ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ವಿಜಯಪುರದ 11 ಮಂದಿ

Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಜಯಪುರ: ನೇಪಾಳ ಪ್ರವಾಸಕ್ಕೆ ತೆರಳಿದ್ದ ವಿಜಯಪುರದ ಸಿದ್ಧೇಶ್ವರ ಬ್ಯಾಂಕ್‌ನ ಕೆಲ ಸಿಬ್ಬಂದಿಯ ಕುಟುಂಬಗಳು ಹಾಗೂ ಇವರ ಸ್ನೇಹಿತರ ಕುಟುಂಬದ ಸದಸ್ಯರು ಸೇರಿದಂತೆ 11 ಮಂದಿ ಶನಿವಾರ ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪನದಲ್ಲಿ ಅಪಾಯದಿಂದ ಪಾರಾಗಿದ್ದರೂ, ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಐವರು ಪುರುಷರು, ಏಳು ಮಹಿಳೆಯರು, ಒಬ್ಬ ಬಾಲಕ ಸೇರಿದಂತೆ ಎಲ್ಲರೂ ಪಶುಪತಿನಾಥ ದೇಗುಲದ ಆವರಣದಲ್ಲೇ ಉಳಿದಿದ್ದು, ಅಲ್ಲಿಂದ ಹೊರ ಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ರಕ್ಷಣೆಗಾಗಿ ಜಲಸಂಪನ್ಮೂಲ ಸಚಿವ ಎಂ.ಬಿ,ಪಾಟೀಲರ ಕಚೇರಿ ಸಂಪರ್ಕಿಸಿದ್ದಾರೆ. ಇದರ ಜತೆಗೆ ನಗರದಲ್ಲಿರುವ ಬಂಧುಗಳ ಮೂಲಕ ಜಿಲ್ಲಾಡಳಿತದ ಮೊರೆ ಹೊಕ್ಕಿದ್ದಾರೆ.

‘ಶುಕ್ರವಾರ ರಾತ್ರಿಯೇ ಕಠ್ಮಂಡುವಿಗೆ ತೆರಳಿದ್ದ ನನ್ನ ಸಹೋದರ ಶಂಕರಲಿಂಗರೆಡ್ಡಿ ಸೇರಿದಂತೆ ಇತರರು ಪಶುಪತಿನಾಥ ದೇಗುಲದ ಸಮೀಪದ ಹೋಟೆಲ್‌ನಲ್ಲಿ ಉಳಿದಿದ್ದರು. ಅವರೆಲ್ಲರೂ ಶನಿವಾರ ಬೆಳಿಗ್ಗೆ ದೇವರ ದರ್ಶನಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಭವಿಸಿದ ಭಾರಿ ಭೂಕಂಪನದಲ್ಲಿ, ಅವರು ವಾಸ್ತವ್ಯ ಹೂಡಿದ್ದ ಹೋಟೆಲ್‌ ಧರೆಗುರುಳಿತು. ದೇವರ ದರ್ಶನಕ್ಕೆ ಹೊರಗೆ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ’ ಎಂದು ನಗರದ ಸುರೇಶ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಹೋದರನ ಜತೆ ಸಂಪರ್ಕದಲ್ಲಿದ್ದೇನೆ. ಅಲ್ಲಿನ ಭಯಾನಕ ಸ್ಥಿತಿಯನ್ನು ಶಂಕರಲಿಂಗರೆಡ್ಡಿ ವಿವರಿಸಿದ್ದಾನೆ. ನಾವೂ ಭೀತಿಯಲ್ಲಿದ್ದೇವೆ. ಆದಷ್ಟು ಬೇಗ ವಿಜಯಪುರಕ್ಕೆ ಮರಳಿ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿ ಎಂದು ಅವರು ಅಂಗಲಾಚುತ್ತಿದ್ದಾರೆ’ ಎಂದು ರೆಡ್ಡಿ ಹೇಳಿದರು.
‘ಪ್ರವಾಸ ಆಯೋಜಿಸಿದ್ದ ದೆಹಲಿ ಮೂಲದ ಟ್ರಾವೆಲ್‌ ಏಜೆನ್ಸಿಗೆ ನೆರವಿಗೆ ಧಾವಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನಾವು ಏನೂ ಮಾಡದ ಸ್ಥಿತಿಯಲ್ಲಿದ್ದೇವೆ ಎಂದು ಏಜೆನ್ಸಿಯವರೂ ಕೈಚೆಲ್ಲಿದ್ದಾರೆ’ ಎಂದು ಅವರು  ತಿಳಿಸಿದರು.

‘ಶನಿವಾರ ರಾತ್ರಿ 7.15ರ ಸಮಯದಲ್ಲಿ ಮತ್ತೊಮ್ಮೆ ಸಹೋದರನನ್ನು ಸಂಪರ್ಕಿಸಿದೆ. ಸಮಯ ಕಳೆದಂತೆ ಪರಿಸ್ಥಿತಿ ಕೈ ಮೀರುತ್ತಿದೆ. ದೇಗುಲದ ಆವರಣದಿಂದ ಹೊರ ಬರಲು ಆಗುತ್ತಿಲ್ಲ. ಮುಂದೇನು ಮಾಡಬೇಕು ಎಂದು ತೋಚುತ್ತಿಲ್ಲ. ಜಿಲ್ಲಾಧಿಕಾರಿ ಭೇಟಿ ಮಾಡಿ ತೊಂದರೆಯಲ್ಲಿ ಸಿಲುಕಿರುವವರ ವಿವರವನ್ನು ನೀಡಿದ್ದೇನೆ’ ಎಂದು ಅವರು  ಹೇಳಿದರು.

ಅಪಾಯದಲ್ಲಿ ಸಿಲುಕಿರುವವರು: ಶಂಕರಲಿಂಗ ರೆಡ್ಡಿ, ಪ್ರೇಮಾ ರೆಡ್ಡಿ, ಲಲಿತಾ ಹಿರೇಮಠ, ಚಿದಾನಂದ ನ್ಯಾಮಗೌಡ, ಇವರ ಪತ್ನಿ, ಮಗ, ಸಂಕದ್. ಇತರ ಐವರ ಮಾಹಿತಿ ತಿಳಿದು ಬಂದಿಲ್ಲ.

ವಿಜಯಪುರದ  ಪ್ರವಾಸಿಗರು ಕಠ್ಮಂಡುವಿನಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಎಲ್ಲ ಅಗತ್ಯ ಕ್ರಮ ಜಿಲ್ಲಾಡಳಿತ ಕೈಗೊಂಡಿದೆ.
ಡಿ.ರಂದೀಪ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT