ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನಕ್ಕೆ ಗೈರು: ಅಂಕ ಕೊಡಲು ಹಾಜರು!

Last Updated 28 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: 2011ರ 362 ಗೆಜೆಟೆಡ್‌ ಪ್ರೊಬೇಷನರ್‌ ಅಧಿಕಾರಿಗಳ ನೇಮಕಾತಿ ಸಂದರ್ಭ­ದಲ್ಲಿ ನಡೆದ ಸಂದರ್ಶನದಲ್ಲಿ ಕೆಪಿಎಸ್‌ಸಿ ಸದಸ್ಯರು ಸಂದರ್ಶನಕ್ಕೆ ಗೈರು ಹಾಜರಾಗಿದ್ದರೂ ಅಭ್ಯರ್ಥಿ­ಗಳಿಗೆ ಅಂಕವನ್ನು ಮಾತ್ರ ‘ಮೌಲ್ಯ’ಯುತ­ವಾಗಿ ಹಾಕಿದ್ದಾರೆ.

ಸಂದರ್ಶನದ ಸಂದರ್ಭದಲ್ಲಿ ಆಯಾ ಸದಸ್ಯರು ಎಲ್ಲಿದ್ದರು ಎನ್ನುವುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಜೊತೆಗೆ ಅವರು ಎಷ್ಟೆಷ್ಟು ಅಂಕಗಳನ್ನು ನೀಡಿದ್ದಾರೆ ಎನ್ನುವುದನ್ನು ಸಿಐಡಿ ವರದಿಯಲ್ಲಿ ನಮೂದಿಸಲಾಗಿದೆ.

ಕೆಪಿಎಸ್‌ಸಿ ನಿಯಮದ ಪ್ರಕಾರ ಎರಡು ಸಂದರ್ಶನ ಸಮಿತಿ ಮಾಡಬೇಕು. ಸಂದರ್ಶನದಲ್ಲಿ ಹಾಜರಿದ್ದ ಸದಸ್ಯರು ಪ್ರತಿಯೊಬ್ಬ ಅಭ್ಯರ್ಥಿ ಸಂದರ್ಶನವಾದ ತಕ್ಷಣವೇ ಅಂಕಗಳನ್ನು ಹಾಕಿ ಸಹಿ ಮಾಡಿ ಅದನ್ನು ಆಯೋಗದ ಕಾರ್ಯದರ್ಶಿಗೆ ನೀಡಬೇಕು. ಆದರೆ ಈ ಬಾರಿ ಅಧ್ಯಕ್ಷರು ಮತ್ತು ಸದಸ್ಯರು ಸಂದರ್ಶನ ಮುಗಿದ ನಂತರ ಎಲ್ಲರೂ ಒಟ್ಟಾಗಿ ಕುಳಿತು ಎಲ್ಲರೂ ಒಂದೇ ಅಂಕ ನೀಡಿದ್ದಾರೆ.  ಸಂದರ್ಶನಕ್ಕೆ ಹಾಜರಾದ 1,085 ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಬಿಟ್ಟರೆ ಉಳಿದ ಎಲ್ಲ ಅಭ್ಯರ್ಥಿಗಳಿಗೂ ಎಲ್ಲ ಸದಸ್ಯರು ಏಕ ಪ್ರಕಾರವಾಗಿ ಅಂಕ ಹಾಕಿದ್ದಾರೆ.

ಒಬ್ಬ ಅಭ್ಯರ್ಥಿಗೆ ಅಧ್ಯಕ್ಷ ಗೋನಾಳ ಭೀಮಪ್ಪ 50 ಅಂಕ ಹಾಕಿದರೆ ಇತರೆ ಸದಸ್ಯರೂ ಕೂಡ ಅಷ್ಟೇ ಅಂಕ ಹಾಕಿದ್ದಾರೆ. 16806 ನೋದಣಿ ಸಂಖ್ಯೆಯ ಅಭ್ಯರ್ಥಿಗೆ ಗೋನಾಳ ಭೀಮಪ್ಪ 150 ಅಂಕ ನೀಡಿದರೆ ಡಾ.ಬಿ.ಎಸ್‌.ಕೃಷ್ಣಪ್ರಸಾದ್‌, ಎಸ್.ಆರ್‌.ರಂಗ­ಮೂರ್ತಿ, ಡಾ.ಎಚ್‌.ವಿ. ಪಾರ್ಶ್ವ­ನಾಥ್, ಎಸ್‌.ದಯಾಶಂಕರ್‌ ಎಲ್ಲರೂ 150 ಅಂಕವನ್ನೇ ನೀಡಿದ್ದಾರೆ. ಅದೇ ರೀತಿ ನೋಂದಣಿ ಸಂಖ್ಯೆ 12809 ಅಭ್ಯರ್ಥಿಗೆ ಗೋನಾಳ ಭೀಮಪ್ಪ 65 ಅಂಕ ನೀಡಿದರೆ ಇತರ ಎಲ್ಲರೂ 65 ಅಂಕ­ವನ್ನೇ ನೀಡಿದ್ದಾರೆ. ನೋಂದಣಿ ಸಂಖ್ಯೆ 10310 ಅಭ್ಯರ್ಥಿಗೆ ಸದಸ್ಯ ರಾಮಕೃಷ್ಣ 68 ಅಂಕ ನೀಡಿದರೆ ಉಳಿದವರೂ ಅಷ್ಟೇ ಅಂಕ ನೀಡಿದ್ದಾರೆ. 

ಅಭ್ಯರ್ಥಿಯೊಬ್ಬ ಮುಖ್ಯ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದಿದ್ದಾನೆ ಎನ್ನುವುದನ್ನು ನೋಡಿಕೊಂಡು, ಆತನ ಜೊತೆಗೆ ವ್ಯವಹಾರ ಕುದುರಿದ್ದರೆ ಇತರ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯಲ್ಲಿ ಹಿಂದಕ್ಕೆ ಹಾಕಲು ಅವನಿಗೆ ಎಷ್ಟು ಅಂಕ ಬೇಕು ಎನ್ನು­ವುದನ್ನು ಲೆಕ್ಕ ಮಾಡಿ ಸಂದರ್ಶನ ಸಮಿತಿಯ ಎಲ್ಲ ಸದಸ್ಯರೂ ಒಟ್ಟಾಗಿ ಕುಳಿತು ಅಂಕ ನೀಡಿದ್ದಾರೆ ಎನ್ನು­ವುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.

ಹಣ ನೀಡದೇ ಇರುವ ಅಭ್ಯರ್ಥಿಗಳನ್ನು ನೇಮಕಾತಿ ಪಟ್ಟಿಗೆ ಬರದ ಹಾಗೆ ನೋಡಿ­ಕೊಂಡಿ­ದ್ದಾರೆ. ಇದಕ್ಕಾಗಿಯೇ ಸಂದರ್ಶನದ ಸಂದರ್ಭ-­ದಲ್ಲಿ ಹಾಜರಿಲ್ಲದೇ ಇದ್ದರೂ ನಂತರ ಒಟ್ಟಾಗಿ ಅಂಕ ನೀಡುವುದಕ್ಕೆ ಹಾಜರಾಗಿದ್ದಾರೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6.30ರವರೆಗೆ ಸಂದರ್ಶನದ ಅವಧಿ. ಬೆಳಿಗ್ಗೆ 15 ಅಭ್ಯರ್ಥಿಗಳು. ಮಧ್ಯಾಹ್ನ 15 ಅಭ್ಯರ್ಥಿಗಳು. ಅಂದರೆ ಒಬ್ಬ ಅಭ್ಯರ್ಥಿಗೆ ಕನಿಷ್ಠ 18 ನಿಮಿಷ ಸಂದರ್ಶನ ಮಾಡ­ಬೇಕು. ಆದರೆ ಈ ಬಾರಿ ಹಾಗೆ ಆಗಿಲ್ಲ. ಕೆಲವು ಅಭ್ಯರ್ಥಿಗಳ ಸಂದರ್ಶನ 3–4 ನಿಮಿಷ­ಗಳಲ್ಲಿಯೇ ಮುಗಿದು ಹೋಯಿತು. ಅಂದರೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಮೊದಲೇ ನಿರ್ಧಾರ­ವಾಗಿ ಬಿಟ್ಟಿತ್ತು. ಅದಕ್ಕೆ ಸಂದರ್ಶ­ನ­ವನ್ನೂ ಸರಿ­ಯಾಗಿ ಮಾಡಲಿಲ್ಲ. ಸಂದರ್ಶನಕ್ಕೆ ಸರಿಯಾದ ಸಮಯಕ್ಕೆ ಸಮಿತಿ ಸದಸ್ಯರೂ ಹಾಜರಾಗಲಿಲ್ಲ ಎಂದು ಸಿಐಡಿ ಅಭಿಪ್ರಾಯಪಟ್ಟಿದೆ.

ಸಮಿತಿ ಸದಸ್ಯರ ದೂರವಾಣಿ ಕರೆಯನ್ನು ವಿಶ್ಲೇಷಣೆ ಮಾಡಿ ಸಂದರ್ಶನದ ಸಮಯದಲ್ಲಿ ಅವರು ಎಲ್ಲಿದ್ದರು ಎನ್ನುವುದನ್ನು ಸಿಐಡಿ ಪತ್ತೆ ಮಾಡಿದೆ. 2013ರ ಮೇ 7ರಂದು ಬೆಳಿಗ್ಗೆ ಸಂದರ್ಶನಕ್ಕೆ ಹಾಜರಾಗಬೇಕಿದ್ದ ಆಯೋಗದ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಬೆಳಿಗ್ಗೆ 10.03ಕ್ಕೆ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ 98440 31168 ಸಂಖ್ಯೆಗೆ ಕರೆ ಮಾಡುತ್ತಿದ್ದರು. ಇದು ಗೋನಾಳ ಅವರಿಗೆ ಬಂದ ಕರೆ. ಸುಮಾರು 20 ನಿಮಿಷ ಮಾತನಾಡಿದ್ದರು. ಅದೇ ರೀತಿ ಮೇ 9ರಂದು ಬೆಳಿಗ್ಗೆ 9.56ಕ್ಕೆ ಬೆನ್ಸನ್‌ಟೌನ್‌ ನಲ್ಲಿದ್ದ ಗೋನಾಳ ಅವರು 94480 61298 ಸಂಖ್ಯೆ­ಯಿಂದ ಬಂದ ಕರೆ ಸ್ವೀಕರಿಸಿ ಸುಮಾರು 13 ನಿಮಿಷ ಮಾತನಾಡಿದ್ದರು.

ಸಂದರ್ಶನಕ್ಕೆ ಹಾಜರಾಗಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ನಡೆಸಬೇಕಾಗಿದ್ದ ಕೆಪಿಎಸ್‌ಸಿ ಸದಸ್ಯ ದಯಾಶಂಕರ್‌ ಅವರು ಮೇ 15 ರಂದು ಬೆಳಿಗ್ಗೆ 9.52ಕ್ಕೆ ಡಿಕೆನ್ಸನ್‌ ರಸ್ತೆಯಲ್ಲಿ 80233 39115 ಸಂಖ್ಯೆಯಿಂದ ಬಂದ ಕರೆ ಸ್ವೀಕರಿಸಿ ಸುಮಾರು 78 ನಿಮಿಷಗಳ ಕಾಲ ಮಾತನಾಡಿದ್ದರು. ಅದೇ ರೀತಿ ಮೇ 21ರಂದು ಬೆಳಿಗ್ಗೆ 9.56ಕ್ಕೆ ಕೇಂಬ್ರಿಡ್ಜ್ ಲೇಔಟ್‌ನ ಕೆಇಬಿ ಕಟ್ಟಡದಲ್ಲಿದ್ದ ಅವರು 99804 55046 ಸಂಖ್ಯೆಗೆ ಕರೆ ಮಾಡಿ ಸುಮಾರು 91 ನಿಮಿಷಗಳ ಕಾಲ ಮಾತನಾಡಿದ್ದರು. ಮೇ 27­ರಂದು ಬೆಳಿಗ್ಗೆ 10.15ಕ್ಕೆ ಅವರು ಕಸ್ತೂರಬಾ ರಸ್ತೆ­ಯಲ್ಲಿರುವ ಮೋಹನ್‌ ಅಂಡ್‌ ಕಂಪೆನಿಯಲ್ಲಿ 99452 14554 ಸಂಖ್ಯೆಯಿಂದ ಬಂದ ಕರೆ­ಯನ್ನು ಸ್ವೀಕರಿಸಿ ಸುಮಾರು 60 ನಿಮಿಷ ಮಾತನಾಡಿದ್ದಾರೆ.

ಮಂಗಳಾ ಶ್ರೀಧರ್‌ ಅವರು ಮೇ 16ರಂದು ಬೆಳಿಗ್ಗೆ 9.57ಕ್ಕೆ ವಿ.ವಿ.ಪುರಂನಲ್ಲಿ 98454 54445 ಸಂಖ್ಯೆಗೆ ಕರೆ ಮಾಡಿ ಸುಮಾರು 103 ನಿಮಿಷ ಮಾತನಾಡಿದ್ದರು. ಮೇ 15ರಂದು ಬೆಳಿಗ್ಗೆ 9.54ಕ್ಕೆ ಕೆ.ಆರ್‌.ವೃತ್ತದ ಬಳಿಯ ಎನ್‌ಜಿಒ ಹೋಮ್‌­ನಲ್ಲಿದ್ದ ಅವರು 94485 16475 ಸಂಖ್ಯೆಯಿಂದ ಕರೆ ಸ್ವೀಕರಿಸಿ ಸುಮಾರು 88 ನಿಮಿಷ ಮಾತನಾಡಿದ್ದರು. ಮೇ 17ರಂದು ಜೆ.ಪಿ.ನಗರ­ದಲ್ಲಿದ್ದ ಅವರು 94481 01111 ಸಂಖ್ಯೆಗೆ ಕರೆ ಮಾಡಿ 55 ನಿಮಿಷ ಮಾತನಾಡಿದ್ದರು.

ಸದಸ್ಯ ಬಿ.ಪಿ.ಕನಿರಾಂ ಅವರು ಮೇ 8ರಂದು ಬೆಳಿಗ್ಗೆ 10.05ಕ್ಕೆ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿದ್ದು 94489 92055 ಸಂಖ್ಯೆಗೆ ಕರೆ ಮಾಡಿ ಸುಮಾರು 282 ನಿಮಿಷ ಮಾತನಾಡಿದ್ದರು. ಮೇ 17ರಂದು ಬೆಳಿಗ್ಗೆ 9.52ಕ್ಕೆ ಇನ್‌ಫ್ಯಾಂಟ್ರಿ ರಸ್ತೆ­ಯಲ್ಲಿದ್ದು 94487 90244 ಸಂಖ್ಯೆಯಿಂದ ಬಂದ ಕರೆ ಸ್ವೀಕರಿಸಿ 93 ನಿಮಿಷ ಮಾತ­ನಾಡಿದ್ದಾರೆ. ಮೇ 22ರಂದು ಮಧ್ಯಾಹ್ನ 2.38ಕ್ಕೆ ಹಡ್ಸನ್‌ ವೃತ್ತದಲ್ಲಿದ್ದ ಅವರು 97177 90920 ಸಂಖ್ಯೆಗೆ ಕರೆ ಮಾಡಿ 163 ನಿಮಿಷ ಮಾತನಾಡಿದ್ದರು.

ಸದಸ್ಯ ಎಚ್‌.ಡಿ.ಪಾಟೀಲ್‌ ಅವರು ಮೇ 16ರಂದು ಬೆಳಿಗ್ಗೆ 10.02 ಕ್ಕೆ ಓಕಳಿಪುರಂನಲ್ಲಿದ್ದು 94811 38788 ಸಂಖ್ಯೆಗೆ ಕರೆ ಮಾಡಿ 89 ನಿಮಿಷ ಮಾತನಾಡಿದ್ದರು. ಮೇ 18ರಂದು ಬೆಳಿಗ್ಗೆ 10ಕ್ಕೆ ಸುಜಾತ ಚಿತ್ರ ಮಂದಿರದ ಬಳಿ ಇದ್ದ ಅವರು 94486 40369 ಸಂಖ್ಯೆಗೆ ಕರೆ ಮಾಡಿ 54 ನಿಮಿಷ ಮಾತನಾಡಿದ್ದರು. ಮೇ 8ಕ್ಕೆ ಬೆಳಿಗ್ಗೆ 10.19 ಕ್ಕೆ ಭಾಷ್ಯಂ ವೃತ್ತದ ಬಳಿ ಇದ್ದ ಅವರು 94811 38788 ಸಂಖ್ಯೆಗೆ ಕರೆ ಮಾಡಿ 50 ನಿಮಿಷ ಮಾತನಾಡಿದ್ದರು.

ಸದಸ್ಯ ಕೃಷ್ಣ ಪ್ರಸಾದ್‌ ಅವರು ಮೇ 18ರಂದು ಬೆಳಿಗ್ಗೆ 10.22ಕ್ಕೆ ರಾಜಭವನದ ಬಳಿ ಇದ್ದು 94498 19966 ಸಂಖ್ಯೆಯಿಂದ ಬಂದ ಕರೆ ಸ್ವೀಕರಿಸಿ ಸುಮಾರು 41 ನಿಮಿಷ ಮಾತನಾಡಿ­ದ್ದರು. ಮೇ 7ರಂದು ಕೂಡ ಅವರು ಸಂದರ್ಶನದ ಸಮಯದಲ್ಲಿ ಬಸವಭವನದ ಆವರಣದಲ್ಲಿದ್ದರು. ಮೇ 18ರಂದು ಬೆಳಿಗ್ಗೆ 11.16ಕ್ಕೆ ಅವರು ರಾಜ­ಭವನದ ಮುಖ್ಯದ್ವಾರದ ಬಳಿ ಇದ್ದು 99009 96539 ಸಂಖ್ಯೆಗೆ ಕರೆ ಮಾಡಿ ಸುಮಾರು 24 ನಿಮಿಷ ಮಾತನಾಡಿದ್ದರು.
ಸದಸ್ಯ ಮಹದೇವ ಅವರು ಮೇ 25ರಂದು ಬೆಳಿಗ್ಗೆ 9.51ಕ್ಕೆ ಚಾಮರಾಜಪೇಟೆಯ ಮೊದಲನೆ ಮುಖ್ಯರಸ್ತೆ 7ನೇ ಅಡ್ಡ ರಸ್ತೆಯಲ್ಲಿದ್ದು 99002 82823 ಸಂಖ್ಯೆಗೆ ಕರೆ ಮಾಡಿ 136 ನಿಮಿಷ ಮಾತನಾಡಿದ್ದಾರೆ. ಮೇ 8ರಂದು ಬೆಳಿಗ್ಗೆ 9.49ಕ್ಕೆ ಸಚ್ಚಿದಾ­ನಂದ ನಗರ ಬಿಇಎಂಎಲ್‌ ಬಡಾವಣೆ­ಯಲ್ಲಿದ್ದು 98451 93379 ಸಂಖ್ಯೆಗೆ ಕರೆ ಮಾಡಿ ಸುಮಾರು 53 ನಿಮಿಷ ಮಾತನಾಡಿದ್ದರು. ಮೇ 7ರಂದು ಬೆಳಿಗ್ಗೆ 9.59ಕ್ಕೆ ಅವರು ಓಟಿಸಿ ರಸ್ತೆಯಲ್ಲಿ ಹಾಗೂ ಮೇ 9ರಂದು ಬೆಳಿಗ್ಗೆ 10.20ಕ್ಕೆ ಒಟಿಸಿ ರಸ್ತೆಯಲ್ಲಿದ್ದರು.

ಸದಸ್ಯರು ಸಂದರ್ಶನದ ಸಮಯದಲ್ಲಿ ಉದ್ಯೋಗ ಸೌಧದ ಸಂದರ್ಶನ ಕೋಣೆಯಲ್ಲಿ ಇರಲಿಲ್ಲ ಎನ್ನುವುದಕ್ಕೆ ಸಿಐಡಿ ಸಂಗ್ರಹಿಸಿದ ಸಾಕ್ಷ್ಯ. ಆಯಾ ಸದಸ್ಯರು ಬೇರೆ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದು ಅಥವಾ ಕರೆ ಸ್ವೀಕರಿಸಿದ್ದು ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದಂತೆಯೇ ಮಾತನಾಡಿದ್ದಾರಾ ಇಲ್ಲವಾ ಎನ್ನುವ ವಿಶ್ಲೇಷಣೆ ಈಗ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟು ತನಿಖೆ ಅಗತ್ಯ ಎಂದೂ ಸಿಐಡಿ ಅಭಿಪ್ರಾಯಪಟ್ಟಿದೆ.
(ಮೌಲ್ಯಮಾಪಕರ ಅಪವಿತ್ರ ಮೈತ್ರಿ: ನಾಳಿನ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT