ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅಪಸ್ವರ ಸಂಗೀತವಲ್ಲ

ಅಕ್ಷರ ಗಾತ್ರ

ಪುಸ್ತಕ ಸಗಟು ಖರೀದಿ ಕುರಿತ ನನ್ನ ಪತ್ರಕ್ಕೆ  ಡಿ.ಎ. ಶಂಕರ್ ಸೇರಿ­ದಂತೆ ಏಳು ಮಂದಿ ಒಟ್ಟಾಗಿ ಹಾಗೂ ಬಿ.ಜಿ.ಸತ್ಯ­ಮೂರ್ತಿ ಪ್ರತ್ಯೇಕ­ವಾಗಿ ಪ್ರತಿ­ಕ್ರಿಯಿಸಿ (ವಾ.ವಾ., ಡಿ.11) ಈ ಕುರಿತು ಮಾತನಾಡುವುದಕ್ಕೆ ನನ್ನ ಯೋಗ್ಯತೆ­ಯೇನು ಎಂಬ ಪ್ರಶ್ನೆ ಎತ್ತಿ­ದ್ದಾರೆ. ನಾನು ನಲ್ವತ್ತಕ್ಕೂ ಮಿಕ್ಕು ವರ್ಷ­ಗಳಿಂದ ಲೇಖಕ (ಪ್ರಥಮ ಕೃತಿ ೧೯೭೩), ಮೂವತ್ತಾರು ವರ್ಷ ವೃತ್ತಿ ಪುಸ್ತಕ ವ್ಯಾಪಾರಿ (೧೯೭೫-೨೦೧೨), ಇಪ್ಪತ್ತಕ್ಕೂ ಮಿಕ್ಕು ವರ್ಷ ಪ್ರಕಾಶಕ­ನಾಗಿ 50ಕ್ಕೂ ಹೆಚ್ಚು ಕೃತಿ ಪ್ರಕಟಣೆ, ಎಲ್ಲಕ್ಕೂ ಮುಖ್ಯವಾಗಿ ಆರೋಗ್ಯಕರ ಪುಸ್ತಕೋದ್ಯಮದ ಬಗ್ಗೆ ‘ಪುಸ್ತಕ ಮಾರಾಟ– ಹೋರಾಟ’ ಕೃತಿ ಪ್ರಕಟಿಸಿದ್ದು ನನ್ನ ಯೋಗ್ಯತೆ.

ಸಗಟು ಖರೀದಿಯನ್ನು ಬೆಂಬಲಿಸುವು­ದಕ್ಕೆ ಸತ್ಯಮೂರ್ತಿ, ಸೃಜನೇತರ ಪ್ರಕಾ­ರ­ವನ್ನು ಎಳೆದುತಂದಿದ್ದಾರೆ. ಇದು ಹಾಸ್ಯಾಸ್ಪದ. ನನ್ನ ಶೇ ೯೫ರಷ್ಟು ಪ್ರಕಟಣೆಗಳೂ ಸೃಜನೇತರವೇ! ವಾಸ್ತವದಲ್ಲಿ ರಾಜ್ಯ­ದಾ­ದ್ಯಂತ ಇದ್ದ ಇನ್ನೂರಕ್ಕೂ ಮಿಕ್ಕು ಬಿಡಿ ಪುಸ್ತಕ ಮಾರಾಟಗಾರರ ಆರೋಗ್ಯ­ಕರ ಜಾಲವನ್ನು ನಾಶ­ಮಾಡಿದ್ದೇ ಸರ್ಕಾರಿ ಪುಸ್ತಕೋದ್ಯಮ. ಸಗಟು ಖರೀದಿ ಇದರ ಒಂದು ಅನೈತಿಕ ಸಂತಾನ.

ಡಿ.ಎ. ಶಂಕರ್ ಆದಿಯಾಗಿ ಏಳು ಗಣ್ಯರು ಅಪಸ್ವರವನ್ನೇ ಒಕ್ಕೊರಲಲ್ಲಿ ಹೇಳಿದರೆ ಸಂಗೀತವಾಗುತ್ತದೆಂಬ ಭ್ರಮೆಯಲ್ಲಿ ಇನ್ನೂ ಇರುವುದು ಆಶ್ಚರ್ಯಕರ. ಅತ್ಯಂತ ಪಾರದರ್ಶಕ­ವಾಗಿದ್ದರೂ ಸಗಟು ಖರೀದಿ ಒಂದು ವಾಣಿಜ್ಯ ವ್ಯವಹಾರ ಮಾತ್ರ. ಇಲ್ಲಿ ಪುಸ್ತಕ ಕೇವಲ ಮಾಲು. ಇದಕ್ಕೂ ಪುಸ್ತಕ ಪ್ರತಿನಿಧಿಸುವ ವಿದ್ಯಾ ಅಥವಾ ಜ್ಞಾನ ಸಂಸ್ಕೃತಿಗೂ ಏನೇನೂ ಸಂಬಂಧ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT