ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಕೇಂದ್ರ ಸ್ಥಳಾಂತರಕ್ಕೆ ಸಿದ್ಧ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಭರವಸೆ
Last Updated 25 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ತಾತ್ಕಾಲಿಕ ಕಟ್ಟಡ ಒದಗಿಸಿದ ತಕ್ಷಣ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್‌)ಯಲ್ಲಿರುವ ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರವನ್ನು ಸ್ಥಳಾಂತರ ಮಾಡಲಾಗು­ವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸೋಮವಾರ ಭರವಸೆ ನೀಡಿದರು.

ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಕೊಡುವುದಕ್ಕೂ ತಮ್ಮ ಸರ್ಕಾರ ಸಿದ್ಧವಿದೆ. ಆದರೆ, ಈ ವಿಷಯದಲ್ಲಿ ಕೆಲವು ವಿಧಿ–ವಿಧಾನಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದು ಸ್ಮೃತಿ ಇರಾನಿ ತಮ್ಮನ್ನು ಭೇಟಿ ಮಾಡಿದ ರಾಜ್ಯದ ನಿಯೋಗಕ್ಕೆ ತಿಳಿಸಿದರು.

ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರಕ್ಕೆ ತಾತ್ಕಾಲಿಕ ಕಟ್ಟಡ ಒದಗಿಸುವಂತೆ ತಮ್ಮ ಸಚಿವಾಲಯವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಕಟ್ಟಡದ ವ್ಯವಸ್ಥೆ ಮಾಡಿದ ತಕ್ಷಣ ತಡ ಮಾಡದೇ ಕೇಂದ್ರ ಸ್ಥಳಾಂತರಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ಮನವರಿಕೆ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌. ಹನುಮಂತಯ್ಯ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಹಿರಿಯ ವಿದ್ವಾಂಸ ಡಾ. ಎಂ. ಚಿದಾನಂದಮೂರ್ತಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್‌, ಜಿ.ಎಂ. ಸಿದ್ದೇಶ್ವರ ಅವರನ್ನೊಳಗೊಂಡ ನಿಯೋಗ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿತು.

ಕನ್ನಡ ಭಾಷೆ ಅಭಿವೃದ್ಧಿ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಒಬ್ಬರು ವಿದ್ವಾಂಸರನ್ನು ಪ್ರತಿ ವರ್ಷ ರಾಷ್ಟ್ರಪತಿಗಳು ಪುರಸ್ಕರಿಸಲಿದ್ದಾರೆ. ಪುರಸ್ಕಾರಕ್ಕೆ ಅರ್ಹರಾದ ವಿದ್ವಾಂಸರನ್ನು ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರ ಗುರುತಿಸಲಿಸಿದೆ. ಸಿಐಐಎಲ್‌ ಮೂಲಕ ಬರುವ ಶಿಫಾರಸನ್ನು ಮಾನವ ಸಂಪನ್ಮೂಲ ಸಚಿವಾಲಯ ರಾಷ್ಟ್ರಪತಿಗಳಿಗೆ ಕಳುಹಿಸಲಿದೆ ಎಂದೂ ಸಚಿವರು ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರಕ್ಕೆ ಈಗಾಗಲೇ ತಾತ್ಕಾಲಿಕ ಕಟ್ಟಡ ನೋಡಲಾಗಿದೆ. ಈ  ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಅಧಿಕೃತವಾಗಿ ಪತ್ರ ಬರೆಯಬೇಕಾಗಿದೆ ಎಂದು ಹನುಮಂತಯ್ಯ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಟ್ಟಡ ಸ್ಥಳಾಂತರಿಸಿದ ನಂತರ ವಿವಿಧ ಸಮಿತಿಗಳನ್ನು ರಚಿಸಲಿದೆ. ಕನ್ನಡ ಶಾಸ್ರ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ದೊರೆತ ಮೇಲೆ ಮಂಡಳಿಯೊಂದು ಅಸ್ತಿತ್ವಕ್ಕೆ ಬರಲಿದೆ. ಇದರಲ್ಲಿ ಸಿಐಐಎಲ್‌, ಎಚ್‌ಆರ್‌ಡಿ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳಿರುತ್ತಾರೆ ಎಂದು ಹನುಮಂತಯ್ಯ ಹೇಳಿದರು.

ಬಿಜೆಪಿ ಸಂಸದರಾದ ಪ್ರಹ್ಲಾದ್‌ ಜೋಶಿ, ರಮೇಶ್‌ ಜಿಗಜಿಣಗಿ, ಶಿವಕುಮಾರ್‌ ಉದಾಸಿ, ಸುರೇಶ್‌ ಅಂಗಡಿ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌. ಪ್ರತಾಪ ಸಿಂಹ, ಭಗವಂತ ಖೂಬಾ, ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಪಿ.ಕೆ. ಖಂಡೋಬಾ, ಜವಾಹರಲಾಲ್‌ ನೆಹರೂ ವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಪುರುಷೋತ್ತಮ ಬಿಳಿಮಲೆ, ಕನ್ನಡ ಚಳವಳಿಗಾರ ರಾ.ನಂ. ಚಂದ್ರಶೇಖರ್‌ ಸೇರಿದಂತೆ ಅನೇಕರು ನಿಯೋಗದಲ್ಲಿದ್ದರು.

ಹಿಂದೆಯೇ ಪತ್ರ ಬರೆದಿತ್ತು
ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಮಾನವ ಸಂಪನ್ಮೂಲ ಸಚಿವಾಲಯ ಸಿದ್ಧವಿದ್ದು ತಕ್ಷಣವೇ ತಾತ್ಕಾಲಿಕ ಕಟ್ಟಡ ಒದಗಿಸುವಂತೆ ಮನವಿ ಮಾಡಿ ಹಿಂದೆಯೇ ರಾಜ್ಯಕ್ಕೆ ಪತ್ರ ಬರೆದಿತ್ತು. ಈ ವರದಿಯನ್ನು ‘ಪ್ರಜಾವಾಣಿ’ ಏಪ್ರಿಲ್‌ 10ರಂದು ಪ್ರಕಟಿಸಿದೆ. ಕೇಂದ್ರ ಪತ್ರ ಬರೆದ ಬಳಿಕವೂ ರಾಜ್ಯದ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT