ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಕಾಮರ ವಾಙ್ಮಯ ಲೋಕ

ಪುಟ ಬಂಗಾರ
Last Updated 27 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಡಾ. ಶಾಂತಾ ಮಠ ಅವರ ‘ತಂತ್ರ–ಪುರಾಣ ಲೋಕದ ಮಹಾಮಾಂತ್ರಿಕ ಸತ್ಯಕಾಮ’ (ಪ್ರ: ಶಶಾಂಕ್ ಪ್ರಕಾಶನ, ನಂ. 32, ಸಂತೋಷ್ ಕಾಲೋನಿ, ನ್ಯೂ ಜೇವರ್ಗಿ ರೋಡ್‌, ಗುಲ್ಬರ್ಗಾ) ಪುಸ್ತಕದಿಂದ ಆಯ್ದಭಾಗ.

ಮಾಣಿಕ್ಯಪುರದ ದೇವಾಲಯದಲ್ಲಿ ಸತ್ಯಕಾಮರಿಗೆ ದೊರೆತ ಇನ್ನೊಬ್ಬ ಸಾಧಕನ ಅತೀಂದ್ರಿಯ ಶಕ್ತಿ ಪವಾಡದಂತೆ ತೋರುತ್ತದೆ. ಹುಣ್ಣಿಮೆಯ ರಾತ್ರಿ ಒಬ್ಬ ಹಣ್ಣು ಮುದುಕಿ ‘ಸಮೀರಾ’ ಎಂದು ಗುಡಿಯ ಬಾಗಿಲು ಬಡಿಯ ಹತ್ತಿದಳು. ಆಗ ಸ್ವಾಮಿಗಳು ಹೊರಬಂದು ಅವಳನ್ನು ಸಮಾಧಾನಿಸಿ ಅವಳು ಬಂದ ಕಾರಣ ತಿಳಿದುಕೊಂಡರು. ಆಗ ಅವರಿಗೆ ಸಮಸ್ಯೆಯ ಅರ್ಥವಾಗಿ ಅವಳನ್ನು ನಾಳೆ ಬರಲು ತಿಳಿಸಿದರು. ಸಮೀರನನ್ನು ಕರೆತರುವುದಾಗಿಯೂ ಹೇಳಿದರು.

ಆಗ ವಿಸ್ಮಿತರಾದ ಸತ್ಯಕಾಮರು ಸತ್ತ ಸಮೀರನನ್ನು ತರುವುದು ಸಾಧ್ಯವೇ ಎಂದಾಗ, ‘ಸಮೀರಿನ ತುಡಿತಗಳು ಗೊತ್ತಿದ್ದರೆ ಸಮೀರ ಕಾಣುತ್ತಾನೆ’ ಎನ್ನುತ್ತಾರೆ ಸ್ವಾಮಿಗಳು. ಹಾಗೆಯೇ ಮರುದಿನ ಮುದುಕಿಗೆ ಸಮೀರನೊಡನೆ ಸಂಭಾಷಣೆ ನಡೆಸಲು ಆಸ್ಪದ ಮಾಡಿಕೊಟ್ಟರು. ಇಲ್ಲಿ ಅವಳಿಗೆ ಯಾವುದರ ಅವಶ್ಯಕತೆಯಿತ್ತೊ ಆ ಸಮಸ್ಯೆಯ ಪರಿಹಾರ ಮಾಡಿದರು. ಇಲ್ಲಿ ಮನಃಶಾಸ್ತ್ರಜ್ಞರು ರೋಗಿಗಳಿಗೆ ತಕ್ಕಂತೆ ಅವರ ಮನಸ್ಸನ್ನು ತಿಳಿದುಕೊಳ್ಳುತ್ತ ನಡೆಯಿಸುವ ಚಿಕಿತ್ಸೆಯ ರೀತಿ ಇದಾಗಿದ್ದು, ಕಾದಂಬರಿಯಲ್ಲಿ ಈ ಸನ್ನಿವೇಶ ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂಥದ್ದು. ಮನಸ್ಸನ್ನು ಮನೋವೇಗಕ್ಕೆ ಗುರಿಪಡಿಸುವುದನ್ನು ಸತ್ಯಕಾಮರು ಕಲಿತುಕೊಂಡಿದ್ದು ಈ ಸ್ವಾಮಿಗಳಲ್ಲಿಯೇ. ಮನಸ್ಸನ್ನು ತೀವ್ರ ರಭಸಕ್ಕೆ ವೇಗಕ್ಕೆ ಗುರಿ ಮಾಡಿದಾಗ, ತಡೆಯದಾಗದೆ ಬೆಚ್ಚಿ ಬಿದ್ದ ಸತ್ಯಕಾಮರಿಗೆ ಕೆಲವು ಸಮಯದ ನಂತರ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡವು. ಬಹುಶಃ ರಕ್ತದೊತ್ತಡದ ಏರುಪೇರಿನಲ್ಲಿ ಈ ರೀತಿಯ ಬದಲಾವಣೆಯಾಗಿಯೇ ಗುಳ್ಳೆಗಳ ರೂಪದಲ್ಲಿ ಹೊರಬಂದಿರುವ ಸಾಧ್ಯತೆಗಳಿವೆ.

ಸತ್ಯಕಾಮರು ವೈಶಾಲಿ, ಹಾಗೂ ವಾಮಾಚರಣರೊಂದಿಗೆ ಮಂಡಲದಲ್ಲಿ ಭಾಗಿಯಾಗಿ ಶಕ್ತಿ ಸಾಧಿಸಿಕೊಂಡರು. ಮರಳಿ ತಮ್ಮ ಗ್ರಾಮಕ್ಕೆ ಬಂದರು. ಒಂದು ಬಗೆಯ ದ್ವಂದ್ವದಲ್ಲಿ ಸಿಲುಕಿದರು. ಊರ ಜನರೊಂದಿಗೆ ಬದುಕಲು ಸಾಧ್ಯವಾಗದೆ ಅಲ್ಲಿಯೇ ನೆಲೆ ನಿಲ್ಲಲೂ ಆಗದ ಅಸಹಾಯಕ ಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ದೀರ್ಘಕಾಲ ಮಾಂತ್ರಿಕರ ಸಹವಾಸದಲ್ಲಿಯೇ ಇದ್ದು ಬಂದ ಇವರನ್ನು ಊರ ಜನರು ವಿಚಿತ್ರವಾಗಿಯೇ ಕಾಣಹತ್ತಿದರು. ಮೊದಲಿನ ಆತ್ಮೀಯತೆ, ಸಹಜತೆ ಅಲ್ಲಿರಲಿಲ್ಲ. ಹೀಗಾಗಿ ಒಂಟಿತನ ಅವರನ್ನು ಕಾಡತೊಡಗಿತು. ತಾವು ಪಡೆದ ಅನುಭವಗಳನ್ನು ಸಾಧಿಸಿದ ಸಿದ್ಧಿಗಳನ್ನು ಅಲ್ಲಿಯೇ  ತೊರೆದು ಬಂದುದನ್ನು ಕೇಳುವ ಅರ್ಥೈಸಿಕೊಳ್ಳುವ ಮಿತ್ರರಾರೂ ಸಿಗದೇ ಹೋದ ನೋವು ವ್ಯಥೆ ಅವರನ್ನು ತುಂಬಾ ಬಾಧಿಸಿದ್ದು ಕಂಡುಬರುತ್ತದೆ. ‘ಕಪಿಲವಸ್ತು’ ಕಾದಂಬರಿಯಲ್ಲಿ ಅವರು ಸಿದ್ಧಿಗಳಿಗೆ ತಿಲಾಂಜಲಿ ಕೊಟ್ಟು ಬಂದ ಬಗೆಯನ್ನು, ಪಡೆದ ವಿದ್ಯೆಗಳನ್ನು ಬಿಟ್ಟು ಬರುವಾಗ ಉಂಟಾಗುವ ನೋವು ಇದೆಲ್ಲವೂ ಇದರಲ್ಲಿ ಕುತೂಹಲಕಾರಿಯಾಗಿ ವಿವರಿಸಿದ್ದಾರೆ.

ಸೂರ್ಯ ಹೆಸರಿನ ಒಬ್ಬ ಮೋಚಿ – ದೇವರನ್ನು ಕಾಣುವ ಬಗೆಯನ್ನು ಕುರಿತು ಆತ್ಮೀಯತೆಯಿಂದ ಕೇಳುತ್ತಾನೆ. ಅವರಿಂದ ಆ ಬಗೆಯನ್ನು ತಿಳಿದುಕೊಂಡು ಪ್ರಯತ್ನಿಸಿ ವಿಫಲನಾಗುತ್ತಾನೆ. ಅದಕ್ಕೆ ಸತ್ಯಕಾಮರು ಕೊಡುವ ಕಾರಣವೆಂದರೆ, ಮನಸ್ಸಿನ ನಿಯಂತ್ರಣವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಇದಕ್ಕೆಲ್ಲ ಶ್ರದ್ಧೆ, ತಾಳ್ಮೆ, ನಿಗ್ರಹ ಶಕ್ತಿ ಅವಶ್ಯಕ ಎಂದು ಮನಗಾಣಿಸಿದ್ದಾರೆ.

ಇಂಥ ಕಠಿಣ ತಾಂತ್ರಿಕ ಜಗತ್ತಿನಲ್ಲಿ ಸ್ತ್ರೀಯರೂ ಇದ್ದಾರೆಂದರೆ ನಂಬಲಿಕ್ಕಾಗದು. ಆದರೆ ಸತ್ಯಕಾಮರಿಗೆ ವೈಶಾಲಿಯಂಥ ದಿಟ್ಟ ಹೆಣ್ಣು ದೊರೆತಿದ್ದರಿಂದಲೇ ಸಾಧನೆ ಸಾಧ್ಯವಾಯಿತು. ಇವರ ‘ಅರ್ಧನಾರಿ’ ಕಾದಂಬರಿ ರಚನೆಗೆ ಅವಳೇ ಪ್ರೇರಣೆಯಾಗಿದ್ದಾಳೆ. ಅವಳು ತನ್ನ ಬಾಳಿನ ಕೆಲ ವೃತ್ತಾಂತಗಳನ್ನು ಸತ್ಯಕಾಮರಿಗೆ ತಿಳಿಸುತ್ತಾಳೆ. ಆ ವೃತ್ತಾಂತಗಳ ಸಂಗ್ರಹವೇ ಈ ಕಾದಂಬರಿಯ ವಸ್ತು. ಪ್ರಪಂಚದಲ್ಲಿ ಸಾಮಾನ್ಯವಾಗಿ ತರುಣಿಯರನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆಯಾಗಿರುತ್ತವೆ. ಆದರೆ ಇಲ್ಲಿಯ ತರುಣಿ ವೈಶಾಲಿಯ ಬದುಕು ವಿಚಿತ್ರ ಘಟನೆಗಳಿಂದ ಕೂಡಿರುವಂಥದ್ದು. ಒಳ್ಳೆ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದ ಇವಳು ಕಂಡುಕೊಂಡ ಮಾರ್ಗವೇ ಬೇರೆ. ಮನೆಯ ಸಾಂಪ್ರದಾಯಿಕ ವಾತಾವರಣ ಇವಳ ಮೇಲೆ ಬೀರಿದ ಪ್ರಭಾವವೇ ಬೇರೆಯಾಯಿತು.

ವೈಶಾಲಿಯದು ಗಂಡು ಹೃದಯ. ಈಜುಡಿಗೆಯಲ್ಲಿ ಬಾಲಕರೊಂದಿಗೆ ಸ್ಪರ್ಧೆಗಿಳಿದು ಗೆದ್ದ ಬಾಲಕಿ ಇವಳು. ಯಾರೂ ಮಾಡದ ಕಾರ್ಯಗಳನ್ನು ಮಾಡಬೇಕೆಂಬ ಕುತೂಹಲ ಯಾರೂ ಹೋಗದ ಸ್ಥಳದಲ್ಲಿ ಹೋಗಬೇಕೆಂಬ ಚಪಲ, ಛಲ – ಸಾಹಸ ಇವಳಲ್ಲಿ ಅಡಗಿದ್ದವು. ಹೀಗಾಗಿ ರಾತ್ರಿ ವೇಳೆ ಒಬ್ಬಳೇ ಸ್ಮಶಾನಕ್ಕೆ ಹೋಗಿ ಕೂಡುವದು, ಕಾಡಿನಲ್ಲಿ ಒಂಟಿಯಾಗಿ ಅಲೆಯುವುದು ಮಾಡುತ್ತಾ ನಿರ್ಭಯತೆ ಹಾಗೂ ಸ್ವಾತಂತ್ರ್ಯವನ್ನು ಗಳಿಸಿಕೊಂಡಳು. ಒಮ್ಮೆ ಅಭೇದಾನಂದ ಸ್ವಾಮಿಗಳು ಇವರ ಮನೆಗೆ ಬಂದಾಗ ಆ  ಸ್ವಾಮಿಗಳ ಪ್ರಭಾವಕ್ಕೆ ಒಳಗಾದ ವೈಶಾಲಿ ಅವರೊಂದಿಗೆ ಮನೆಯವರ ಗಮನಕ್ಕೆ ತರದೆ ಹೊರಟು ಬಿಡುತ್ತಾಳೆ. ಆಗ ಅವಳು ಸಾಧನೆಯ ಮಾರ್ಗದಲ್ಲಿ ಎದುರಿಸುವ ತೊಂದರೆಗಳು, ಜನಾಪವಾದ, ಅನುಭವಿಸಿದ ಕಷ್ಟ ಈ ಎಲ್ಲಾ ವಿವರಗಳನ್ನು ವೈಶಾಲಿ ಸತ್ಯಕಾಮರ ಎದುರಿಗೆ ನಿವೇದಿಸಿಕೊಂಡಿದ್ದಾಳೆ. ಅದನ್ನೇ ಅವರು ಅರ್ಧದಾರಿಯಲ್ಲಿ ಯಥಾವತ್ತಾಗಿ ಚಿತ್ರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT