ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಒಳಿತಿಗೆ ಜಂಗಮರಾಗೋಣ: ‘ಎಂ’

Last Updated 5 ಏಪ್ರಿಲ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಭರವಸೆ ನಡಿಗೆ’ಯ ಆ ದೃಶ್ಯಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ನೆರೆದಿದ್ದ ಎಲ್ಲರನ್ನೂ ಭಾವುಕರನ್ನಾಗಿ ಮಾಡಿದ್ದವು. ರಾಜ್ಯ–ಭಾಷೆಗಳ ಭೇದ–ಭಾವವಿಲ್ಲದೆ ಮಾನವ ಏಕತೆಗಾಗಿ ಪುಟಾಣಿಗಳಿಂದ ನೆರೆತ ಕೂದಲಿನ ಹಿರಿಯರವರೆಗೆ ಹಂಬಲಿಸುತ್ತಿದ್ದುದು ಆ ನೋಟಗಳಲ್ಲಿ ಎದ್ದು ಕಾಣುತ್ತಿತ್ತು. ಆದ್ದರಿಂದಲೇ ಎಲ್ಲರೂ ಹೆಜ್ಜೆ ಹಾಕುತ್ತಾ ಒಕ್ಕೊರಲಿನಿಂದ ಹೇಳುತ್ತಿದ್ದರು: ‘ಚಲೇ ಚಲೋ’ ಎಂದು!

ಕನ್ಯಾಕುಮಾರಿಯಿಂದ ಬೆಂಗಳೂರಿನವರೆಗಿನ ಶ್ರೀ ‘ಎಂ’ ಅವರ ‘ಭರವಸೆ ನಡಿಗೆ’ಯ ತುಣುಕುಗಳನ್ನು ತೆರೆಯ ಮೇಲೆ ತೋರಿಸಲಾಯಿತು. ಕಾಶ್ಮೀರದವರೆಗೆ ನಡೆಯಲಿರುವ ಈ ಪಾದಯಾತ್ರೆ ಇದುವರೆಗಿನ ಪಯಣದ ಹೊರಳು ನೋಟದ ಸಮಾರಂಭ ಅದಾಗಿತ್ತು. ಹೃದಯಸ್ಪರ್ಶಿಯಾಗಿದ್ದ ಅಲ್ಲಿನ ದೃಶ್ಯಗಳು ಸಭಿಕರಲ್ಲೂ ಭರವಸೆಯ ಅಲೆ ಎಬ್ಬಿಸುತ್ತಿದ್ದವು. ಮಂದಿರದ ಪೂಜಾರಿಗಳು, ಮಸೀದಿಯ ಮೌಲ್ವಿಗಳು, ಚರ್ಚ್‌ನ ಪಾದ್ರಿಗಳು ಜತೆಯಾಗಿ ಶ್ರೀ ‘ಎಂ’ ಅವರೊಂದಿಗೆ ಹೆಜ್ಜೆ ಹಾಕಿದ್ದರು. ಧರ್ಮ, ಜಾತಿ, ವರ್ಗಗಳ ಆಚೆ ನಾವೆಲ್ಲ ಒಂದೇ ಎನ್ನುವ ಸಂದೇಶ ಅಲ್ಲಿ ಮನೆಮಾಡಿತ್ತು. ಶಾಂತಿಯ ಹಂಬಲವೂ ಎದ್ದುಕಂಡಿತ್ತು.

ತೆರೆಯ ಮೇಲೆ ಮೂಡಿಬಂದ ದೃಶ್ಯಗಳ ಬಳಿಕ ಮಾತನಾಡಿದ ಶ್ರೀ ‘ಎಂ’, ‘ನಾನು ಹೊಸದಾಗಿ ಹೇಳುವುದು ಏನೂ ಇಲ್ಲ. ಈ ನೆಲದ ಮಹಾನ್‌ ಮಾನವತಾವಾದಿ ಬಸವಣ್ಣ ಹೇಳಿದಂತೆ ನಾವೆಲ್ಲ ಚಲನಶೀಲತೆ ಕಳೆದುಕೊಂಡು ಸ್ಥಾವರ ಭಾವದಲ್ಲಿದ್ದೇವೆ. ಧರ್ಮದ ಜಡ್ಡುಗಟ್ಟಿದ್ದ ಆ ವಾತಾವರಣದಿಂದ ಹೊರಬಂದು ಜಂಗಮರಾಗುವತ್ತ ಹೆಜ್ಜೆ ಹಾಕಬೇಕಿದೆ. ಅದಕ್ಕಾಗಿಯೇ ಈ ನಡಿಗೆ’ ಎಂದು ಸೂಚ್ಯವಾಗಿ ಹೇಳಿದರು. ನಟ ಸುದೀಪ್‌, ‘ನಮ್ಮ ಬದುಕು ಎಷ್ಟೊಂದು ವರ್ಣರಂಜಿತವಾಗಿದೆ ಎಂದರೆ ಶಾಂತಿಯ ಸಂದೇಶ ಸಾರುವ ಈ ಕಾರ್ಯಕ್ರಮಕ್ಕೆ ಬಿಳಿ ಅಂಗಿಯನ್ನು ಹಾಕಿಕೊಂಡು ಹೋಗೋಣ ಎಂದು ಹುಡುಕಿದರೆ ಬೇಗ ಸಿಗಲಿಲ್ಲ. ಇದು ಕೇವಲ ಅಂಗಿಯ ಪ್ರಶ್ನೆ ಅಲ್ಲ. ಯುವ ಮನಸ್ಸಿನ ಪ್ರತೀಕ. ಇಂತಹ ವಾತಾವರಣದಲ್ಲಿ ಭರವಸೆ ಹೆಜ್ಜೆ ಹಾಕುತ್ತಿರುವ ‘ಎಂ’ ಬೆರಗು ಮೂಡಿಸಿದ್ದಾರೆ’ ಎಂದು ತಿಳಿಸಿದರು.

‘ಬಂದಿಖಾನೆಯಾಗಿದ್ದ ಈ ಜಾಗ ಸ್ವಾತಂತ್ರ್ಯ ಉದ್ಯಾನವಾಗಿ ರೂಪಾಂತರ ಹೊಂದಲು ಸಾಧ್ಯವಿದೆ ಎಂದಾದರೆ ಎಲ್ಲ ಓರೆ– ಕೋರೆಗಳು ಮರೆಯಾಗಿ ದೇಶವೂ ಏಕತೆಯಿಂದ ಮೆರೆಯಲು ಸಾಧ್ಯವಿದೆ’ ಎಂದು ಅವರು ಪ್ರತಿಪಾದಿಸಿದರು. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ‘ಧರ್ಮ– ಜಾತಿ ಗಡಿಗಳ ಆಚೆ ಮಾನವೀಯ ಸಂಬಂಧ ಗಟ್ಟಿಗೊಳ್ಳುವ ಅಗತ್ಯವಿದೆ. ಆದರೆ, ರಾಜಕೀಯ ವ್ಯವಸ್ಥೆ ತನ್ನ ಸ್ವಾರ್ಥಕ್ಕಾಗಿ ಜಾತಿ– ಜಾತಿಗಳನ್ನು ಒಡೆದು ಆಳುತ್ತಿದೆ’ ಎಂದು ವಿಷಾದಿಸಿದರು. ರಘು ದೀಕ್ಷಿತ್‌ ಅವರ ತಂಡ ಶಿಶುನಾಳ ಷರೀಫರ ಗೀತೆಗಳನ್ನು ಪ್ರಸ್ತುತಪಡಿಸಿತು.
*
ಕಂಬಾರರು ಹೇಳಿದ ಕಥೆ
ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿರುವ ನೈಜ ಕಥೆಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು. ಆ ಕಥೆ ಹೀಗಿತ್ತು: ಕಲಬುರ್ಗಿಯ ಖ್ವಾಜಾ ಬಂದೇ ನವಾಜ್‌ ಹಾಗೂ ಸಾವಳಗಿ ಶಿವಲಿಂಗೇಶ್ವರ ಸ್ವಾಮೀಜಿ ಒಮ್ಮೆ ಮಾತುಕತೆಗೆ ಕೂರುತ್ತಾರೆ. ಅವರ ನಡುವಿನ ಧರ್ಮದ ಚರ್ಚೆ ಸತತ 13 ದಿನ ನಡೆಯುತ್ತದೆ. ಕೊನೆಗೆ ಅವರಿಬ್ಬರು ಎರಡೂ ಧರ್ಮಗಳ ಬೋಧನೆ ಒಂದೇ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಆ ಅಭಿಪ್ರಾಯದ ಪ್ರತೀಕವಾಗಿ ಸ್ವಾಮೀಜಿ ಹಸಿರು ಬಟ್ಟೆ ತೊಟ್ಟರೆ, ಬಂದೇ ನವಾಜರು ಖಾವಿ ಬಟ್ಟೆ ಧರಿಸುತ್ತಾರೆ. ಈಗಲೂ ಸಾವಳಗಿ ಮಠದ ಸ್ವಾಮೀಜಿ ಪ್ರತಿವರ್ಷ 13 ದಿನ ಹಸಿರು ಬಟ್ಟೆ ಧರಿಸುತ್ತಾರೆ.ಹಾಗೆಯೇ ಖ್ವಾಜಾ ಬಂದೇ ನವಾಜರು ಖಾವಿ ಬಟ್ಟೆ ಹಾಕುತ್ತಾರೆ. ಕಂಬಾರರ ಈ ಕಥೆ ಭಾರಿ ಮೆಚ್ಚುಗೆ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT