ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಾತ್ಮಕ ಹೆಜ್ಜೆ

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ನಿ­ಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ಇದೇ 26ರಂದು ನಡೆಯಲಿರುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗ­ವಹಿಸಲು  ಸಾರ್ಕ್ ದೇಶಗಳ ಮುಖ್ಯಸ್ಥರಿಗೆ  ಆಹ್ವಾನ ನೀಡಿದ್ದಾರೆ. ಈ ಸದ್ಭಾವನೆಯ ಕ್ರಮ ಭರವಸೆದಾಯಕವಾದದ್ದು. ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಸಾಧಿಸುವ ದಿಸೆಯಲ್ಲಿ ಇರಿಸಿದ ಮಹತ್ವದ ಹೆಜ್ಜೆ ಎನ್ನಬಹುದು.  

ಪ್ರಧಾನಿಯೊಬ್ಬರ  ಪ್ರಮಾಣವಚನ ಸ್ವೀಕಾರ ಸಮಾರಂಭ­ದಲ್ಲಿ ಪಾಲ್ಗೊಳ್ಳಲು  ನಮ್ಮ ನೆರೆಹೊರೆಯ ಏಳು ಸಾರ್ಕ್ ರಾಷ್ಟ್ರಗಳ ಮುಖ್ಯ­ಸ್ಥರಿಗೆ ಆಹ್ವಾನ ನೀಡಲಾಗಿರುವುದು   ಇದೇ ಮೊದಲು.  ನೆರೆ ರಾಷ್ಟ್ರ­ಗ­ಳೊಂದಿಗೆ ಸೌಹಾರ್ದ ಸಂಬಂಧ ಹೊಂದುವ ಭಾರತದ ಕಾತುರತೆಗೆ ಇದು ಸಂಕೇತವಾಗಲಿದ್ದು ಈ ದಿಟ್ಟ ಕ್ರಮ ಸ್ಫೂರ್ತಿದಾಯಕ. 

ಮೋದಿಯವರ ಟೀಕಾ­ಕಾರ  ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೂ  ಈ ವಿಚಾರದಲ್ಲಿ ಮೋದಿಯವರನ್ನು ಅಭಿನಂದಿಸಿದ್ದಾರೆ.  ವಿಶೇಷ­ವಾಗಿ, ಪಾಕಿಸ್ತಾನ ಪ್ರಧಾನಿಯವರಿಗೆ ನೀಡಿರುವ ಆಹ್ವಾನ, ಸಕಾರಾತ್ಮಕ  ಮಾತುಕತೆಗಳಿಗೆ ಮುನ್ನುಡಿಯಾಗಬಹುದೆಂಬ ಆಶಯವನ್ನು ಒಮರ್ ವ್ಯಕ್ತ ಪಡಿಸಿದ್ದಾರೆ. 

ಮೋದಿಯವರು ಪ್ರಧಾನಿ ಪಟ್ಟಕ್ಕೇರಿದ ನಂತರ ಭಾರತದ ವಿದೇಶಾಂಗ ನೀತಿ  ಹೆಚ್ಚು   ಆಕ್ರಮಣಕಾರಿಯಾಗಿರಬಹುದೆಂಬ ಭೀತಿಗಳನ್ನು ಈ ಕ್ರಮ ತೊಡೆದುಹಾಕುವಂತಹದ್ದು. ಭಾರತದ ಈಶಾನ್ಯದಿಂದ ವಲಸಿಗ­ರನ್ನು  ಉಚ್ಚಾಟಿಸಲಾಗುವುದೆಂಬ ಹೇಳಿಕೆಗಳನ್ನು ಚುನಾವಣಾ ಪ್ರಚಾರ ಭಾಷ­ಣ­ಗಳಲ್ಲಿ ನೀಡಿದ್ದ  ಮೋದಿಯವರು ಬಾಂಗ್ಲಾದೇಶದಲ್ಲಿ ತಲ್ಲಣ ಮೂಡಿಸಿದ್ದರು. 

ಹಾಗೆಯೇ  ನ್ಯೂಯಾರ್ಕ್‌ನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಜೊತೆ ಮನಮೋಹನ್ ಸಿಂಗ್ ‘ಬಿರಿಯಾನಿ ಸಭೆ’ ನಡೆಸಿದ್ದಾರೆಂದು ಚುನಾವಣಾ ಪ್ರಚಾರ ಭಾಷಣಗಳಲ್ಲಿ ತೀವ್ರವಾಗಿ ಟೀಕಿಸಿದ್ದರು.   ಆದರೆ ಈಗ ಮೋದಿ ಕೈಗೊಂಡಿರುವ ಈ ಅಚ್ಚರಿಯ ಕ್ರಮ ಹೊಚ್ಚ­ಹೊಸತೆ­ನಿಸು­ವಂತಹದ್ದು. ವಿಶ್ವಾಸವೃದ್ಧಿಗೆ ಸಹಾಯಕವಾಗುವಂತಹದ್ದು.

ಒಳ್ಳೆಯ ನೆರೆಹೊರೆಯ ಬಾಂಧವ್ಯ ಆರ್ಥಿಕ ಹಾಗೂ ರಾಜಕೀಯ ಲಾಭ­ಗಳನ್ನು ತರುವಂತಹದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಜನರು ಮೋದಿಗೆ ಮಾರುಹೋಗಲು ಕಾರಣ  ಅವರ ಅಭಿವೃದ್ಧಿಮಂತ್ರಗಳು. ಈ ಅಭಿವೃದ್ಧಿ ಹಾದಿ­ಯಲ್ಲಿ ಸಾಗಲು ಮೋದಿಯವರು ಆರ್ಥಿಕ  ಕಾರ್ಯಕ್ರಮಗಳಿಗೆ ಪುನ­ಶ್ಚೇತನ ನೀಡಬೇಕಿದೆ.

ನಿರ್ಣಾಯಕ ಕ್ರಮಗಳನ್ನು  ಕೈಗೊಳ್ಳಲಾಗದ ಯುಪಿಎ ಸರ್ಕಾರದಿಂದಾಗಿ  ಆವರಿಸಿರುವ  ನಿಷ್ಕ್ರಿಯತೆಯನ್ನು ಮೊದಲಿಗೆ ಹೋಗ­ಲಾ­ಡಿ­ಸಬೇಕು.  ಹಣದುಬ್ಬರ ನಿಯಂತ್ರಿಸುವುದಲ್ಲದೆ ಲಕ್ಷಾಂತರ ಯುವ ಜನರಿಗೆ ಬೆಳಕಾಗುವ ಉದ್ಯೋಗಗಳ ಸೃಷ್ಟಿಗೆ ಆದ್ಯತೆ ನೀಡಬೇಕು. ಆರ್ಥಿಕ ರಾಜ­ತಾಂತ್ರಿ­ಕತೆಯ ಹೊಸ ಶಕೆ ಆರಂಭವಾಗಬೇಕು.

ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಇದು ಸಹಕಾರಿ.  ಭಾರತಕ್ಕೆ  ಕೋಟ್ಯಂತರ ರೂಪಾಯಿಗಳ ಹಣ­ಹೂಡಿಕೆ ಬೇಕಿದೆ,  ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಭಾರತದಲ್ಲಿ ಸೃಷ್ಟಿ­ಸುವುದು  ಈ ನಿಟ್ಟಿನಲ್ಲಿ ಮೊದಲ ಆದ್ಯತೆಯಾಗಬೇಕು.  ಹೊರ ರಾಷ್ಟ್ರ­ಗಳೊಂದಿಗೆ ಬಾಂಧವ್ಯ ಬಲವರ್ಧನೆ ಈ ದಿಸೆಯಲ್ಲಿ ಮೊದಲ ಹೆಜ್ಜೆ. 

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ವೀಸಾ ನೀಡಲು ನಿರಾ­­ಕರಿಸಿದ್ದ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಮೋದಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಅಭಿನಂದನೆ ಸಲ್ಲಿಸಿವೆ. ಆರ್ಥಿಕ­ವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಯಾವ ರಾಷ್ಟ್ರವೂ  ಕಡೆ­ಗಣಿ­ಸು­ವುದು ಸಾಧ್ಯವಿಲ್ಲ ಎಂಬುದಕ್ಕೆ ಇದು ದ್ಯೋತಕ.  ಇದಕ್ಕೆ ಸರಿಯಾಗಿ ಮೋದಿಯವರೂ ಸ್ಪಂದಿಸಿರುವುದು ಸಕಾರಾತ್ಮಕವಾದ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT