ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಭಾಷಣೆರಹಿತ ಯಕ್ಷಗಾನ ಪರಿಪೂರ್ಣವಲ್ಲ'

Last Updated 3 ಜುಲೈ 2013, 6:08 IST
ಅಕ್ಷರ ಗಾತ್ರ

ಮಂಗಳೂರು:`ಕನ್ನಡ ಅರ್ಥವಾಗದವರಿಗಾಗಿ ಮಾತಿಲ್ಲದ, ಅಭಿನಯ ಪ್ರಧಾನವಾದ ಯಕ್ಷಗಾನ ಪ್ರಯೋಗಗಳು ನಡೆದಿವೆ. ಆದರೆ, ಸಂಭಾಷಣೆ ಇಲ್ಲದ ಯಕ್ಷಗಾನವನ್ನು ಪರಿಪೂರ್ಣ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಅವರು ಅಭಿಪ್ರಾಯಪಟ್ಟರು.

ಪಣಂಬೂರಿನ ಪಿ.ವಿ.ಐತಾಳರ ಇಂಗ್ಲಿಷ್ ಯಕ್ಷಗಾನ ಬಳಗ- `ಯಕ್ಷನಂದನ'ವು ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಪಿ.ವಿ.ಐತಾಳರ 16ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಇಂಗ್ಲಿಷ್ ಅರ್ಥಗಾರಿಕೆಯು ಕನ್ನಡ ಅರ್ಥ ಆಗದವರಿಗಾಗಿ ಮಾಡಿಕೊಂಡ ಮಾರ್ಪಾಡು. ಕನ್ನಡೇತರ ಪ್ರದೇಶಗಳಲ್ಲಿ ಯಕ್ಷಗಾನ ಹಮ್ಮಿಕೊಂಡಾಗ ಭಾಷೆ ಅರ್ಥವಾಗದ ಕಾರಣಕ್ಕಾಗಿ ಅನೇಕರು ಅರ್ಧದಲ್ಲೇ ಸಭಾಂಗಣದಿಂದ ಎದ್ದು ಹೋಗುವುದನ್ನು ನೋಡಿದ್ದೇನೆ.

ಅಂತಹವರಿಗೆ ಇಂಗ್ಲಿಷ್ ಅರ್ಥಗಾರಿಕೆ ಮೂಲಕ ಯಕ್ಷಗಾನದ ಸೊಗಡನ್ನು ಉಣಬಡಿಸುವ ಪಿ.ವಿ.ಐತಾಳರ ಪ್ರಯತ್ನ ಯಶಸ್ವಿಯಾಗಿದೆ' ಎಂದರು.

`ಪಿ.ವಿ.ಐತಾಳರು ಬ್ರಹ್ಮಕಪಾಲ ಪ್ರಸಂಗದ ಅರ್ಥವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ರಂಗಕ್ಕಿಳಿಸಿದಾಗ ನಮಗೆಲ್ಲರಿಗೂ ಆತಂಕವಿತ್ತು. ಆ ಪ್ರಯೋಗಕ್ಕೆ ವಿಭಿನ್ನ ಪ್ರತಿಕ್ರಿಯೆ ಬಂತು. ಪ್ರೊ.ಅಮೃತ ಸೋಮೇಶ್ವರ ಅವರಂತಹ ಹಿರಿಯ ವಿದ್ವಾಂಸರೂ ಅದನ್ನು ಕೊಂಡಾಡಿದರು' ಎಂದು ಅವರು ಮೆಲುಕು ಹಾಕಿದರು.

`ಪಿ.ವಿ.ಐತಾಳರು ಇಂಗ್ಲಿಷ್ ಯಕ್ಷಗಾನಕ್ಕಾಗಿ ಗಂಭೀರ ಸಿದ್ಧತೆ ನಡೆಸುತ್ತಿದ್ದರು. ಈಗ ಅವರಷ್ಟು ಕಾಳಜಿ ವಹಿಸಿ ಪ್ರಸಂಗವನ್ನು ರಂಗಕ್ಕಿಳಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಅವರ ಅಗಲುವಿಕೆಯ ನಂತರವೂ ವರ್ಷಕ್ಕೆ ಒಂದಾದರೂ ಇಂಗ್ಲಿಷ್ ಯಕ್ಷಗಾನ ಹಮ್ಮಿಕೊಳ್ಳುತ್ತಿರುವುದೂ ಸಾಧನೆಯೇ ಸರಿ. ಇಂಗ್ಲಿಷ್ ಯಕ್ಷಗಾನ ಪ್ರಸ್ತುತ ಪಡಿಸಬಲ್ಲ ಹೊಸ ತಲೆಮಾರು ಸಿದ್ಧವಾಗುತ್ತಿದೆ.

ಇಂದಿನವರಿಗೆ ಇಂಗ್ಲಿಷ್ ಭಾಷೆಯ ಜ್ಞಾನವೂ ಹೆಚ್ಚಿದೆ. ಈ ಕಲಾ ಪ್ರಕಾರದ ಬೆಳವಣಿಗೆ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ' ಎಂದರು.

ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರಾವ್ ಮಾತನಾಡಿ, `ಮೇಳದ ಕಲಾವಿದರು ಪ್ರದರ್ಶಿಸುವ ಯಕ್ಷಗಾನವೂ ಕೆಲವೊಮ್ಮೆ ಪ್ರೇಕ್ಷಕರಿಗೆ ನೀರಸ ಅನುಭವ ನೀಡುವುದುಂಟು. ಆದರೆ, ಯಕ್ಷನಂದನದ ಇಂಗ್ಲಿಷ್ ಯಕ್ಷಗಾನ ಕುರ್ಚಿ ಬಿಟ್ಟು ಏಳಲು ಮನಸ್ಸಾಗದ ಹಾಗೆ ಪ್ರದರ್ಶನಗೊಂಡಿದೆ. ಈಗಿನ ತಲೆಮಾರಿನ ಎಳೆಯ ಕಲಾವಿದರು ಕನ್ನಡದಷ್ಟೇ ಲೀಲಾಜಾಲವಾಗಿ ಇಂಗ್ಲಿಷ್‌ನಲ್ಲಿ ಅರ್ಥ ಹೇಳುವುದನ್ನು ಕಂಡಾಗ ನನಗೆ ಈ ಸೌಭಾಗ್ಯ ಒದಗಲಿಲ್ಲವಲ್ಲ ಎಂಬ ಬೇಸರವಾಗುತ್ತದೆ' ಎಂದರು.ಕರಾವಳಿ  ಕಾಲೇಜುಗಳ ಸಮೂಹದ ಅಧ್ಯಕ್ಷ ಎಸ್.ಗಣೇಶ ರಾವ್ ಅಧ್ಯಕ್ಷರಾಗಿದ್ದರು.

ಕುಡುಪು ಅನಂತಪದ್ಮನಾಭ ದೇವಸ್ಥಾನದ ಟ್ರಸ್ಟಿ ನರಸಿಂಹ ತಂತ್ರಿ, ಡಾ.ಪಿ.ಸತ್ಯಮೂರ್ತಿ ಐತಾಳ್, ಸುರೇಶ್ ಕುಮಾರ್ ಪಿ., ಪಿ.ಸಂತೋಷ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT