ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 5.8 ಶಬ್ದಮಾಲಿನ್ಯ ಹೆಚ್ಚಳ

ದೀಪಾವಳಿ ಪರಿಣಾಮ: ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ
Last Updated 25 ಅಕ್ಟೋಬರ್ 2014, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂರು ದಿನಗಳ ಕಾಲ ಜರುಗಿದ ದೀಪಾವಳಿ ಹಬ್ಬವು ನಗ­ರದಲ್ಲಿ ಸಾಮಾನ್ಯ ದಿನಕ್ಕಿಂತ ಶೇ 5.8 ಹೆಚ್ಚು ಶಬ್ದಮಾಲಿನ್ಯ ಉಂಟುಮಾಡಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶಬ್ದಮಾಲಿನ್ಯ ಮಾಪನ­ಕ್ಕಾಗಿ ವಿವಿಧ ವಲಯ­ಗಳಿಗೆ ಸೇರಿದ ಹತ್ತು ಪ್ರದೇಶಗಳಲ್ಲಿ ಸ್ವಯಂ ಚಾಲಿತ ಮಾಪನ ಯಂತ್ರಗಳನ್ನು ಅಳವಡಿಸಿದೆ. ಈ ಯಂತ್ರ­ಗಳು ಕ್ಷಣ ಕ್ಷಣದ ಮಾಹಿತಿಯನ್ನು ಸಂಗ್ರಹಿಸಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಕೇಂದ್ರ ವ್ಯವಸ್ಥೆಯಲ್ಲಿನ ಮಾಹಿತಿಯನ್ನು ಪರಿಷ್ಕರಿಸುತ್ತವೆ. ಸಾಮಾನ್ಯ ದಿನವಾದ ಸೋಮವಾರ (ಅ.20) ನಗರದಲ್ಲಿ ಕೇಳಿಬಂದ ಶಬ್ದ ಪ್ರಮಾಣವನ್ನು ಬುಧವಾರದಿಂದ ಶುಕ್ರ­ವಾರ­ದವರೆಗೆ (ಅ.22 ರಿಂದ 24ರ ವರೆಗೆ) ದೀಪಾವಳಿಯ ಅವಧಿಗೆ  ಹೋಲಿ­ಸಿದಾಗ ಈ ಶೇಕಡಾವಾರು ಏರಿಕೆ ಕಂಡುಬಂದಿದೆ.

ನರಕ ಚತುರ್ದಶಿಯ ದಿನವಾದ ಬುಧವಾರ ಕೈಗಾರಿಕೆ ಪ್ರದೇಶ­ವಾದ ಪೀಣ್ಯ, ವಾಣಿಜ್ಯ ಪ್ರದೇಶವಾದ ಚರ್ಚ್‌ ಸ್ಟ್ರೀಟ್‌ ಮತ್ತು ಸೂಕ್ಷ್ಮ ಪ್ರದೇಶಕ್ಕೆ ಸೇರುವ  ಮೈಸೂರು ರಸ್ತೆಯ ಆರ್‌.ವಿ.­ಎಂಜಿನಿಯರಿಂಗ್‌ ಕಾಲೇಜ್‌  ಸುತ್ತ­ಮುತ್ತ ಶಬ್ದ ಪ್ರಮಾಣ ಕಡಿಮೆ ಇತ್ತು. ಇನ್ನುಳಿದಂತೆ, ಕೈಗಾರಿಕೆ ಪ್ರದೇಶವಾದ ವೈಟ್‌ಫೀಲ್ಡ್‌, ವಾಣಿಜ್ಯ ಪ್ರದೇಶಗಳಾದ ಯಶವಂತಪುರ ಪೊಲೀಸ್‌ ಠಾಣೆ ಸುತ್ತಮುತ್ತ, ಮಾರತ್‌ಹಳ್ಳಿ, ಜನವಸತಿ ಪ್ರದೇಶ­ಗಳಾದ ಬಸವೇಶ್ವರ ನಗರ, ಬಿಟಿಎಂ ಬಡಾವಣೆ, ದೊಮ್ಮಲೂರಿನ ಟೆರಿ ಕಚೇರಿ ಸುತ್ತಮುತ್ತ ಮತ್ತು ಸೂಕ್ಷ್ಮ ಪ್ರದೇಶಕ್ಕೆ ಸೇರುವ  ನಿಮಾನ್ಸ್‌ ಸಮೀಪ ಏರಿಕೆ ಕಂಡುಬಂದಿತ್ತು.

ಲಕ್ಷ್ಮೀ ಪೂಜೆ ದಿನವಾದ ಗುರುವಾರ ನಗರದ ಪ್ರಮುಖ ಹತ್ತು ಪ್ರದೇಶಗಳಲ್ಲಿ  ಶಬ್ದಮಾಲಿನ್ಯ ಹೆಚ್ಚಳವಾಗಿದೆ. ಆ ದಿನ ನಿಮಾನ್ಸ್‌ ಸುತ್ತಮುತ್ತ ಶೇ 16.8 ರಷ್ಟು ಅಧಿಕ ಶಬ್ದ ಕೇಳಿ ಬಂದರೆ, ವೈಟ್‌­ಫೀಲ್ಡ್‌ನಲ್ಲಿ ಕೇವಲ ಶೇ 0.7ರಷ್ಟು ಕಡಿಮೆ ಶಬ್ದ ತೀವ್ರತೆ ದಾಖಲಾಗಿದೆ.
ದೀಪಾವಳಿಯ ಅಂತಿಮ ದಿನವಾದ (ಬಲಿಪಾಡ್ಯಮಿ) ಶುಕ್ರವಾರದಂದು ನಗರದಲ್ಲಿ  ವೈಟ್‌ಫೀಲ್ಡ್‌, ಚರ್ಚ್‌ ಸ್ಟ್ರೀಟ್‌ ಮತ್ತು  ಆರ್‌.ವಿ.­ಎಂಜಿನಿಯ­ರಿಂಗ್‌ ಕಾಲೇಜ್‌  ಸುತ್ತ­ಮುತ್ತ ಶಬ್ದದ ಹಾವಳಿ ಕಡಿಮೆ ಇತ್ತು. ಇನ್ನುಳಿದ ಏಳು ಪ್ರದೇಶಗಳ ಪೈಕಿ ಬಸವೇಶ್ವರ ನಗರದಲ್ಲಿ ಶೇ 33ರಷ್ಟು ಜೋರು ಶಬ್ದ ಕೇಳಿಬಂದರೆ, ವೈಟ್‌ಫೀಲ್ಡ್‌ನಲ್ಲಿ ಶಬ್ದ ತೀವ್ರತೆ ಬರೀ 0.3ರಷ್ಟಿತ್ತು.

ಹಬ್ಬದ ಮೊದಲ ದಿನವಾದ ಬುಧವಾರ ಜೋರಾಗಿ ಮಳೆ ಸುರಿದ ಪರಿಣಾಮ ಪಟಾಕಿ ಪ್ರಿಯರಿಗೆ ಆ ದಿನ ಹೆಚ್ಚು ಮದ್ದು ಸುಡಲು ಸಾಧ್ಯವಾಗ­ಲಿಲ್ಲ. ಜತೆಗೆ, ಅಮವಾಸ್ಯೆ ದಿನವಾದ ಗುರುವಾರ ಮಧ್ಯಾಹ್ನದಿಂದ ಸಂಜೆಯ­ವ­ರೆಗೂ ಕೂಡ ವರುಣ ತನ್ನ ಮುನಿಸು ತೋರಿದ ಕಾರಣ ಜನರು ಪಟಾಕಿ ಸುಡಲು ಬೀದಿಗಿಳಿಯಲಿಲ್ಲ. ರಾತ್ರಿ ಮಾತ್ರ ಪಟಾಕಿ ಅಬ್ಬರ ಕೇಳಿಬಂತು. ಇನ್ನೂ, ಬಲಿಪಾಡ್ಯಮಿಯಂದು ಪಟಾಕಿ ಅಬ್ಬರ ಹಿಂದಿನ ದಿನಗಳಿಗಿಂತ ಸ್ವಲ್ಪ ಜೋರಾಗಿಯೇ ಕೇಳಿಬಂತು.

ಹಬ್ಬದ ಮೂರು ದಿನಗಳಲ್ಲಿ ಕೇಳಿ­ಬಂದ ಶಬ್ದಪ್ರಮಾಣವನ್ನು ತಾಳೆ ಹಾಕಿ­ದಾಗ, ಸರಾಸರಿ ಶೇ 18.2 ರಷ್ಟು ಅಧಿಕ ಪ್ರಮಾಣದ ಶಬ್ದ ದಾಖ­ಲಾಗಿರುವ ನಿಮಾನ್ಸ್‌ ಸುತ್ತಮುತ್ತಲಿನ ಪ್ರದೇಶ ಹತ್ತು ಪ್ರದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಶೇ 16.8 ರಷ್ಟು ಶಬ್ದ ತೀವ್ರತೆ ಕೇಳಿಬಂದ ಬಸವೇಶ್ವರ ನಗರ ಎರಡನೇ ಸ್ಥಾನದಲ್ಲಿದೆ. ಕೇವಲ ಶೇ 0.6ರಷ್ಟು ಶಬ್ದ ಪ್ರಮಾಣ ದಾಖಲಿಸಿದ ಪೀಣ್ಯ ಕೈಗಾರಿಕೆ ಪ್ರದೇಶ ಕೊನೆಯ ಸಾಲಿನಲ್ಲಿದೆ.

‘ಯಶವಂತಪುರ ಪೊಲೀಸ್‌ ಠಾಣೆ, ಮಾರತ್‌ಹಳ್ಳಿ, ಬಿಟಿಎಂ ಬಡಾವಣೆ, ನಿಮಾನ್ಸ್‌ ಮತ್ತು ಆರ್‌.ವಿ.ಕಾಲೇಜ್‌ ಸುತ್ತಮುತ್ತ ದಾಖಲಾಗಿರುವ ಶಬ್ದ­ಪ್ರಮಾಣ­ದಲ್ಲಿ ಪಟಾಕಿ ಸದ್ದಿನೊಂದಿಗೆ ವಾಹನಗಳ ದಟ್ಟಣೆಯಿಂದ ಉಂಟಾದ ಶಬ್ದ ಕೂಡ ಮಿಶ್ರಣವಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಪರಿಸರ ಕಾಳಜಿ ಜಾಗೃತಿ ಆಂದೋಲನಗಳು ಮೂಡಿಸಿ­ರುವ ಅರಿವು ಮತ್ತು ಮಳೆಯ ಅಡ­ಚಣೆ­ಯಿಂದಾಗಿ ನಗರದಲ್ಲಿ ಕಳೆದ ಬಾರಿಯ ದೀಪಾವಳಿಯಲ್ಲಿ ಇದ್ದಷ್ಟು ಪಟಾಕಿ ಸಿಡಿತದ ಅಬ್ಬರ ಈ ಬಾರಿ ಕೇಳಿ ಬರಲಿಲ್ಲ. ಆದ್ದರಿಂದ, ಈ ಬಾರಿ ಶಬ್ದ ಮತ್ತು ವಾಯು ಮಾಲಿನ್ಯಗಳು ಕಳೆದ ಬಾರಿಗಿಂತ ತಗ್ಗಿವೆ. ಸಮಗ್ರ ಮಾಲಿನ್ಯದ ಮಾಹಿತಿ ಇನ್ನೆರಡು ದಿನಗಳಲ್ಲಿ ಸಿದ್ದಪಡಿ­ಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT