ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಿಗೆ ತಳಿರು ತೋರಣದ ಶೃಂಗಾರ

ಶಿವಮೊಗ್ಗ: ಶೇ 70ರಷ್ಟು ಹಾಜರಾತಿ, ಮೊದಲ ದಿನ ಸಿಹಿಯೂಟ ಸವಿದ ಮಕ್ಕಳು
Last Updated 31 ಮೇ 2016, 10:01 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮವಾರ ಶಾಲೆಗಳು ಪುನರಾರಂಭ ವಾಗಿದ್ದು, ಮೊದಲ ದಿನವೇ ಶೇ 70ರಷ್ಟು ಮಕ್ಕಳು ಹಾಜರಾತಿ ಕಂಡು ಬಂತು.
ಬಹುತೇಕ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮಧ್ಯಾಹ್ನ ಗೋದಿ–ಬೆಲ್ಲದ ಪಾಯಸ, ಕೆಲ ಶಾಲೆಗಳಲ್ಲಿ ಕಡಲೇ ಬೇಳೆ ಪಾಯಸದ ಜತೆಗೆ ಮಕ್ಕಳು ಬಿಸಿಯೂಟದ ಸವಿ ಸವಿದರು. 

ಎರಡು ತಿಂಗಳ ಬೇಸಿಗೆ ರಜೆ ಮುಗಿಸಿದ ಮಕ್ಕಳು ಉತ್ಸಾಹದಿಂದ ಶಾಲೆಗೆ ಆಗಮಿಸಿದರು. ಪ್ರಾಥಮಿಕ ಶಾಲೆಯ ಮೊದಲ ತರಗತಿಗಳ ಮಕ್ಕಳು ಮಾತ್ರ ದುಖಃಭರಿತ ಮೋರೆ ಹಾಕಿ ಕೊಂಡು ಶಾಲೆಕಡೆ ಹೆಜ್ಜೆ ಹಾಕುತ್ತಿದ್ದರು. ಸಂಜೆ ಶಾಲೆ ಬಿಟ್ಟಾಗ ಕೇಕೆ ಹಾಕುತ್ತಾ ಮನೆ ಕಡೆಗೆ ಓಟ ಕಿತ್ತರು.

ಎರಡು ತಿಂಗಳ ಬಾಗಿಲು ಮುಚ್ಚಿದ್ದ ಕಾರಣ ಶಾಲೆಗಳು ಸಾಕಷ್ಟು ದೂಳು ಹಿಡಿದಿದ್ದವು. ಹಿಂದಿನ ದಿನವೇ ಬಂದು ಶಾಲಾ ಸಿಬ್ಬಂದಿ ಶಾಲೆ ಆವರಣ, ಕೊಠಡಿ ಸ್ವಚ್ಛಗೊಳಿಸಿದ್ದರು. ಆದರೂ, ಸೋಮವಾರವೂ ಸ್ವಚ್ಛತಾ ಕಾರ್ಯ ಮುಂದುವರೆದಿತ್ತು.

ಜಿಲ್ಲೆಯಲ್ಲಿ 2.68 ಲಕ್ಷ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ಯವರೆಗಿನ 2.68 ಲಕ್ಷ ಮಕ್ಕಳು ಕಲಿಯು ತ್ತಿದ್ದಾರೆ. ಮೊದಲ ದಿನ ಎಲ್ಲ ಹಂತದ ಮಕ್ಕಳು ಸೇರಿ 1.87 ಲಕ್ಷ ಮಕ್ಕಳು ಬಂದಿದ್ದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 21,191 ಮಕ್ಕಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 81,457  ಮಕ್ಕಳು, ಅನುದಾನಿತ ಶಾಲೆಯಲ್ಲಿ 28,332 ಮಕ್ಕಳು, ಖಾಸಗಿ ಶಾಲೆಯಲ್ಲಿ 47,929 ಮಕ್ಕಳು ಕಲಿಯುತ್ತಿದ್ದಾರೆ.

ಸರ್ಕಾರಿ ಪ್ರೌಢಶಾಲೆಯಲ್ಲಿ 31,602 ವಿದ್ಯಾರ್ಥಿಗಳು, ಅನುದಾನ ರಹಿತ ಪ್ರೌಢಶಾಲೆಯಲ್ಲಿ 23,613  ಹಾಗೂ ಖಾಸಗಿ ಪ್ರೌಢಶಾಲೆಯಲ್ಲಿ 19,753 ವಿದ್ಯಾರ್ಥಿಗಳು ಇದ್ದಾರೆ.

2,982 ಪ್ರಾಥಮಿಕ ಶಾಲೆಗಳು: ಜಿಲ್ಲೆ ಯಲ್ಲಿ 2,982 ಪ್ರಾಥಮಿಕ ಶಾಲೆಗಳು, 452 ಪ್ರೌಢಶಾಲೆಗಳು ಇವೆ. ಅವುಗಳಲ್ಲಿ 1ರಿಂದ 5ನೇ ತರಗತಿ ವರೆಗಿನ 931 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 6ರಿಂದ 8ನೇ ತರಗತಿವರೆಗಿನ ಸರ್ಕಾರಿ 941 ಹಿರಿಯ ಪ್ರಾಥಮಿಕ ಶಾಲೆಗಳು, 102 ಅನುದಾನಿತ ಶಾಲೆಗಳು ಹಾಗೂ 1008 ಅನುದಾನ ರಹಿತ ಶಾಲೆಗಳಿವೆ.

452 ಪ್ರೌಢಶಾಲೆಗಳು: ಜಿಲ್ಲೆಯ 452 ಪ್ರೌಢಶಾಲೆಗಳಲ್ಲಿ 163 ಸರ್ಕಾರಿ, 149 ಅನುದಾನಿತ ಹಾಗೂ 140 ಅನುದಾನ ರಹಿತ ಖಾಸಗಿ ಪ್ರೌಢಶಾಲೆಗಳಿವೆ.
ಇಂದಿನಿಂದ ಪಠ್ಯಪುಸ್ತಕ ವಿತರಣೆ:  ಜಿಲ್ಲೆಯ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಗಳು ತಲುಪಿವೆ. ಮಂಗಳವಾರದಿಂದಲೇ ಪುಸ್ತಕ ವಿತರಿಸಲಾಗುವುದು. ಎರಡು–ಮೂರು ದಿನದಲ್ಲಿ ವಿತರಣಾ ಕಾರ್ಯ ಪೂರೈಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾರಾಯಣ ಗೌಡ ಮಾಹಿತಿ ನೀಡಿದರು.

ಸಮವಸ್ತ್ರ ಸಿದ್ಧಗೊಳ್ಳುತ್ತಿವೆ. ಶೀಘ್ರ ದಲ್ಲೇ ವಿತರಿಸಲಾಗುವುದು. 8ನೇ ತರಗತಿ ಮಕ್ಕಳಿಗೆ ಬೈಸಿಕಲ್ ನೀಡುವ ವಿಚಾರ ಇನ್ನು ಸರ್ಕಾರ ಮಟ್ಟದಲ್ಲಿದೆ. ಬೇಗನೆ ಬರುವ ನಿರೀಕ್ಷೆ ಇದೆ ಎಂದು ಡಿಡಿಪಿಐ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT