ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಡೀನಿಯಾ ಸೊಗಡಿನೂಟ

ರಸಾಸ್ವಾದ
Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅಪ್ಪಟ ಇಟಾಲಿಯನ್‌ ಖಾದ್ಯಗಳ ಸವಿರುಚಿಯನ್ನು ಉಣಬಡಿಸುವ ನಗರದ ರೆಸ್ಟೋರೆಂಟ್‌ಗಳಲ್ಲಿ ‘ಅಲ್ಬಾ’ ಪ್ರಮುಖವಾದುದು. ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ವಿನ್ಯಾಸ, ಸೊಗಸಾದ ಇಟಲಿ ಖಾದ್ಯಗಳ ರುಚಿಯೇ ಈ ರೆಸ್ಟೋರೆಂಟ್‌ನ ಹಿರಿಮೆ. ಅಲ್ಬಾ ರೆಸ್ಟೋರೆಂಟ್‌ನಲ್ಲೀಗ ಸರ್ಡೀನಿಯಾ ಫುಡ್‌ ಫೆಸ್ಟಿವಲ್‌ ನಡೆಯುತ್ತಿದೆ. 
ಸುಂದರ ದ್ವೀಪವಾದ ಸರ್ಡೀನಿಯಾದ ಗ್ರಾಮೀಣ ಅಡುಗೆಯ ಸವಿಯನ್ನು ಗ್ರಾಹಕರಿಗೆ ಮಾರ್ಚ್‌ ಅಂತ್ಯದವರೆಗೆ ಉಣಬಡಿಸಲಿದ್ದಾರೆ ಇಲ್ಲಿನ ಮುಖ್ಯ ಬಾಣಸಿಗ ಅಂಟಾನೆಲ್ಲೋ.

ಅಲ್ಬಾ ರೆಸ್ಟೋರೆಂಟ್‌ಗೆ ಹೋದವರಿಗೆ ಇಟಲಿ ಖಾದ್ಯಗಳ ಸವಿಯ ಜೊತೆಗೆ ಬಾಣಸಿಗ ಅಂಟಾನೆಲ್ಲೋ ಅವರ ಕಂಪೆನಿಯೂ ಸಿಗುತ್ತದೆ. ಊಟಕ್ಕೆ ಬಂದ ಗ್ರಾಹಕರ ಜೊತೆಗೆ ಅವರು ಹರಟುತ್ತಾರೆ. ಬಡಿಸಿದ ಖಾದ್ಯದ ತಯಾರಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಊಟದ ಮಧ್ಯೆ ಗಿಟಾರ್‌ ಬಾರಿಸುತ್ತ, ಬಾಲಿವುಡ್‌ ಗೀತೆಗಳನ್ನು ಮಧುರವಾಗಿ ಹಾಡುತ್ತಾ ರಂಜಿಸುತ್ತಾರೆ. ಅಂಟಾನೆಲ್ಲೋ ಹೀಗೆ ಗ್ರಾಹಕರಿಗೆ ಕಂಪೆನಿ ನೀಡುತ್ತಿದ್ದರೆ ಊಟದ ಮಜ ದ್ವಿಗುಣಗೊಳ್ಳುತ್ತದೆ. 

ಸರ್ಡೀನಿಯಾ ಆಹಾರೋತ್ಸವಕ್ಕೆಂದೇ ಅಲ್ಬಾ ವಿಶೇಷ ಮೆನು ಸಿದ್ಧಪಡಿಸಿದ್ದು, ತನ್ನ ಗ್ರಾಹಕರಿಗೆ ನೈಜ ಹಾಗೂ ಅಸಲಿ ಸರ್ಡೀನಿಯನ್ ಅಡುಗೆಯನ್ನು ಮಾಡಿ ಬಡಿಸುತ್ತಿದೆ. ಸರ್ಡೀನಿಯಾ ಊಟವೆಂದರೆ ತಾಜಾ ಸಮುದ್ರ ಆಹಾರ, ಬಗೆಬಗೆ ಬ್ರೆಡ್‌ಗಳು ಹಾಗೂ ಚೀಸ್‌ಗಳಿಗೆ ಪ್ರಸಿದ್ಧವಾಗಿದೆ. ಬಾಣಸಿಗ ಅಂಟಾನೆಲ್ಲೋ ಅವರ ಸ್ವಂತ ಊರಿನ ವಿಶೇಷ ತರಕಾರಿಗಳ ಸಂಗ್ರಹವಾದ ಆಂಟಿಪ್ಲಾಸ್ಟಿ ಕೌಂಟರ್, ಕರಸಾವು (ತೆಳುವಾದ ಬ್ರೆಡ್, ಮ್ಯೂಸಿಕ್ ಬ್ರೆಡ್), ಪೆಕೋರಿನೋ ಚೀಸ್ ಹಾಗೂ ಗರಿಗರಿಯಾದ ಸಾಲಡ್‌ಗಳನ್ನು ಇಲ್ಲಿ ತಿಂದುಂಡು ಆನಂದಿಸಬಹುದು. ಅಂದಹಾಗೆ, ಈ ಆಹಾರೋತ್ಸವಕ್ಕೆಂದೇ ವಿಶೇಷ ಸಮುದ್ರ ಆಹಾರದ ಖಾದ್ಯಗಳನ್ನು ಒಳಗೊಂಡಿರುವ ಒಂದು ಲೈವ್ ಕೌಂಟರ್ ತೆರೆಯಲಾಗಿದೆ.

‘ಸರ್ಡೀನಿಯನ್ ಅಡುಗೆಯಲ್ಲಿ ಹಲವು ಅತ್ಯುತ್ತಮ ಅಂಶಗಳಿವೆ. ನನ್ನ ಪೂರ್ವಿಕರಿಂದ ಬಳುವಳಿಯಾಗಿ ಬಂದ ಸರ್ಡೀನಿಯಾ ಅಡುಗೆ ಕೈ ರುಚಿಯನ್ನು ನಾನು ಇಲ್ಲಿಗೆ ಬರುವ ಗ್ರಾಹಕರಿಗೆ ಮಾಡಿ ಉಣ ಬಡಿಸುತ್ತಿದ್ದೇನೆ. ಈ ಆಹಾರೋತ್ಸವದಲ್ಲಿ ಅತಿಥಿಗಳಿಗೆ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ಆಹಾರಗಳು ರುಚಿಕಟ್ಟಾದ ಭೋಜನದ ಪ್ರಯಾಣದ ಅನುಭವ ದೊರಕಿಸಿಕೊಡುತ್ತದೆ’ ಎನ್ನುತ್ತಾರೆ ಶೆಫ್ ಅಂಟಾನೆಲ್ಲೋ.  

ಅಂದಹಾಗೆ, ಮಿಲ್ಲೆಸ್‌ ಫಾಜೈಲ್ ಡಿ ಕರಸಾವು, ಕಾನ್ ಸ್ಪೂಮಾ ಡಿ, ಸಾ ಬುರಿಡಾ, ಜುಪ್ಪಾ ಡಿ ಕಾರ್ಸಿಯೋಫಿ ಎ ಪೆಟೇಟ್ ಹಾಗೂ ಪನಾದಾ ಈ ಇಟಾಲಿಯನ್ ಪಾಕ ಸಂಭ್ರಮದಲ್ಲಿನ ಕೆಲವು ಸಿಗ್ನೇಚರ್‌ ತಿನಿಸುಗಳು. ಊಟದ ನಂತರ ಕೊಡುವ  ಬಿಯಾಂಚಿಟ್ಟೋಸ್ (ಬಾದಾಮಿ), ಫಾರ್ಮಾಗ್ಗೆಲೆ ಪಾರ್ಡುಲಾಸ್ (ಕೇಸರಿ ಹಾಗೂ ಕಿತ್ತಳೆಯ ಪುಟ್ಟ ಪೈ) ಡೆಸರ್ಟ್‌ಗಳ ರುಚಿ ಬೊಂಬಾಟಾಗಿದೆ.

ಸರ್ಡೀನಿಯಾ ಫುಡ್‌ ಫೆಸ್ಟಿವಲ್‌ನಲ್ಲಿ  ಸಮುದ್ರ ಖಾದ್ಯಗಳಿಗೆ ಆದ್ಯತೆ ನೀಡಲಾಗಿದೆ. ಬಾಣಸಿಗ ಅಂಟಾನೆಲ್ಲೋ ಸಿದ್ಧಪಡಿಸಿ ಬಡಿಸಿದ ಬಹುತೇಕ ಖಾದ್ಯಗಳು ಹಸಿಯಾಗಿ, ತಣ್ಣಗೆ ಇದ್ದವು. ಅವುಗಳನ್ನು ಮಾಡುವ ಕ್ರಮವೇ ಹಾಗಂತೆ! ನಿಮ್ಮ ನಾಲಗೆ ಇಟಲಿ ಖಾದ್ಯಗಳನ್ನು ಈ ಮೊದಲು ಸವಿದಿದ್ದರೆ ಸರ್ಡೀನಿಯಾ ಖಾದ್ಯಗಳ ರುಚಿ ಕಿಕ್‌ ನೀಡುತ್ತದೆ. ಮೊದಲ ಬಾರಿ ಇಟಲಿ ಖಾದ್ಯಗಳನ್ನು ಸವಿಯಲು ಹೋದರೆ ರುಚಿ ಇಷ್ಟವಾಗುವುದು ತುಸು ಅನುಮಾನವೇ. ಅಂದಹಾಗೆ, ಈ ಆಹಾರೋತ್ಸವದಲ್ಲಿ ನೀಡುವ ಬ್ರೆಡ್‌ ಹಾಗೂ ಪಿಜ್ಜಾಗಳ ರುಚಿ ಅಚ್ಚುಕಟ್ಟಾಗಿದೆ.

ರೆಸ್ಟೋರೆಂಟ್‌: ಅಲ್ಬಾ
ಸ್ಥಳ:
ಜೆಡಬ್ಲ್ಯೂ ಮ್ಯಾರಿಯೆಟ್‌, ವಿಠ್ಠಲ್‌ ಮಲ್ಯ ರಸ್ತೆ.
ಆಹಾರೋತ್ಸವ ಕೊನೆಗೊಳ್ಳುವ ದಿನ: ಮಾರ್ಚ್‌ 28
ಸಮಯ: ಸಂಜೆ 7.30ರಿಂದ  ರಾತ್ರಿ 10.
ದರ: ಫೋರ್‌ ಕೋರ್ಸ್‌ ಮೀಲ್‌ ರೂ2400,
ಅ ಲಾ ಕಾರ್ಟ್‌ ಮೆನು: ರೂ550ರಿಂದ

ಟೇಬಲ್‌ ಕಾಯ್ದಿರಿಸಲು: 080 6718 8533, 88844 94057

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT