ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಿನ್ನು ಈ ಹಿಂಸೆ

Last Updated 5 ಜೂನ್ 2014, 19:30 IST
ಅಕ್ಷರ ಗಾತ್ರ

ಮಹಿಳೆಯರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರ ಪ್ರಕರಣಗಳು ರಾಷ್ಟ್ರದೊಳಗೆ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ  ತಲ್ಲಣಗಳನ್ನುಂಟು ಮಾಡಿವೆ.   ಭಾರತದ ಜೊತೆ ಬಾಂಧವ್ಯ ಸುಧಾರಣೆಗೆ  ಆಶಾವಾದ ವ್ಯಕ್ತಪಡಿಸಿದ ಬೆನ್ನಲ್ಲೇ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಭಾರತ ಹಿಂದೆ ಬಿದ್ದಿರುವ ವಿಚಾರವನ್ನು  ಅಮೆರಿಕ  ದೊಡ್ಡದಾಗೇ ಪ್ರಸ್ತಾಪಿಸಿದೆ.  ಭಾರತದಲ್ಲಿ ಮಹಿಳೆ ಮೇಲೆ ನಡೆಯುತ್ತಿರುವ  ಲೈಂಗಿಕ ಹಿಂಸಾಚಾರಗಳ  ಹೆಚ್ಚಳ ಕುರಿತಂತೆ ಅಮೆರಿಕ  ಆಘಾತ ವ್ಯಕ್ತಪಡಿಸಿದ ದಿನವೇ ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್  ಜಿಲ್ಲೆಯಿಂದ ಮತ್ತೊಂದು ಭೀಕರ ಪ್ರಕರಣ ವರದಿಯಾಯಿತು.

ಅತ್ಯಾಚಾರಕ್ಕೆ  ಪ್ರತಿರೋಧ ತೋರಿದ ಮಹಿಳೆಯನ್ನು  ಗಾರೊ ರಾಷ್ಟ್ರೀಯ ವಿಮೋಚನಾ ಸೇನೆಯ (ಜಿಎನ್ಎಲ್ಎ) ಉಗ್ರರು ತಲೆಗೆ  ಗುಂಡಿಟ್ಟು ಹತ್ಯೆ ಮಾಡಿದರು.  ಈ ಕೃತ್ಯ ಎಷ್ಟು ಭೀಕರವಾಗಿದೆ ಎಂದರೆ ಗುಂಡು ಸಿಡಿದ ರಭಸಕ್ಕೆ ಮಹಿಳೆಯ ತಲೆ ಎರಡು ಹೋಳಾಯಿತು.  ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ಇಬ್ಬರು ಹದಿಹರೆಯದ ಸೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಅಮೆರಿಕ ಹಾಗೂ ವಿಶ್ವಸಂಸ್ಥೆ ಖಂಡಿಸಿವೆ.  

   ಒಂದಾದ ಮೇಲೊಂದು ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿ  ವರದಿಯಾಗುತ್ತಲೇ ಇವೆ.  ಕಾನೂನು ವ್ಯವಸ್ಥೆ ಉತ್ತರಪ್ರದೇಶದಲ್ಲಿ ಎಷ್ಟು ಹದಗೆಟ್ಟಿದೆ ಎಂದರೆ ಅಲಿಗಢದ ನ್ಯಾಯಾಧೀಶೆ  ಮೇಲೆ ಸಹ  ಅತ್ಯಾಚಾರ ಯತ್ನ ನಡೆದಿದೆ.  ಈ ಸರಣಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಮೊಂಡಾಗಿರುವ ಆಡಳಿತ ವ್ಯವಸ್ಥೆಯ ತೀವ್ರ ಗಮನ ಸೆಳೆಯುವುದಕ್ಕಾಗಿ ಕೇರಳ ಹೈಕೋರ್ಟ್ ಮುಂದೆ  ಬಟ್ಟೆಕಳಚಿ ಕೇವಲ ದುಪ್ಪಟಿ ಹೊದ್ದು ಐವರು ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ.

ಇಷ್ಟೆಲ್ಲಾ ದೊಡ್ಡ ಮಟ್ಟದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಉತ್ತರ ಪ್ರದೇಶದ ರಾಜಕೀಯ ನೇತಾರರು ಪ್ರದರ್ಶಿಸುತ್ತಿರುವ ಮನೋಭಾವ ಮಾತ್ರ ಯಥಾಸ್ಥಿತಿಯದು. ‘ಉತ್ತರ ಪ್ರದೇಶದಲ್ಲಷ್ಟೇ ಅತ್ಯಾಚಾರ ಆಗುವುದಿಲ್ಲ ಎಂಬುದನ್ನು ಕಂಡುಕೊಳ್ಳಲು ಗೂಗಲ್ ಸರ್ಚ್ ಮಾಡಿ’  ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉಡಾಫೆತನ  ಪ್ರದರ್ಶಿಸುವುದು ಎಷ್ಟು ಸರಿ?  ಮುಲಾಯಂ ಸಿಂಗ್ ಯಾದವ್ ಅವರಂತೂ ‘ನಿಮ್ಮ ಕೆಲಸ ನೀವು ಮಾಡಿ, ನಮಗೆ ಕೆಲಸ ಮಾಡಲು ಬಿಡಿ’ ಎನ್ನುತ್ತಾ  ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. 

‘ಗಂಡುಹುಡುಗರು ಗಂಡುಹುಡುಗರೇ. ಕೆಲವೊಮ್ಮೆ ತಪ್ಪು ಮಾಡ್ತಾರೆ’ ಎಂದು  ಮುಲಾಯಂ  ಕೆಲವು ತಿಂಗಳ ಹಿಂದೆ ಹೇಳಿದ್ದ ಮಾತುಗಳಲ್ಲಿ ಬಿಂಬಿತವಾಗಿರುವ ಮನೋಧರ್ಮವನ್ನಂತೂ ವಿಶ್ವಸಂಸ್ಥೆಯೂ ಈಗ ತೀವ್ರವಾಗಿ ಟೀಕಿಸಿದೆ. ‘ಅನೇಕ ಕಡೆ ಹುಡುಗ ಹುಡುಗಿ ಸಂಬಂಧ ಬಹಿರಂಗವಾದಾಗ   ಅತ್ಯಾಚಾರ ಎಂದು ಆರೋಪಿಸಲಾಗುತ್ತದೆ. ಹೆಚ್ಚಿದ ಅತ್ಯಾಚಾರ ಪ್ರಕರಣಗಳಿಗೆ ಟಿ.ವಿ. ಕಾರ್ಯಕ್ರಮಗಳೂ ಕಾರಣ’ ಎಂದು ಮುಲಾಯಂ ಸೋದರ ರಾಮಗೋಪಾಲ್ ಯಾದವ್ ಹೇಳಿದ್ದಾರೆ. ಮಹಿಳೆ ಮೇಲಿನ ಅಪರಾಧಗಳ ನಿಯಂತ್ರಣದಲ್ಲಿ ಆಡಳಿತದ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಈ ನೇತಾರರು ಪ್ರದರ್ಶಿಸುತ್ತಿರುವ ಈ ನಿರಾಕರಣೆಯ ಮನಸ್ಥಿತಿ ಸಲ್ಲದ್ದು. ಮಹಿಳೆ ಮೇಲಿನ ಅಪರಾಧಗಳಿಗೆ ಶಿಕ್ಷಾ ಭಯವಿಲ್ಲದಂತಹ ಸ್ಥಿತಿ  ಸಮಾಜದಲ್ಲಿ ಸೃಷ್ಟಿಯಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT