್ಯಾಯ ದೊರೆತಿಲ್ಲ ಎಂದರು.

ತಾ.ಪಂ. ಅಧ್ಯಕ್ಷ ಸಿ.ಆರ್‌. ಮಂಜುನಾಥ್‌, ಪುರಸಭಾಧ್ಯಕ್ಷೆ ಕಲಾವತಿ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎಸ್‌. ಪುಟ್ಟಸೋಮಪ್ಪ, ಪುರಸಭಾ ಸದಸ್ಯ ಎ.ಆರ್‌. ರವಿಕುಮಾರ್‌, ಮುಖ್ಯಾಧಿಕಾರಿ ಹರೀಶ್‌, ಇಒ ತಮ್ಮಣ್ಣೇಗೌಡ ಹಾಜರಿದ್ದರು.

ಸಂವಿಧಾನ ಗೌರವಿಸಿ
ಜಾವಗಲ್‌: ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್‌ ಸೋಮವಾರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಪ್ರಭಾಕರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ ಮತ್ತು ಸದಸ್ಯರು ಹಾಜರಿದ್ದರು.

ನಾಡಕಚೇರಿಯಲ್ಲಿ ಉಪತಹಶೀಲ್ದಾರ್‌ ಅಶೋಕ್‌ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ಮುದ್ದು ವೀರಯ್ಯ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಯ್ಕ್‌ ಇದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀ ರವಿಶಂಕರ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಗೌರವಿಸಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜು ಅಧ್ಯಕ್ಷತೆವಹಿಸಿದ್ದರು.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ವಸಂತರಾಜ್‌ ಅರಸ್‌ ಧ್ವಜಾರೋಹಣ ನೆರವೇರಿಸಿದರು. ಉಪಪ್ರಾಂಶುಪಾಲ ಯೋಗೀಶ್‌, ಉಪನ್ಯಾಸಕರಾದ ಶ್ರೀನಿವಾಸ್‌, ಲತಾ, ಶಿಕ್ಷಕರಾದ ಚಂದ್ರೇಗೌಡ, ನಂದ ಮಾತನಾಡಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ರಮೇಶ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನೇರ್ಲಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌.ಆರ್. ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ಅಧ್ಯಕ್ಷ ಎನ್‌. ಮಲ್ಲೇಗೌಡ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ದೇವೀರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ ಮತ್ತು ಸದಸ್ಯರು ಹಾಜರಿದ್ದರು.

ಸಮಯಪ್ರಜ್ಞೆ ಕೊರತೆ
ಸಕಲೇಶಪುರ: ಭಾರತಿಯರಲ್ಲಿನ ಶಿಸ್ತು, ಸಮಯಪ್ರಜ್ಞೆ ಕೊರತೆಯು ದೇಶದ ಅಭಿವೃದ್ಧಿಗೆ ಅಡ್ಡವಾಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳು ಈಗಲೂ ಸಮಗ್ರವಾಗಿ ಜಾರಿಯಾಗದಿರುವುದು ಶೋಚನಿಯ  ಎಂದರು.

ಉಪವಿಭಾಗಾಧಿಕಾರಿ ಡಾ.ಮಧುಕೇಶ್ವರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈಲ್ವೆ ಇಲಾಖೆ ಉದ್ಯೋಗಿ ಭಾರತಿ, ಪೌರಕಾರ್ಮಿಕ ಮಹಿಳೆ ನಾಗಮ್ಮ, ಆರೋಗ್ಯ ಇಲಾಖೆಯ ಗಂಗರಾಜು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ರಾಜು ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ರೋಟರಿ ಆಂಗ್ಲ ಶಾಲೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ದ್ವಿತೀಯ ಹಾಗೂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತೃತಿಯ ಸ್ಥಾನ ಪಡೆದರು. ಸ್ತಬ್ಧಚಿತ್ರ ವಿಭಾಗದಲ್ಲಿ ಶಾಪ್ ಸಿದ್ದೇಗೌಡರ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ ಆಗ್ನೆಸ್ ಶಾಲೆ ಹಾಗೂ ಮಾನಸ ಶಾಲೆ ವಿದ್ಯಾರ್ಥಿಗಳು ಬಹುಮಾನ ಪಡೆದರು.

ತಾ.ಪಂ. ಅಧ್ಯಕ್ಷ ಬಿ. ಸಿದ್ದಯ್ಯ, ಪುರಸಭೆ ಅಧ್ಯಕ್ಷ ಸಂತೋಷ್ ಕುಮಾರ್, ಡಿವೈಎಸ್ಪಿ ಪಿ.ವಿ. ಸ್ನೇಹಾ, ತಹಶೀಲ್ದಾರ್ ಪಾರ್ವತಿ, ಬಿಇಒ ಕೆ.ಎಸ್. ಪ್ರಕಾಶ್, ಇಒ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ, ಜಿ.ಪಂ. ಸದಸ್ಯೆ ಸುಲೋಚನಾ ರಾಮಕೃಷ್ಣ, ಮಂಜಮ್ಮ ತಿಪ್ಪೆಸ್ವಾಮಿ ಹಾಜರಿದ್ದರು.

ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ
ಬೇಲೂರು:
‘ಹಲವು ಜಾತಿ ಧರ್ಮಗಳಿಂದ ಕೂಡಿರುವ ಭಾರತ ವೈವಿಧ್ಯತೆಯಿಂದ ಕೂಡಿದ್ದು, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ’ ಎಂದು ಶಾಸಕ ವೈ.ಎನ್‌.ರುದ್ರೇಶ್‌ಗೌಡ ಹೇಳಿದರು.

ಪಟ್ಟಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣರಾಜ್ಯೋತ್ಸವ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಂಗಸ್ವಾಮಿ (ನಾಗರಿಕ ಸೇವೆ), ಎಚ್‌.ಎಂ. ದಯಾನಂದ್‌ (ಸಮಾಜಸೇವೆ), ಎಚ್‌.ಎಸ್‌. ಅನಿಲ್‌ಕುಮಾರ್‌ (ಪತ್ರಿಕೋದ್ಯಮ), ಎಚ್‌.ಪಿ. ಶಾಂತಕುಮಾರ್ (ಕಲಾ ಸೇವೆ), ಎ.ಎಸ್‌.ಚೈತ್ರಾ (ಕ್ರೀಡಾ ಕ್ಷೇತ್ರ), ತಿಮ್ಮೇಗೌಡ (ಕಂದಾಯ ಇಲಾಖೆ) ಅವರನ್ನು ಶಾಸಕ ವೈ.ಎನ್‌. ರುದ್ರೇಶ್‌ಗೌಡ ಸನ್ಮಾನಿಸಿದರು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಕದಂಬ ವೈಭವ’ ನೃತ್ಯರೂಪಕ ಜನರ ಮನಸೂರೆಗೊಂಡಿತು.
ತಹಶೀಲ್ದಾರ್‌ ಬಿ.ಎ. ಜಗದೀಶ್‌ ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಅಧ್ಯಕ್ಷ ಅಬ್ದುಲ್‌ ಸುಭಾನ್‌, ಉಪಾಧ್ಯಕ್ಷ ಬಿ.ಆರ್‌. ಪದ್ಮಾಕ್ಷಿ, ಪುರಸಭೆ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌, ಉಪಾಧ್ಯಕ್ಷೆ ಸಲ್ಮಾ ಅಕ್ತರಿ, ಜಿ.ಪಂ. ಸದಸ್ಯರಾದ ಬಿ.ಡಿ.ಚಂದ್ರೇಗೌಡ, ಎಂ.ವಿ.ಹೇಮಾವತಿ, ಜಿ.ಟಿ. ಇಂದಿರಾ, ಬಿ. ಜಯಶೀಲಾ, ಎಪಿಎಂಸಿ ಅಧ್ಯಕ್ಷ ಸಿ.ಎಚ್‌. ಮಹೇಶ್‌, ತಾ.ಪಂ. ಇಒ ಬಸವರಾಜ್‌ ಐಯ್ಯಣ್ಣನವರ್‌, ಬಿಇಒ ವೈ.ಬಿ. ಸುಂದ್ರೇಶ್‌, ಮುಖ್ಯಾಧಿಕಾರಿ ಬಿ.ಸಿ. ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT