ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿಯಿರಿ ಬಗೆಬಗೆ ಸೂಪ್‌

ನಮ್ಮೂರ ಊಟ
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಸಿಹಿಕುಂಬಳಕಾಯಿ ಸೂಪ್‌
ಸಾಮಗ್ರಿ: ಒಂದು ಚಿಕ್ಕ ಸಿಹಿ ಕುಂಬಳಕಾಯಿ, ಒಂದು ದೊಡ್ಡ ಟೊಮೆಟೊ, ಎರಡು ಗಜ್ಜರಿ (ಕ್ಯಾರೆಟ್‌), ಒಂದು ಚಮಚ ತುಪ್ಪ, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಕಪ್‌ ನೀರು, ರುಚಿಗೆ ಉಪ್ಪು, ಅರ್ಧ ಚಮಚ ಸಕ್ಕರೆ.

ವಿಧಾನ: ಪ್ಯಾನ್‌ಗೆ ತುಪ್ಪ ಹಾಕಿ. ಅದರಲ್ಲಿ ಕತ್ತರಿಸಿದ ಕುಂಬಳಕಾಯಿ,ಗಜ್ಜರಿ ಮತ್ತು ಟೊಮೆಟೊ ಹಾಕಿ ಸೌಟಿನಿಂದ ಅಲ್ಲಾಡಿಸುತ್ತಿರಿ. ಅದಕ್ಕೆ ನೀರು ಹಾಕಿ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಉಪ್ಪು ಮತ್ತು ಸಕ್ಕರೆ ಹಾಕಿ ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ಮಿಕ್ಸಿಯಲ್ಲಿ ರುಬ್ಬಿ.  ರುಬ್ಬುವಾಗ ಅಗತ್ಯ ಎನಿಸಿದರೆ ನೀರು ಹಾಕಿ. ಇದಕ್ಕೆ ಕಾಳುಮೆಣಸಿನ ಪುಡಿಯನ್ನು ಉದುರಿಸಿ ಸವಿಯಿರಿ.
* * *

ಪುದೀನಾ ಸೂಪ್


ಸಾಮಗ್ರಿ: ಒಂದು ಕಪ್ ಪುದೀನಾ ಎಲೆ, ಒಂದು ಚಮಚ ಬೆಲ್ಲದ ಪುಡಿ, ಒಂದು ಚಮಚ ಜೀರಿಗೆ ಪುಡಿ, ಒಂದು ಚಮಚ ಕೊತ್ತಂಬರಿ, ಒಂದು ಚಮಚ ಹುಣಸೆಹಣ್ಣಿನ ರಸ, ಒಂದು ಚಮಚ ಸಾಸಿವೆ, ಅರ್ಧ ಚಮಚ ಶುಂಠಿ ಪೇಸ್ಟ್, ಒಂದು ಚಿಕ್ಕ ಒಣ ಮೆಣಸು, ರುಚಿಗೆ ಉಪ್ಪು, ಮೂರು ಕಪ್‌ ನೀರು.

ವಿಧಾನ: ಒಗ್ಗರಣೆ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆ, ಪುದೀನಾ, ಶುಂಠಿ ಪೇಸ್ಟ್, ಕೊತ್ತಂಬರಿ ಮತ್ತು ಒಣ ಮೆಣಸಿನಕಾಯಿ ಹಾಕಿ ಕೈಯಾಡಿಸುತ್ತಿರಬೇಕು. ಎರಡು ನಿಮಿಷ ಅವು ಚೆನ್ನಾಗಿ ಮಿಶ್ರಣ ಆದ ಮೇಲೆ ಅದಕ್ಕೆ ಮೂರು ಕಪ್‌ ನೀರು ಹಾಕಬೇಕು. ಹುಣಸೆ ಹಣ್ಣಿನ ರಸ, ಬೆಲ್ಲ, ಉಪ್ಪು ಸೇರಿಸಿ ಕುದಿಸಬೇಕು. ಇಷ್ಟು ಮಾಡಿದರೆ ಆರೋಗ್ಯಕರ ಪುದೀನಾ ಸೂಪ್ ಸವಿಯಲು ಸಿದ್ಧ.
* * * 

ಮಸಾಲೆ ಸೂಪ್‌
ಸಾಮಗ್ರಿ: 1 ಚಮಚ ಜೀರಿಗೆ, 1 ಚಮಚ ಕಾಳುಮೆಣಸು, 1 ಚಮಚ ಕೊತ್ತಂಬರಿ ಬೀಜ, 1 ಚಮಚ ಸೋಂಪು, 1 ಚಮಚ ಮೆಂತ್ಯೆ ಕಾಳು, 1 ಟೊಮೆಟೊ, ಕಾಲು ಕಪ್‌ ತೊಗರಿಬೇಳೆ, 3 ಬೆಳ್ಳುಳ್ಳಿ , ಅರ್ಧ ಇಂಚು ಶುಂಠಿ, 1 ಚಮಚ ಎಣ್ಣೆ , ಅರ್ಧ ಚಮಚ ಸಾಸಿವೆ, 1 ಚಮಚ ಹುಣಸೆಹಣ್ಣಿನ ರಸ, ರುಚಿಗೆ ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು.

ವಿಧಾನ: ಬೆಳ್ಳುಳ್ಳಿ ಮತ್ತು ಶುಂಠಿ ಜಜ್ಜಿ ತಯಾರಿಟ್ಟುಕೊಳ್ಳಿ. ತೊಗರಿ ಬೇಳೆ ಚೆನ್ನಾಗಿ ಬೇಯಿಸಿಕೊಳ್ಳಿ. ಜೀರಿಗೆ, ಕಾಳುಮೆಣಸು, ಕೊತ್ತಂಬರಿ ಬೀಜ, ಸೋಂಪು, ಮೆಂತ್ಯೆ ಕಾಳು, ಮೆಣಸು ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಕತ್ತರಿಸಿದ ಟೊಮೆಟೊ ಹಾಗೂ ಜಜ್ಜಿಟ್ಟುಕೊಂಡಿರುವ ಬೆಳ್ಳುಳ್ಳಿ ಮತ್ತು ಶುಂಠಿ ಚೂರು ಹಾಕಿ ಹುರಿಯಿರಿ. ಇದಕ್ಕೆ ಹುಣಸೆಹಣ್ಣಿನ ರಸ ಹಾಕಿ ಹಾಗೆಯೇ ಮೇಲೆ ತಿಳಿಸಿರುವಂತೆ ಮಿಕ್ಸಿಯಲ್ಲಿ ಮಾಡಿಟ್ಟುಕೊಂಡು ಮಸಾಲೆ ಪುಡಿಯನ್ನು ಸೇರಿಸಿ. ಇದಕ್ಕೆ ಬೇಯಿಸಿಟ್ಟುಕೊಂಡಿರುವ ತೊಗರಿಬೇಳೆ ಹಾಕಿ ಉಪ್ಪು ಹಾಕಿ ಕುದಿಸಿ. ಕುದ್ದು ಕೆಳಗೆ ಇಳಿಸಿದ ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ಚಳಿಗಾಲದಲ್ಲಿ ಬರುವ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಯನ್ನು ಬಗೆಹರಿಸುವ ಮಸಾಲೆ ಸೂಪ್‌ ರೆಡಿ.
* * * 

ಗೋವಿನ ಜೋಳದ ಸೂಪ್ 
ಸಾಮಗ್ರಿ: 1 ಕಪ್‌ ಗೋವಿನ ಜೋಳ (ಸ್ವೀಟ್ ಕಾರ್ನ್), ಅರ್ಧ ಚಮಚ ಕಾಳುಮೆಣಸಿನ ಪುಡಿ, ಅರ್ಧ ಕಪ್‌ ಬೀನ್ಸ್, ಅರ್ಧ ಕಪ್‌ ಗಜ್ಜರಿ (ಕ್ಯಾರೆಟ್‌), 1 ಚಿಕ್ಕ ಚಮಚ ಸಕ್ಕರೆ, 2 ಚಮಚ ಕಾರ್ನ್‌ಫ್ಲೋರ್  ಪುಡಿ, ರುಚಿಗೆ ಉಪ್ಪು, ಅರ್ಧ ಕಪ್‌ ಹಾಲು, 1 ಚಮಚ ಟೊಮೆಟೊ ಸಾಸ್‌, ನೀರು.

ವಿಧಾನ: ಪ್ಯಾನ್‌ನಲ್ಲಿ ಸ್ವಲ್ಪ ನೀರು ಹಾಕಿ ಕಾಯಿಸಿ. ಇದಕ್ಕೆ ಅರ್ಧ ಕಪ್ ಸ್ವೀಟ್ ಕಾರ್ನ್, ಕತ್ತರಿಸಿದ ಬೀನ್ಸ್ ಮತ್ತು ಹೆಚ್ಚಿದ ಕ್ಯಾರೆಟ್ ಹಾಕಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಹಾಕಿ 10 ನಿಮಿಷ ಕಾಯಿಸಿ.  ಅದು ಕಾಯುತ್ತಿರುವಾಗ ಇನ್ನೊಂದೆಡೆ ಮಿಕ್ಸಿಯಲ್ಲಿ ಮಿಕ್ಕ ಸ್ವೀಟ್ ಕಾರ್ನ್ ಅನ್ನು ರುಬ್ಬಿಕೊಳ್ಳಿ. ನೆನಪಿರಲಿ, ನುಣ್ಣಗೆ ರುಬ್ಬಬಾರದು. ಕಾರ್ನ್‌ ಬಾಯಿಗೆ ಸಿಗುವ ಹಾಗೆ ತರಿತರಿಯಾಗಿ ಇರಬೇಕು. ಇದನ್ನು ಒಲೆಯ ಮೇಲಿರುವ ತರಕಾರಿಯೊಡನೆ ಸೇರಿಸಬೇಕು.

ಕಾರ್ನ್‌ಫ್ಲೋರ್‌ಗೆ ಸ್ವಲ್ಪ ತಣ್ಣನೆಯ  ನೀರು ಸೇರಿಸಿ ಗಂಟಿಲ್ಲದಂತೆ ಮಿಕ್ಸ್‌ ಮಾಡಿಕೊಳ್ಳಿ. ಒಲೆಯ ಮೇಲಿರುವ ಮಿಶ್ರಣಕ್ಕೆ ಇದನ್ನು ಸೇರಿಸಿ ಕೈಯಾಡಿಸಿ. ಬೇಕಿದ್ದರೆ ಹಾಲನ್ನೂ ಸೇರಿಸಬಹುದು. ಇದಕ್ಕೆ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ. ಸ್ವಲ್ಪ ಟೊಮೆಟೊ ಸಾಸ್ ಸೇರಿಸಿ ಕೈಯಾಡಿಸಿ ಉರಿಯಿಂದ ಇಳಿಸಿ. ಸ್ವಲ್ಪ ಖಾರ ಬೇಕು ಎಂದರೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕದಡಿ. ಇದು ಚಿಕ್ಕಮಕ್ಕಳಿಗೆ ಬಹಳ ಇಷ್ಟ ಆಗುವುದೂ ಅಲ್ಲದೇ, ಚಳಿಗಾಲದ ಸಮಸ್ಯೆಗಳಿಗೂ ರಾಮಬಾಣ.
* * *

ತರಕಾರಿ ಸೂಪ್
ಸಾಮಗ್ರಿ: ಅರ್ಧ ಕಟ್‌ ಕೊತ್ತಂಬರಿ ಸೊಪ್ಪು, 1 ದೊಡ್ಡ ಈರುಳ್ಳಿ, 1 ಚಿಕ್ಕ ಶುಂಠಿ, 2 ಎಸಳು ಬೆಳ್ಳುಳ್ಳಿ, 1 ಸ್ಪ್ರಿಂಗ್ ಓನಿಯನ್, 3 ಚಮಚ ನಿಂಬೆ ಹಣ್ಣಿನ ರಸ, ಮೂರ್ನಾಲ್ಕು ಕಪ್‌ ಇಷ್ಟಪಟ್ಟ ತರಕಾರಿ, 4 ಕಾಳುಮೆಣಸು, ರುಚಿಗೆ ಉಪ್ಪು, 1 ಚಮಚ ಬೆಣ್ಣೆ ಅಥವಾ ತುಪ್ಪ.

ವಿಧಾನ: ಬಾಣಲೆಯಲ್ಲಿ ಬೆಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ಪ್ರಿಂಗ್ ಓನಿಯನ್‌, ಜಜ್ಜಿದ ಶುಂಠಿ ಹಾಕಿ ಕೈಯಾಡಿಸಿ. ಚೆನ್ನಾಗಿ ಫ್ರೈ ಆಗಿ ಅದು ಕೆಂಪಗಾದ ಮೇಲೆ  ಕತ್ತರಿಸಿಟ್ಟುಕೊಂಡಿರುವ ಇಷ್ಟು ತರಕಾರಿಯನ್ನು ಹಾಕಿ ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಕಿ ಕುದಿಸಿ. ಕುದಿ ಬಂದ ಮೇಲೆ ಕೊತ್ತಂಬರಿ ಸೊಪ್ಪು, ಉಪ್ಪು, ಕಾಳುಮೆಣಸು, ನಿಂಬೆರಸ ಸೇರಿಸಿ ಕೈಯಾಡಿಸಿ. ಇಷ್ಟು ಮಾಡಿದರೆ ತರಕಾರಿ ಸೂಪ್‌ ಸಿದ್ಧ.

* * *

ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಸೂಪ್


ಸಾಮಗ್ರಿ: 1 ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ), 1 ಚಮಚ ಬೆಣ್ಣೆ, 1 ಈರುಳ್ಳಿ, 2 ಎಸಳು ಬೆಳ್ಳುಳ್ಳಿ, ಅರ್ಧ ಕಪ್‌ ಹಾಲು, ಟೊಮೆಟೊ ಸಾಸ್‌,1 ಚಮಚ ಕಾಳುಮೆಣಸಿನ ಪುಡಿ, ರುಚಿಗೆ ಉಪ್ಪು.

ವಿಧಾನ: ಪ್ಯಾನ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ ಹಾಗೂ ಕ್ಯಾಪ್ಸಿಕಂ ಹಾಕಿ ಕೈಯಾಡಿಸಿ. ಚೆನ್ನಾಗಿ ಫ್ರೈ ಮಾಡಿದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ರುಬ್ಬಿಟ್ಟ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಾಲು, ಉಪ್ಪು, ಟೊಮೆಟೊ ಸಾಸ್‌ ಮತ್ತು ಕಾಳುಮೆಣಿಸನ ಪುಡಿಯನ್ನು ಹಾಕಿ. ಎಲ್ಲವನ್ನೂ ಸೇರಿಸಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT