ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕೈಜಾರುತ್ತಾ ಭೂಸ್ವಾಧೀನ ಸುಗ್ರೀವಾಜ್ಞೆ?

Last Updated 24 ಮಾರ್ಚ್ 2015, 13:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿವಾದಾತ್ಮಕ ಭೂಸ್ವಾಧೀನ ಸುಗ್ರೀವಾಜ್ಞೆ ಅವಧಿ ಮುಗಿಯತ್ತ ಬಂದಿದ್ದರೂ ಸರ್ಕಾರ ಮೌನವಹಿಸಿದೆ. ‘ಈ ಸುಗ್ರೀವಾಜ್ಞೆಯ ಅವಧಿಯು ಏಪ್ರಿಲ್ 5ರಂದು ಮುಗಿಯಲಿದೆ. ನಂತರ ಏನು ಮಾಡಬೇಕು ಎಂಬುದನ್ನು ಆ ಬಳಿಕ ನಿರ್ಧರಿಸುತ್ತೇವೆ’ ಎಂದು ಕೇಂದ್ರ ಸಚಿವ ಸಂಪುಟದ ಸದಸ್ಯರೊಬ್ಬರು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

2013ರ ಡಿಸೆಂಬರ್ 31ರಂದು ಕೇಂದ್ರ ಸರ್ಕಾರವು ಈ ಸುಗ್ರೀವಾಜ್ಞೆ ಹೊರಡಿಸಿತ್ತು. ಸಂಸತ್ತಿನ ಅಧಿವೇಶನ ಆರಂಭಗೊಂಡ 42 ದಿನಗಳಲ್ಲಿ ಸುಗ್ರೀವಾಜ್ಞೆಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆಯಬೇಕು ಎಂಬುದು ನಿಯಮ. ಸಂಸತ್ತಿನ ಅನುಮೋದನೆ ಪಡೆಯುವಲ್ಲಿ ಸರ್ಕಾರ ವಿಫಲವಾದರೆ, ಅದು ಅನೂರ್ಜಿತಗೊಳ್ಳುತ್ತದೆ.


ಕಳೆದ ಫೆಬ್ರುವರಿ 23ರಂದು ಆರಂಭಗೊಂಡಿರುವ ಸಂಸತ್ತಿನ ಬಜೆಟ್‌ ಅಧಿವೇಶ‌ನದ ಮೊದಲ ಅವಧಿ ಮಾರ್ಚ್ 20ರಂದು ಮುಗಿದಿದೆ. ಒಂದು ತಿಂಗಳ ರಜೆಯ ಬಳಿಕ ಮತ್ತೆ ಏಪ್ರಿಲ್ 20ರಂದು ಆರಂಭಗೊಳ್ಳಲಿದ್ದು ಮೇ ತಿಂಗಳ 8ರಂದು ಮುಗಿಯಲಿದೆ.

ಅಧಿವೇಶನ ಆರಂಭಗೊಂಡು ಏಪ್ರಿಲ್ 5ಕ್ಕೆ 42 ದಿನಗಳ ಅವಧಿ ಪೂರ್ಣಗೊಳ್ಳುವುದರಿಂದ ಸುಗ್ರೀವಾಜ್ಞೆಯು ಅನೂರ್ಜಿತಗೊಳ್ಳುವ ಸಾಧ್ಯತೆಗಳಿವೆ.

2013ರ ಭೂಸ್ವಾಧೀನ ಕಾಯ್ದೆಯ ತಿದ್ದುಪಡಿಗಳೊಂದಿಗೆ ಲೋಕಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಪಡೆಯುವಲ್ಲಿ ಸರ್ಕಾರ ಸಫಲವಾಗಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಇದೆ. ಆದ್ದರಿಂದ ರಾಜ್ಯಸಭೆಯಲ್ಲಿ ಸಿಲುಕಿದೆ.

ಮತ್ತೊಂದೆಡೆ, ಯಾವುದೇ ದೊಡ್ಡ ಮಟ್ಟದ ಹೂಡಿಕೆಯ ಯೋಜನೆಗಳು ಅನುಮತಿಗಾಗಿ ಕಾಯುತ್ತಿಲ್ಲವಾದ್ದರಿಂದ ಸರ್ಕಾರವು  ಭೂಸ್ವಾಧೀನ ಮಸೂದೆಯ ಬಗ್ಗೆ ಮರು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT