ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರ ಮೇಲೆ ‘ಪಬ್ಲಿಕ್ ಐ’

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ: ಆ್ಯಪ್‌ ಬಿಡುಗಡೆ
Last Updated 3 ಸೆಪ್ಟೆಂಬರ್ 2015, 20:07 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜನಾಗ್ರಹ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಪಬ್ಲಿಕ್‌ ಐ’ ಮೊಬೈಲ್ ಆ್ಯಪ್‌ಗೆ ನಗರ ಪೊಲೀಸ್ ಕಮಿಷನರ್ ಎನ್‌.ಎಸ್‌.ಮೇಘರಿಕ್ ಅವರು ಗುರುವಾರ ಅಧಿಕೃತ ಚಾಲನೆ ನೀಡಿದರು.

ಈ ಆ್ಯಪನ್ನು ಸಾರ್ವಜನಿಕರು ತಮ್ಮ ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ಸಂಚಾರ ನಿಯಮ ಉಲ್ಲಂಘಿಸುವವರ ಫೋಟೊ ತೆಗೆದು, ಅದನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ಸಾಕು. 48 ತಾಸಿನ ಒಳಗೆ ಸಂಚಾರ ಪೊಲೀಸರು ತಮ್ಮನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ಆ ಸವಾರನ ವಿರುದ್ಧ ಕ್ರಮ ಜರುಗಿಸಲಿದ್ದಾರೆ.

‘2012ರ ನ.21ರಂದೇ ‘ಪಬ್ಲಿಕ್ ಐ’ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಅಂದಿನಿಂದ ಈವರೆಗೆ ಪಬ್ಲಿಕ್ ಐ ಮೂಲಕ 29 ಸಾವಿರ ದೂರುಗಳು ಬಂದಿವೆ. ಆದರೆ, ಅದರ ಬಳಕೆ ಕಠಿಣವಾಗಿದ್ದ ಕಾರಣ ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. ಹೀಗಾಗಿ  ಯೋಜನೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸಿ ಅದಕ್ಕೆ ಮೊಬೈಲ್ ಆ್ಯಪ್‌ನ ರೂಪ ಕೊಡಲಾಗಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ತಿಳಿಸಿದರು.

ಹಿಂದೆ ಹೇಗಿತ್ತು: ಮೊದಲು ‘ಬಿಟಿಪಿ’ ಮೊಬೈಲ್‌ ಆ್ಯಪ್‌ನ ಒಂದು ಆಯ್ಕೆಯಾಗಿ ‘ಪಬ್ಲಿಕ್ ಐ’ ಇತ್ತು. ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಫೋಟೊ ಅಪ್‌ಲೋಡ್‌ ಮಾಡಬೇಕಾದರೆ ಮೊದಲು ‘ಬಿಟಿಪಿ’ಗೆ ಹೋಗಬೇಕಿತ್ತು. ಅಲ್ಲಿ ‘ಪಬ್ಲಿಕ್ ಐ’ ಆಯ್ಕೆ ಮಾಡಿಕೊಂಡು, ತಮ್ಮ ಹೆಸರು, ಮೊಬೈಲ್ ಸಂಖ್ಯೆ, ದೂರಿನ ವಿವರಗಳನ್ನು ತುಂಬಿ ಫೋಟೊ ಅಪ್‌ಲೋಡ್‌ ಮಾಡಬೇಕಿತ್ತು. ಇದು ದೀರ್ಘ ಪ್ರಕ್ರಿಯೆ ಎನಿಸುತ್ತಿದ್ದ ಕಾರಣ ಸಾರ್ವಜನಿಕರು ಫೋಟೊ ಕಳುಹಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಕಷ್ಟಪಟ್ಟು ಕಳುಹಿಸಿದರೂ ಅದರಲ್ಲಿ ತನಿಖೆಗೆ ಅಗತ್ಯವಾದ ಮಾಹಿತಿ ಸಿಗದ ಕಾರಣ ಕ್ರಮ ಕೈಗೊಳ್ಳುವುದು ಪೊಲೀಸರಿಗೆ ಸಾಧ್ಯವಾಗುತ್ತಿರಲಿಲ್ಲ.

ಈಗ ಹೇಗಿದೆ: ಹೊಸ ಆ್ಯಪ್‌ನಲ್ಲಿ ಸಾರ್ವಜನಿಕರು ಒಮ್ಮೆ ತಮ್ಮ ವಿವರಗಳನ್ನು ತುಂಬಿದರೆ ಸಾಕು. ಯಾವಾಗ ತಾವು ಫೋಟೊ ಕಳುಹಿಸಿದರೂ ಅದರ ಜತೆಗೆ ವಿವರಗಳೂ ಹೋಗುತ್ತವೆ. ಜಿಪಿಎಸ್ ವ್ಯವಸ್ಥೆ ಇರುವ ಕಾರಣದಿಂದ ಫೋಟೊ ಕ್ಲಿಕ್ಕಿಸಿದ ಸ್ಥಳದ ಮಾಹಿತಿಯೂ ಪೊಲೀಸರಿಗೆ ರವಾನೆಯಾಗುತ್ತದೆ. ಈ ದೂರುಗಳ ಪರಿಶೀಲನೆಗಾಗಿಯೇ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ.

ಆ ದೂರುದಾರನ ಹೆಸರನ್ನು ಗೌಪ್ಯವಾಗಿಡುವ ಪೊಲೀಸರು, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುತ್ತಾರೆ. ನಂತರ ಫೋಟೊದಲ್ಲಿ ಕಾಣುವ ನೋಂದಣಿ ಸಂಖ್ಯೆ ಪಡೆದು ಸಾರಿಗೆ ಇಲಾಖೆ ನೆರವಿನಿಂದ ವಾಹನದ ಮಾಲೀಕನನ್ನು ಪತ್ತೆ ಹಚ್ಚುತ್ತಾರೆ.  ಬಳಿಕ ಭಾರತೀಯ ಮೋಟಾರು ವಾಹನ ಕಾಯ್ದೆ ಸೆಕ್ಷನ್ 133ರಡಿ ನೋಟಿಸ್ ಜಾರಿ ಮಾಡಿ, ದಂಡ ವಸೂಲಿ ಮಾಡುತ್ತಾರೆ.

5,000 ವಾಹನಕ್ಕೆ ಒಬ್ಬ ಸಿಬ್ಬಂದಿ!: ‘ನಗರದಲ್ಲಿ 56 ಲಕ್ಷ ವಾಹನಗಳಿವೆ. ಐದು ಸಾವಿರ ವಾಹನಗಳ ಮೇಲೆ ಒಬ್ಬ ಕಾನ್‌ಸ್ಟೆಬಲ್‌ ನಿಗಾ ವಹಿಸುತ್ತಿದ್ದಾರೆ. ಹೀಗಾಗಿ ಅವರ ಕಣ್ತಪ್ಪಿಸಿ ಸಂಚಾರ ಉಲ್ಲಂಘನೆ ಆಗುತ್ತಿವೆ. ಆದರೆ, ನಾಗರಿಕರ ಕಣ್ತಪ್ಪಿ ಯಾರೊಬ್ಬರೂ ನಿಯಮ ಉಲ್ಲಂಘಿಸಲು ಸಾಧ್ಯವಿಲ್ಲ. ಈ ಕಾರಣದಿಂದ ಹೊಸ ಆ್ಯಪ್‌ ಮಹತ್ವ ಪಡೆದುಕೊಳ್ಳುತ್ತದೆ’ ಎಂದು ಸಲೀಂ ಅಭಿಪ್ರಾಯಪಟ್ಟರು.

ಪೊಲೀಸರೂ ಬಳಸಬೇಕು: ಕಮಿಷನರ್‌ ಮೇಘರಿಕ್ ಮಾತನಾಡಿ, ‘ನಾಗರಿಕರು ಮಾತ್ರವಲ್ಲದೆ ನಗರದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿ ಅಂದರೆ ‘ಪಿಸಿ ಟು ಪಿಸಿ’ಯೂ (ಪೊಲೀಸ್ ಕಮಿಷನರ್–ಪೊಲೀಸ್ ಕಮಿಷನರ್‌) ಈ ಆ್ಯಪ್‌ ಬಳಸುವುದು ಕಡ್ಡಾಯ’ ಎಂದರು. ‘ನಿಯಮ ಉಲ್ಲಂಘನೆಯಲ್ಲಿ ಬೈಕ್‌ ಸವಾರರದ್ದೇ ಸಿಂಹಪಾಲು. ಅವರು ಅಜಾಗರೂಕ ಚಾಲನೆ ಮೂಲಕ ತಮ್ಮ ಪ್ರಾಣಕ್ಕೆ ಸಂಚಾಕಾರ ತಂದುಕೊಳ್ಳುವುದು ಮಾತ್ರವಲ್ಲದೆ, ಪಾದಚಾರಿಗಳ ಜೀವಕ್ಕೂ ಕುತ್ತು ತರುತ್ತಿದ್ದಾರೆ. ಈ ಆ್ಯಪ್‌ ಅಂಥ ಬೈಕ್ ಸವಾರರಿಗೆ ಎಚ್ಚರಿಕೆ ಗಂಟೆಯಾಗಿದೆ’ ಎಂದು ಹೇಳಿದರು.

*
ಫೋಟೊ ಇಲ್ಲದಿದ್ದರೂ ಕ್ರಮ
‘ನಿಯಮ ಉಲ್ಲಂಘಿಸಿದ ವಾಹನದ ಸಂಖ್ಯೆ ನೋಡಿಕೊಳ್ಳದಿದ್ದರೂ, ಅದರ  ಫೋಟೊ ಕ್ಲಿಕ್ಕಿಸಿಕೊಳ್ಳಲು ಆಗದಿದ್ದರೂ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಯಾವ ಸ್ಥಳದಲ್ಲಿ ಹಾಗೂ ಯಾವ ಸಮಯಕ್ಕೆ ನಿಯಮ ಉಲ್ಲಂಘನೆ ಆಗಿದೆ ಎಂದು ಸಾರ್ವಜನಿಕರು ಸ್ಥಳೀಯ ಠಾಣೆಗೆ ದೂರು  ಕೊಡಬಹುದು. ನಂತರ ಎಫ್‌ಐಆರ್‌ ದಾಖಲಿಸಿಕೊಂಡು ಸ್ಥಳದಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾ ಮೂಲಕ ವಾಹನದ ನೋಂದಣಿ ಸಂಖ್ಯೆ ಪಡೆದು ಕ್ರಮ ಜರುಗಿಸಲಾಗುವುದು’ ಎಂದು ಸಲೀಂ ತಿಳಿಸಿದರು.

*
ಆ್ಯಪ್‌ನಲ್ಲಿನ ದೂರುಗಳ ಪಟ್ಟಿ
* ಹೆಲ್ಮೆಟ್ ರಹಿತ ಚಾಲನೆ
* ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ
* ಪಾದಚಾರಿ ಮಾರ್ಗದಲ್ಲಿ ಚಾಲನೆ
* ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ
* ಏಕಮುಖ ರಸ್ತೆಯಲ್ಲಿ ಸಂಚಾರ
* ಇತರೆ ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT