ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವದಲ್ಲಿ ಬಿಳಿ ಬದನೆ

Last Updated 13 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸಾವಯವ ವಿಧಾನದಲ್ಲಿ ಬದನೆ ಬೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಆದರೆ ಬಿಳಿ ಬದನೆ ಬೆಳೆಯುವವರು ತುಂಬಾ ಕಡಿಮೆ. ಇದರಿಂದಾಗಿ ತಮಿಳು ನಾಡಿನಿಂದ ಬಿಳಿಬದನೆ ನಮಗೆ ಸರಬರಾಜಾಗುತ್ತಿದೆ.

ನಮ್ಮ ಮಣ್ಣಿನಲ್ಲೂ ಭರಪೂರ ಇಳುವರಿ ನೀಡುವ ಬಿಳಿ ಬದನೆ ಕರಾವಳಿಯ ಹೊಗೆ ಮಿಶ್ರಿತ, ಕೆಂಪು ಮಣ್ಣಿನಲ್ಲಿ ಬೆಳೆಯುವುದು ಕಷ್ಟ. ಸ್ವಲ್ಪ ನೀರಾವರಿ ವ್ಯವಸ್ಥೆಯಿದ್ದರೆ ಮೈಸೂರು, ಮಂಡ್ಯ, ದಾವಣಗೆರೆ ಜಿಲ್ಲೆಗಳಿಗೆ ಸರಿಹೊಂದುವ ಬೆಳೆಯಿದು. ಬಿಳಿ ಬದನೆ ಯನ್ನು ಸಾವಯವದಲ್ಲಿ ಬೆಳೆಯುವ ಪ್ರಯೋಗವನ್ನಂತೂ ಮಾಡಿದವರು ಕಾಣಸಿಗುವುದೇ ಅಪರೂಪ.

ಆದರೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಮಂಜುನಾಥ್  ಅವರು, ಸಾವಯವವನ್ನು ಬಳಸಿ ಬಿಳಿ ಬದನೆ ಬೆಳೆಯುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.  ಕೆ.ಆರ್.ನಗರಕ್ಕೆ ಬಿಳಿ ಬದನೆ ಬೆಳೆ ಹೊಸತು. ಜೊತೆಗೆ ಸಾವಯವದಲ್ಲಿ ಬೆಳೆಯುವ ಇವರ ಸಾಹಸವನ್ನು ಕಂಡು ಆರಂಭದಲ್ಲಿ ಇತರ ಬೆಳೆಗಾರರು ತಮಾಷೆ ಮಾಡುತ್ತಿದ್ದರಂತೆ. ತನಗಿರುವ ಎರಡು ಎಕರೆ ಹತ್ತು ಗುಂಟೆ ಜಮೀನು ತುಂಬಾ ಕಲ್ಲಂಗಡಿ ಬೆಳೆಯುತ್ತಿದ್ದ ಮಂಜುನಾಥ್ ಕಲ್ಲಂಗಡಿಯ ಬೆಲೆಯಲ್ಲಿನ ವ್ಯತ್ಯಯ, ಬರುವ ರೋಗಗಳು ಹೀಗೆ ಹಲವು ಕಾರಣಗಳಿಂದ ಸಾಕಷ್ಟು ಬಾರಿ ಹಾಕಿದ ಬಂಡವಾಳವನ್ನು ಪಡೆ ಯದೇ ಕೈಸುಟ್ಟುಕೊಂಡರು. ಎರಡು ವರ್ಷಗಳ ಹಿಂದೆ ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಯನ್ನು ಸೇರಿಕೊಂಡರು. ಯೋಜನೆಯಿಂದ ನಡೆಸಲಾದ ಕೃಷಿ ಅಧ್ಯಯನ ಪ್ರವಾಸದಲ್ಲೂ ಭಾಗವಹಿಸಿದರು.

ನಂತರದ ದಿನಗಳಲ್ಲಿ ತಮ್ಮ ಭೂಮಿ ತುಂಬಾ ಬಹುಬೆಳೆಗಳನ್ನು ಬೆಳೆಯುವ ನಿರ್ಧಾರಕ್ಕೆ ಬಂದರು. ಸ್ವಂತ ಭೂಮಿಯಲ್ಲಷ್ಟೇ ಅಲ್ಲದೇ ಇತರರಿಂದಲೂ ಭೂಮಿಯನ್ನು ಗೇಣಿಗೆ ಪಡೆದು ಒಟ್ಟು ಮೂರೂವರೆ ಎಕರೆ ತುಂಬಾ 200 ಪಪ್ಪಾಯಿ ಗಿಡ, 5ಸಾವಿರ ಗುಲಾಬಿ, 3ಸಾವಿರ ಚೆಂಡು, 4ಸಾವಿರ ಕ್ಯಾಪ್ಸಿಕಮ್, 3ಸಾವಿರ ಮೆಣಸಿನ ಗಿಡಗಳನ್ನು ನೆಟ್ಟರು. ಇವುಗಳ ಜೊತೆಗೆ ಯಾವುದಾದರೊಂದು ಹೊಸ ಕೃಷಿಯನ್ನು ಬೆಳೆಯಬೇಕೆಂಬ ಇವರ ಪ್ರಯತ್ನಕ್ಕೆ ಇಲ್ಲಿನ ಯೋಜನೆಯ ಅಧಿಕಾರಿವರ್ಗ ಸಾಥ್ ನೀಡಿತು.

ಅರ್ಧ ಎಕರೆ ತುಂಬಾ ಬಿಳಿ ಬದನೆಯನ್ನು ಪ್ರಾಯೋಗಿಕವಾಗಿ ನೆಡುವ ನಿರ್ಧಾರಕ್ಕೆ ಬಂದರು. ಗಿಡವನ್ನು ತಲಾ 30 ಪೈಸೆಯಂತೆ ನೀಡಿ ನರ್ಸರಿಯೊಂದರಿಂದ ತಂದು ನಾಟಿಯ ಬಗ್ಗೆ ಇತರರಿಂದ ಮಾಹಿತಿಯನ್ನು ಕಲೆಹಾಕಿದರು. ಆದರೆ ಇವರ ಭೂಮಿಯಲ್ಲಿ ಬಿಳಿ ಬದನೆ ಬೆಳೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇಲ್ಲಿ ಬೇಸಿಗೆಗಾಲದಲ್ಲಂತೂ ಬೋರ್‌ನಲ್ಲಿ ಕುಡಿಯಲು ನೀರು ಸಿಗುವುದೇ ಕಷ್ಟ.

ಹಾಗಿರುವಾಗ ಬದನೆ ಗಿಡಗಳಿಗೆ ನೀರು ನೀಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕೇವಲ ಒಂದೂವರೆ ಇಂಚಿನಷ್ಟು ನೀರು ನೀಡುವ ತಮ್ಮ ಬಳಿಯ ಎರಡು ಬೋರ್‌ಗಳನ್ನೇ ಬಳಸಿ ಈ ಬೆಳೆ ಬೆಳೆಯಲು ಮುಂದಾದರು. ಮಣ್ಣಿನಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಕೈಗೆತ್ತಿಕೊಂಡರು. ಇವರ ಈ ಪ್ರಯತ್ನಕ್ಕೆ ಪೂರಕವಾಗಿ ಬಿಳಿ ಬದನೆ ಆರು ತಿಂಗಳಲ್ಲಿ ಒಂದು ಬೆಳೆಗೆ ಒಂದು ಲಕ್ಷ ರೂಪಾಯಿ ನಿವ್ವಳ ಆದಾಯವನ್ನು ನೀಡುತ್ತಿದೆ.

ನಾಟಿ ಹೇಗೆ?
ಬಿಳಿ ಬದನೆ ನಾಟಿ ವಿಧಾನ ಇತರ ಬದನೆಗಳಿಗಿಂತ ಭಿನ್ನ. ಇದು ಗಾತ್ರದಲ್ಲಿ ಸಣ್ಣದಾಗಿರುತ್ತದೆ. ಸ್ವಲ್ಪ ನೀರಿನಲ್ಲಿಯೇ ಕಪ್ಪು ಮಣ್ಣಿಗೆ ಹೇಳಿ ಮಾಡಿಸಿದ ಬೆಳೆ. ತಮಿಳುನಾಡಿನಲ್ಲಿ ಬೀಜ ಬಿತ್ತುವ ಮೂಲಕ ನಾಟಿ ಮಾಡುತ್ತಾರೆ. ಆದರೆ ಇಲ್ಲಿ ಬೀಜ ಬಿತ್ತಿದರೆ ಸರಿಯಾಗಿ ಮೊಳಕೆ ಬರುವುದಿಲ್ಲ. ಬೇರೆ ಬೇರೆ ತಳಿಯ ಬಿಳಿ ಬದನೆ ಗಿಡದ ಬೀಜಗಳು ಬೀಜ ಮಾರಾಟಗಾರರ ಬಳಿ ಲಭ್ಯ. ಆದರೆ ಮಂಜುನಾಥ್ ಅವರು ತಮಿಳುನಾಡಿನಲ್ಲಿ ಬೆಳೆಯುವ ಸಾಮಾನ್ಯ ಬದನೆಯನ್ನು ನಾಟಿ ಮಾಡಿದ್ದಾರೆ. ಹೈಬ್ರೀಡ್ ತಳಿಗೆ ಹೋಲಿಸಿದರೆ ಸ್ಥಳೀಯ ತಳಿಗೆ ರೋಗಗಳು ಬಾಧಿಸುವುದು ತುಂಬಾ ಕಡಿಮೆ.

ನಾಟಿಗಿಂತ ಮುಂಚೆ 5 ಅಡಿ ಅಗಲವಾಗಿ ಸಾಲಿನಿಂದ ಸಾಲಿಗೆ ಐದು ಅಡಿ ಅಂತರಬಿಟ್ಟು ಸಾಲು ತೆಗೆಯಬೇಕು. ನಾಟಿಗಿಂತ ಮುಂಚೆ ಸಾಲಿಗೆ ಕೊಟ್ಟಿಗೆ ಗೊಬ್ಬರ ನೀಡಿದರೆ ಒಳ್ಳೆಯದು. ನಂತರ ಅದರ ಮೇಲ್ಮೈಯನ್ನು ಗೊಬ್ಬರ ಕಾಣ ದಂತೆ ಮಣ್ಣಿನಿಂದ ಮುಚ್ಚಬೇಕು. ಮೂರು ದಿನಗಳ ಕಾಲ ಸಾಲಿಗೆ ನೀರಾಯಿಸು ತ್ತಿರಬೇಕು. ನಾಲ್ಕನೇ ದಿನ ಗಿಡದಿಂದ ಗಿಡಕ್ಕೆ ಎರಡೂವರೆ ಅಡಿ ಅಂತರ ಬಿಟ್ಟು ಅರ್ಧ ಅಡಿ ಆಳವಾಗಿ ಕೈಯಲ್ಲಿ ಗುಂಡಿ ತೆಗೆದು ನಾಟಿ ಮಾಡಬೇಕು. ನೀರಾವರಿ ವ್ಯವಸ್ಥೆಯಿದ್ದರೆ ಯಾವ ಮಣ್ಣಿನಲ್ಲೂ ನಾಟಿ ಮಾಡಬಹುದು.

ಇಳುವರಿ ಹೀಗೆ
ಆರು ತಿಂಗಳ ಬೆಳೆ ಇದಾಗಿದ್ದು, ನೆಟ್ಟು ಎರಡು ತಿಂಗಳಲ್ಲಿ ಇಳುವರಿ ಲಭ್ಯ. ಮಂಜುನಾಥ್ ಕಳೆದೆರಡು ವರ್ಷಗಳಿಂದ ವಾರ್ಷಿಕ ಎರಡು ಬೆಳೆಯಂತೆ ಬಿಳಿ ಬದನೆಯನ್ನು ಬೆಳೆಯುತ್ತಿದ್ದಾರೆ. ಅರ್ಧ ಎಕರೆ ತುಂಬಾ 2500 ಗಿಡಗಳಿದ್ದು, ತಿಂಗಳಿಗೆ 40 ಕ್ವಿಂಟಾಲ್‌ನಂತೆ ಮೂರು ತಿಂಗಳಲ್ಲಿ 120 ಕ್ವಿಂಟಾಲ್ ಇಳುವರಿ ಲಭ್ಯ. ಸಾಮಾನ್ಯ ಬದನೆ ಚೆಂಡಿನಾಕಾರದಲ್ಲಿದ್ದರೆ, ಬಿಳಿ ಬದನೆ ಮೆಣಸಿನಂತೆ ಉದ್ದಕ್ಕೆ ಬೆಳೆಯುತ್ತದೆ. 10 ಬದನೆ ಒಂದು ಕೆ.ಜಿಯಷ್ಟು ತೂಗುತ್ತವೆ. ಕೆ.ಜಿ ಗೆ ಸರಾಸರಿ 10 ರೂಪಾಯಿ ದರವಿದ್ದು, ಮೈಸೂರು ಮಾರುಕಟ್ಟೆಗೆ ಇವರು ಮಾರಾಟ ಮಾಡುತ್ತಾರೆ. ಆರು ತಿಂಗಳಲ್ಲಿ ಒಂದೂವರೆ ಲಕ್ಷ ರೂಪಾಯಿ ಆದಾಯವನ್ನು ಕೇವಲ ಬಿಳಿ ಬದನೆಯಿಂದಲೇ ಗಳಿಸುವ ಮಂಜುನಾಥ್‌ರವರಿಗೆ ಎಲ್ಲಾ ಖರ್ಚು ಲೆಕ್ಕಹಾಕಿದರೆ 10ಸಾವಿರ ರೂಪಾಯಿ ಖರ್ಚು ತಗಲುತ್ತದೆಯಂತೆ.

‘ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ನೀಡಿದರೆ ಉತ್ತಮ. ಗಿಡ ದೊಡ್ಡದಾದಂತೆ ಮೂರು ದಿನಕ್ಕೊಮ್ಮೆ ಹನಿನೀರಾವರಿ ವಿಧಾನದ ಮೂಲಕ ಒಂದು ತಾಸುಗಳ ಕಾಲ ನೀರುಣಿಸಬೇಕು. ರಾಸಾಯನಿಕದಲ್ಲಿ ಬೆಳೆದರೆ ಗೆಡ್ಡೆ ಸಾಯುವ ರೋಗಗಳು ಬರುವುದು ಸಾಮಾನ್ಯ. ಆದರೆ ಇಲ್ಲಿ ರೋಗಗಳು ಕಾಡುವುದಿಲ್ಲ’ ಎನ್ನುತ್ತಾರೆ ಮಂಜುನಾಥ.

ಈ ಕೃಷಿ ಕೆಲಸಗಳಲ್ಲಿ ಪತ್ನಿ ಹಾಗೂ ಮಕ್ಕಳು ಸಾಥ್ ನೀಡುತ್ತಿದ್ದು ಅಗತ್ಯಬಿದ್ದರೆ ಮಾತ್ರ ಕೂಲಿಯಾಳುಗಳ ಮೊರೆ ಹೋಗುತ್ತಾರೆ. ‘ಕೃಷಿಕ ಸ್ವತಃ ದುಡಿದರೆ ಮಾತ್ರ ಕೃಷಿಯಲ್ಲಿ ಲಾಭ’ ಎನ್ನುವುದು ಅವರ ಅನಿಸಿಕೆ. ದುಡಿಯುವ ಮನಸ್ಸು, ಲಭ್ಯವಿರುವ ನೀರಾವರಿಯನ್ನು ಬಳಸಿಕೊಳ್ಳುವ ಜಾಣ್ಮೆ ರೈತನಲ್ಲಿದ್ದರೆ ತರಕಾರಿಯಿಂದಲೂ ಕೈತುಂಬಾ ಆದಾಯಗಳಿಸಬಹುದು. ಬಿಳಿ ಬದನೆ ಯಿಂದಲೂ ಲಾಭ ಕಂಡುಕೊಳ್ಳಬಹುದೆಂಬ ಮಾತಿಗೆ ಇವರ ಪ್ರಯತ್ನವೇ ಉತ್ತಮ ಉದಾಹರಣೆ.ಮಂಜುನಾಥ್‌ ಅವರ ಸಂಪರ್ಕಕ್ಕೆ 9740133419 .(ರಾತ್ರಿ 8- 8.30).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT