ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದಾ ಪೀಠದ ಉತ್ತರಾಧಿಕಾರಿ ಸನ್ಯಾಸ ಸ್ವೀಕಾರ ಇಂದು

Last Updated 21 ಜನವರಿ 2015, 19:30 IST
ಅಕ್ಷರ ಗಾತ್ರ

ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ): ಸನಾತನ ಧರ್ಮ ಪ್ರಚಾರಕ್ಕೆ 12ನೇ ಶತ­ಮಾನದಲ್ಲಿ ಆದಿಶಂಕರಾ­ಚಾ­ರ್ಯರು ಸ್ಥಾಪಿಸಿದ ನಾಲ್ಕು ಪೀಠಗ­ಳಲ್ಲಿ ಮೊದಲನೆ­ಯದಾದ ಶೃಂಗೇರಿ ಶಾರದಾ ಪೀಠದ 37ನೇ ಪೀಠಾಧಿ­ಪತಿ­ಯಾಗಿ ಆಯ್ಕೆಯಾ­ಗಿರುವ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ ಅವರ ಸನ್ಯಾಸ ಸ್ವೀಕಾರ ಇದೇ 22ರಿಂದ ಶೃಂಗೇರಿ ಶಾರದಾ ಮಠದಲ್ಲಿ ಆರಂಭವಾಗಲಿದೆ.

ಎರಡು ದಿನಗಳ ಕಾಲ ನಡೆಯುವ ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಶೃಂಗೇರಿ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರು, ತಮ್ಮ ಉತ್ತರಾಧಿ­ಕಾರಿಯನ್ನು ಶಿಷ್ಯರಾಗಿ ಸ್ವೀಕರಿಸಿ, ಕಾಷಾಯವಸ್ತ್ರ, ದಂಡ, ಕಮಂಡಲ ಅನುಗ್ರಹಿಸಲಿದ್ದಾರೆ.

ಬ್ರಹ್ಮಚಾರಿ ವೆಂಕಟೇಶ್ವರ ಪ್ರಸಾದ ಶರ್ಮ ಅವರು ಗುರುವಾರ ಬೆಳಿಗ್ಗೆ 8 ಗಂಟೆಗೆ ಭಾರತೀ ತೀರ್ಥರಿಗೆ ವಂದನೆ ಸಲ್ಲಿಸುವ ಮುಖೇನ ಸನ್ಯಾಸ ಸ್ವೀಕಾರ ಸಮಾರಂಭ ವಿಧ್ಯುಕ್ತವಾಗಿ ಆರಂಭ­ವಾಗಲಿದೆ. ನೂತನ ಪೀಠಾಧಿ­ಪತಿ­ಗಳು ಬೆಳಿಗ್ಗೆ 8.30ಕ್ಕೆ ಶಾರದಾ ದೇವಾಲ­ಯದ ಶಕ್ತಿಗಣಪತಿ ಸನ್ನಿಧಿಯಲ್ಲಿ ನಡೆ­ಯುವ ಅಷ್ಟದ್ರವ್ಯ ಮಹಾಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಭಾಗ­ವ­ಹಿಸುವರು. ಮಠದ ಎಲ್ಲ ದೇವಾ­ಲಯ­ಗಳಿಗೆ ಹೋಗಿ ದೇವರ ದರ್ಶನ ಪಡೆದು, ನರಸಿಂಹವನ ಪ್ರವೇಶಿಸ­ಲಿದ್ದಾರೆ. ಅಲ್ಲಿರುವ ಹಿಂದಿನ ಗುರುಗಳ ಸಮಾಧಿ ಮಂದಿರ­ದಲ್ಲಿ 10 ಗಂಟೆ­ಯಿಂದ ಸನ್ಯಾಸ­ತ್ವದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

೨೩ರಂದು ಧಾರ್ಮಿಕ ವಿಧಿಗಳ ನಂತರ ಶರ್ಮಾ ಅವರು ಶ್ವೇತ ವಸ್ತ್ರ ಪರಿತ್ಯಾಗ ನಡೆಸಿ, ಭಾರತೀ ತೀರ್ಥರಿಂದ ಕಾಷಾಯವಸ್ತ್ರ, ದಂಡ, ಕಮಂಡಲ ಪಡೆಯಲಿದ್ದಾರೆ. ಪೀಠದ ಹಿರಿಯ ಗುರು­ಗಳು, ಬೆಳಿಗ್ಗೆ ೧೦.೩ಕ್ಕೆ ಶ್ರೀ ಶಾರ­ದಾಂಬ ದೇವಾಲಯದ ವ್ಯಾಖ್ಯಾನ ಸಿಂಹಾಸನದಲ್ಲಿ ತಮ್ಮ  ಶಿಷ್ಯ ಸ್ವಾಮೀಜಿ­ಯನ್ನು ಕುಳ್ಳಿರಿಸಿ, ಅವರ ಶಿರಸ್ಸಿನಲ್ಲಿ ಸಾಲಿಗ್ರಾಮ ಇಟ್ಟು, ಯೋಗಪಟ್ಟ ನೀಡಲಿದ್ದಾರೆ.

ಅಂದು ಸಂಜೆ ೫ ಗಂಟೆಗೆ ಗುರು­ವಂದನಾ ಸಭೆ, ಭಾರತೀ ತೀರ್ಥರ ಅನುಗ್ರಹ ಭಾಷಣ, ರಾತ್ರಿ ೮.೩೦ಕ್ಕೆ ಹಿರಿಯ ಶ್ರೀಗಳನ್ನು ಸ್ವರ್ಣ ಪಲ್ಲಕ್ಕಿ ಮತ್ತು ನೂತನ ಪೀಠಾಧಿಪತಿಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಶೃಂಗೇರಿಯ ರಾಜಬೀದಿಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ.

ಮಠದ ಪರಂಪರೆ­ಯಲ್ಲೇ ಅತಿ ಮಹತ್ವದ್ದಾದ ಶಿಷ್ಯ ಸ್ವೀಕಾರ ಸಮಾರಂಭ ನಾಲ್ಕು ದಶಕಗಳ ನಂತರ ನಡೆಯುತ್ತಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಮಠಾ­ಧೀಶರು, ಗಣ್ಯಾತಿಗಣ್ಯರು, ದೇಶ, ವಿದೇಶ­ಗಳ ಭಕ್ತರು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT