ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಣೆಹಳ್ಳಿ ನಾಟಕೋತ್ಸವ ಅಂತರ್ಜಾಲದಲ್ಲಿ

Last Updated 4 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಸದುರ್ಗ ತಾಲ್ಲೂ­ಕಿನ ಸಾಣೆಹಳ್ಳಿ­ಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವವನ್ನು ಅಂತರ್ಜಾಲ ತಾಣದಲ್ಲಿ ನೇರ ಪ್ರಸಾರ ಮಾಡಲಾ­ಗುತ್ತಿದೆ.

ರಾಜ್ಯ, ಹೊರ ರಾಜ್ಯ, ಹೊರದೇಶದ­ಲ್ಲಿರುವ ರಂಗಪ್ರಿಯರಿಗೆ, ಮಠದ ಭಕ್ತರಿಗೆ ನಾಟಕೋತ್ಸವ ವೀಕ್ಷಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಇದೇ ಮೊದಲ ಬಾರಿಗೆ ಅಂತರ್ಜಾಲದ ಮೂಲಕ ರಾಷ್ಟ್ರೀಯ ನಾಟಕೋತ್ಸವದ ನೇರ ಪ್ರಸಾರಕ್ಕೆ ಶ್ರೀಮಠ ವ್ಯವಸ್ಥೆ ಮಾಡಿದೆ. http://srishivakumara.ivb7webcaster.com ವೆಬ್‌ಸೈಟ್‌ ಲಿಂಕ್‌ ಕ್ಲಿಕ್‌ ಮಾಡಿದರೆ, ಸಮಾರಂಭದ ನೇರಪ್ರಸಾರವನ್ನು ವೀಕ್ಷಿಸಬಹುದು.

ಸಾಣೆಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಗ್ರೀಕ್‌ ಮಾದರಿಯ ಶಿವಕುಮಾರ ಬಯಲು ರಂಗಮಂದಿರ­ದಲ್ಲಿ ಅದ್ಭುತ ರಂಗಸಜ್ಜಿಕೆಯಲ್ಲಿ ನಡೆಯುವ ವೈವಿಧ್ಯ­ಮಯ ನಾಟಕ­ಗಳು, ವಿದ್ವತ್‌ಪೂರ್ಣ ಚಿಂತನ–ಮಂಥನ ಸಮಾರಂಭಗಳನ್ನು ಜಗತ್ತಿನ ಮೂಲೆ ಮೂಲೆಗಳಿಗೂ ತಲುಪಿಸುವ ಕಾರ್ಯ ಈ ವರ್ಷದಿಂದ ಆರಂಭವಾ­ಗಿದೆ.  ರಾಷ್ಟ್ರೀಯ ನಾಟಕೋತ್ಸ­ವಕ್ಕಾ­ಗಿಯೇ ‘ಐಬಿ7 ವೆಬ್‌ಕಾಸ್ಟ್ ರ್’ ಎಂಬ ಸಂಸ್ಥೆ ‘ನೇರಪ್ರಸಾರದ’ ತಂತ್ರಜ್ಞಾನ­ವನ್ನು ನಿರ್ಮಾಣ ಮಾಡಿಕೊಟ್ಟಿದೆ.

ರೆಕಾರ್ಡಿಂಗ್ ವ್ಯವಸ್ಥೆ: ಏಳು ದಿನಗಳ ನಾಟಕೋತ್ಸವದಲ್ಲಿ ಬೆಳಿಗ್ಗೆ ಚಿಂತನ ಕಾರ್ಯಕ್ರಮ, ಸಂಜೆ ವೇದಿಕೆ ಸಮಾ­ರಂಭ ಮತ್ತು ನಾಟಕ ಪ್ರದರ್ಶನ­ಗೊಳ್ಳುತ್ತದೆ. ಈ ಎರಡೂ ಹೊತ್ತಿನ ಕಾರ್ಯಕ್ರಮಗಳನ್ನೂ ನೇರಪ್ರಸಾರ ಮಾಡಲಾಗುತ್ತಿದೆ. ಪ್ರತಿ ದಿನದ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಲಾಗುತ್ತಿದೆ. ವೆಬ್‌ಸೈಟ್‌­ನಲ್ಲಿರುವ ‘ರೆಕಾರ್ಡೆಡ್‌ ವಿಡಿಯೊ’ ಮೆನು ಕ್ಲಿಕ್ ಮಾಡಿದರೆ, ಹಳೆಯ ಕಾರ್ಯಕ್ರಮಗಳು ಲಭ್ಯವಾಗುತ್ತವೆ.

ಉತ್ತಮ ಪ್ರತಿಕ್ರಿಯೆ: ವೆಬ್‌ಸೈಟ್‌ ಮೂಲಕ ನಾಟಕೋತ್ಸವ­ವನ್ನು ನೇರ­ಪ್ರಸಾರ ಮಾಡುತ್ತಿರುವ ಮಠದ ಕಾರ್ಯ­ವನ್ನು ವಿಶ್ವದ ನಾನಾ ಭಾಗದಲ್ಲಿ ನೆಲೆಸಿರುವ ರಂಗಪ್ರಿಯ­ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾ­ಗಿದೆ. ಮಠದಲ್ಲಿ ಮುಂಜಾನೆ ನಡೆ­ಯುವ ಸಾಮೂಹಿಕ ಪ್ರಾರ್ಥನೆ, ಶಿವ­ಮಂತ್ರ ಲೇಖನ, ವಚನಗೀತೆ, ಉಪನ್ಯಾಸ ಮಾಲಿಕೆಯಂತಹ ಕಾರ್ಯ­ಕ್ರ­ಮ­ಗಳನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿರುವುದಕ್ಕೆ ವಿದೇಶಗಳಲ್ಲಿರುವ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿ ದಿನ ಸರಾಸರಿ 150ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಿರು­ವುದಾಗಿ ನೇರಪ್ರಸಾರದ ಉಸ್ತುವಾರಿ ವಹಿಸಿರುವ ಶಿವಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ನೇರಪ್ರಸಾರದ ವಿಚಾರಕ್ಕೆ ಸಂಬಂಧಿಸಿದಂತೆ 9741014115 ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಮೊದಲ ಪ್ರಯತ್ನ: ನಾಟಕೋತ್ಸವದ ನೇರ ಪ್ರಸಾರ, ಮಠದ ಚೊಚ್ಚಲ ಪ್ರಯತ್ನ. ಹಾಗಾಗಿ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಇಷ್ಟರ ನಡುವೆಯೂ ಅಮೆ­ರಿಕದ ಕ್ಯಾಲಿಫೋರ್ನಿಯಾ, ನ್ಯೂಜರ್ಸಿ, ಬ್ರಿಟನ್, ಜಪಾನ್ ಸೇರಿದಂತೆ ವಿದೇಶದಲ್ಲಿರುವ ಅನೇಕರು ನೇರ ಪ್ರಸಾರದಲ್ಲೇ ವೀಕ್ಷಿಸಿದ್ದಾರೆ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ, ಮುಂಬೈ ಸೇರಿದಂತೆ ಹಲವು ರಾಜ್ಯಗಳ ನಾಟಕ­ಕಾ­ರರು ವೀಕ್ಷಿಸಿರುವುದಕ್ಕೆ ದಾಖ­ಲೆ­ಗಳು ಲಭ್ಯವಾಗಿವೆ. ಆದರೆ ಲಿಖಿತವಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಸಾಣೆಹಳ್ಳಿ ಶಾಖಾಮಠದ ಪಂಡಿತಾ­ರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT