ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ವಿ.ವಿ.ಗೆ 25 ಗೌರವ ಪ್ರಾಧ್ಯಾಪಕರ ಹೊರೆ

Last Updated 28 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುಮಕೂರು: ಒಂದು ಜಿಲ್ಲೆಗೆ ಸೀಮಿತವಾದ ತುಮಕೂರು ವಿಶ್ವವಿದ್ಯಾಲ­ಯಕ್ಕೆ ಡಾ.ಶರ್ಮಾ ಅವಧಿ­ಯಲ್ಲಿ 25 ಗೌರವ ಪ್ರಾಧ್ಯಾಪಕರಿದ್ದರು. ವಿ.ವಿ ಘಟಿಕೋತ್ಸವಕ್ಕೆ ಬಂದ ಎಲ್ಲ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳಿಂದ ಹಿಡಿದು ಬೆಂಗ­ಳೂರು ದೂರದರ್ಶನ  ಮಹಾ­­ನಿರ್ದೇಶಕ­ರಾಗಿದ್ದ ಮಹೇಶ ಜೋಶಿ­­ವರೆಗೆ ಹಲವರನ್ನು ಗೌರವ ಪ್ರಾಧ್ಯಾ­­ಪಕರನ್ನಾಗಿ ಮಾಡಿ­ಕೊಳ್ಳ­ಲಾಗಿದೆ.

ಆಯ್ದ ಕೆಲವು ಗೌರವ ಪ್ರಾಧ್ಯಾಪ­ಕ­ರಿಗೆ ತಿಂಗಳಿಗೆ ಮಾಸಿಕ ಗೌರವ ಧನವನ್ನು ಪಾವತಿಸ­ಲಾಗಿದೆ. ಇಲ್ಲಿಯವರೆಗೂ ಒಟ್ಟು ₨ 12 ಲಕ್ಷ ಪಾವತಿಸಲಾಗಿದೆ ಎಂದು ಕುಲಸಚಿವ ಪ್ರೊ.ಶಿವ­ಲಿಂಗಯ್ಯ ಹೇಳಿದರು.

ವಿಶ್ವವಿದ್ಯಾಲಯ ಮಾನ್ಯತೆ ನೀಡಿರುವ  29 ಸಂಶೋಧನಾ ಕೇಂದ್ರಗಳಲ್ಲಿ ಗೌರವ ಪ್ರಾಧ್ಯಾಪ­ಕರು ಕೆಲಸ ನಿರ್ವಹಿಸುತ್ತಾರೆ. ಅಲ್ಲಿನ ಸಂಶೋ­ಧನಾ ಮಾರ್ಗದರ್ಶಕರ ಜತೆ ಸಂವಾದ, ಸಂಶೋ­ಧನಾ ವಿದ್ಯಾರ್ಥಿ­ಗಳ ಸಂಶೋ­ಧನೆ, ವಿಷಯ ಕುರಿತ ಅನುಮಾನ, ಪ್ರಶ್ನೆಗಳಿಗೆ  ಸಲಹೆ, ಉತ್ತರ ನೀಡುತ್ತಾರೆ. ಗೌರವ ಧನ ಪಡೆದರೂ ಪ್ರತಿ ದಿನ ಸಂಶೋಧನಾ ಕೇಂದ್ರಗಳಿಗೆ ಬರುವ ಅಗತ್ಯವಿರುವುದಿಲ್ಲ. ಇವರು ವಿ.ವಿ.ಯ ಸಲಹೆ­ಗಾರರು ಮಾತ್ರವಾಗಿ­ರುತ್ತಾರೆ ಎಂದೂ ಅವರು ಹೇಳಿದರು.

ಮಾಸಿಕ ಗೌರವ ಧನ ಪಡೆದವರಲ್ಲಿ ತುಮಕೂರು ರಾಮಕೃಷ್ಣ ಮಠದ ಡಾ.ವೀರೇಶಾ­ನಂದ ಸ್ವಾಮೀಜಿ, ವೆಂಕಟೇಶ್ವರಲು ಕರೋಡಿ, ಡಾ.ಆರ್‌.­ಪಿ.ಎಸ್‌.­ಚಕ್ರಧರ್‌, ಡಾ.ಎಸ್.­­ಸುಂದರ್‌­ರಾಜನ್‌ ಪ್ರಮುಖರು.

ಇನ್ಫೋಸಿಸ್‌ನ ಸುಧಾಮೂರ್ತಿ, ಕೃ. ನರಹರಿ, ಸಂಗೀತ ವಿಮರ್ಶಕ ಮೈಸೂರು ವಿ.ಸುಬ್ರಹ್ಮಣ್ಯ, ನಿವೃತ್ತ ಡಿಜಿಪಿ ಎಸ್.ಟಿ.ರಮೇಶ್, ಅಪ್ಪಣ್ಣಯ್ಯ, ಎಂಟಿಆರ್‌ ಸಮೂಹದ ಸದಾನಂದ ಮಯ್ಯ, ಪಪ್ಪು ವೇಣುಗೋಪಾಲ ರಾವ್ ಗೌರವ ಪ್ರಾಧ್ಯಾಪಕರಾಗಿದ್ದರು.
ನೂತನ ಕುಲಪತಿಯಾಗಿ ಡಾ.­ರಾಜಾ­ಸಾಬ್‌ ಅಧಿಕಾರ ಸ್ವೀಕರಿಸಿದ ನಂತರ ಗೌರವ ಪ್ರಾಧ್ಯಾಪಕರ  ಗೌರವ ಧನ ನೀಡುವುದನ್ನು ನಿಲ್ಲಿಸಿ ಆದೇಶಿಸಿದ್ದಾರೆ.

ವಿವಾದಿತ ಪಿಎಚ್.ಡಿ ಪದವೀಧರರ ಪ್ರತಿಕ್ರಿಯೆ: ‘ನಾವುಗಳು 2011ರ ಏಪ್ರಿಲ್‌ 24ರಂದು ಪಿಎಚ್.ಡಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿ­ಗಳು. ಆದರೆ ವಿ.ವಿ ಆಡಳಿತದ ನಿರ್ಲಕ್ಷ್ಯದಿಂದ ನಮಗೆ ಬಹಳ ಅನ್ಯಾಯವಾಯಿತು. ಕೊನೆಗೆ 2011ರ ಏಪ್ರಿಲ್‌ 24-ರಿಂದಲೇ ನಮ್ಮ ನೋಂದಣಿ ದಿನಾಂಕ ನಿಗದಿಯಾಗುವಂತೆ ನೋಡಿಕೊಂಡಿತು. ಈ ಇಡೀ ವಿವಾದದಲ್ಲಿ ನಮ್ಮ ಪಾತ್ರ ಏನೂ ಇಲ್ಲ.

ನಾವು ಮುಗ್ಧರು. ವಿ.ವಿ ಮತ್ತು ಮಾರ್ಗದರ್ಶಕರು ಹೇಳಿದಂತೆ ಸಂಶೋಧನೆ ಮುಗಿಸಿ ಪ್ರಬಂಧ ಸಲ್ಲಿಸಿದ್ದೇವೆ’ ಎಂದು ಆರು ಜನರ ಪರವಾಗಿ ತುಂಗಾಮಣಿ, ಕೇಶವ ಪ್ರಸನ್ನ, ಎಸ್‌.ಜೆ.ಪ್ರಶಾಂತ್‌ ಸ್ಪಷ್ಟಪಡಿಸಿದ್ದಾರೆ.

ಬಯಲಾದ ಗುಟ್ಟು...
ಈ ವಿವಾದಿತ ಆರೂ ಮಂದಿ ಸಂಶೋಧನಾರ್ಥಿಗಳಿಗೆ 2011ರ ಏಪ್ರಿಲ್‌ 24– ತಿದ್ದುಪಡಿಯಾದ ಪಿಎಚ್.ಡಿ ನೋಂದಣಿ ದಿನಾಂಕವಾಗಿದೆ. ಯುಜಿಸಿ ನಿಯಾಮವಳಿಗಳ ಪ್ರಕಾರ ಕನಿಷ್ಠ ಎರಡು ವರ್ಷ ಸಂಶೋಧನೆ ಎಂದುಕೊಂಡರೂ ಇವರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಬೇ­ಕಾದದ್ದು 2013ರ ಮಾರ್ಚ್ 24-ರ ನಂತರ.

ಆದರೆ ಇವರೆಲ್ಲರೂ ಎರಡು ವರ್ಷ ಮುಗಿಯುವ ಮುನ್ನ ಅಂದರೆ 2013 ಫೆಬ್ರುವರಿ 14 ಮತ್ತು 22ರಂದು ತಮ್ಮ ಸಂಶೋಧನೆ ಮುಗಿಸಿ ಪ್ರಬಂಧಗಳನ್ನು ವಿ.ವಿ.ಗೆ ಸಲ್ಲಿಸಿದ್ದಾರೆ.

ಇವರ ಒಟ್ಟಾರೆ ಸಂಶೋಧನಾ ಕಾಲಾವಧಿ ಒಂದು ವರ್ಷ ಹತ್ತು ತಿಂಗಳಾಗುತ್ತದೆ. ಇವರಿಗೆ ಪ್ರಬಂಧ ಸಲ್ಲಿಸಲೂ ಕೂಡ ಆರು ತಿಂಗಳ ರಿಯಾಯತಿ  ನೀಡಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

ನನ್ನ ತಪ್ಪಲ್ಲ: ಶರ್ಮಾ

ವಿವಾದಕ್ಕೆ ಸಂಬಂಧಿಸಿ­ದಂತೆ ‘ಪ್ರಜಾ­ವಾಣಿ’ ಜೊತೆ ದೂರ­ವಾಣಿಯಲ್ಲಿ ಮಾತ­ನಾಡಿದ ತುಮ­ಕೂರು ವಿ.ವಿ. ವಿಶ್ರಾಂತ ಕುಲ­ಪತಿ ಎಸ್.ಸಿ.ಶರ್ಮಾ, ‘ಆರು ಮಂದಿಗೆ ಪಿಎಚ್.ಡಿ ಕೊಡುವಲ್ಲಿ ನನ್ನದೊಬ್ಬನದೇ ಪಾತ್ರ ಇಲ್ಲ. ನಿಯಮಾನುಸಾರವೇ ಎಲ್ಲವನ್ನೂ ಮಾಡಲಾಗಿದೆ. ಯಾವುದೇ ಸ್ವಜನ ಪಕ್ಷಪಾತ ಎಸಗಿಲ್ಲ. ಮೌಲ್ಯಮಾಪನ ಒಂದು ತಿಂಗಳಲ್ಲಿ ನಡೆದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದು ಸಾಮಾನ್ಯವಾದ ಸಂಗತಿಯಾಗಿದೆ’ ಎಂದರು.

‘ಉದ್ಯಮಿ ಸದಾನಂದ ಮಯ್ಯರು ತಮ್ಮ ಸಂಸ್ಥೆಗೆ ಸಂಶೋಧನಾ ಮಾನ್ಯತೆ ಕೇಳಿರಲಿಲ್ಲ. ನಾವೇ ಅವರಿಗೆ ಕೊಟ್ಟೆವು. ಇದರಿಂದ ತುಮಕೂರು ವಿ.ವಿ ಘನತೆ ಹೆಚ್ಚಾಗಿದೆ. ಗೌರವ ಡಾಕ್ಟರೇಟ್ ಎಷ್ಟು ಜನರಿಗೆ ಕೊಡಬಹುದು, ಯಾರಿಗೆ ಕೊಡಬಹುದು ಎಂಬುದಕ್ಕೆ ಯಾವುದೇ ನಿಯಮಗಳಿಲ್ಲ.

ನಮ್ಮ ಬಳಿ ಹೆಚ್ಚು ಹಣ ಇದ್ದಾಗ ದಾನ ಮಾಡುವುದಿಲ್ಲವೆ? ಅದೇ ರೀತಿ ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರಿಗೆ, ಸಾಧನೆ ಮಾಡಿದ ಎಷ್ಟು ಮಂದಿಗೆ ಬೇಕಾದರೂ ಗೌರವ ಡಾಕ್ಟರೇಟ್ ನೀಡಿದರೆ ಯಾವುದೇ ತಪ್ಪಿಲ್ಲ. ಎಲ್ಲ  ಗೌರವ ಡಾಕ್ಟರೇಟ್ ಪದವಿಗಳ ಪಟ್ಟಿಗೆ ರಾಜ್ಯಪಾಲರಿಂದ ಅನುಮತಿ ಪಡೆಯಲಾಗಿದೆ. ನಾನು ಪ್ರಸ್ತಾಪಿಸಿದ ಯಾವುದೇ ಹೆಸರನ್ನು ಅವರು ತಳ್ಳಿಹಾಕಿಲ್ಲ’ ಎಂದು ಸ್ಪಷ್ಟಪಡಿಸಿದರು.

ಡಿ.ಲಿಟ್, ಡಿ.ಎಸ್‌ಸಿ ಪದವಿಯಿಂದ ಯಾವುದೇ ಅನುಕೂಲಗಳು ಸಿಗುವುದಿಲ್ಲ. ಆದರೆ ಅವರಿಗೆ ಆ ಪದವಿಗಳನ್ನು ಕೊಡುವುದರಿಂದ ವಿ.ವಿ.ಗೆ ಯುಜಿಸಿ ಮಟ್ಟದಲ್ಲಿ ಘನತೆ ಹೆಚ್ಚುತ್ತದೆ. ಇದನ್ನು ಕೂಡ ನಿಯಮಾನುಸಾರವೇ ನೀಡಲಾಗಿದೆ ಎಂದು ಶರ್ಮಾ ಹೇಳಿದರು.

‘ಸರ್ಕಾರವೇ ನಿಗಾ ವಹಿಸಬೇಕಾಗಿತ್ತು’

ಕುಲಸಚಿವ ಪ್ರೊ.ಡಿ.­ಶಿವಲಿಂಗಯ್ಯ ‘ಪ್ರಜಾ­­ವಾಣಿ’ ಜೊತೆಗೆ ಮಾತ­ನಾಡಿ, ರಾಜ್ಯಪಾಲರು, ಸಿಂಡಿ­ಕೇಟ್ ಒಪ್ಪಿಗೆ ಪಡೆದೇ ವಿವಾದಿತ ಆರು ಮಂದಿಯ ಪಿಎಚ್.ಡಿ ನೋಂದಣಿ ದಿನಾಂಕವನ್ನು ತಿದ್ದುಪಡಿ ಮಾಡ­ಲಾಗಿದೆ. ಈ ತಿದ್ದುಪಡಿಯ ಕುರಿತು ಸರ್ಕಾರವೇ ನಿಗಾ ವಹಿಸಬೇಕಾಗಿತ್ತು. ಅಲ್ಲಿಂ­ದಲೇ ಅನುಮೋದನೆಯಾಗಿ ಬಂದ ಮೇಲೆ ನಾವೇನು ಮಾಡಲು ಸಾಧ್ಯ? ಎಂದರು.



ದಬಾಯಿಸುತ್ತಿದ್ದರು
ಕಲ್ಲಿಕೋಟೆ ವಿ.ವಿ.ಗೆ ತೆರಳುತ್ತಿದ್ದ ಸಿಂಡಿ­ಕೇಟ್‌ ಮಾಜಿ ಸದಸ್ಯ ಪ್ರೊ.ಎ.ವಿ.ನಾವಡ ಅವರನ್ನು ಮೊಬೈಲ್‌ ಮೂಲಕ ‘ಪ್ರಜಾ­ವಾಣಿ’ ಸಂಪರ್ಕಿಸಿದಾಗ, ‘ಕನ್ನಡ ವಿ.ವಿ. ಅನುಭವದ ಆಧಾರದ ಮೇಲೆ ತುಮಕೂರು ವಿ.ವಿ ಸಿಂಡಿಕೇಟ್ ಸಭೆಗಳಲ್ಲಿ ನಾನು ವಿಷಯ­ಗಳ ಸಾಧಕ-ಬಾಧಕಗಳ ಬಗ್ಗೆ ಪ್ರಶ್ನಿಸು­ತ್ತಿದ್ದೆ. ಆದರೆ ನನ್ನನ್ನು ಕುಲಪತಿ ಶರ್ಮಾ ದಬಾ­ಯಿಸಿ, ಬಾಯಿ ಮುಚ್ಚಿಸು­ತ್ತಿದ್ದರು.

ಸಭೆ­ಯಲ್ಲಿ ಏನೂ ಚರ್ಚೆ ಮಾಡಬೇಡಿ, ನನ್ನ ಖಾಸಗಿ ಚೇಂಬರ್‌ಗೆ ಬನ್ನಿ, ಇಲ್ಲ ಸಭೆ ಮುಗಿದ ಬಳಿಕ ಮಾತಾಡಿ ಎಂದು ತಾಕೀತು ಮಾಡು­ತ್ತಿದ್ದರು. ಗೌರವ ಡಾಕ್ಟರೇಟ್ ಯಾರಿಗೆ ಕೊಡಲಾಗುತ್ತದೆ ಎಂಬುದನ್ನೂ ಗೋಪ್ಯ­­ವಾಗಿಡುತ್ತಿದ್ದರು. ಎಷ್ಟೋ ಬಾರಿ ನಾನು ಹೆಸರು ಹೇಳುವಂತೆ ಒತ್ತಾಯಿಸಿ­ದರೂ ಅವರು ಬಾಯಿ ಬಿಡುತ್ತಿರಲಿಲ್ಲ’ ಎಂದರು.

(ಮುಕ್ತಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT