ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ನಾಡಿನ ಅಕ್ಕರೆಯ ಸಾಧಕಿಯರು

Last Updated 8 ಮಾರ್ಚ್ 2016, 9:20 IST
ಅಕ್ಷರ ಗಾತ್ರ

ಮಂಡ್ಯ: ಭಾರತೀಯ ಪುರಾಣಗಳ ಪ್ರಕಾರ ಶಕ್ತಿ ಅಂದರೆ ಪವರ್, ಸ್ತ್ರೀರೂಪದ ದೇವತೆ. ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ. ಮನೆ–ಮನೆಯಲ್ಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ– ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಎಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು  ಹೆಣ್ಣಿನ ಅಂತರಂಗದ ಸೂಕ್ಷ್ಮತೆ ಹಾಗೂ ಅನುಭವಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ವಿಶ್ವದ ಚಲನೆಯ ಪ್ರಕ್ರಿಯೆಯಲ್ಲಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಮಹಿಳೆ ವಿಶಿಷ್ಟ ಕೊಡುಗೆಗಳನ್ನು ಕೊಟ್ಟ ಸಾಧಕಿಯಾಗಿಯೂ ನಿಂತಿದ್ದಾಳೆ.

ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಕಾವೇರಿ, ಶಿಂಷಾ, ಹೇಮೆಯರು ಮೈದೊಳೆದು ಹಸಿರನ್ನುಣಿಸುತ್ತಿದ್ದಾರೆ. ಕೃಷಿಯನ್ನೇ ನಂಬಿ ನಡೆಯುವಾಗ ಕೈಸೋತು ಚೆಲ್ಲುವ ಪರಿಸ್ಥಿತಿ ತಲುಪಿ ಪುರುಷ-ಮಹಿಳೆಯರಿಬ್ಬರೂ ಬೇರೆ ಮಾರ್ಗ ಅವಲಂಬಿಸುವ ಅನಿವಾರ್ಯತೆಯಿದೆ. 2001ರಲ್ಲಿ ಸಾವಿರ ಪುರುಷರಿಗೆ 985 ಇದ್ದ ಮಹಿಳೆಯರ ಸಂಖ್ಯೆ ಈಗ 945ಕ್ಕೆ ಕುಸಿದಿದೆ.

ಸ್ವಾತಂತ್ರ್ಯಪೂರ್ವದ 1938ರಲ್ಲಿ ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಹಿಳೆಯರಲ್ಲಿ ಪಾಲಳ್ಳಿ ವೆಂಕಮ್ಮ ಮಂಡ್ಯ ಜಿಲ್ಲೆಯವರು. ತಾಯಮ್ಮ ವೀರಣ್ಣಗೌಡ ಪತಿಯೊಡಗೂಡಿ ಪಕ್ಷ ಕಟ್ಟುವ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದಾರೆ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ತಾಯಮ್ಮ ಮಾತ್ರ ಮಹಿಳಾ ಪ್ರತಿನಿಧಿಯಾಗಿದ್ದರು.

ಸ್ವಾತಂತ್ರ್ಯಾ ನಂತರ ಮಂಡ್ಯದ ರಾಜಕೀಯ ಕ್ಷೇತ್ರದಲ್ಲಿ ಶಾಸನಸಭೆಗೆ ಹಲವಾರು ಮಹಿಳೆಯರು ಆಯ್ಕೆಯಾಗಿದ್ದಾರೆ. ಪ್ರಭಾವತಿ ಜಯರಾಂ, ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಪಾರ್ವತಮ್ಮ ಶ್ರೀಕಂಠಯ್ಯ, ಜಯವಾಣಿ ಮಂಚೇಗೌಡ, ಕಲ್ಪನಾ ಸಿದ್ದರಾಜು, ನಾಗಮಣಿ ನಾಗೇಗೌಡ ಅನುಕಂಪದ ಅಲೆಯಲ್ಲಿ ಗೆದ್ದು ಪ್ರಾತಿನಿಧ್ಯ ಗಳಿಸಿದ್ದರು. ಸಂಸದ ಎಂ.ಕೆ. ಶಿವನಂಜಪ್ಪ ಅವರ ಪತ್ನಿ ಲೀಲಮ್ಮ, ಮಳವಳ್ಳಿಯ ಮಲ್ಲಿಕಾರ್ಜುನಸ್ವಾಮಿ ಅವರ ಪತ್ನಿ ಜಯಮ್ಮ ಅವರನ್ನು ರಾಜಕೀಯ ರಂಗಕ್ಕೆ ತಂದು ವಿಧಾನ ಪರಿಷತ್ತಿನ ಸದಸ್ಯರನ್ನಾಗಿಸಲಾಯಿತು.

ಶ್ರೀರಂಗಪಟ್ಟಣದ ದಮಯಂತಿ ಬೋರೇಗೌಡ, ನಾಗಮಂಗಲದ ವಿಮಲಾಗೌಡ, ಮಳವಳ್ಳಿಯ ಮಲ್ಲಾಜಮ್ಮ ಸೇರಿದಂತೆ ಬೆರಳೆಣಿಕೆಯಷ್ಟು ಮಹಿಳೆಯರು ಕೌಟುಂಬಿಕ ಹಿನ್ನೆಲೆ ಇಲ್ಲದೆ ರಾಜಕಾರಣದಲ್ಲಿ ಬೆಳೆದರು. ದಮಯಂತಿ ಬೋರೇಗೌಡ, ಮಲ್ಲಾಜಮ್ಮ ನೇರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು.

ಲೋಕಸಭಾ ಉಪಚುನಾವಣೆಯಲ್ಲಿ ಜಯಗಳಿಸಿ ಸಂಸದೆಯಾದ ರಮ್ಯಾ ಉತ್ತಮವಾಗಿ ಕಾರ್ಯ ನಿರ್ವಹಿಸಿದರೂ ಎಂಟು ತಿಂಗಳ ನಂತರದ ಚುನಾವಣೆಯಲ್ಲಿ ಸೋಲುಂಡರು.

ಮಂಡ್ಯದ ಸೊಸೆ ಮೂಡಿಗೆರೆ ಮೋಟಮ್ಮನವರು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಡ್ಯದ ಹೆಣ್ಣುಮಗಳಾದ ಜಯಲಲಿತಾ ತಮಿಳು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತಮಿಳುನಾಡಿನ ರಾಜಕೀಯ ಕ್ಷೇತ್ರದಲ್ಲೂ ಏಳು-ಬೀಳುಗಳನ್ನು ಕಂಡ ಮಹಿಳೆ.  ಮೀಸಲಾತಿ ಪ್ರಯೋಜನ ಪಡೆದು ವಿವಿಧ ಹಂತದ ಸ್ಥಳೀಯ ಸಂಸ್ಥೆಗಳ ಚುಕ್ಕಾಣಿಯನ್ನು ಮಹಿಳೆಯರು ಹಿಡಿದಿದ್ದಾರೆ.

ಗೆಜ್ಜಲಗೆರೆಯ ಸುನಂದಾ ಜಯರಾಮು ಜಿಲ್ಲಾ ರೈತ ಮಹಿಳಾ ಸಮ್ಮೇಳನದ ನೇತೃತ್ವ ವಹಿಸಿ ದನಿಯಿಲ್ಲದ ಮಂಡ್ಯದ ಮಹಿಳೆಯರಿಗೆ ದನಿಯಾಗಿದ್ದಾರೆ. ಇವರಂತೆಯೇ ಕೆ.ಆರ್ ಪೇಟೆಯ ನಂದಿನಿ ಜಯರಾಮು ಅವರೂ ರೈತಪರವಾದ ನಿಲುವುಗಳಿಂದ ರೈತ ಸಂಘಟನೆಯ ಮುಂಚೂಣಿಯಲ್ಲಿದ್ದಾರೆ.

ಸ್ವಸಹಾಯ ಸಂಘಗಳನ್ನು ಸ್ಥಾಪಿಸಿಕೊಂಡು ಆರ್ಥಿಕ ಚಟುವಟಿಕೆಯಲ್ಲಿ ಅನೇಕ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣದ ವಾಣಿ ಅವರು ಕಾದಂಬರಿ, ಕತೆ ಬರೆದಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಶುಭಮಂಗಳಾ, ಎರಡು ಕನಸು, ಹೊಸಬೆಳಕುಗಳು ಚಲನಚಿತ್ರಗಳಾಗಿವೆ.

ತ್ರಿವೇಣಿಯವರು ತಮ್ಮೆಲ್ಲ  ಕಾದಂಬರಿಗಳಲ್ಲಿ ಹೆಣ್ಣಿನ ಬದುಕಿನ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಇವರ ಬೆಕ್ಕಿನಕಣ್ಣು, ಬೆಳ್ಳಿಮೋಡ, ಹಣ್ಣೆಲೆ ಚಿಗುರಿದಾಗ, ಶರಪಂಜರ, ಹೂವು ಹಣ್ಣು ಮುಂತಾದ ಕಾದಂಬರಿಗಳು ಚಲನಚಿತ್ರಗಳಾಗಿವೆ. ಆರ್ಯಾಂಬ ಪಟ್ಟಾಭಿ ಕಾದಂಬರಿ, ಕತೆ, ನಾಟಕ, ಮಕ್ಕಳ ಸಾಹಿತ್ಯ ಬರೆದಿದ್ದಾರೆ. ಇವರ ಕಪ್ಪು–ಬಿಳುಪು ಎರಡು ಮುಖ, ಸವತಿ ನೆರಳು ಮರಳಿಗೂಡಿಗೆ ಕಾದಂಬರಿಗಳು ಚಲನಚಿತ್ರಗಳಾಗಿವೆ.

ಲತಾ ರಾಜಶೇಖರ್, ವಿಮರ್ಶಕಿ, ಚಿಂತಕಿ ಡಾ.ಸಬಿಹಾ ಭೂಮಿಗೌಡ, ಡಾ.ನಗುವನಹಳ್ಳಿ ರತ್ನಾ, ಡಾ.ಜಯಲಕ್ಷ್ಮಿ ಸೀತಾಪುರ, ಸುಶೀಲಾ ಹೊನ್ನೇಗೌಡ ಸೇರಿದಂತೆ ಹಲವರು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ.

ಮಳವಳ್ಳಿ ಸುಂದರಮ್ಮ ಮೈಸೂರು ಮಹಾರಾಜರ ಸಮ್ಮುಖದಲ್ಲಿ ಸಂಗೀತ ಕಛೇರಿ ನೀಡಿದ ಖ್ಯಾತಿಯ ಗಾಯಕಿ, ರಂಗ ಕಲಾವಿದೆ. ತಿರುಮಲೆ ಸೋದರಿಯರಾದ ಶಚಿದೇವಿ, ಶಾರದಾ ಹಾಗೂ ಬೆಳ್ಳೂರು ಸಹೋದರಿಯರಾದ ರಾಧಾ, ರಮಾ ಯುಗಳ ಗಾಯನಕ್ಕೆ ಹೆಸರಾದವರು. ಗಾಯನ-ಬರವಣಿಗೆಗಳಲ್ಲಿ ತೊಡಗಿಸಿಕೊಂಡ ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಇದೇ ಜಿಲ್ಲೆಯವರು.

ಚೇತನಾ ರಾಧಾಕೃಷ್ಣ, ಮೇಘ ಕಕ್ಕಿಲಾಯ ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಶೈಲಜಾ ಚಂದ್ರಶೇಖರ್‌ ಸುಶ್ರಾವ್ಯವಾಗಿ ಗಮಕ ವಾಚಿಸುತ್ತಾರೆ.
ಮೇಲುಕೋಟೆಯ ಸಂಧ್ಯಾ ಚಿತ್ರನಟಿ, ನಾಟ್ಯ ಕಲಾವಿದೆ. ಇವರ ಪುತ್ರಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಚಿತ್ರತಾರೆಯಾಗಿದ್ದರು. ಅತ್ಯುತ್ತಮ ಭರತನಾಟ್ಯ ಕಲಾವಿದೆಯೂ ಆಗಿದ್ದ ವೈಜಯಂತಿಮಾಲಾ ಅವರು ಮಧುಮತಿ, ಗಂಗಾ ಜಮುನಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ರಮ್ಯಾ, ಅಮೂಲ್ಯಾ, ಮಂಡ್ಯ ರಮೇಶ್‌ ಅವರ ಪುತ್ರಿ ದಿಶಾ, ಮೈತ್ರೇಯಿಗೌಡ ಮುಂತಾದವರು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.
ಶಿಕ್ಷಣ ಸಂಸ್ಥೆ ಆರಂಭಿಸಿದ್ದಲ್ಲದೇ, ಕಸಾಪ ಜಿಲ್ಲಾ ಘಟಕದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದ ಕೀರ್ತಿ ಮೀರಾ ಶಿವಲಿಂಗಯ್ಯ ಅವರದ್ದಾಗಿದೆ. ಸಿಸ್ಟರ್ ಕಾರ್ಮೆಲ ಅವರು ವಿದ್ಯಾಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಕ್ರೀಡಾಕ್ಷೇತ್ರದಲ್ಲಿ ಕೆ.ಆರ್‌ ಪೇಟೆಯ ವಿಜಯಕುಮಾರಿ, ಮಂಡ್ಯದ ಎಚ್‌.ಎಂ. ಬಾಂಧವ್ಯಾ, ಸಂಧ್ಯಾ, ಪಾಲಹಳ್ಳಿಯ ರೀಟಾ, ಮಂಡ್ಯದ ಮಾಧುರಿ, ಕ್ಯಾತನಹಳ್ಳಿಯ ಕೌಶಲ್ಯಾ ಸೇರಿದಂತೆ ಹಲವರು ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಂಡ್ಯದ ಮಹಿಳಾ ಸಾಧಕಿಯರನ್ನು ಕುರಿತ ಈ ಪಕ್ಷಿನೋಟದ ತೆಕ್ಕೆಗೆ ಬಾರದೆ ಉಳಿದ ಎಷ್ಟೋ ಸಾಧಕಿಯರೂ ಇದ್ದಾರೆ.
- ಡಾ.ಲೀಲಾ ಅಪ್ಪಾಜಿ, ಸಂಸ್ಕೃತಿ ಚಿಂತಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT