ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಪುನರ್‌ ರಚನೆ ಸಂದರ್ಭ ಪರಿಶೀಲನೆ

ಸತೀಶ್‌ ಜಾರಕಿಹೊಳಿ ಖಾತೆ ಬದಲಾವಣೆ 
Last Updated 31 ಜನವರಿ 2015, 10:50 IST
ಅಕ್ಷರ ಗಾತ್ರ

ಕೊಪ್ಪಳ: ಸಚಿವ ಸತೀಶ್ ಜಾರಕಿಹೊಳಿ ಅವರ ಖಾತೆ ಬದಲಾವಣೆ ಕೋರಿಕೆ ಸಂಬಂಧಿಸಿದಂತೆ   ಸಂಪುಟ ಪುನರ್‌ರಚನೆ ಸಂದರ್ಭ ಅದನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕುಷ್ಟಗಿಗೆ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರ ಪುತ್ರನ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಇಲ್ಲಿನ ಬಸಾಪುರದ ಎಂಎಸ್‌ಪಿಎಲ್‌ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಾರಕಿಹೊಳಿ ಅವರು ಖಾತೆ ಬದಲಾವಣೆ ಸಂಬಂಧಿಸಿದಂತೆ ಕೋರಿದ್ದಾರೆ.  ಉಳಿದಂತೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾರಕಿಹೊಳಿ ರಾಜೀನಾಮೆ ಸಂಬಂಧಿಸಿದಂತೆ ತಾನೇ ಸೂಚಿಸಿದ್ದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಕೂಡ್ಲಿಗಿಯಲ್ಲಿ ನೀಡಿದ ಹೇಳಿಕೆಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ಅವರು ಹೇಳಿದರು.

ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣ ಕುರಿತಂತೆ ನಾನು ‘ರಿಡೂ’ ಶಬ್ದ ಬಳಸಿಲ್ಲ. ಅದನ್ನು ಹೈಕೋರ್ಟ್‌ ಹೇಳಿದೆ. ಅದರಂತೆ ಅರ್ಕಾವತಿ ಬಡಾವಣೆಯ ಮರುಮಾರ್ಪಾಟು ಯೋಜನೆಗೆ ಸಹಿ ಹಾಕಿದ್ದೇನೆ. ಈ ಸಂಬಂಧಿಸಿದಂತೆ ಕೆಂಪಣ್ಣ ಆಯೋಗದ ಮುಂದೆ ಯಾರಾದರೂ ತಕರಾರು ಸಲ್ಲಿಸಬಹುದು ಎಂದು ಅವರು ಹೇಳಿದರು.

ಜೆಡಿಎಸ್‌ ಕಚೇರಿಗೆ ನಿಯಮ ಪ್ರಕಾರ ನಿವೇಶನ ನೀಡಬೇಕು ಎಂದು ದೇವೇಗೌಡರು ಕೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ನನಗೂ ಸಂಬಂಧ ಇಲ್ಲ ಎಂದರು. ಜೆಡಿಎಸ್‌ ಅವಧಿಯಲ್ಲಿ ನನ್ನನ್ನು ಉಪಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು ಅಲ್ಲ. ಎಲ್ಲ ಶಾಸಕರು ಸೇರಿ ನಿರ್ಧರಿಸಿದ್ದಾರೆ. ಈ ವಿಷಯದಲ್ಲಿ ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ ಎಂದು ಕುಟುಕಿದರು.

ವಸತಿ ಶಾಲೆಗೆ ಮುಖ್ಯಮಂತ್ರಿ ಭೇಟಿ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅವರು ಶುಕ್ರವಾರ ತಾಲ್ಲೂಕಿನ ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು.

ಕುಷ್ಟಗಿಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಈ ಶಾಲೆಗೆ ಭೇಟಿ ನೀಡಿದರು. ಮುಖ್ಯಮಂತ್ರಿ ದಿಢೀರ್ ಭೇಟಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳು ಖುಷಿಪಟ್ಟರು. ವಿದ್ಯಾರ್ಥಿಗಳೊಂದಿಗೆ ಬೆರೆತ ಸಿದ್ದರಾಮಯ್ಯ, ವಸತಿಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟೋಪಚಾರ, ವಸತಿ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.

ಕಳೆದ ವರ್ಷದ ಫಲಿತಾಂಶ ವಿವರ, ವಿದ್ಯಾರ್ಥಿಗಳ ಸಾಧನೆ,  ವಸತಿ ಶಾಲೆಯಲ್ಲಿ ಮಕ್ಕಳಿಗೆ ಒದಗಿಸಲಾಗುತ್ತಿರುವ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಸಿಎಂ, ಶಾಲೆಯ ವಾತಾವರಣ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು. ಜಿಲ್ಲಾ ಬಿಸಿಎಂ ಅಧಿಕಾರಿ ಬಿ.ಕಲ್ಲೇಶ್ ಶಾಲೆಯ ವ್ಯವಸ್ಥೆ ಬಗ್ಗೆ ವಿವರಿಸಿದರು.

ರಾಜ್ಯ ಸಹಕಾರ ಸಚಿವ ಮಹದೇವ ಪ್ರಸಾದ್, ಆಹಾರ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪಿ.ರಾಜಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT