ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಮುನಿಯಪ್ಪ, ರೇವಣ್ಣ ವಾಸ್ತು ವ್ಯಾಮೋಹ

ಚುನಾವಣಾ ಸ್ವಾರಸ್ಯ
Last Updated 17 ಏಪ್ರಿಲ್ 2014, 19:38 IST
ಅಕ್ಷರ ಗಾತ್ರ

ಕೋಲಾರ: ಮತದಾನ ಮಾಡಲು ಬಂದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರು ಮತಯಂತ್ರದ ದಿಕ್ಕನ್ನು ವಾಸ್ತುವಿಗೆ ಅನುಗುಣವಾಗಿ ಬದಲಿಸಿ ಮತ ಚಲಾಯಿಸಿದ ಪ್ರಸಂಗ ಇಲ್ಲಿನ ಹಾರೋಹಳ್ಳಿ ಸರ್ಕಾರಿ ಶಾಲೆಯ 230ನೇ ಮತಗಟ್ಟೆಯಲ್ಲಿ ನಡೆಯಿತು.

ಇದಕ್ಕೆ ಅವಕಾಶ ನೀಡಿದ ಮತಗಟ್ಟೆ ಅಧಿಕಾರಿ ಮಂಜುಳಾ ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಿ ಮಂಜುನಾಥ್‌ ಎಂಬುವವರನ್ನು ನಿಯುಕ್ತಿಗೊಳಿಸಲಾಯಿತು.

ಬೆಳಿಗ್ಗೆ 9.30ರ ವೇಳೆಗೆ ಮತಗಟ್ಟೆ ಪ್ರವೇಶಿಸಿದ ಮುನಿಯಪ್ಪ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಎಡಗೈ ಹೆಬ್ಬೆರಳಿಗೆ ಶಾಯಿ ಹಾಕಿಸಿಕೊಂಡ ಬಳಿಕ ಮತಯಂತ್ರದ ಬಳಿಗೆ ಬಂದು ಕಸಿವಿಸಿಯಿಂದ ‘ಇದು ಸರಿ ಇಲ್ಲ’ ಎಂದು ಹೇಳಿದರು. ಅವರ ಜೊತೆಗೆ ಮತಗಟ್ಟೆ ಪ್ರವೇಶಿಸಿದ್ದ ತೆಂಗು ನಾರು ಮಂಡಳಿ ಸದಸ್ಯ ಹೊಳಲಿ ಪ್ರಕಾಶ್‌, ನಾರಾಯಣಸ್ವಾಮಿ, ಕುಮಾರ್‌ ಮತ್ತಿತರರಿದ್ದ ಗುಂಪು ‘ದೇವಮೂಲಕಿ ತಿಪ್ಪಂಡ‘ (ದೇವಮೂಲೆಗೆ ತಿರುಗಿಸಿ) ಎಂದು ಸಲಹೆ ನೀಡಿತು. ಮುನಿಯಪ್ಪ ‘ತಿಪ್ಪಂಡ’ (ತಿರುಗಿಸಿ) ಎಂದು ಒಪ್ಪಿಗೆ ಕೊಟ್ಟರು. ಕೂಡಲೇ ಬೆಂಬಲಿಗರು ಮತಯಂತ್ರ ಇರಿಸಿದ್ದ ಟೇಬಲನ್ನು ಪೂರ್ವದಿಕ್ಕಿಗೆ ತಿರುಗಿಸಿದರು. ನಂತರ ಮುನಿಯಪ್ಪ ಮತದಾನ ಮಾಡಿದರು.

ಈ ವಿಷಯವು ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಕಸಿವಿಸಿಗೊಂಡ ಚುನಾವಣಾ ಅಧಿಕಾರಿಗಳು ಮತಗಟ್ಟೆ ಅಧಿಕಾರಿಯನ್ನು ಬದಲಿಸಿದರು.

ಪತ್ರಕರ್ತರ ಹೊರದಬ್ಬಿದ ರೇವಣ್ಣ
ಹಾಸನ:
ಪಡುವಲಹಿಪ್ಪೆಯಲ್ಲಿ ದೇವೇ­ಗೌಡರು ಮತದಾನ ಮಾಡುವುದನ್ನು ಚಿತ್ರೀಕರಿಸಲು ಹೋದ ಪತ್ರಕರ್ತರನ್ನು ರೇವಣ್ಣ ಅವರು ಮತಗಟ್ಟೆಯಿಂದ ಹೊರದಬ್ಬಿದ ಘಟನೆ ಗುರುವಾರ ನಡೆದಿದೆ.

ದೇವೇಗೌಡರು ಬೆಳಿಗ್ಗೆ 7.15ಕ್ಕೆ ಮತದಾನ ಮಾಡಲಿದ್ದಾರೆ ಎಂದು ಮಾಹಿತಿ ಪಡೆದ ಹಾಸನದ ಪತ್ರಕರ್ತರು ಬೆಳಿಗ್ಗೆಯೇ ಪಡುವಲಹಿಪ್ಪೆಯ ಮತ­ಗಟ್ಟೆಯ ಮುಂದೆ ಕಾದು ಕುಳಿತಿದ್ದರು. ಆದರೆ, ದೇವೇಗೌಡರು ಕುಟುಂಬ­ದೊಂದಿಗೆ ಬಂದಾಗ ಮಧ್ಯಾಹ್ನ 12.15 ಆಗಿತ್ತು.

ಮೊದಲು ದೇವೇಗೌಡರ ಪತ್ನಿ ಚನ್ನಮ್ಮ ಮತದಾನ ಮಾಡಿದರು. ನಂತರ ರೇವಣ್ಣ, ಭವಾನಿ ರೇವಣ್ಣ, ಅನಸೂಯಾ, ಡಾ.ಸೂರಜ್‌ ಎಲ್ಲರೂ ಮತದಾನ ಮಾಡಿದರು. ಇವರೆಲ್ಲರೂ ಮತದಾನ ಮಾಡುವಾಗ ಟಿ.ವಿ ಮಾಧ್ಯಮದವರು ಚಿತ್ರೀಕರಣ ಮಾಡಿದ್ದರು, ಪತ್ರಿಕಾ ಛಾಯಾ­ಗ್ರಾಹಕರೂ ಭಾವಚಿತ್ರ ತೆಗೆದಿದ್ದರು. ಆದರೆ, ದೇವೇಗೌಡರು ಮತದಾನಕ್ಕೆ ಬಂದಾಗ ಒಮ್ಮೆಲೇ ಚಿತ್ರಣ ಬದಲಾಯಿತು.

ಎಡಗೈ ಹೆಬ್ಬೆರಳಿಗೆ ಶಾಯಿ ಗುರುತು ಹಾಕಿದ ಬಳಿಕ ದೇವೇಗೌಡರು ಮಾಧ್ಯಮದವರಿಗೆ ಪೋಸ್‌ ನೀಡಿದರು, ಬಳಿಕ ‘ಒಮ್ಮೆಲೇ ಥ್ಯಾಂಕ್‌ ಯೂ. ಎಲ್ಲರೂ ಆಚೆ ಹೋಗಿ’ ಎಂದರು. ಮಾಧ್ಯಮದವರು ಹೊರಗೆ ಹೋಗದಿದ್ದಾಗ ಸ್ವತಃ ರೇವಣ್ಣ ಅವರೇ ಬಂದು ‘ಫೋಟೋ ತೆಗೀಬೇಡಿ ಆಚೆ ಹೋಗಿ’ ಎಂದು ಎಲ್ಲರನ್ನೂ ಹೊರಗೆ ತಳ್ಳಿದರು. ಮಾಧ್ಯಮದವರ ಮನವಿಯನ್ನೂ ಕೇಳದ ಚನಾವಣಾ ಆಯೋಗದವರೇ ನೇಮಿಸಿದ್ದ ಛಾಯಾಗ್ರಾಹಕರನ್ನೂ ಆಚೆ ತಳ್ಳಿದರು.

ರೇವಣ್ಣ ಹಟ ಹಿಡಿದಿದ್ದನ್ನು ಕಂಡ ಕೆಲವು ಪತ್ರಕರ್ತರು ಹಿಂಭಾಗದ ಕಿಟಿಕಿ ಮೂಲಕ ಚಿತ್ರೀಕರಣಕ್ಕೆ ಮುಂದಾದರು. ಅದನ್ನು ಗಮನಿಸಿದ ರೇವಣ್ಣ ಮತಗಟ್ಟೆಯ ಎಲ್ಲ ಕಿಟಿಕಿಗಳನ್ನೂ ಮುಚ್ಚಿದರು. ಆಗ ಕೆಲವರು ಬಾಗಿಲಿನತ್ತ ಧಾವಿಸಿದರು. ರೇವಣ್ಣ ಅಲ್ಲಿಗೂ ಓಡಿ ಬಂದರು. ಅಷ್ಟರಲ್ಲಿ ಕೆಲವರು ಕಿಟಿಕಿ ಬಾಗಿಲು ತೆಗೆದು ದೇವೇಗೌಡರು ಮತದಾನ ಮಾಡುವ ಭಾವಚಿತ್ರ ತೆಗೆದುಬಿಟ್ಟರು.

ರೇವಣ್ಣ ಅವರ ಈ ವರ್ತನೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಕಳೆದ ಚುನಾವಣೆಯಲ್ಲಿ ರೇವಣ್ಣ, ದೇವೇಗೌಡರು ಮತ ಚಲಾಯಿ­ಸುವುದಕ್ಕೂ ಮೊದಲು ಮತಯಂತ್ರ ಇಟ್ಟಿದ್ದ ಮೇಜನ್ನೇ ತಿರುಗಿಸಿ ಸುದ್ದಿಯಾಗಿದ್ದರು.

ಚೇಳು ಕಡಿತದಿಂದ  ಆಸ್ಪತ್ರೆಗೆ
ಕೋಲಾರ:
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ  ಗುರುವಾರ ಬೆಳಗಿನ ಜಾವ ಚೇಳು ಕಡಿದಿದ್ದರಿಂದ ಮತಗಟ್ಟೆ ಸಿಬ್ಬಂದಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಮುಳಬಾಗಲು ತಾಲ್ಲೂಕಿನ ಎಚ್‌.ಗೊಲ್ಲಹಳ್ಳಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಸಹ ಶಿಕ್ಷಕ ಎಂ.ನಾರಾಯಣಸ್ವಾಮಿ ಮತಗಟ್ಟೆಯಲ್ಲಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ದೀಪ ಹಾಕಿ ನೋಡುವ ವೇಳೆಗೆ ಏನೂ ಗೊತ್ತಾಗಲಿಲ್ಲ.

ಸಿಬ್ಬಂದಿ ಸೇರಿ ಮೂವರ ಸಾವು
ತುಮಕೂರು:
ಜಿಲ್ಲೆಯಲ್ಲಿ ಇಬ್ಬರು ಚುನಾವಣಾ ಸಿಬ್ಬಂದಿ ಮತ್ತು ಮತದಾನಕ್ಕೆ ಹೋಗಿದ್ದ ಮಹಿಳೆಯೊಬ್ಬರು ಚುನಾವಣೆ ಸಂದರ್ಭದಲ್ಲಿ  ಸಾವನ್ನಪ್ಪಿದ್ದಾರೆ. ತುರುವೇಕೆರೆ ಪಟ್ಟಣದ 76ನೇ ಮತಗಟ್ಟೆಗೆ ನಿಯೋಜಿತರಾಗಿದ್ದ ತಾಲ್ಲೂಕು ಕಚೇರಿ ಡಿ ಗ್ರೂಪ್‌ ನೌಕರ ಗಂಗಣ್ಣ (55) ಗುರುವಾರ ಬೆಳಿಗ್ಗೆ ಮತಗಟ್ಟೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗುಬ್ಬಿ ತಾಲ್ಲೂಕಿನ ಹತ್ತೀಕಟ್ಟೆ ಮತಗಟ್ಟೆಯ ಒಳಗೆ ಸುಂದರಿಬಾಯಿ (65) ಮತದಾನ ಮಾಡುವ ಮೊದಲೇ ಕುಸಿದುಬಿದ್ದು ಸಾವನ್ನಪ್ಪಿದರು.
ತುರುವೇಕೆರೆ ತಾಲ್ಲೂಕು ಚುನಾವಣಾ ಮೀಸಲು ಸಿಬ್ಬಂದಿಯಾಗಿದ್ದ ಚೇಳೂರು ವೆಂಕಟೇಶ್‌ (40) ಗುರುವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತೋರು ಬೆರಳಿಗೆ ಶಾಯಿ!

ಬಳ್ಳಾರಿ: ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಎಡಗೈ ಹೆಬ್ಬೆರಳಿಗೆ ಶಾಯಿ ಹಾಕುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದರೂ, ನಗರದ ವಾಲ್ಮೀಕಿ ವೃತ್ತದ ಬಳಿ ಇರುವ ಮತಗಟ್ಟೆ ಸಂಖ್ಯೆ 48ರಲ್ಲಿ ಮತದಾನ ಮಾಡಿದ ಕೆಲವರ ಎಡಗೈನ ತೋರು ಬೆರಳಿಗೆ ಶಾಯಿ ಹಚ್ಚಿದ ಘಟನೆ ನಡೆದಿದೆ.
ಸಂಸದೆ ಜೆ.ಶಾಂತಾ ಅವರು ಪತಿ ಬಿ.ನಾಗರಾಜ್‌ ಅವರೊಂದಿಗೆ ಬೆಳಿಗ್ಗೆ 9.30ಕ್ಕೆ ಮತಗಟ್ಟೆಗೆ ಬಂದು  ಮತ ಚಲಾಯಿಸಿದಾಗ ಅವರ ಎಡಗೈ ತೋರು ಬೆರಳಿಗೆ ಶಾಯಿ ಹಚ್ಚಿದ ಮತಗಟ್ಟೆ ಸಿಬ್ಬಂದಿ, ನಂತರ 10 ಗಂಟೆಗೆ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಬಂದು  ಮತ ಚಲಾಯಿಸಿದಾಗ ಅವರ ಎಡಗೈ ಹೆಬ್ಬೆರಳಿಗೆ ಶಾಯಿ ಹಚ್ಚಿದರು.

ಸಂಸದೆ ಶಾಂತಾ ಸೇರಿದಂತೆ ಅದುವರೆಗೆ ಮತ ಚಲಾಯಿಸಿದವರಿಗೆಲ್ಲ ಎಡಗೈ ತೋರು ಬೆರಳಿಗೆ ಶಾಯಿ ಹಚ್ಚಿದ ವಿಷಯ ಚುನಾವಣಾಧಿಕಾರಿ ಗಮನಕ್ಕೆ ಬರುತ್ತಿದ್ದಂತೆಯೇ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಯಿತು. ನಂತರ ಬಂದವರ ಎಡಗೈ ಹೆಬ್ಬೆರಳಿಗೆ ಶಾಯಿ ಹಚ್ಚಲಾಯಿತು.

ಚುನಾವಗೆ ಮುನ್ನ 2 ಹಂತಗಳಲ್ಲಿ ನೀಡಲಾಗಿದ್ದ ತರಬೇತಿ ಸಂದರ್ಭ ಎಡಗೈ ತೋರು ಬೆರಳಿಗೆ ಶಾಯಿ ಹಚ್ಚುವಂತೆ ಸೂಚಿಸಲಾಗಿತ್ತು. ನಂತರ ಆದೇಶ ಬದಲಿಸಿರುವುದು ಗಮನಕ್ಕೆ ಬಂದಿರಲಿಲ್ಲ. ಹಾಗಾಗಿ ಗೊಂದಲವಾಗಿತ್ತು ಎಂದು ಮತಗಟ್ಟೆ ಸಿಬ್ಬಂದಿ ತಿಳಿಸಿದರು.

ಮತಗಟ್ಟೆ ಬಳಿ ವಾಮಾಚಾರ
ಶಿಗ್ಗಾವಿ (ಹಾವೇರಿ ಜಿಲ್ಲೆ):
ತಾಲ್ಲೂಕಿನ ಬಂಕಾಪುರದ ಅಂಕದಕಣ ನಗರದಲ್ಲಿ ಮತಗಟ್ಟೆ ಸಂಖ್ಯೆ 173ರ ಬಳಿ ವಾಮಾಚಾರ ಮಾಡಿದ ಘಟನೆ ನಡೆದಿದೆ.
ಮತಯಂತ್ರದ ಮೇಲೆ ವಾಂತಿ!

ಸಕಲೇಶಪುರ (ಹಾಸನ ಜಿಲ್ಲೆ): ಮತದಾನ ಮಾಡಲು ಬಂದ ವ್ಯಕ್ತಿಯೊಬ್ಬರು ಮತಯಂತ್ರದ ಮೇಲೆಯೇ ವಾಂತಿ ಮಾಡಿದ ಘಟನೆ ತಾಲ್ಲೂಕಿನ ಕಾಡಮನೆ ಗ್ರಾಮದ 106ನೇ ಮತಗಟ್ಟೆಯಲ್ಲಿ ನಡೆದಿದೆ.

ಘಟನೆಯಿಂದ ಬ್ಯಾಲೆಟ್‌ ಯೂನಿಟ್‌ ಸಂಪೂರ್ಣ ಒದ್ದೆಯಾಗಿ ಮತಯಂತ್ರವನ್ನೇ ಬದಲಿಸಬೇಕಾಯಿತು.
ಈ ಮತಗಟ್ಟೆಯಲ್ಲಿ 222ನೇ ಮತದಾರನಾಗಿ ಒಳಗೆ ಹೋದ ವ್ಯಕ್ತಿ ಗುಂಡಿ ಒತ್ತುವ ಮೊದಲೇ ಮತಯಂತ್ರದ ಮೇಲೆ ವಾಂತಿ ಮಾಡಿದರು. ಅವರ ಹಿಂದೆ ಅನೇಕ ಮತದಾರರು ಸಾಲುಗಟ್ಟಿ ನಿಂತಿದ್ದರು. ಆದರೆ, ವಾಂತಿ ಮಾಡಿದ್ದರಿಂದ ಕೋಣೆಯೊಳಗೆ ದುರ್ವಾಸನೆ ತುಂಬಿದ ಪರಿಣಾಮ ಇತರ ಮತದಾರರು ಒಳಗೆ ಹೋಗಲು ನಿರಾಕರಿಸಿದರು.

ಈ ಅನಿರೀಕ್ಷಿತ ಘಟನೆಯಿಂದ ಮತಗಟ್ಟೆಯ ಅಧಿಕಾರಿಗಳು ಸ್ವಲ್ಪ ಕಾಲ ಏನು ಮಾಡಬೇಕು ಗೊತ್ತಾಗದೆ ಗೊಂದಲಕ್ಕೆ ಒಳಗಾದರು. ಕೊನೆಗೆ ಉಪ ವಿಭಾಗಾಧಿಕಾರಿ ಡಾ.ಮಧುಕೇಶ್ವರ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದರು.

ಸ್ವಲ್ಪ ಸಮಯದಲ್ಲೇ ಅದೇ ಗ್ರಾಮದ 105ರ ಮತಗಟ್ಟೆಯಲ್ಲಿದ್ದ ಸೆಕ್ಟರ್‌ ಅಧಿಕಾರಿ ದಕ್ಷಿಣಾಮೂರ್ತಿ ಮತಗಟ್ಟೆಗೆ ಬಂದು ವಾಂತಿಯಾಗಿದ್ದ ಮತಯಂತ್ರದಲ್ಲಿದ್ದ  ಮತಗಳನ್ನು ‘ಸೇವ್‌’ ಮಾಡಿ, ಈ ಕೇಂದ್ರದಲ್ಲಿ ಹೊಸ ಮತಯಂತ್ರವನ್ನು ಅಳವಡಿಸಿದರು. ನಂತರ ಮತದಾನ ನಿರಾತಂಕವಾಗಿ ಮುಂದುವರಿಯಿತು.

ವಾಂತಿ ಮಾಡಿದ್ದ ವ್ಯಕ್ತಿ ಮದ್ಯ ಸೇವಿಸಿದ್ದರು, ಮಾತ್ರವಲ್ಲದೆ ಸುಮಾರು ನಾಲ್ಕು ಕಿ.ಮೀ. ದೂರದಿಂದ ನಡೆದುಕೊಂಡು ಬಂದಿದ್ದರು ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಮತದಾನಕ್ಕೆ ಮಂಗಗಳ ಅಡ್ಡಿ!
ದಾವಣಗೆರೆ:
ಹೊನ್ನಾಳಿ ತಾಲ್ಲೂಕು ಟಿ.ಗೋಪಗೊಂಡನಹಳ್ಳಿ ಮತಗಟ್ಟೆಯಲ್ಲಿ ಮಂಗಗಳು ಮತ­ದಾನಕ್ಕೆ ಅಡ್ಡಿಪಡಿಸಿದ ಘಟನೆ  ನಡೆದಿದೆ.
ಎರಡು ದಿನಗಳ ಹಿಂದೆ ವಿದ್ಯುತ್‌ ಸ್ಪರ್ಶದಿಂದ ಮತಗಟ್ಟೆಯ ಸಮೀಪ ಕೋತಿ ಮರಿಯೊಂದು ಮೃತಪಟ್ಟಿತ್ತು. ಇದರಿಂದ ಕೋತಿಗಳೆಲ್ಲ ಅಲ್ಲೇ ಜಮಾಯಿಸಿದ್ದವು.

ಗುರುವಾರ ಮತದಾನಕ್ಕೆ ಮತಗಟ್ಟೆಯ ಬಳಿ ಬಂದವರ ಮೇಲೆ ಕೆಲ ಮಂಗಗಳು ದಾಳಿ ಮಾಡಿ ಕೆಲವರನ್ನು ಪರಚಿದವು. ಕೆಲ ಸಮಯದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಮಂಗಗಳನ್ನು ಓಡಿಸಿದರು. ಮಂಗಗಳ ಕಾಟದಿಂದ ಒಟ್ಟಾರೆ 15–20 ನಿಮಿಷ ಮತದಾನಕ್ಕೆ ಅಡ್ಡಿಯಾಯಿತು. ನಂತರ ಮತದಾನ ಸುಗಮಗೊಂಡಿತು.

ಮತಗಟ್ಟೆ ಅಧಿಕಾರಿ ಅಮಾನತು
ಬೆಳಗಾವಿ: 
ಒಂದು ನಿರ್ದಿಷ್ಟ ಪಕ್ಷದ ಅಭ್ಯರ್ಥಿಗೇ ಮತ ಹಾಕುವಂತೆ ಜನರಿಗೆ ಹೇಳುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೋಕಾಕ ವಿಧಾನಸಭಾ ಕ್ಷೇತ್ರದ ಕೆಳಗಿನಹಟ್ಟಿಯ ಮತಗಟ್ಟೆ ಕೇಂದ್ರ 202ರ ಮತಗಟ್ಟೆ ಅಧಿಕಾರಿ ಹನುಮಂತಪ್ಪ ಭೂಮರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ.

‘ಭೂಮರೆಡ್ಡಿ ಅವರು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರ ಪರವಾಗಿ ಮತ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಅಮಾನತುಗೊಳಿಸಿದ್ದೇನೆ. ತಕ್ಷಣವೇ ಬೇರೆಯವರನ್ನು  ನೇಮಿಸಿದ್ದೇನೆ. ಚುನಾವಣಾ ಪ್ರಕ್ರಿಯೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಮತದಾನ ಸುಗಮವಾಗಿ ನಡೆದಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌. ಜಯರಾಮ್‌ ತಿಳಿಸಿದ್ದಾರೆ.

ಅಮೆರಿಕದಿಂದ ಬಂದ ಯುವಕ
ನ್ಯಾಮತಿ:
ಊರಿನಲ್ಲಿದ್ದುಕೊಂಡೇ ಕೆಲವರು ಮತದಾನಕ್ಕೆ ತಾತ್ಸಾರ ತೋರುತ್ತಾರೆ. ಅಂಥದ್ದರಲ್ಲಿ ಅಮೆರಿಕದಲ್ಲಿ ಉದ್ಯೋಗ­ದಲ್ಲಿರುವ ನ್ಯಾಮತಿಯ ಮತದಾರ­ರೊಬ್ಬರು ರಜೆ ಹೊಂದಿಸಿ ಅಲ್ಲಿಂದ ಊರಿಗೆ ಬಂದು ಗುರುವಾರ ಮತ ಚಲಾಯಿ­ಸಿದ್ದಾರೆ.

ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದ ಡೆಟ್ರಾಯ್ಟ್‌ನಲ್ಲಿ ಹಾರ್ಡ್‌ವೇರ್ ಡಿಸೈನರ್‌ ಉದ್ಯೋಗ­ದಲ್ಲಿರುವ ಕೆ.ಎಂ.ಮಂಜುನಾಥ್‌ ಕುಮಾರ್ ಅವರೇ ಈ ಮತದಾರ. ‘ಈ ಸಲದ ಲೋಕಸಭಾ ಚುನಾವಣೆ ಮಹತ್ವ ಪಡೆದಿದ್ದು, ಚುನಾವಣೆ ನಡೆಯುವ ದಿನಕ್ಕೆ ರಜೆ ಹೊಂದಿಸಿಕೊಂಡು ಬಂದು ನನ್ನ ವಾರ್ಡ್ ಸಂಖ್ಯೆ 9ರಲ್ಲಿ ಮತ ಚಲಾಯಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಚುನಾವಣಾ ಸಿಬ್ಬಂದಿ ಸಾವು
ಮುಗಳಖೋಡ (ಬೆಳಗಾವಿ ಜಿಲ್ಲೆ):
ಚುನಾವಣಾ ಕರ್ತವ್ಯದಲ್ಲಿದ್ದ ಮತಗಟ್ಟೆ ಕೇಂದ್ರದ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೀರಲಕೋಡಿ ಗ್ರಾಮದ ಮತಗಟ್ಟೆ ಸಂಖ್ಯೆ 155ರಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ಮೂಲತಃ ಗೋಕಾಕ ತಾಲ್ಲೂಕಿನ ಯಾದವಾಡ ಗ್ರಾಮದ ಬಷೀರ್‌ ಅಹ್ಮದ್‌ ಮೌಲಾಸಾಬ ಝಾರೆ (53) ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT