ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಥಕವಾಗಲಿ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಇತ್ತೀಚೆಗೆ, ಚಿತ್ರದುರ್ಗ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ, ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಮೊಳಕಾಲ್ಮುರು ತಾಲ್ಲೂಕಿನ ಹನುಮನ ಗುಡ್ಡ ಎಂಬ ಚಿಕ್ಕ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ವಿಚಾರ ತಿಳಿದು ಮೆಚ್ಚುಗೆಯಾಯಿತು.

ನಾನು 1972– 73ರಲ್ಲಿ ಆ ಗ್ರಾಮದ ಪಕ್ಕದ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಹನುಮನ ಗುಡ್ಡಕ್ಕೆ ಅನೇಕ ಸಾರಿ ಹೋಗಿದ್ದೆ. ಅಲ್ಲಿಯ ಜನರ ಪರಿಚಯವೂ ಆಗಿತ್ತು. ಅವರು ಎರಡು ಹೊತ್ತಿನ ಊಟಕ್ಕಾಗಿ ಪಡುತ್ತಿದ್ದ ಕಷ್ಟವನ್ನು ಕಣ್ಣಾರೆ ನೋಡಿದ್ದೆ. ಕೂಲಿ ಕೆಲಸಕ್ಕೆ ಯಾರೂ ಕರೆವವರು ಇರಲಿಲ್ಲ. ಹತ್ತಿರದಲ್ಲಿ ಯಾವ ದೊಡ್ಡ ಊರುಗಳೂ ಇರಲಿಲ್ಲ. ಆಸ್ಪತ್ರೆ, ಚಿಕ್ಕಪುಟ್ಟ ಸಾಮಾನು ಬೇಕೆಂದರೂ ಸುಮಾರು 20 ಕಿ.ಮೀ. ದೂರದ ರಾಂಪುರ ಎಂಬ ಊರಿಗೆ ಹೋಗಬೇಕಾಗಿತ್ತು. ಸರಿಯಾದ ರಸ್ತೆ ಇರಲಿಲ್ಲ. ಗುಡ್ಡ ಬೆಟ್ಟ ಸಂದುಗಳಲ್ಲಿರುವ ದಾರಿಗಳಲ್ಲಿ ಎತ್ತಿನ ಗಾಡಿಯಲ್ಲೋ ಅಥವಾ ನಡೆದುಕೊಂಡೋ ಹೋಗಿ ಬರಬೇಕಾಗಿತ್ತು.

ಎಲ್ಲರೂ ಪರಿಶಿಷ್ಟ ಸಮುದಾಯದವರೇ ಆಗಿದ್ದು, ಸುಮಾರು 70– 80 ಮನೆಗಳಿದ್ದಿರಬೇಕು. ಆಗ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ಕೊಡುತ್ತಿದ್ದ ಮಧ್ಯಾಹ್ನದ ಉಪಾಹಾರಕ್ಕಾಗಿ ಚಿಕ್ಕ ಮಕ್ಕಳು ಹಾತೊರೆಯುತ್ತಿದ್ದುದನ್ನು ನೆನೆಸಿಕೊಂಡರೆ ಇಂದಿಗೂ ಕರುಳು ಚುರುಗುಟ್ಟುತ್ತದೆ. ಇಂತಹ ಕುಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡಿ ಜನರ ಕಷ್ಟ- ಸುಖವನ್ನು ಕಣ್ಣಾರೆ ಕಂಡು, ಸರ್ಕಾರದ ಯೋಜನೆಗಳನ್ನು ಸಮಾಜದ ಇಂತಹ ಕಟ್ಟಕಡೆಯ ಜನರಿಗೆ ಮುಟ್ಟಿಸುವ ಪ್ರಯತ್ನ ಶ್ಲಾಘನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT