ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾನಗಳ ಆಕರ್ಷಕ ಕ್ಯಾಟ್‌ವಾಕ್‌

Last Updated 28 ನವೆಂಬರ್ 2015, 20:02 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಶ್ವಾನ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದರೆ, ಇನ್ನೊಂದು ಒಡತಿಯ ಆಣತಿ ಪಾಲಿಸುತ್ತಿತ್ತು. ಇನ್ನು ಕೆಲವು ನಿರ್ಭೀತಿಯಿಂದ ತಾವೇ ಠಾಕುಠೀಕಾಗಿ ಹೆಜ್ಜೆ ಹಾಕುತ್ತಿದ್ದವು.

ಈ ದೃಶ್ಯಗಳು ಕಂಡುಬಂದಿದ್ದು ಮೈಸೂರು ಕೆನಲ್‌ ಕ್ಲಬ್‌ ವತಿಯಿಂದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಹಾಕಿ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ 110 ಮತ್ತು 111ನೇ ಅಖಿಲ ಭಾರತ ಶ್ವಾನ ಪ್ರದರ್ಶನದಲ್ಲಿ.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್ ಸಿ.ಎಚ್. ಪ್ರತಾಪ್‌ರೆಡ್ಡಿ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಪ್ರದರ್ಶನದಲ್ಲಿ ಮುದ್ದು ಮುದ್ದಾದ ಶ್ವಾನಗಳು ‘ರೂಪದರ್ಶಿ’ಯರಂತೆ ಹೆಜ್ಜೆ ಹಾಕಿ ಜನರ ಮೆಚ್ಚುಗೆ ಗಳಿಸಿದವು.  ಇದನ್ನು ಕಂಡು ಅವುಗಳ ಒಡೆಯರು ಹರ್ಷಿತರಾದರು. ಪ್ರದರ್ಶನದಲ್ಲಿ ವಿವಿಧ ದೇಶಗಳ 50ಕ್ಕೂ ಹೆಚ್ಚು ತಳಿಯ ಶ್ವಾನಗಳು ಭಾಗವಹಿಸಿದ್ದವು.

ಪ್ರದರ್ಶನಕ್ಕೆ ಮಿನಿಯೇಚರ್ ಪಮೇರಿಯನ್‌ ತಳಿಯ ನಾಯಿಯನ್ನು ತಂದಿದ್ದ ಫ್ರೇಜರ್‌ಟೌನ್‌ನ ದೀನ್‌ದಯಾಳ್‌, ‘ನನಗೆ ನಾಯಿಗಳೆಂದರೆ ತುಂಬಾ ಪ್ರೀತಿ. ಮನುಷ್ಯರಿಗಿಂತ ನಾಯಿಗಳಲ್ಲಿಯೇ ನಿಯತ್ತು ಜಾಸ್ತಿ’ ಎಂದು ತಮ್ಮ ಪ್ರೀತಿಯ ನಾಯಿಯ ಮೈದಡವಿದರು.

ನ್ಯೂ ಫೌಂಡ್‌ಲ್ಯಾಂಡ್, ಐರಿಸ್‌ ಶಟರ್‌ ನಾಯಿಗಳೊಂದಿಗೆ ಬಂದಿದ್ದ ರಾಜರಾಜೇಶ್ವರಿ ನಗರದ ಶರತ್‌, ‘ಕಳೆದ 15 ವರ್ಷಗಳಿಂದ ನಾಯಿ ಸಾಕುತ್ತಿದ್ದೇನೆ. ವಿವಿಧ ತಳಿಯ ಹತ್ತಕ್ಕೂ ಹೆಚ್ಚು ನಾಯಿಗಳು ನಮ್ಮ ಮನೆಯಲ್ಲಿವೆ. ಕಳೆದ ಪ್ರದರ್ಶನಲ್ಲಿ ನ್ಯೂ ಫೌಂಡ್‌ಲ್ಯಾಂಡ್ ತಳಿ ನಾಯಿ  ಬಹುಮಾನ ಪಡೆದಿತ್ತು’ ಎಂದು ಹೆಮ್ಮೆಯಿಂದ ಹೇಳಿದರು.

ಪ್ರದರ್ಶನದಲ್ಲಿ ಮುಧೋಳ ತಳಿಯ ನಾಯಿ ಮರಿಗಳ ಮಾರಾಟ ಜೋರಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ  ಬಾಗಲಕೋಟೆಯ ಜಿಲ್ಲೆಯ ಕೃಷ್ಣ  ಟಿ.ಮಾನೆ, ‘ಹತ್ತು ಮರಿಗಳನ್ನು ತಂದಿದ್ದೇನೆ. 40 ದಿನದ ಒಂದು ಹೆಣ್ಣು ಮತ್ತು ಒಂದು ಗಂಡು ಮರಿ ₹ 16 ಸಾವಿರಕ್ಕೆ ಮಾರಾಟವಾದವು’ ಎಂದರು.

ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ಮೈಸೂರು ಕೆನಲ್‌ ಕ್ಲಬ್‌ ಅಧ್ಯಕ್ಷ ಯತಿರಾಜ್‌, ‘ಈ ಬಾರಿಯ  ಪ್ರದರ್ಶನದಲ್ಲಿ ವಿವಿಧ ದೇಶಗಳ 600 ಶ್ವಾನಗಳು ಭಾಗವಹಿಸಿವೆ. ರಸೆಲ್‌ ಟೆರಿಯರ್, ಅಖಿಟ, ಆಫ್ರಿಕನ್ ಬೊರ್‌ಬೊಲ್‌ ತಳಿಯ ನಾಯಿಗಳು ಮೊದಲ ಬಾರಿಗೆ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ’ ಎಂದು ಹೇಳಿದರು.

ಹಿಂದಿನ ಪ್ರದರ್ಶನದಲ್ಲಿ 450 ನಾಯಿಗಳು ಬಂದಿದ್ದವು. ಈ ಬಾರಿ ಅದಕ್ಕಿಂತ 150 ಹೆಚ್ಚು ಶ್ವಾನಗಳು ಬಂದಿವೆ. ಹೀಗಾಗಿ ಪ್ರದರ್ಶನಕ್ಕೆ ಆರು ರಿಂಗ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಂಟು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಭಾನುವಾರವೂ ಪ್ರದರ್ಶನ ನಡೆಯಲಿದೆ. ಮಕ್ಕಳಿಗೆ ₹ 50 ಮತ್ತು ದೊಡ್ಡವರಿಗೆ 100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT